Friday, 6 November 2015

ದುಃಖವೇ ಸುಖದ ಮೊದಲ ಸೋಪಾನ

ವೈರಾಗ್ಯ ಶತಕ, ನೀತಿಶತಕ, ಶೃಂಗಾರ ಶತಕಗಳೆಂಬ ಕೃತಿಗಳ ಕರ್ತೃ ರಾಜಾ ಭರ್ತೃಹರಿ. . ಇವನು ಮಾಳವ ದೇಶದ ರಾಜನಾಗಿದ್ದ. ಫಲವತ್ತಾಗಿದ್ದ ವಿಸ್ತಾರ ಭೂಪ್ರದೇಶ, ಅವನನ್ನು ಗೌರವಿಸುವ ಪ್ರಜೆಗಳು,ಬುದ್ಧಿವಂತ ಮಂತ್ರಿವರ್ಗ, ಶೂರ ಸೇನೆ....ಹೀಗೆ ಸರ್ವ ರೀತಿಯಲ್ಲೂ  ಸಮೃದ್ಧ ದೇಶದ ಅಧಿಪತಿಯಾಗಿದ್ದ. ಇವನ ಪತ್ನಿ ಲೋಕೋತ್ತರ ಸುಂದರಿ ಪಿಂಗಳಾ. ಸ್ವರ್ಗಲೋಕದಿಂದ ಧರೆಗಿಳಿದು ಬಂದಿರುವಳೋ ಎಂಬಂಥ ಅದ್ಭುತ ಸೌಂದರ್ಯ ಇವಳದು. ರಾಜಾ ಭತೃಹರಿಗೆ ಇವಳಲ್ಲಿ ಹುಚ್ಚು ಎನ್ನಬಹುದಾದಷ್ಟು ಮೋಹ. ಇವಳು ಅವನ ಬದುಕಿನ ಕೇಂದ್ರವಾಗಿದ್ದಳು ಎಂದರೆ ಸರಿಯಾದೀತು. ಸದಾ ಅಂತಃಪುರದಲ್ಲಿ ಇವಳೊಂದಿಗೆ ಸಂಗೀತ,ನೃತ್ಯ,ಮಧುಪಾನಗಳೊಂದಿಗೆ ನಿರತನಾಗಿರುತ್ತಿದ್ದ. ಪಿಂಗಳೆಯ ಮಾತೇ ಅವನಿಗೆ ವೇದವಾಕ್ಯವಾಗಿತ್ತು. ತತ್ತ್ವಶಃ ಪಿಂಗಳೆಯೇ ರಾಜ್ಯದ ಆಡಳಿತ ನಡೆಸುತ್ತಿದ್ದಳು ಎಂದರೆ ಸರಿಯಾದೀತು!


ಹೀಗೆ ಭೋಗಮಾಯಾವಶನಾಗಿದ್ದ ರಾಜನಿಗೆ ಒಂದು ಅಪರೂಪದ ಹಣ್ಣು ಉಡುಗರೆಯಾಗಿ ಬಂತು. ಅದೊಂದು ಅಪರೂಪದ,ವಿಶಿಷ್ಟ ಶಕ್ತಿಗಳಿಂದ ಕೂಡಿದ ಹಣ್ಣಾಗಿತ್ತು. ಅದನ್ನು ತಿಂದವರು ನಿರೋಗಿಗಳು,ಪೂರ್ಣಾಯುಷಿಗಳು ಆಗುತ್ತಿದ್ದರು. ಹಿಮಾಲಯದ ತಪ್ಪಲಲ್ಲಿ ಬೆಳೆವ ಈ ಹಣ್ಣನ್ನು ಅಲ್ಲಿಂದ ಬಂದ ಸಂನ್ಯಾಸಿಗಳು ರಾಜನಿಗೆಂದೇ ತಂದಿದ್ದರು. ಸ್ವೀಕರಿಸಿದ ರಾಜನಿಗೆ ಒಂದು ಯೋಚನೆ ಬಂತು. ತಾನು ನೀರೋಗಿಯೂ ಪೂರ್ಣಾಯುಷಿಯೂ ಆಗುತ್ತೇನೆ ಸರಿ. ಆದರೆ, ತನ್ನ ಮನದನ್ನೆ ಪಿಂಗಳೆ,ವೃದ್ಧೆ, ರೋಗಿಯಾಗಿ ಸಾಯುತ್ತಾಳೆ. ಅನಂತರ ತಾನು ಬದುಕಿರುವುದೆಂತು? ಆದುದರಿಂದ ಈ ಹಣ್ಣನ್ನು ಅವಳು ತಿನ್ನುವುದೇ ಸರಿ ಎಂದುಕೊಂಡು ಮತ್ತು ಅವಳಿಗೆ ಹಣ್ಣನ್ನು ಉಡುಗೊರೆಯಾಗಿ ನೀಡಿದ.

ಪಿಂಗಳೆಗೆ ರಾಜನ ಮೇಲೆ ಗೌರವವೇನೋ ಇತ್ತು, ಆದರೆ ಪ್ರೇಮವಿರಲಿಲ್ಲ. ಮಹಾರಾಣಿಯ ಪದವಿ ತರುವ ಅಧಿಕಾರ,ಸುಖಭೋಗಗಳಿಗಾಗಿ ಅವಳು ಭತೃಹರಿಯೊಂದಿಗೆ ಇದ್ದಳು. ಅಷ್ಟೇ. ಅವಳ ಪ್ರೇಮಿ ಅಶ್ವ ಶಾಲೆಯ ಅಶ್ವಪಾಲಕನಾಗಿದ್ದ!. ಪಿಂಗಳೆ ತನ್ನ ಪತಿ ಮಧುಪಾನದಿಂದ ಮತ್ತನಾಗಿ ಬೋಧ ಕಳೆದುಕೊಂಡಾಗ,ಗುಟ್ಟಿನಲ್ಲಿ ತನ್ನ ಪ್ರಿಯಕರನನ್ನು ಸೇರುತ್ತಿದ್ದಳು.  ತನಗೆ ಪ್ರಾಣಕ್ಕಿಂತ ಪ್ರಿಯನಾಗಿದ್ದ ಅವನಿಗೆ ಈ ಹಣ್ನನ್ನವಳು ನೀಡಿದಳು.

ಈ ಅಶ್ವಪಾಲಕನಿಗೆ ಆ ಊರಿನ ವೇಶ್ಯೆಯ ಮೇಲೆ ಮೋಹ! ಪಿಂಗಳೆಯಿಂದ ಸಿಗುವ ದುಡ್ಡು ಕಾಸಿಗಾಗಿ ಅವಳನ್ನು ಒಲೈಸುತ್ತಿದ್ದರೂ, ಅವನ ಪ್ರೇಮ ವೈಶ್ಯೆಯ ಮೇಲಿತ್ತು. ಅವನು ಅವಳಿಗೆ ಪಿಂಗಳೆಯಿಂದ ಪಡೆದ ಹಣ್ಣನ್ನು ನೀಡಿದ. ವೇಶ್ಯೆ ಪರಮ ಸಾಧ್ವಿ. ಕುಲದಿಂದ ವೇಶ್ಯಾವೃತ್ತಿಯಲ್ಲಿದ್ದರೂ, ಅದನ್ನು ಧರ್ಮದಿಂದ ಪಾಲಿಸುತ್ತಿದ್ದಳು. "ಭಗವಂತಾ, ಮುಂದಿನ ಜನ್ಮದಲ್ಲಾದರೂ ನಿನ್ನ ಪಾದದ ಧೂಳಾಗಿ ಜನ್ಮ ನೀಡು. ಇಂಥ ಹೀನ ವೃತ್ತಿಯಿಂದ ಪಾಪಲೇಪವಾಗದಂತೆ ನನ್ನನ್ನು ನಡೆಸು" ಎಂದು ಬೇಡುತ್ತಿದ್ದಳು. ಅವಳ ಈ ಮನೋಭಾವನೆಯಿಂದಲೇ ಅಶ್ವಪಾಲಕ ಅವಳಿಗೆ ಮರುಳಾಗಿದ್ದ.

ಹಣ್ಣಿನ ವಿಶೇಷ ಗುಣಗಳ ಬಗ್ಗೆ ತಿಳಿಯುತ್ತಲೇ ಅವಳಿಗೆ ಈ ಹಣ್ಣು ಈ ದೇಶದ ರಾಜನಿಗೆ ಸಲ್ಲಬೇಕು ಎನಿಸಿತು. ಪ್ರಜಾವತ್ಸಲನಾದ ಅವನಿಗೆ ಪೂರ್ಣಾಯುಸ್ಸಿನ ಹಕ್ಕು ಎಂದುಕೊಂಡು ಸೀದಾ ಅರಮನೆಗೆ ಬಂದು ಮಹಾರಾಜ ಭತೃಹರಿಯ ಮುಂದೆ ಹಣ್ಣನ್ನಿಟ್ಟಳು. ಹಣ್ಣನ್ನು ನೋಡುತ್ತಲೇ ರಾಜನಿಗೆ ಅದರ ಗುರುತು ಸಿಕ್ಕಿತು. ತನಗೆ ಸಾಧುಗಳು ನೀಡಿದ ಹಣ್ಣಿದು. ರಾಣಿ ಪಿಂಗಳೆಗೆ ನೀಡಿದ್ದು, ಈ ವೈಶ್ಯೆಯ ಕೈಗೆ ಬಂದದ್ದೆಂತು?ಎಂದು ಆಶ್ಚರ್ಯಗೊಂಡ.

ವಿಚಾರಿಸಲಾಗಿ ಅಶ್ವಪಾಲಕನಿಂದ ಸಿಕ್ಕಿತು ಎಂದು ತಿಳಿಯಿತು. ಅವನನ್ನು ಕರೆಸಿ ಪ್ರಶ್ನಿಸಿದರೆ, ಪಿಂಗಳೆಯಿಂದ ಎಂದು ತಿಳಿಯಿತು. ರಾಜನಿಗೆ ಆಘಾತವಾಯಿತು. ಪ್ರಾಣಕ್ಕಿಂತ ಪ್ರಿಯಳೆಂದು ಭಾವಿಸಿದ ಹೆಣ್ಣು ತನ್ನವಳಲ್ಲ! ಹಾಗಾದರೆ ತನ್ನದೆಂಬುದು ಯಾವುದು?ಎಂಬ ಪ್ರಶ್ನೆ ಉದಯಿಸಿತು. ಅನ್ನಾಹಾರಾಗಳನ್ನು ದೂರ ಮಾಡಿದ. ಏಕಾಂತದಲ್ಲಿ ಧ್ಯಾನಮಗ್ನನಾದ. ಜನ್ಮಾಂತರಗಳ ನೆನಪು ಮರುಕಳಿಸಿತು. ಸತ್ಯದರ್ಶನವಾಯಿತು. ಯಾವುದು ತಾನಲ್ಲ,ತನ್ನದಲ್ಲ. ಒಂದು ಜನ್ಮದ ಸಂಭಂಧಗಳನ್ನೇ ಶಾಶ್ವತ ಎಂದು ಭ್ರಮಿಸಿ,ಜೀವಿ,ನಾನಾ ರೀತಿಯ ಬಂಧನಗಳನ್ನು ಸೃಷ್ಟಿಸುತ್ತಾನೆ. ಜೇಡ ತಾನೇ ಹೆಣೆದ ಬಲೆಯಲ್ಲಿ ಬಂಧಿಯಾಗುವಂತೆ,ತಾನೇ ತನ್ನ ಕರ್ಮಬಂಧನಗಳಲ್ಲಿ ಸೆರೆಯಾಗುತ್ತಾನೆ. ಕನಿಷ್ಠ ತನ್ನ ಕಣ್ಣು ತೆರೆಯಿತು. ವಾಸ್ತವದ ದರ್ಶನವಾಯಿತು. ಪಿಂಗಳೆ ಗುರುವಾಗಿ ಬಂದಳು,ಎಂದುಕೊಂಡು,ದೇಶ-ಕೋಶ ತ್ಯಜಿಸಿದ.

ಪರಮ ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ. ಅಪೂರ್ವ ಗ್ರಂಥಗಳನ್ನು ರಚಿಸಿದ! ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ವಿಧಿಯನ್ನು ಹಳಿಯುತ್ತೇವೆ. ಇಂಥ ಸ್ಥಿತಿಯನ್ನು "ತಂದಿಟ್ಟ" ಭಗವಂತನನ್ನು ದೂರುತ್ತೇವೆ. ಇದು ತಮಗೆ ಸರಿಯಾದುದಲ್ಲ ಎನ್ನುತ್ತಾ ಮತ್ತಷ್ಟು ಗೊಂದಲಿಸುತ್ತೇವೆ. ಸಂಕಷ್ಟಗಳು ಮಾಯೆಯ ಪರದೆ ಸರಿಸುವ "ಹೇತು"ಮಾತ್ರ ಎನ್ನುವುದು ಮರೆಯುತ್ತೇವೆ. ಇವು ನಿಜವಾದ ಅರ್ಥದಲ್ಲಿ "ಭಗವಂತ"ನ "ವರ","ಆಶೀರ್ವಾದ".



ಮಹಾಭಾರತದ ಯುದ್ಧ ಮುಗಿದು ಕೌರವ ಸಂಹಾರವಾಗಿ ಧರ್ಮರಾಯನಿಗೆ ಸಿಂಹಾಸನ ಲಭಿಸಿ ಪಟ್ಟಾಭಿಷೇಕವಾಯಿತು. ಕರ್ತವ್ಯ ಮುಗಿಸಿದ ಶ್ರೀ ಕೃಷ್ಣ ಪರಮಾತ್ಮ ದ್ವಾರಕೆಗೆ ಹೊರಟ. ರಾಜಮಾತೆ ಕುಂತಿ ಕಣ್ಣೀರು ಹರಿಸುತ್ತಾ ಒಂದು ಕಡೆ ನಿಂತಿದ್ದಳು. ಕೃಷ್ಣ, "ತಾಯೇ, ನೀನೀಗ ರಾಜಮಾತೆ! ನಿನ್ನ ಕಷ್ಟಗಳೆಲ್ಲಾ ಕೊನೆಯಾದವು. ಇನ್ನೂ ಏಕೆ ದುಃಖಿಸುತ್ತಿ?" ಎಂದು ಕೇಳಿದ. ಕುಂತಿಯ ಉತ್ತರ ಇಂತಿತ್ತು, "ಕೃಷ್ಣಾ,ಕಷ್ಟಗಳು ಸಾಲುಗಟ್ಟಿ ಬರುತ್ತಿರುವಾಗ, 'ಕೃಷ್ಣಾ' 'ಕೃಷ್ಣಾ' ಎಂದು ಮೊರೆ ಇಡುತ್ತಿದ್ದೆ. ಕಾಮ್ಯ ಭಕ್ತಿಯಿಂದಲೇ ಇರಲಿ, ದಿನದಲ್ಲಿ ನೂರು ಬಾರಿ ನಿನ್ನ ನೆನಪಾಗುತ್ತಿತ್ತು. ಇನ್ನೂ ರಾಜಮಾತೆಯ ಸ್ಥಾನದಲ್ಲಿ ಕಷ್ಟವೆಂಬುದೇ ಇಲ್ಲವೆಂದಾದಾಗ ನಿನ್ನ ನೆನಪಾಗುವುದೇ? ನಿನ್ನ ನಾಮಸ್ಮರಣೆ ಬರುವುದೇ? ಕೃಷ್ಣಾ, ನಿನ್ನ ಭವಹರಿಯುವುದೇ?" ಎಂದು ಪ್ರಶ್ನಿಸಿದಳು.

ಭವದುಃಖವನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ದುಃಖ ದುಃಖವೇ ಅಲ್ಲ. ಸುಖದ ಮೊದಲ ಸೋಪಾನ ಎಂಬುದು ಅರಿವಾಗುತ್ತದೆ.








Tuesday, 3 November 2015

ಅಜ್ಞಾನದ ಪರದೆಯ ಹಿಂದಿನ ಗೊಂದಲಗಳು

ಬಹಳಷ್ಟು ಸಲ ಸಮಾಜದ ರೀತಿ-ನೀತಿಗಳಿಂದ ನಾವು ಗೊಂದಲಕ್ಕೆ ಒಳಗಾಗುತ್ತೇವೆ. ದುಷ್ಟರು,ಬ್ರಷ್ಟರು ಐಶಾರಾಮಿ ಸುಖೀ ಜೀವನ ನಡೆಸುತ್ತಿದ್ದರೆ,ಯಾವುದೇ ಆಪತ್ತು ಎದುರಾದರೂ ಲೀಲಾಜಾಲವಾಗಿ ಅದರಿಂದ ಪಾರಾಗುತ್ತಿದ್ದರೆ, ಸಂತರು,ಸಾತ್ವಿಕರು ಜಗತ್ತಿನ ಎಲ್ಲಾ ದುಃಖ,ಕಷ್ಟಕೋಟಲೆಗಳಿಂದ ಬಳಲುತ್ತಿರುತ್ತಾರೆ. ಏಕೆ ಈ ಪರಿ? ಹಾಗಾದರೆ ಸತ್ಯ,ಧರ್ಮಗಳಿಗೆ ಪ್ರತಿಫಲ ಎನ್ನುವುದು ಇಲ್ಲವೇ ? ಎಂಬ ಪ್ರಶ್ನೆ ಕಾಡುತ್ತದೆ. ಹೆಚ್ಚಿನವರು, "ಇದೆಲ್ಲಾ ಪೂರ್ವಾರ್ಜಿತ, ಕರ್ಮಫಲಗಳ ಪ್ರಾಪ್ತಿ" ಎಂದು ಅಗೊಚರಕ್ಕೆ ದಾಟಿಸುತ್ತೇವೆ.   



ಒಮ್ಮೆ ಅರ್ಜುನನಿಗೂ ಈ ಸಂದೇಹ ಉಂಟಾಯಿತು. (ಈ ಕಥೆ ಮಹಾಭಾರತದಲ್ಲಿ ಬರುತ್ತದೆ). ಇದೇ ಪ್ರಶ್ನೆಯನ್ನವನು ಶ್ರೀಕೃಷ್ಣ ಪರಮಾತ್ಮನ ಮುಂದಿಟ್ಟ. ಕೃಷ್ಣ ಎಂದಿನಂತೆ, "ನೀನೇ ಸ್ವತಃ ಕಂಡರೆ ಸರಿಯಾದೀತು. ನಾವೊಮ್ಮೆ ಪ್ರಪಂಚ ಪರ್ಯಟನೆ ಮಾಡಿ ಬರುವ. ಸಂದೇಹಕ್ಕೆ ಸಮಾಧಾನ ಸಿಗಬಹುದು"ಎಂದು ಹೇಳಿ ಅರ್ಜುನನನ್ನು ಕರೆದುಕೊಂಡು ಹೊರಟ. ಸಾಮಾನ್ಯರಂತೆ ವೇಷ ಧರಿಸಿ ಇಬ್ಬರು ಹೊರಟರು. ತಿರುಗುತ್ತಾ ತಿರುಗುತ್ತಾ ಸಾಯಂಕಾಲವಾಗುತ್ತಿರುವಂತೆಯೇ ಒಂದು ಹಳ್ಳಿಗೆ ಬಂದರು. ಕಡುಬಡವನ ಮನೆಯಾಗಿತ್ತದು. ಅಂದು ಬೆಳಿಗ್ಗೆಯಿಂದ ಎಷ್ಟು ಪ್ರಯತ್ನಿಸಿದರೂ ಈ ಮನೆಯೊಡೆಯನಿಗೂ ಏನು ಕೆಲಸ ಸಿಕ್ಕಿರಲಿಲ್ಲ. ಒಂದೇ ಒಂದು ಕಾಸು ದುಡಿಮೆಯಿರಲಿಲ್ಲ. ಇನ್ನು ನಿತ್ಯ ಏಕಾದಶಿ ಇರುವ ಮನೆಯಲ್ಲಿ ಒಂದು ಕಾಳು ಅಕ್ಕಿಯೂ ಇರಲಿಲ್ಲ. ಇವನ ಸೋತ ಮುಖ ಕಂಡ ಮನೆಯೊಡತಿ, ಸಾಂತ್ವನದ ಮಾತುಗಳನ್ನಾಡುತ್ತ ಇದ್ದ ಒಂದು ಲೋಟ ಹಾಲನ್ನು ಅವನ ಮುಂದೆ ಇಟ್ಟಿದ್ದಳು. ಇನ್ನೇನು ಮನೆಯೊಡೆಯ ಹಾಲು ಕುಡಿಯಬೇಕು,ಅಷ್ಟರಲ್ಲಿ ಕೃಷ್ಣಾರ್ಜುನರು  ಹೊಸ್ತಿಲಲ್ಲಿ ನಿಂತರು. "ಅಯ್ಯಾ! ಹಸಿವಾಗುತ್ತಿದೆ. ತಿನ್ನಲು ಏನಾದರೂ ಸಿಗಬಹುದೇ? ಈ ಒಂದು ರಾತ್ರಿ ಉಳಿಯಲು ವ್ಯವಸ್ಥೆ ಮಾಡಬಹುದೇ?" ಎಂದರು.

ಮನೆಯೊಡೆಯನ ಕಣ್ಣಲ್ಲಿ ನೀರಿಳಿಯಿತು." ಸ್ವಾಮಿ, ಈ ಒಂದು ಲೋಟ ಹಾಲು ಬಿಟ್ಟರೆ ಮನೆಯಲ್ಲಿ ಏನೂ ಇಲ್ಲ. ದಯವಿಟ್ಟು ಸ್ವೀಕರಿಸಿ" ಎನ್ನುತ್ತಾ ಹಾಲಿನ ಲೋಟ ಅವರ ಮುಂದೆ ಇಟ್ಟ. ತಾವು ಉಪಯೋಗಿಸುತ್ತಿದ್ದ ಹರುಕು ಕಂಬಳಿ, ಮುರುಕು ಚಾಪೆಗಳನ್ನ ಹಾಸಿ ಹಾಸಿಗೆ ತಯಾರಿಸಿದ. ಇಬ್ಬರ ಕಾಲು ತೊಳೆದು ಪಾದೋದಕ ಪ್ರೋಕ್ಷಿಸಿಕೊಂಡ. ಕೃಷ್ಣಾರ್ಜುನರು ಸಂತೋಷದಿಂದ ಮಲಗಿ ನಿದ್ರೆ ಮಾಡಿದರು. ಬೆಳಿಗ್ಗೆ ಎದ್ದು ಹೋಗುತ್ತಿರುವಾಗ ಕೃಷ್ಣ ಒಮ್ಮೆ ಬಡವನ ಮನೆಯತ್ತ ತಿರುಗಿ ನೋಡಿ, "ಈ ಹಸು ಸತ್ತುಹೋಗಲಿ"ಎಂದ.


ಅರ್ಜುನನಿಗೆ ಸಿಟ್ಟು ಬಂತು. ತಮ್ಮ ಬಡತನದಲ್ಲಿಯೇ ಅತಿಥಿ ಸತ್ಕಾರ ಮಾಡಿದ ಈ ಸಾತ್ವಿಕನನ್ನು ಹೀಗೆ ಶಪಿಸುವುದೇ? ಇವನೊಂದಿಗೆ ಬಂದಿದ್ದೆ ತಪ್ಪಾಯಿತು ಎಂದು ಸಿಡಿಮಿಡಿಗೊಂಡ. ಮಾತಾಡಲಿಲ್ಲ. ಮುಂದೆ ಹೋಗುತ್ತಾ ಭಾರಿ ಸಿರಿವಂತನ ಮನೆಯೊಂದು ಎದುರಾಯಿತು. ಯಾವುದೊ ಮಹೋತ್ಸವ ನಡೆಯುತ್ತಿತ್ತು. ಸಂಗೀತ ಕೇಳುತ್ತಿತ್ತು. ಅಡುಗೆಯ ಘಮಘಮದಿಂದ ಬಾಯಲ್ಲಿ ನೀರು ಒಸರುತ್ತಿತ್ತು. ಕೃಷ್ಣಾರ್ಜುನರು ದಿಡ್ಡಿ ಬಾಗಿಲಲ್ಲಿ ನಿಂತು, "ಅಯ್ಯಾ! ಹಸಿವು,ತಿನ್ನಲು ಏನಾದರೂ ಸಿಗಬಹುದೇ?" ಎಂದರು. "ಛೀ! ಭಿಕ್ಷುಕರಿಗೆ ಇಲ್ಲಿ ಏನು ಸಿಗದು ತೊಲಗಿ" ಎಂದರು ದ್ವಾರಪಾಲಕರು. ಇವರು ಕದಲದೇ, "ನಾವು ಯಾತ್ರಿಕರು,ಆಹಾರ ನೀಡದೆ ಹೋಗಲಾರೆವು"ಎಂದರು. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ಗಲಾಟೆ ಕೇಳಿ ಮನೆಯೊಡೆಯ ಹೊರಗೆ ಬಂದ. ನಡೆದುದ್ದನ್ನು ಕೇಳಿ, "ನಿಮಗೆ ಯೋಗ್ಯವಾದುದ್ದನ್ನು ಕೊಡೋಣ, ಚಿಂತಿಸದಿರಿ. ಯಾರಲ್ಲಿ! ಇಬ್ಬರಿಗೂ ತಲಾ ಹತ್ತು ಹತ್ತು ಚಾವಟಿ ಏಟು ಕೊಟ್ಟು ಕಳುಹಿಸಿ" ಎಂದು ಒಳಗೆ ಹೋದ.


ಏಟು ತಿಂದು, ಮೈ-ಕೈಗಳ ಚರ್ಮ ಸುಲಿದು ಹೋಯಿತು. ಕೃಷ್ಣ ಧೂಳಿನಲ್ಲಿ ಬಿದ್ದವ ಎದ್ದು ನಿಂತು, "ಈ ಸಿರಿವಂತನ ಸಂಪತ್ತು ಇಪ್ಪತ್ತು ಪಟ್ಟಾಗಲಿ, ಇವನ ಸುಖ ಜಗತ್ತನ್ನೇ ಮರೆಸಲಿ" ಎಂದು ಹೇಳಿ ಹೊರಟ. ಈಗ ಅರ್ಜುನನ ಸಿಟ್ಟಿಗೆ ಮೇರೆ ಇಲ್ಲವಾಯಿತು. "ಛೇ! ಎಂಥ ಕೃತಘ್ನ ನೀನು. ಹಾಲು ಕುಡಿಸಿದವನ ಹಸು ಸಾಯಲಿ ಎಂದು ಶಪಿಸಿದೆ. ಛಡಿ ಏಟು ಹಾಕಿಸಿದವನ ಸಂಪತ್ತು ನೂರಾಗಲಿ ಎನ್ನುತ್ತಿರುವೆ" ಎಂದ. 


ಆಗ ಕೃಷ್ಣ "ಅರ್ಜುನಾ,ಈ ಜಗತ್ತೊಂದು ಮಾಯೆ. ಯಾವುದು ಹೇಗಿರುತ್ತದೋ ತಿಳಿಯಲಾಗದು. ಬಡವ ಕುಕರ್ಮ ಫಲದಿಂದ ಬಡವನಾದ. ಆದರೆ ಸಂಸ್ಕಾರಬಲದಿಂದ ಸಾತ್ವಿಕನಾದ. ಕರ್ಮಫಲ ಭೌತಿಕಕ್ಕೆ ಮಾತ್ರ ಸೀಮಿತವಾಯಿತು. ಈ ಕರ್ಮಫಲ ಇನ್ನೊಂದು ಜನ್ಮದಲ್ಲೂ ಮುಂದುವರಿಯುವಷ್ಟಿತ್ತು. ಹಸುವಿನ ನಷ್ಟದಿಂದ ಅವನು ಇನ್ನೂ ಹೆಚ್ಚು ಪರಮಾರ್ಥದೆಡೆಗೆ ಒಲಿದು ಕರ್ಮಬಂಧನದ ಬಿಡುಗಡೆಗೆ ಇನ್ನಷ್ಟು ಸತ್ಕರ್ಮ ಮಾಡುತ್ತಾನೆ. ಈ ಜನುಮಕ್ಕೆ ಅವನಿಗೆ ಈ ಭವದಿಂದ ಬಿಡುಗಡೆಯಾಗುತ್ತದೆ. ಇನ್ನು ಸಿರಿವಂತನನ್ನು ನೋಡು. ಭೌತಿಕ ಸತ್ಕರ್ಮ ಫಲ ಈ ಶ್ರೀಮಂತಿಕೆ. ಇಲ್ಲಿ ಸಂಸ್ಕಾರವಿಲ್ಲ. ಆದುದರಿಂದ ಅಹಂಕಾರ,ಲೋಲುಪತೆ. ಈ ಅಹಂಕಾರವೇ ಸಾವಾಗಬಹುದು.ಕಾರಣವಿಲ್ಲದೆ ಆಹಾರ ಬೇಡಿದವರಿಗೆ ಛಡಿ ಏಟು ನೀಡಿದ. ಮತ್ತಷ್ಟು ಕುಕರ್ಮ ಸೇರಿಕೊಂಡಿತು. ಸಿರಿ ನೂರು ಪಟ್ಟಾಗಲಿ  ಎಂದೆ. ಅಂದರೆ ಕುಕರ್ಮಗಳು ಬೆಳೆಯುತ್ತವೆ ಎಂದಾಯಿತು. ಈ ಸಿರಿಯ ಮದದಿಂದ ನೂರು ಜನ್ಮಗಳಲ್ಲಿ ಕುಫಲ ಸಂಚಯಿಸುತ್ತಾರೆ. ಈಗ ಬಡವ ಪಡುವ ಬವಣೆಯ ನೂರು ಪಾಲು,ನೂರು ಜನ್ಮಗಳಲ್ಲಿ ಅವನದಾಗುತ್ತದೆ. ಈಗ ಹೇಳು, ಯಾವುದು ಶಾಪ? ಯಾವುದು ವರ? ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಕೆಲವರು ನಾನಾ ರೀತಿಯ ತೊಂದರೆಗಳಿಂದ ನರಳುವುದೇಕೆ? ಕೆಲವರ ಅಪ್ರಯತ್ನದಿಂದ  ಸಿರಿವಂತರೂ ಸುಖಿಗಳೂ ಆಗಿರುವುದೇಕೆ ಎಂಬ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇನು"? 


ನಿನ್ನೆಗಳು, ನಾಳೆಗಳು ಅಜ್ಞಾನದ ಪರದೆಯ ಹಿಂದೆ ಮರೆಯಾಗಿರುವುದೇ ನಮ್ಮ ಗೊಂದಲಕ್ಕೆ ಕಾರಣ. ಇನ್ನು ಸುಖವೆಂದರೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಒಬ್ಬನ ಸುಖ ಮತ್ತೊಬ್ಬನ ದುಃಖವಾಗಬಹುದು. ಸುಖದ ಹುಡುಕಾಟವು ಮನುಷ್ಯನಲ್ಲಿ ಅಂತರ್ಗತವಾಗಿರುವ ಆನಂದದ ಹುಡುಕಾಟವೇ ಎನ್ನುತ್ತದೆ ನಮ್ಮ ಪ್ರಾಚಿನ ಜ್ಞಾನ.



Friday, 30 October 2015

ಕುರುಡು ನ್ಯಾಯಾಲಯದ ಬಲಿಪಶುಗಳು.


ವಿಶ್ವವಿಖ್ಯಾತ ನೃತ್ಯಗಾರ್ತಿ ಮಲ್ಲಿಕಾ ಸಾರಾಭಾಯಿ ಒಂದು ಕಥೆ ಹೇಳುತ್ತಾರೆ. ಒಂದಾನೊಂದು ಕಾಡಿನಲ್ಲಿ ಒಕ್ಕಣ್ಣಿನ ಒಂದು ಮಂಗವಿತ್ತಂತೆ. ಒಂದು ದಿನ ಸುರಸುಂದರಿಯಾದ ಹೆಣ್ಣು ಮಗಳೊಬ್ಬಳು ಕಾಡಿನೊಳಗೆ ಬರುತ್ತಿರುವುದು ಕಂಡಿತು. ಅರೆ! ಇವಳ್ಯಾಕೆ ಇಂಥ ಕಾಡಿನೊಳಗೆ ಬರುತ್ತಿದ್ದಾಳೆ ಎಂದು ಯೋಚಿಸಿತದು. ಹಾಗೆಯೇ ಅವಳನ್ನು ಇನ್ನಷ್ಟು ಚೆನ್ನಾಗಿ ನೋಡುವ ಆಸೆಯಿಂದ ಅದು ಎತ್ತರದ ಮರವನ್ನೇರಿ ಅಡಗಿ ಕುಳಿತುಕೊಂಡಿತು. 

ಈ ಹೆಣ್ಣುಮಗಳು ಬ್ರಾಹ್ಮಣನೊಬ್ಬನ ಪತ್ನಿ ಸುಶೀಲೆ,ಸುಗುಣೆ. ಅವಳ ಹೆಸರು ಸೇಖ್ರಿ. ಅವಳು ಬಂದು ಮಂಗ ಕುಳಿತಿದ್ದ ಮರದ ಅಡಿಯಲ್ಲಿಯೇ ಕುಳಿತುಕೊಂಡಳು. ಆ ಕ್ಷಣದಲ್ಲಿ ಆಕಾಶದಲ್ಲಿ ಭಯಂಕರ ಶಬ್ದವಾಯಿತು. ಆಕಾಶ ಇಬ್ಭಾಗವಾಯಿತು. ದೇವತೆಗಳ ರಾಜ ಇಂದ್ರ ಧರೆಗಿಳಿದು ಬಂದ. ಅವನ ಕಣ್ಣಿಗೆ ಪರಮಸುಂದರಿಯಾದ ಸೇಖ್ರಿ ಕಂಡುಬಂದಳು. ಅವಳ ಮುಂದೆ ತನ್ನ ಪ್ರೇಮನಿವೇದನೆ ಮಾಡಿದ. ಅವಳು ಒಪ್ಪಲಿಲ್ಲ. ಇಂದ್ರನಿಗೆ ಕೋಪ ಬಂತು. ತನ್ನಂಥವನನ್ನು ಈ ಯಃಕಶ್ಚಿತ್ ಹೆಂಗಸು ತಿರಸ್ಕರಿಸುವುದು ಎಂದರೇನು? ಇವಳಿಗೆ ತಕ್ಕ ಶಾಸ್ತಿಯಾಗಬೆಕು ಎಂದು ನಿರ್ಧರಿಸಿದ. ಅವನ ಅಹಂಕಾರ ಬುಸುಗುಟ್ಟಿತು. 


ಅವಳನ್ನು ಹಿಡಿದೆಳೆದು, ಅವಳ ಮೇಲೆ ಆಕ್ರಮಣ ಮಾಡಿದ. ಹೊರಟುಹೋದ. ಎಷ್ಟು ಹೊತ್ತಾದರೂ ಪತ್ನಿ ಮನೆಗೆ ಮರಳದಿರಲು ಚಿಂತೆಗೊಂಡು ಅವಳ ಪತಿ ಅವಳನ್ನು ಹುಡುಕುತ್ತಾ ಬಂದವ ದುಃಖಿಸುತ್ತಾ ಕುಳಿತ ಪತ್ನಿಯನ್ನು ನೋಡಿದ. ನಡೆದುದ್ದನ್ನೆಲ್ಲ ತಿಳಿದುಕೊಂಡವನಿಗೆ ಭಯಂಕರ ಕೋಪ ಬಂತು. ತನ್ನ ತಪೋಬಲದಿಂದ ದೇವತೆಗಳನ್ನು ಭೂಮಿಗೆ ಎಳೆತಂದು ತನಗೆ (ಹೆಂಡತಿಗಲ್ಲ!) ನ್ಯಾಯ ಸಿಗಬೇಕು ಎಂದು ಹಠ ಹಿಡಿದ. ದೇವತೆಗಳ ರಾಜನೇ ಇಂದ್ರ. ಅವನ ವಿರುಧ್ದ ದ್ವನಿ ಎತ್ತುವವರಾರು? ಸರಿ, ಜಗದೊಡೆಯ ಮಹಾವಿಷ್ಣುವಿಗೆ ಅಪೀಲು ಹೋಯಿತು. 
ವಿಷ್ಣು ಇಂದ್ರನನ್ನು ಕರೆಸಿದ. ಇಂದ್ರ ನಿರಾಕರಿಸಿದ. ತನ್ನ ಮೇಲೆ ಸುಳ್ಳು ಆಪಾದನೆ ಹೊರಸಲಾಗಿದೆ ಎಂದ. ಒಂದೋ ತನ್ನ ಬಗ್ಗೆ ಎದುರು ಮಾತಾಡುವವರಿಲ್ಲ. ಎರಡನೆಯದಾಗಿ ಯಾರು ಸಾಕ್ಷಿಗಳಿರಲಾರರು ಎಂಬ ಭಂಢ ಧೈರ್ಯ ಅವನಿಗೆ. !! ಆದರೆ ಹಾಗಾಗಲಿಲ್ಲ. ಮರದಲ್ಲಿದ್ದ ಒಂಟಿ ಕಣ್ಣಿನ ಮಂಗ ಸಾಕ್ಷಿಯಾಗಿತ್ತಲ್ಲ!  ಸರಿ, ಮಂಗನಿಗೆ ಕರೆ ಹೋಯಿತು. ಅದಕ್ಕೆ ಯಾರ ಹೆದರಿಕೆಯೂ ಇರಲಿಲ್ಲ.! ತಾನು ಸೇಖ್ರಿಯನ್ನು ಕಂಡ ಕ್ಷಣದಿಂದ ಏನೇನು ನಡೆಯಿತು ಎಂದು ವಿವರ ಹೇಳಿತದು.

ಇಂದ್ರನ ಅಪರಾಧ ಸಾಬೀತಾಯಿತು.! ವಿಷ್ಣು "ಇಂದ್ರನ ಅಪರಾಧ ಸಾಬೀತಾಯಿತು. ಸ್ತ್ರೀಗೆ ಅವಮಾನ ಮಾಡಿದ ಅವನಿಗೆ ಶಿಕ್ಷೆಯಾಗಲೇಬೇಕು. ನೆರೆದಿರುವ ಬುದ್ಧಿವಂತರು ಶಿಕ್ಷೆ ಯಾವ ರೀತಿಯಾಗಬೇಕು ಎಂದು ನಿರ್ಧರಿಸಲಿ" ಎಂದು ಹೇಳಿದ.

ನೆರೆದ ಪ್ರಾಜ್ಞರು! ಅವರವರಲ್ಲೇ ಮಾತನಾಡಿಕೊಂಡರು."ಇಂದ್ರನಿಗೆ ಯಾವ ರೀತಿಯ ಶಿಕ್ಷೆಯಾದರೂ ಅದು ದೇವತೆಗಳ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದುಹೋಗುತ್ತದೆ. ಇಂದ್ರನ ಪರವಾಗಿ ಯಾರಾದರೊಬ್ಬರಿಗೆ ,ಯಾವುದಾದರೊಂದಕ್ಕೆ ಶಿಕ್ಷೆ ನೀಡುವುದೇ ಸೂಕ್ತ.! ದೇವಲೋಕಕ್ಕೆ ಇದರಿಂದ ತೊಂದರೆ ಆಗಬಾರದು" ಎಂದು ನಿರ್ಧಾರವಾಯಿತು.

ಸರಿ,ಇಂದ್ರನ ಕುದುರೆಗಳಲ್ಲಿ ಒಂದನ್ನು ಬಲಿ ನೀಡಲಾಯಿತು.! ಇದು ಇಂದ್ರನಿಗಾದ ಶಿಕ್ಷೆಯೆಂದು ಮಂದಿ ಘೋಷಿಸಿದರು. ಎಲ್ಲರೂ ಹೊರಟುಹೋದರು. ಇತ್ತ ಬ್ರಾಹ್ಮಣ, "ನೀನು ಬ್ರಷ್ಟೆ! ಇಂದ್ರ ಮುಟ್ಟಿದವಳು. ಆದುದರಿಂದ ನನ್ನ ಸಹಧರ್ಮಿಣಿಯಾಗಲು ಅಯೋಗ್ಯಳು. ನಾನು ನಿನ್ನನ್ನು ತ್ಯಜಿಸುತ್ತಿದ್ದೇನೆ "ಎಂದು ಹೇಳಿ ಹೊರಟುಹೋದ.


ತಪ್ಪು ಮಾಡಿದವ ಇಂದ್ರ, ಪ್ರಾಣ ತೆತ್ತದ್ದು ಪಾಪದ ಕುದುರೆ. ತಪ್ಪು ಮಾಡದವಳು ಸೇಖ್ರಿ.ಶಿಕ್ಷೆಯಾದದ್ದು ನಿರಪರಾಧಿ ಸೇಖ್ರಿಗೆ. ಸಾಕ್ಷಿ ಹೇಳಿದ್ದು ಒಕ್ಕನ್ಣಿನ ಮಂಗ. ಅದು ಇಂದ್ರನ ಕೆಂಗಣ್ಣಿಗೆ ಗುರಿಯಾಯಿತು. 'ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ' ನ್ಯಾಯ ಹೇಳಿದ ಪ್ರಾಜ್ಞರು ಸಮಾಧಾನದ ನಿಟ್ಟಿಸಿರು ಬಿಟ್ಟರು.


ಇದೊಂದು ಕಥೆ! ವ್ಯಥೆಯೂ ಹೌದು. ನಮ್ಮ ದೇಶದಲ್ಲಿ ಇಂಥ ನೂರಾರು ಅತ್ಯಾಚಾರದ ಸುದ್ದಿಗಳು ಬರುತ್ತವೆ. ಓದುತ್ತೇವೆ. ಅಯ್ಯೋ ಪಾಪ ಎನ್ನುತ್ತೇವೆ.! ಮಾರನೇ ದಿನ ಮತ್ತೊಂದು ಭೀಭತ್ಸ,ಭಯಾನಕ ಸುದ್ದಿ ನಿನ್ನೆಯದನ್ನು ನೇಪಥ್ಯಕ್ಕೆ ಸರಿಸುತ್ತದೆ. ಸಮಾಜ,ನ್ಯಾಯಾಂಗ,ರಕ್ಷನಾಂಗ,ಸರಕಾರ ಒಕ್ಕಣ್ಣ ಮಂಗಗಳಾಗಿವೆ. ಕುರುಡಲ್ಲದಿದ್ದರೂ ಒಂದು ಕಣ್ಣು ಮುಚ್ಚಿಕೊಂಡಿರುತ್ತದೆ. ಯಾಕೆ?

ಇಂಥ ಘಟನೆಗಳಲ್ಲೂ ನಿಜವಾದ ಅಪರಾಧಿಯನ್ನು ಜಗತ್ತು ಕಾಣುವುದೇ ಇಲ್ಲ. ಯಾವುದೋ ಒಂದು ಪಾಪದ ಕುದುರೆ ಬಲಿಪಶುವಾಗುತ್ತದೆ. ಬೆದರಿಕೆ ಹಣದ ಆಮಿಷ ಇದಕ್ಕೆ ಕಾರಣವಾಗುತ್ತದೆ.

Story courtesy..: Mrs.Sandhya Pai.

Monday, 24 August 2015

ಹಪಹಪಿಕೆಯ ಜೀವನ ಪಯಣ



ಅಮೇರಿಕಾದಲ್ಲಿದ್ದ ಬಲು ಸಿರಿವಂತ ಭಾರತೀಯ ದಂಪತಿಗೊಬ್ಬ ಮಗನಿದ್ದ. ಬಲು ಪ್ರೀತಿಯಿಂದ ಅವನನ್ನು ಬೆಳೆಸಿದ್ದರು. ಅರೆಮನೆಯಂಥ ಮನೆ ಪೂರ್ತಿ ಹವಾನಿಯಂತ್ರಿತವಾಗಿತ್ತು. ಅತ್ಯಂತ ಬೆಲೆಬಾಳುವ ಬಟ್ಟೆಬರೆಗಳು, ಕಾರು, ಅತ್ಯುತ್ತಮ ಶಾಲೆಯಲ್ಲಿ ವಿದ್ಯಾಭ್ಯಾಸ... ಹೀಗೆ ಹುಡುಗನಿಗೆ ಯಾವುದೇ ಕೊರತೆಯೂ ಆಗದಂತೆ ನೋಡಿಕೊಂಡಿದ್ದರು. ಹುಡುಗನ ತಂದೆ-ತಾಯಿಯ ಬಾಲ್ಯ ಹೀಗಿರಲಿಲ್ಲ. ಭಾರತದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಬೆಳೆದವರವರು. ಇಂದು ಈ ಸುಖಭೋಗಗಳ ಮಧ್ಯದಲ್ಲಿಯೂ ಅವರು ತಮ್ಮ ಗತ ಜೀವನವನ್ನು ಮರೆತಿರಲಿಲ್ಲ. ತಮ್ಮ ಮಗನಿಗೂ ಇಂಥ ಜೀವನದ ಪರಿಚಯ ಮಾಡಿಸಬೇಕು ಎಂದು ಯೋಚಿಸಿದ ಅವರು, ಒಂದು ಬೇಸಿಗೆಯ ರಜೆಯಲ್ಲಿ ಹುಡುಗನನ್ನು ಭಾರತಕ್ಕೆ ಕರೆದುಕೊಂಡು ಬಂದರಂತೆ...

ಒಂದು ಚಿಕ್ಕ ಹಳ್ಳಿಯಲ್ಲಿನ ತಮ್ಮ ಹಿರಿಯರ ಮನೆಯಲ್ಲಿ ಎರಡು ತಿಂಗಳು ಮಗನ ವಾಸ್ತವ್ಯಕ್ಕೆ ಏರ್ಪಾಟು ಮಾಡಿ ಮರಳಿ ಹೋದರು. ಎರಡು ತಿಂಗಳನ್ನು ಎರಡು ಯುಗಗಳಂತೆ ಕಳೆದು ಅವನನ್ನು ಮರಳಿ ಕರೆದೊಯ್ಯಲು ಬಂದರು. ಹುಡುಗ ಬರಲು ಒಪ್ಪಲಿಲ್ಲ. ಹೆತ್ತವರಿಗೆ ಆಶ್ಚರ್ಯ, ಆತಂಕ!! ಅರೇ, ಅಂಥ ವೈಭೋಗದ ಜೀವನಕ್ಕೆ ಮರಳಲು ನಿರಾಕರಿಸುತ್ತಿದ್ದಾನಲ್ಲ!! ಕಾರಣವೇನು ಎಂದುಕೊಂಡು ಹುಡುಗನಲ್ಲಿ  ಕೇಳಿದರು. ಹುಡುಗನೆಂದ, " ನಮ್ಮ ಮನೆಯಲ್ಲೇನಿದೆ? ನೀವಿಬ್ಬರೂ ಬೆಳಿಗ್ಗೆ ಹೋದರೆ ಬರುವುದು ಸಂಜೆ ಅನಂತರ. ಬಂದ ಅನಂತರವೂ ನಿಮ್ಮ ಕೆಲಸದ ಚರ್ಚೆ. ಎಲ್ಲಿಂದಲೋ ಯಾವಾಗಲೋ ತಂದು ಫ್ರಿಜ್ಜಿನಲ್ಲಿಟ್ಟ ಊಟ ಬಿಸಿಮಾಡುವುದು, ಒಂದಿಷ್ಟು ತಿನ್ನುವುದು!! ಮತ್ತೆ ನಮ್ಮ ಹಾದಿ ನಮಗೆ. ಇಲ್ಲಿ ನೋಡಿ, ಇಡೀ ದಿನ ಒಬ್ಬರಲ್ಲ ಒಬ್ಬರು ಮನೆಯಲ್ಲೇ ಇರುತ್ತಾರೆ. ಮಾತುಕತೆ ಏನು? ಆಟವೇನು? ತೋಟ, ಗದ್ದೆ,ಹೊಲಗಳಲ್ಲಿ ಅಲೆದಾಟವೇನು? ಮರ ಹತ್ತಿ ಮಾವು, ಪೇರಳೆ, ನೇರಳೆಹಣ್ಣನ್ನು ಕಿತ್ತು ತಿನ್ನುವ ಮಜವೇನು? ಎಲ್ಲರೂ ಒಟ್ಟಾಗಿ ಅದೇ ತಾನೇ ತಯಾರಿಸಿದ ಬಿಸಿ ಅಡುಗೆ ಉಣ್ಣುವ ಅನುಭವವೇನು?



"ಇನ್ನು ವಿದ್ಯುತ್ ಕೈಕೊಟ್ಟಾಗ ಭೂತ-ಪ್ರೇತಗಳ ಕಥೆಗಳ ನೆನಪಾಗಿ ಹೆದರಿ, ಮುದುರಿಕೊಳ್ಳುವ ಅನುಭವವನ್ನು ಹೇಗೆ ವರ್ಣಿಸಲಿ? ಆಗ ನಡೆವ ನೆರಳು ಬೆಳಕಿನಾಟವೇನು? ನಮ್ಮ ಅಮೆರಿಕಾದ ಮನೆಯಲ್ಲಿ ಈಜುಕೊಳವಿದೆ. ಆದರೆ ಇಲ್ಲಿ ಈ ಹರಿವ ಶುಭ್ರ, ಸ್ವಚ್ಛ ತೊರೆಯಲ್ಲಿ ಈಜುವ, ಮೀನುಗಳೊಡನೆ ಆಟ ಆಡುವ ಆನಂದ ಅಲ್ಲಿಲ್ಲವಲ್ಲ! ಬೈಕಿನಲ್ಲಿ ಪಯಣಿಸುವಾಗ ಸಿಗುವ ರೋಮಾಂಚನ, ಆಟೋರಿಕ್ಷಾಗಳು ರಸ್ತೆಯಲ್ಲಿ ಗಡಗಡಿಸುತ್ತಾ ಓಡುವಾಗಿನ ಅನುಭವ, ಒಂದೇ ಎರಡೇ. ಇಲ್ಲಿನ ವೈವಿಧ್ಯತೆ ಪ್ರತಿಕ್ಷಣ ಒಂದು ಅನೂಹ್ಯ ಅನುಭವದ ಗಣಿ ಈ ದೇಶ. ಇದನ್ನು ಕಳೆದುಕೊಳ್ಳಲು ನಾ ಬಯಸುವುದಿಲ್ಲ."




ಇದೊಂದು ನೈಜ ಚಿತ್ರಣ. ಇದು ಪ್ರತಿಯೊಂದು ಜೀವಿಯ ಸುಪ್ತಾತಿಸುಪ್ತ ಮನಸ್ಸಿನ ಚಿತ್ರವೂ ಹೌದು. ಮೂಲಭೂತವಾಗಿ ಮನಸ್ಸು ಸ್ವಾತಂತ್ರ್ಯ ಪ್ರೇಮಿ. ಸ್ವಾತಂತ್ರ್ಯ ಅಂದರೆ, ಸ್ವಚ್ಚಾಂಧತೆ ಎಂಬ ತಿಳಿವಳಿಕೆ ಇದೆ. ನಮಗೆ ಬೇಕಾದುದನ್ನು ಬೇಕೆನಿಸಿದ ಕಡೆ ಮಾಡುವಂಥದ್ದು ಸ್ವಚ್ಚಂದತೆ. ಇಲ್ಲಿ ಸಹಜೀವಿಗಳ ಪರಿವೆ ಇಲ್ಲ. 'ತಾನು' ಎಂಬುದೇ ಮುಖ್ಯ. ಈ 'ನಾನು' ಆ ಹೊತ್ತಿನಲ್ಲಿ ತನಗೆ ಸರಿ ಕಂಡಂತೆ ನಡೆಯುತ್ತದೆ. ಪರಿಣಾಮದ ಚಿಂತೆ ಮಾಡುವುದಿಲ್ಲ. ಸ್ವಾತಂತ್ರ್ಯ ಹೀಗಲ್ಲ. ತಾನು, ತನ್ನೊಂದಿಗಿರುವವರೂ ಒಂದಾಗಿ ತಮ್ಮ ತಮ್ಮ ಪರಿಧಿಯೊಳಗೆ ಆನಂದವಾಗಿ ಬದುಕುವುದೇ ಸ್ವಾತಂತ್ರ್ಯ. ಆದರೆ ಒಂದು ಮಾತಂತೂ ಸತ್ಯ. ಪ್ರತಿಯೊಂದು ಜೀವಿಯೂ ಮುಖ್ಯವಾಗಿ ಮನುಷ್ಯ ಜೀವಿ ಸತತವಾಗಿ ತಾನು ಈಗಿರುವ ಸ್ಥಿತಿಗಿಂತ ಭಿನ್ನವಾಗಿ ಮೇಲೇರಲು ಬಯಸುತ್ತದೆ. ನಿರಂತರವಾಗಿ ಇದಕ್ಕಾಗಿ ಹುಡುಕಾಟ ಮಾಡುತ್ತದೆ.



Wednesday, 20 May 2015

‪#‎ಜೀವನ_ಸತ್ಯ‬

1>**-

       ಇದಕ್ಕಿಂತಲೂ ಎತ್ತರ ಅನವಶ್ಯಕ. ಇಲ್ಲಿ ನಾನು ಸಂತೋಷವಾಗೇ ಇದ್ದೇನೆ!!

 ಎಂದು ಮನುಷ್ಯ ಯಾವ ಮಟ್ಟದಲ್ಲಿ ಹೇಳಿಕೊಳ್ಳುತ್ತಾನೋ -ಆ ಮಟ್ಟ ಅವನ 

ಸಮರ್ಥನೆಗೆ ಉಚ್ಛ ಸ್ಥಾಯಿ, ಅಷ್ಟೇ. ಅಲ್ಲಿಂದ ಅವನ ಶಕ್ತಿ ಕ್ರಮೇಣ 

ಅಸಮರ್ಥತೆಯೆಡೆಗೆ ಇಳಿದುಬಿಡುತ್ತದೆ. ರೊಟೀನ್ ಆಗಿ ಬದುಕುವುದು 

ಅಭ್ಯಾಸವಾಗಿ ಬಿಡುತ್ತದೆ.


2>**

   1.ಇಷ್ಟಪಟ್ಟು ಕೆಲಸ ಮಾಡುವವರು.
   
   2.ತಮ್ಮ ಸಮಯದ ತಿಳಿದುಕೊಂಡಿರುವವರು.
 
   3.ಯಾವ ಕ್ಷೇತ್ರದಲ್ಲಿ ತಮಗೆ ನೈಪುಣ್ಯತೆಯಿದೆ ಇದೆ ಎಂದು ಸರಿಯಾಗಿ

       ಗ್ರಹಿಸಿದವರು ---ಮಾತ್ರವೇ ಸುಖವಾಗಿ ಬದುಕಬಲ್ಲರು.


3>**-

            ತನ್ನ ಮೆದುಳನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಬಿಟ್ಟು, ಮನುಷ್ಯ

 ಮನಸ್ಸು ಮಾಡುವ ಕೆಲಸಗಳನ್ನು ಆನಂದಿಸಲು ಉಪಯೋಗಿಸುತ್ತಾನೆ. ಈ 

ಪರಿಣಾಮ ಕ್ರಮೇಣ ಮೆದುಳು ಆಲೋಚಿಸುವುದನ್ನು ಬಿಟ್ಟು ಮನಸ್ಸಿನೊಡನೆ ಸೇರಿ 

ಆನಂದಿಸಲು ಪ್ರಾರಂಭಿಸುತ್ತದೆ. ಇಷ್ಟು ಸಾಕು ಎಂದುಕೊಂಡು ಬೆಳವಣಿಗೆಯನ್ನು 

ನಿಲ್ಲಿಸಿಬಿಡುತ್ತದೆ. ತರ್ಕ ನಶಿಸುತ್ತದೆ.--ಅದೇ ಕಂಫರ್ಟ್ ಝೋನ್...

[ comfort zone]


4>**

ತನಗೆ ತಿಳಿದ ವಿಷಯದಿಂದ ಮತ್ತೊಂದು ಹೊಸ ವಿಷಯ ತಿಳಿದುಕೊಳ್ಳಲು

ಆಲೋಚಿಸಬಲ್ಲ ಶಕ್ತಿ 'ಮನುಷ್ಯನ'ಮೆದುಳಿಗೆ ಮಾತ್ರ ಇದೆ.

5>**

ಕಾಡಿನಲ್ಲಿ ಕಾಣಿಸಿಕೊಳ್ಳುವ ಬೆಂಕಿಗೆ ಗಾಳಿ ಮತ್ತಷ್ಟು ಸಹಾಯ ಮಾಡುತ್ತದೆ. ಅದೇ

ಗಾಳಿ ಎಣ್ಣೆ ದೀಪವನ್ನೂ ಆರಿಸಿಬಿಡುತ್ತದೆ. ಗೆಲ್ಲುವಾಗ ಮಿತ್ರರಿರುತ್ತಾರೆ. ಆಪತ್ತಿನಲ್ಲಿ

ಯಾರೂ ಇರುವುದಿಲ್ಲ.


6>**

ನಿನಗೆ ಹಾನಿ ಮಾಡುವುದು "ದೌರ್ಬಲ್ಯ". ನಿನ್ನಿಂದ ಬೇರೆಯವರಿಗೆ ಹಾನಿಯಾದರೆ

ಅದು ತಪ್ಪು. ನಿನಗಾಗಲಿ, ಬೇರೆಯವರಿಗಾಗಲಿ ಹಾನಿಯಾಗದ ಕೆಲಸ, ನಿನ್ನ

ಸಂತ್ರಪ್ತಿಗಾಗಿ ನೀನೇನೂ ಮಾಡಿದರೂ ತಪ್ಪಿಲ್ಲ.

7>**

ಕೆಲವರು ಸದಾ ಬೇಸರದಿಂದಿರುತ್ತಾರೆ. ಸದಾ ಅಸಹನೆ. ಇಂಡಿಯ ಕ್ರಿಕೆಟ್ ನಲ್ಲಿ

ಸೋತು ಹೋಗಿದ್ದಕ್ಕೆ, ರಾಜಕೀಯಗಳು, ಪವರ್ ಫೈಲ್ಯುರ್, ಟ್ರೈನ್ ಸಮಯಕ್ಕೆ

ಸರಿಯಾಗಿ ಬರದಿರುವುದು - ಇವರ ಕೋಪಕ್ಕೆ, ದುಃಖಕ್ಕೆ ಇಂತಹ ಕಾರಣಗಳು

ಹಲವಾರಿರುತ್ತವೆ. ಪದೆ ಪದೇ ಇವರ ಬಾಯಲ್ಲಿ ....." ಈ ದೇಶ

ಸರಿಹೋಗುವುದಿಲ್ಲ.. ಈ ವ್ಯವಸ್ಥೆ ಇಷ್ಟೇ...." ಇಂತಹ ಮಾತುಗಳು

ಕೇಳಿಸುತ್ತಿರುತ್ತವೆ...


8>**ಮತ್ತೊಬ್ಬರು ಹೀರೋ ಆಗಿ ನಟಿಸುವ ಚಿತ್ರದಲ್ಲಿ ಸೈಡ್ ಕ್ಯಾರೆಕ್ಟೆರ್ ಅಲ್ಲ...

ನಿಮ್ಮ ಜೀವನದ ಚಿತ್ರದಲ್ಲಿ ನೀವೇ "ಹೀರೋ"

9>**

ತೃಪ್ತಿ ಎನ್ನುವುದು 'ಮೆಟೀರಿಯಲ್ ಬೆನಿಫಿಟ್' ಅಂದುಕೊಳ್ಳುವುದೇ ಆತ್ಮವಂಚನೆ. 

ಅದಕ್ಕೆ ಎಷ್ಟು ಬೆಲೆ ಸಲ್ಲಿಸುತ್ತಿದ್ದೆವೆಂದು ತಿಳಿದುಕೊಳ್ಳುವುದೇ ಜ್ಞಾನ..


10>**

ಟೈಟಾನಿಕ್ ಸಿನಿಮಾದಲ್ಲಿಯ ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ಹಡಗು ಮುಳುಗಿ

ಹೊಗುತ್ತಿದ್ದರೆ, ಕೆಲವು ಪ್ರಯಾಣಿಕರು ಬದುಕಬೇಕೆಂಬ ಆಸೆಯಿಂದ ಮೇಲ್ಗಡೆಗೆ

ಓಡುತ್ತಾರೆ. ಮತ್ತೆ ಕೆಲವರು ಮೇಲಿನಿಂದ ನೀರಿಗೆ ಧುಮುಕುತ್ತಾರೆ. ಇನ್ನು ಕೆಲವರು

ಲೈಫ಼್ ಬೋಟಿನೊಳಗೆ ದುಮುಕುತ್ತಾರೆ. ಮತ್ತೊಂದಿಷ್ಟು ಜನ ಫಿಡಲ್ ನುಡಿಸುತ್ತಾ

ಸತ್ತು ಹೋಗುತ್ತಿರುವವರಿಗೆ ಅಂತಿಮ ಗೀತಾಲಾಪನ ಮಾಡುತ್ತಾರೆ. ಕಥೆಗೆ

ಅಗತ್ಯವಾದ್ದರಿಂದ ಕೊನೆಯಲ್ಲಿ ಹೀರೊಯಿನ್ ಮಲಗಿಕೊಳ್ಳುವ ಸಲುವಾಗಿ ಒಂದು

ರೂಮನ್ನು ತಯಾರಿಸುತ್ತಾನೆ ನಿರ್ದೇಶಕ.

ಅದು ಕಥೆ. ಆದರೆ ನಿಜ ಜೀವನದಲ್ಲಿ ನಮಗೆ ಹಾಗೆ ರೂಮು ತಯಾರಿಸಿ 

ಕೊಡುವವರು ಯಾರೂ ಇರುವುದಿಲ್ಲ. ಮುಳುಗಿ ಹೋಗುತ್ತಿರುವ ಹಡಗಿನಿಂದ 

ಯಾವಾಗ ನೀರಿಗೆ ಧುಮುಕಬೇಕು? ಯಾವುದರ ಆಸರೆ ಪಡೆಯಬೇಕು? 

ಎನ್ನುವುದು ಆ ಮನುಷ್ಯನ ಸಮಯಸ್ಪೂರ್ತಿಯ ಮೇಲೆ ಆಧಾರವಾಗಿರುತ್ತದೆ.!!



11>**


ಈ ಜಗತ್ತಿನಲ್ಲಿ ಕಷ್ಟವಾದ ಕೆಲಸವೆಂದು ಹೇಳುವ ಕೆಲಸ ಯಾವುದೂ ಇಲ್ಲ. ನಮಗೆ 

ಅದೆಂದರೆ ಇಷ್ಟವಿಲ್ಲದೆ ಹೋಗುವುದರಿಂದ ಅದು ಕಷ್ಟವಾಗಿ ಕಾಣುತ್ತದೆ ಅಷ್ಟೇ. !!



12>**

ಬೇರೆಯವರಿಗೆ ನಷ್ಟವಾಗದೆ, ನಮಗಾವುದು ಇಷ್ಟವೋ ಅದನ್ನು 

ನಿರ್ಧರಿಸಿಕೊಳ್ಳುವುದೇ "constructive meterialism". ಸೆಂಟಿಮೆಂಟಿಲಿಸ್ಟ್ 

ಗಳು ಇದಕ್ಕೆ ಒಪ್ಪಿಕೊಳ್ಳುವುದಿಲ್ಲ.


13>**

ಮನುಷ್ಯರಲ್ಲೇನೋ ವ್ಯತ್ಯಾಸವಿದೆ...!! ದೇವರಲ್ಲೂ ವ್ಯತ್ಯಾಸವೇ??


14>**

ಪ್ರಾರಂಭದಲ್ಲಿ ಮನುಷ್ಯರು ಕೇವಲ ಪಂಚಭೂತಗಳನ್ನು ಮುಖ್ಯವಾಗಿ ಅಗ್ನಿಯನ್ನು 

ಪೂಜಿಸುತ್ತಿದ್ದರು. ನಂತರ ಬಂತು ದೇವಾಲಯ. 'ದೇವಾಲಯ'ವೆನ್ನುವುದೇ 

ಬಂಡವಾಳಶಾಹಿ ವ್ಯವಸ್ಥೆಗೆ ಚಿನ್ಹೆ.!!



15>**

ಪ್ರತಿ ಗುರಿಯನ್ನು ತಲುಪುತ್ತಿರುವಾಗಲೂ 'ನಾನು ಕಷ್ಟಪಡುತ್ತಿದ್ದೇನೆ' ಎನ್ನುವ 

ಫೀಲಿಂಗ್ ಇರುವವನು ಎಂದೂ ನಂ.೧ ಆಗಲಾರ.


16>**

ನಮ್ಮ ತತ್ವ,ವಾಸ್ತವ ಅಂದರೆ ಯಾರೋ ನಿರ್ದೇಶಿಸಿದ್ದಾಗಲಿ,ಯಾರೋ 

ಹೇಳಿದ್ದಾಗಲಿ ಪ್ರತಿಪಾದಿಕವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ 

ತೆಗೆದುಕೊಂಡರೂ ಅದನ್ನು ನಮ್ಮ ಅನುಭವದಿಂದ, ಜ್ಞಾನದಿಂದ ಪರಿಶೀಲಿಸಿ 

ಸತ್ಯಾಸತ್ಯತೆಗಳನ್ನು ಗ್ರಹಿಸುತ್ತೇವೆ. ತಿಥಿಯಿಂದ ಬಾಲ್ಯವಿವಹಾದವರೆಗೂ ನಮ್ಮ 

ಪೂರ್ವಿಕರು ತಮ್ಮ ತಮ್ಮ ಧರ್ಮಗಳಿಗುಣವಾಗಿ ಏರ್ಪಡಿಸಿಕೊಂಡಿರುವ 

ನಿಯಮಗಳನ್ನು ಒಪ್ಪಿಕೊಳ್ಳಬೇಕಾ ಬೇಡವಾ ಎನ್ನುವುದು,ಪ್ರಸ್ತುತ ಸಮಾಜಕ್ಕೆ 

ಅದರ ಅಗತ್ಯವೇ? ಅದರ ಮೂಲಕ ಇರುವ ಕಷ್ಟ, ನಷ್ಟಗಳನ್ನು ಪರಿಶೀಲಿಸಿದ 

ನಂತರವೇ ನಾವು ನಿರ್ಧರಿಸಿಕೊಳ್ಳುತ್ತೇವೆ.



17>**

ತರ್ಕವಲ್ಲದೆ ಮನುಷ್ಯನ ಜೀವನದಲ್ಲಿ ಬೇರೇನೂ ಇಲ್ಲ. ಮನುಷ್ಯನ ಒಟ್ಟೂ 

ಮೌಲ್ಯಗಳೆಲ್ಲಾ ತರ್ಕದ ಮೇಲೆ ಆಧಾರಿತವಾಗಿದೆ. ಒಂಟಿ ಸೀನು, ಬೆಕ್ಕು ಅಡ್ಡ 

ಬರುವುದು ತರ್ಕಕ್ಕೆ ನಿಲ್ಲುವುದಿಲ್ಲ. ಅದೇ ರೀತಿ ತನಗೆ ಹೆಣ್ಣಿನ ಜೊತೆ ಸಂಬಂಧ 

ಇರುವ ಗಂಡಸು, ತನ್ನ ಹೆಂಡತಿಗೆ ಪರಪುರುಷರೊಡನೆ ಸಂಬಂಧವಿದ್ದರೆ 

ಸಹಿಸಲಾರ. ಹೀಗೇಕೆ ಎಂದು ಪ್ರಶ್ನಿಸುತ್ತದೆ ತರ್ಕ. [ Logic ]



18>**

ಮನುಷ್ಯನ ಒಟ್ಟಾರೆ ಕಷ್ಟದ ಮೇಲೂ,ತಿಳುವಳಿಕೆಯ ಮೇಲೂ ಅವನೆಷ್ಟು 

ಸುಖವಾಗಿ ಬದುಕಬೇಕೆಂದು ನಿರ್ದೇಶಿಸಲ್ಪಡಬೇಕು. ಅಂದರೆ ಜಾಣನಾದ ವ್ಯಕ್ತಿ 

ಎಷ್ಟು ಕಷ್ಟಪಟ್ಟರೆ, ಅಷ್ಟು ಸುಖವನ್ನು ಬಯಸುವ ಹಕ್ಕು ಅವನಿಗಿರುತ್ತದೆ.



19>**

ಪೆರ್ಸೊನಾ ಅಂದರೆ ಮಾಸ್ಕ್ [ ಮುಸುಕು ]. ಪರ್ಸನಾಲಿಟಿ ಎನ್ನುವ ಪದ 

ಅದರಿಂದ ಬಂದದ್ದೇ. ನಮ್ಮ ಪ್ರವರ್ತನೆಯ ಮೇಲೆ, ಹೃದಯದ ಮೇಲೆ ಒಂದು

 ಸಲ ಮುಸುಕು ಹಾಕಿಕೊಳ್ಳುವುದಕ್ಕೆ ಪ್ರಾರಂಭಿಸಿದ ಮೇಲೆ, ನಿರಂತರವಾಗಿ ಅದು 

ಜಾರಿಹೋಗದಂತೆ ಇರಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ನಮ್ಮೊಳಗಿನ 

ಪರ್ಸನಾಲಿಟಿ, ನಮ್ಮ ಮುಖದ ಮೇಲೆ ಹಾಕಿಕೊಂಡ ಮುಸುಕು ಒಂದೇ ಆದಾಗ, 

ಪದೇ ಪದೇ ಜಾರಿ ಹೋಗುತ್ತಿರುವ ಮಾಸ್ಕ್ಅನ್ನು ಕಷ್ಟಪಟ್ಟು ಮತ್ತೆ ಸರಿಸುವ 

ಅಗತ್ಯವಿಲ್ಲ. ನಮ್ಮನ್ನಿಷ್ಟಪಡುವವರು ಇಷ್ಟಪಡುತ್ತಾರೆ. ಇಲ್ಲದವರು ದೂರ 

ಹೋಗುತ್ತಾರೆ...!!



20>**

ನಮ್ಮ ಬಗ್ಗೆ ಬೇರೆಯವರ ಅಭಿಪ್ರಾಯಗಳು,ವಾದಗಳು ಮಾತುಗಳು-ಎಲ್ಲ 

ಅವರವರ ವರ್ತಮಾನ [ ಲೇಟೆಸ್ಟ್ ] ಅನುಭವಗಳ ಮೇಲೆ. ನಮ್ಮಿಂದ 

ಅವರಿಗಾಗುವ ಲಾಭದ ಮೇಲೆ ಆಧಾರವಾಗಿರುತ್ತದೆ.

Tuesday, 17 March 2015

ಅಂತಃಕರಣದ ಅಂತರಾಳ



ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಕಾಲದಲ್ಲಿ 

ಅಬ್ರಹಾಂ ಲಿಂಕನ್ ರಾಷ್ಟ್ರಾಧ್ಯಕ್ಷರಾಗಿದ್ದರು. ಯುದ್ಧ ನಡೆಯುತ್ತಿದ್ದ ರಾಜ್ಯಗಳಲ್ಲಿ 

ತಾವೇ ಸ್ವತಃ ಸಂಚರಿಸುತ್ತಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿದ್ದವರನ್ನು 

ಭೇಟಿಯಾಗಿ ಸಾಂತ್ವನ ಹೇಳುತ್ತಿದ್ದರು. ಹೀಗೆ ಅವರು ಸಂಚರಿಸುವಾಗ ರಕ್ಷಕ ಪಡೆ

 ಯಾ ಸಂಗಾತಿಗಳೂ ಇರುತ್ತಿರಲಿಲ್ಲ. ಒಂದು ದಿನ ಹೀಗೆ ಗಾಯಾಳುಗಳನ್ನು 

ಕಾಣುತ್ತಿರುವಾಗ ನಡೆದ ಘಟನೆ ಇದಂತೆ.


ಒಬ್ಬ ಇಪ್ಪತ್ತೆರಡರ ಹರೆಯದ ಯೋಧ ಮರಣಾಂತಿಕವಾಗಿ ಗಾಯಗೊಂಡಿದ್ದ. 

ಅತೀವ ರಕ್ತಸ್ರಾವದಿಂದ ಸಾವಿನಂಚಿನಲ್ಲಿದ್ದ. ಅಬ್ರಹಾಂ ಲಿಂಕನ್ ಇವನನ್ನು 

ನೋಡಿದರು. ಅವನ ಹತ್ತಿರ ಹೋಗಿ ಅವನ ಕೈಹಿಡಿದು , "ಮಗೂ, ತುಂಬಾ 

ನೋವಾಗುತ್ತಿದೆಯೇನು?" ಎಂದರು. ಅವನಿಗೆ ಏನೂ ಸರಿಯಾಗಿ ಕಾಣದಷ್ಟು 

ಭಯಂಕರ ವೇದನೆಯಾಗುತ್ತಿತ್ತು. ಆದರೂ ಕ್ಷೀಣ ಸ್ವರದಲ್ಲಿ " ಹೌದು ಸ್ವಾಮೀ, 

ತುಂಬಾ ನೋವಾಗುತ್ತಿದೆ. ನಾನು ಸಾಯುತ್ತಿದ್ದೇನೆ ಎಂದು ನನಗೆ ಗೊತ್ತಿದೆ. 

ಸಾವಿನ ಬಗ್ಗೆ ಭಯವಾಗುತ್ತಿದೆ. ನನ್ನ ತಾಯಿಗೆ ನಾನೊಬ್ಬನೇ ಮಗ. ಅವಳು ಎಷ್ಟು 

ದುಃಖಳಿಸುತ್ತಾಳೋ ಎಂದು ಅಳು ಬರುತ್ತಿದೆ. ಒಂದಿಷ್ಟು ನೀರು ಬೇಕಿತ್ತು" ಎಂದ.

ಅಬ್ರಹಾಂರ ಕಣ್ಣಿನಿಂದ ನೀರಿಳಿಯಿತು. ಎದ್ದು ಹೋಗಿ ನೀರು ತಂದು ಕುಡಿಸಿದರು. 

ಆಗವನು, "ಸ್ವಾಮೀ, ನನ್ನ ತಾಯಿಗೊಂದು ಸಂದೇಶ ಕಳುಹಿಸಬೇಕಾಗಿತ್ತು. 

ಬರೆಯಲು ನನ್ನ ಕೈ ನಡುಗತ್ತದೆ. ಕಣ್ಣು ಮಂಜಾಗಿ ಕಾಣುತ್ತಿಲ್ಲ.ದಯವಿಟ್ಟು ನನಗೆ 

ಬರೆದು ಕೊಡಬಹುದೇ?" ಎಂದು ವಿನಂತಿಸಿದ. ಲಿಂಕನ್ನರು ಕಾಗದ, ಪೆನ್ನು 

ಕೈಗೆತ್ತಿಕೊಂಡು ಅವನು ಹೇಳಿದಂತೆಯೇ ಬರೆದರು. ಅನಂತರ ಕಡೆಯಲ್ಲಿ...' 

ಇಂಧನ ಸೇವಕ', ಈ ರಾಷ್ಟ್ರದ ಅಧ್ಯಕ್ಷ ಅಬ್ರಹಾಂ ಲಿಂಕನ್' ಎಂದು ಬರೆದರು.


ಹುಡುಗನ ಗಮನಕ್ಕಿದು ಬಂತು. " ಅಧ್ಯಕ್ಷರೇ, ನೀವು ನಿಜವಾಗಿಯೂ ಲಿಂಕನ್ನರೇ? 

ಇಂದು ನನ್ನ ಜೀವನ ಧನ್ಯವಾಯಿತು. ಈ ದೇಶಕ್ಕಾಗಿ ಸಾವು ಬರುತ್ತಿದೆ ಎಂಬ ತೃಪ್ತಿ 

ಇತ್ತು. ಈಗ ಈ ದೇಶದ ಅಧ್ಯಕ್ಷರ ದರ್ಶನ ಭಾಗ್ಯವೂ ಕಡೆಗಾಲದಲ್ಲಿ ಒದಗಿತು 

ಎಂದು ಸಂತೋಷ ಆಗುತ್ತಿದೆ" ಎನ್ನುತ್ತಿರುವಂತೆಯೇ ಉಸಿರು 

ಹಿಡಿದುಕೊಳ್ಳತೊಡಗಿತು. ಸಾವು ಮತ್ತೊಂದು ಹೆಜ್ಜೆ ಹತ್ತಿರ ಬಂದಿತ್ತು.


ಸ್ವಲ್ಪ ಸುಧರಿಸಿಕೊಂಡು ಕ್ಷೀಣ ಧ್ವನಿಯಲ್ಲಿ ಮತ್ತೆ ಮಾತನಾಡಿದ, "ಮಾನ್ಯರೇ, 

ನನಗೆ ಒಂಟಿತನ ಕಾಡುತ್ತಿದೆ. ಒಂಟಿಯಾಗಿಯೇ ಸಾಯುವೆನೇನೋ ಎಂಬ 

ಹೆದರಿಕೆಯಾಗುತ್ತಿದೆ. ದಯಮಾಡಿ ಸ್ವಲ್ಪವೇ ಹೊತ್ತು ನನ್ನ ಹತ್ತಿರ 

ಕುಳಿತುಕೊಳ್ಳಬಹುದೇ? ಅದೋ ನೋಡಿ, ಅಲ್ಲಿ ಮೃತ್ಯುದೇವತೆ  ಬರುತ್ತಿದ್ದಾನೆ" 

ಎಂದ ನಡುಗುವ ಸ್ವರದಲ್ಲಿ.


ಲಿಂಕನ್ನರು ಅವನ ಪಕ್ಕದಲ್ಲಿ ಕುಳಿತರು. ಅವನ ಎರಡೂ ಕೈಗಳನ್ನು ತಮ್ಮ 

ಅಂಗೈಯಿಂದ ಅಪ್ಪಿ ಹಿಡಿದರು. ತಲೆ ನೇವರಿಸಿದರು, "ಮಗೂ, ನಾನು ನಿನ್ನೊಂದಿಗೆ 

ಇರುತ್ತೇನೆ. ನೀನು ಏಕಾಂಗಿಯಲ್ಲ. ಇಡೀ ರಾಷ್ಟ್ರ ನಿನ್ನೊಂದಿಗಿದೆ. ನಿನಗೆ ನಾವೆಲ್ಲ 

ಕೃತಜ್ನರು. ಶಾಂತವಾಗಿ ನಿದ್ದೆ ಮಾಡು.ಮೃತ್ಯುದೇವತೆಯಲ್ಲ ಸಾಕ್ಷಾತ್ ಭಗವಂತ 

ನಿನ್ನನ್ನು ಎದುರುಗೊಳ್ಳಲು ಬಂದಿದ್ದಾನೆ" ಎಂದರು ಮಮತೆಯಿಂದ. ಅವರ 

ಕಣ್ಣುಗಳಿಂದ ಧಾರೆಧಾರೆಯಾಗಿ ಕಣ್ಣೀರು ಹರಿಯುತ್ತಿತ್ತು. ಹುಡುಗನ ಮುಖದಲ್ಲಿದ್ದ 

ಹೆದರಿಕೆ ಮಾಯವಾಯಿತು. ಮುಖ ಶಾಂತವಾಗಿ ಒಂದು ಸಣ್ಣ ಮಂದಹಾಸ 

ಮೂಡಿತು. ಅವನು ಕಣ್ಣು ಮುಚ್ಚಿದ. ಸ್ವಲ್ಪ ಹೊತ್ತಿನಲ್ಲಿಯೇ ಅವನ ಪ್ರಾಣಪಕ್ಷಿ 

ಹಾರಿಹೋಯಿತು. ಸಾವಿನ ಹೊಸ್ತಿಲಲ್ಲಿದ್ದ ಒಬ್ಬ ಸಾಮಾನ್ಯ ಸೈನಿಕನ ನೋವು, 

ಹೆದರಿಕೆಗಳನ್ನು ಆ ದೇಶದ ಅಧ್ಯಕ್ಷ ಹಂಚಿಕೊಂಡಿದ್ದರು. ಅವನು ಸುಖವಾಗಿ ಸಾಯಲು ಸಹಾಯ ಮಾಡಿದ್ದರು.


ಬದುಕೆಂದರೇನು? ಸಮಸ್ತ ಜೀವಜಂತುಗಳ ಜೀವನ ಪ್ರೇಮವನ್ನು ಯಾ ಬದುಕಿನ 

ಬಗೆಯ ಪ್ರೀತಿಯನ್ನು ಪ್ರೀತಿಸುವುದೇ ಗೌರವಿಸುವುದೇ ನಿಜವಾದ ಬದುಕು 

ಎನ್ನುತ್ತಾರೆ ಬಲ್ಲವರು. ಹಳೆಯ ಹಿಂದಿ ಚಿತ್ರ 'ಶ್ರೀಮಾನ್ ೪೨೦' ರಲ್ಲಿ ಒಂದು ಸುಂದರ ಹಾಡಿದೆ -


                         'ಕಿಸೀಕಿ ಮುಸ್ಕುರಾಹಟೋಪೆ ಹೋ ನಿಖಾರ್, ಕಿಸೀಕಿ ದರ್ದ್                               ಹೋ ಸಕೇತೋ ಲೇ ಉದಾರ್ |
                          ಕಿಸೀಕಿ ವಾಸತೋ ಹೋ ತೇರೆ ದಿಲ್ ಮೆ ಪ್ಯಾರ್, ಜೀನಾ                                  ಇಸೀಕಿ ನಾಮ್ ಹೈ || 

 ಅನ್ಯರ ಸಂತೋಷದಲ್ಲಿ ಮುಖವರಳಿದರೆ, ಅನ್ಯರ ನೋವುಗಳನ್ನು ಒಂದಿಷ್ಟು ಕಡ ಪಡೆಯುವಂತಾದರೆ |
 ಅನ್ಯರಿಗಾಗಿ ನಿಮ್ಮ ಹೃದಯದಲ್ಲಿ ಒಂದಿಷ್ಟು ಪ್ರೇಮವಿದ್ದರೆ ಬದುಕಿಗೆ ಇನ್ನೊಂದು ಹೆಸರಿದು ||


ಒಮ್ಮೆ ಶಿರಡಿ ಸಾಯಿಬಾಬಾರನ್ನು ಭಕ್ತನೊಬ್ಬ ಊಟಕ್ಕೆ ಆಹ್ವಾನಿಸಿದ. ಒಪ್ಪಿದರು 

ಬಾಬಾ. ಆದರೆ ಹೊತ್ತು ನೇತ್ತಿಗೇರುತ್ತಿರುವಂತೆ ಒಂದು ಕಟು ನಾಯಿ ಮಾತ್ರ 

ಬಂತು. ಕಜ್ಜಿಯಾಗಿ ವ್ರಣಗಳಿಂದ ಕೀವು ವಸರುತ್ತಿದ್ದ ನಾಯಿ ಒಸರುತ್ತಿದ್ದ ನಾಯಿ 

ಹೊಸ್ತಿಲಿಗೆ ಬರುತ್ತಿರುವಂತೆ ಮನೆಯೊಡೆಯ ಸಿಟ್ಟಿಗೆದ್ದ. ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯ 

ತುಂಡನ್ನೆತ್ತಿ ನಾಲ್ಕು ಬಾರಿಸಿದ. ನಾಯಿ ನೋವಿನಿಂದ ನರಳುತ್ತಾ ಓಡಿಹೋಯಿತು.

 ಮಧ್ಯಾಹ್ನ ಕಳೆದು ಸಂಜೆಯಾದರೂ ಬಾಬಾ ಬರಲೇ ಇಲ್ಲ. ಭಕ್ತ ಬಾಬಾರನ್ನು 

ಹುಡುಕಿಕೊಂಡು ಹೋದ. ಬಾಬಾ ಅಡ್ಡಾಗಿದ್ದರು. ಮೈ-ಕೈಯೆಲ್ಲಾ ಬಾಸುಂಡೆಗಳು! 

ಕೆಲವು ಕಡೆ ಚರ್ಮ ಕಿತ್ತು ಬಂದು ರಕ್ತ ಒಸರುತ್ತಿತ್ತು. ಈ ಭಕ್ತ ಹೌಹಾರಿದ!. 

"ಸ್ವಾಮೀ, ಇದೇನಾಯಿತು! ಯಾರು ಹೊಡೆದರು ಈ ಪರಿ? ಯಾರಂತ ಹೇಳಿ, ಗ್ರಹಚಾರ ಬಿಡಿಸುತ್ತೇನೆ ಅವನದು" ಎಂದ.


ಬಾಬಾ ತಲೆ ಎತ್ತಿ ನೋಡಿ, "ಎದುರಿಗೆ ನಿಂತಿದ್ದಾನೆ. ಮಧ್ಯಾಹ್ನ ಹಸಿದು ನಿನ್ನ 

ಬಾಗಿಲಿಗೆ ಬಂದರೆ ಹೀಗೆ ಹೊಡೆದೆಯಲ್ಲಾ? ನ್ಯಾಯವೇ?" ಎಂದರು.


ವಿಶ್ವಾತ್ಮ ಪ್ರಜ್ನೆ ಇರುವವ ಎಂದೂ ಹಿಂಸಿಸಲಾರ. ಸಮಸ್ತ ಚರಾಚರ ಜಗತ್ತಿನಲ್ಲಿ ಅವನಿಗೆ "ತಾನೇ" ಕಾಣುತ್ತಾನೆ.

Tuesday, 10 March 2015

ನಿರ್ಭೀತ ಸ್ವಾತಂತ್ರ್ಯ ಸೇನಾನಿಗಳಿಗಿದೋ ನಮ್ಮ ನಮನ..... ಭಾಗ-೨


ಅವನ ಬಾಯಿಂದ ಚೀತ್ಕಾರವೊಂದು ಹೊರಬಿತ್ತು. ನೆರೆದವರು ಉಸಿರು 

ಬಿಗಿಹಿಡಿದಿದ್ದರು, ಹಾಹಾಕಾರ ಮಾಡಿದರು. ಅಷ್ಟೇ, ಯಾರಿಗೂ ಅವನನ್ನು ಮೇಲೆತ್ತುವ ಧೈರ್ಯವಿರಲಿಲ್ಲ.

ಆದರೆ, ಅಲ್ಲಿ ನಿಂತಿದ್ದ ಗುರುಗಳು, ಹಿಂದುಮುಂದೆ ನೋಡದೆ, ಕೊಳಕ್ಕೆ ಹಾರಿ ಅವನನ್ನು ಮೇಲೆತ್ತಿ ತಂದರು.

 ಈಗ ನೆರೆದವರು ದಂಗಾದರು. ಆಮ್ಲ ಗುರುಗಳು ಯಾ ವಿದ್ಯಾರ್ಥಿಯ ದೇಹಗಳ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.


ಕನಿಷ್ಠ ಅವರ ಮೈಗಳ ಮೇಲೆ ಒಂದೇ ಒಂದು ಬೊಬ್ಬೆಯೂ ಬಂದಿರಲಿಲ್ಲ.!

ಅಚ್ಚರಿ ಎನಿಸುತ್ತದೆಯೇ? ಕಾರಣ ನೋಡಿ! ಅಸಲಿಗೆ ಅದು ಆಮ್ಲದ ಬದಲಿಗೆ 

ಸಾಮಾನ್ಯ ನೀರು ತುಂಬಿದ ಕೊಳವಾಗಿತ್ತು. ಆಮ್ಲ ಇದೆ ಎಂಬ ಸುದ್ದಿ 

ಹರಡಲಾಗಿತ್ತು.! ಅಲ್ಲಿಯವೆರೆಗೆ ಎಷ್ಟೋ ಕಡಿಮೆ ಅಗಲದ ಹಲಗೆಯ ಮೇಲೆ 

ನಿರ್ಭಯವಾಗಿ ನಡೆಯಲು ಅಭ್ಯಾಸ ಮಾಡಿದ ವಿದ್ಯಾರ್ಥಿ, ಕೊಳದ ತಳದಲ್ಲಿದ್ದ 

ಮೂಳೆಯ ತುಂಡುಗಳನ್ನು ಕಂಡ ತಕ್ಷಣ ತನ್ನ ಗತಿಯೂ ಹೀಗೇ ಆಗಬಹುದು ಎಂಬ 

ಭಯದಿಂದ ಸಮತೋಲನ ಕಳೆದುಕೊಂಡಿದ್ದ.ಯಾರ ಮನಸ್ಸಿನಲ್ಲಿ ಭಯವಿಲ್ಲವೋ,

 ಹಿಂಸಾ ಭಯವಿಲ್ಲವೋ ಅಲ್ಲಿ ವಿಶ್ವ ಪ್ರೇಮ ಮನೆ ಮಾಡುತ್ತದೆ. ಇಂಥವರನ್ನು 

ಯಾವ ಹಿಂಸ್ರ ಪ್ರಾಣಿಯೂ ಹಿಂಸಿಸದು, ಕೊಲ್ಲದು. ಈ ಪ್ರೇಮ ಭಾವವೇ 

"ಮೈತ್ರೀ". ಭಾರತ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ಗಮನಿಸಿದಾಗ ಈ 

ನಿರ್ಭಯತೆ ನಿಜ ಅರ್ಥದಲ್ಲಿ ತೆರೆದುಕೊಳ್ಳುತ್ತದೆ. ನಮಗೆ ತಿಳಿದಿರುವ ಹೆಸರುಗಳು 

ಕೆಲವೇ ಕೆಲವು. ವೀರ ಸಾವರ್ಕರ್, ಭಗತ್ ಸಿಂಗ್, ಸುಖದೇವ್, ಸುಭಾಷ್ 

ಚಂದ್ರಬೋಸ್.... ಹೀಗೆ ಕೆಲವರಷ್ಟೇ! ಆದರೆ ಹೆಸರು ತಿಳಿಯದ 

ಸಾವಿರಾರು ಮಂದಿ ಈ ನಿರ್ಭಯತೆಯನ್ನು ಸಾಧಿಸಿದರು. ಬ್ರಿಟಿಷರ ಭಂದನಕ್ಕೆ 

ಒಳಗಾದರೆ ಅನುಭವಿಸಬೇಕಾಗುವ ಅಮಾನುಷ ಹಿಂಸೆ. ಕಡೆಗೆ ಬರಬಹುದಾದ 

ಸಾವಿನ ಬಗೆಯ ಸಂಪೂರ್ಣ ಜ್ನಾನದಿಂದಲೇ ಅವರ ವಿರುದ್ಧ ಸಿಡಿದೆದ್ದು, ಹೋರಾಡಿದರು.

 

ಸತ್ತವರಿಗೆ. ಅಂಗಾಂಗ ಕಳೆದುಕೊಂಡವರಿಗೆ, ವಿದ್ಯಾಭ್ಯಾಸ ನಿಲ್ಲಿಸಿ ಭವಿಷ್ಯ 

ಕಳೆದುಕೊಂಡವರಿಗೆ, ಮನೆಮಾರು ತ್ಯಜಿಸಿದವರಿಗೆ ಲೆಕ್ಕವಿಲ್ಲ! ಇವರೆಲ್ಲರನ್ನೂ 

ಇಂಥ ಭಯಾನಕ ಬದುಕಿಗೆ ಪ್ರೇರೆಪಿಸಿದ್ದು ಅವರ ದೇಶಪ್ರೇಮ, ಸ್ವಾತಂತ್ರ್ಯದ 

ಅಸೀಮ ಕಾಮನೆ. ಇವುಗಳ ಮುಂದೆ ಭಯ ಹಿಮ್ಮೆಟ್ಟಿತು.!



ಚಿತ್ತಕ್ಕೆ ಮೂರು ದೋಷಗಳಿವೆಯಂತೆ. ಆವರಣ, ಮಲ ಮತ್ತು ವಿಕ್ಷೇಪ.

ಆವರಣ ಎಂದರೆ, ನಮ್ಮ ಮೂಲ ಸ್ವರೂಪದ ತಿಳಿವಿಲ್ಲದೆ ಇರುವಿಕೆ. ಇದೇ ಮಾಯೆ.

ಮಲ ಎಂದರೆ ಭೌತಿಕ ಭೋಗಗಳ ಕಾಮನೆ. ಅವುಗಳಿಗಾಗಿ ಏನನ್ನೂ ಮಾಡಲು 

ಹೇಸದಿರುವುದು.ವಿಕ್ಷೇಪವೆಂದರೆ,ಚಂಚಲತೆ. ಯಾವುದರಲ್ಲೂ 

ಸ್ಥಿರವಾಗಿರದಿರುವುದು. ಇವುಗಳ ಒಟ್ಟು ಪರಿಣಾಮವೇ 'ಭಯ".

CLICK HERE