Monday, 24 August 2015

ಹಪಹಪಿಕೆಯ ಜೀವನ ಪಯಣ



ಅಮೇರಿಕಾದಲ್ಲಿದ್ದ ಬಲು ಸಿರಿವಂತ ಭಾರತೀಯ ದಂಪತಿಗೊಬ್ಬ ಮಗನಿದ್ದ. ಬಲು ಪ್ರೀತಿಯಿಂದ ಅವನನ್ನು ಬೆಳೆಸಿದ್ದರು. ಅರೆಮನೆಯಂಥ ಮನೆ ಪೂರ್ತಿ ಹವಾನಿಯಂತ್ರಿತವಾಗಿತ್ತು. ಅತ್ಯಂತ ಬೆಲೆಬಾಳುವ ಬಟ್ಟೆಬರೆಗಳು, ಕಾರು, ಅತ್ಯುತ್ತಮ ಶಾಲೆಯಲ್ಲಿ ವಿದ್ಯಾಭ್ಯಾಸ... ಹೀಗೆ ಹುಡುಗನಿಗೆ ಯಾವುದೇ ಕೊರತೆಯೂ ಆಗದಂತೆ ನೋಡಿಕೊಂಡಿದ್ದರು. ಹುಡುಗನ ತಂದೆ-ತಾಯಿಯ ಬಾಲ್ಯ ಹೀಗಿರಲಿಲ್ಲ. ಭಾರತದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಬೆಳೆದವರವರು. ಇಂದು ಈ ಸುಖಭೋಗಗಳ ಮಧ್ಯದಲ್ಲಿಯೂ ಅವರು ತಮ್ಮ ಗತ ಜೀವನವನ್ನು ಮರೆತಿರಲಿಲ್ಲ. ತಮ್ಮ ಮಗನಿಗೂ ಇಂಥ ಜೀವನದ ಪರಿಚಯ ಮಾಡಿಸಬೇಕು ಎಂದು ಯೋಚಿಸಿದ ಅವರು, ಒಂದು ಬೇಸಿಗೆಯ ರಜೆಯಲ್ಲಿ ಹುಡುಗನನ್ನು ಭಾರತಕ್ಕೆ ಕರೆದುಕೊಂಡು ಬಂದರಂತೆ...

ಒಂದು ಚಿಕ್ಕ ಹಳ್ಳಿಯಲ್ಲಿನ ತಮ್ಮ ಹಿರಿಯರ ಮನೆಯಲ್ಲಿ ಎರಡು ತಿಂಗಳು ಮಗನ ವಾಸ್ತವ್ಯಕ್ಕೆ ಏರ್ಪಾಟು ಮಾಡಿ ಮರಳಿ ಹೋದರು. ಎರಡು ತಿಂಗಳನ್ನು ಎರಡು ಯುಗಗಳಂತೆ ಕಳೆದು ಅವನನ್ನು ಮರಳಿ ಕರೆದೊಯ್ಯಲು ಬಂದರು. ಹುಡುಗ ಬರಲು ಒಪ್ಪಲಿಲ್ಲ. ಹೆತ್ತವರಿಗೆ ಆಶ್ಚರ್ಯ, ಆತಂಕ!! ಅರೇ, ಅಂಥ ವೈಭೋಗದ ಜೀವನಕ್ಕೆ ಮರಳಲು ನಿರಾಕರಿಸುತ್ತಿದ್ದಾನಲ್ಲ!! ಕಾರಣವೇನು ಎಂದುಕೊಂಡು ಹುಡುಗನಲ್ಲಿ  ಕೇಳಿದರು. ಹುಡುಗನೆಂದ, " ನಮ್ಮ ಮನೆಯಲ್ಲೇನಿದೆ? ನೀವಿಬ್ಬರೂ ಬೆಳಿಗ್ಗೆ ಹೋದರೆ ಬರುವುದು ಸಂಜೆ ಅನಂತರ. ಬಂದ ಅನಂತರವೂ ನಿಮ್ಮ ಕೆಲಸದ ಚರ್ಚೆ. ಎಲ್ಲಿಂದಲೋ ಯಾವಾಗಲೋ ತಂದು ಫ್ರಿಜ್ಜಿನಲ್ಲಿಟ್ಟ ಊಟ ಬಿಸಿಮಾಡುವುದು, ಒಂದಿಷ್ಟು ತಿನ್ನುವುದು!! ಮತ್ತೆ ನಮ್ಮ ಹಾದಿ ನಮಗೆ. ಇಲ್ಲಿ ನೋಡಿ, ಇಡೀ ದಿನ ಒಬ್ಬರಲ್ಲ ಒಬ್ಬರು ಮನೆಯಲ್ಲೇ ಇರುತ್ತಾರೆ. ಮಾತುಕತೆ ಏನು? ಆಟವೇನು? ತೋಟ, ಗದ್ದೆ,ಹೊಲಗಳಲ್ಲಿ ಅಲೆದಾಟವೇನು? ಮರ ಹತ್ತಿ ಮಾವು, ಪೇರಳೆ, ನೇರಳೆಹಣ್ಣನ್ನು ಕಿತ್ತು ತಿನ್ನುವ ಮಜವೇನು? ಎಲ್ಲರೂ ಒಟ್ಟಾಗಿ ಅದೇ ತಾನೇ ತಯಾರಿಸಿದ ಬಿಸಿ ಅಡುಗೆ ಉಣ್ಣುವ ಅನುಭವವೇನು?



"ಇನ್ನು ವಿದ್ಯುತ್ ಕೈಕೊಟ್ಟಾಗ ಭೂತ-ಪ್ರೇತಗಳ ಕಥೆಗಳ ನೆನಪಾಗಿ ಹೆದರಿ, ಮುದುರಿಕೊಳ್ಳುವ ಅನುಭವವನ್ನು ಹೇಗೆ ವರ್ಣಿಸಲಿ? ಆಗ ನಡೆವ ನೆರಳು ಬೆಳಕಿನಾಟವೇನು? ನಮ್ಮ ಅಮೆರಿಕಾದ ಮನೆಯಲ್ಲಿ ಈಜುಕೊಳವಿದೆ. ಆದರೆ ಇಲ್ಲಿ ಈ ಹರಿವ ಶುಭ್ರ, ಸ್ವಚ್ಛ ತೊರೆಯಲ್ಲಿ ಈಜುವ, ಮೀನುಗಳೊಡನೆ ಆಟ ಆಡುವ ಆನಂದ ಅಲ್ಲಿಲ್ಲವಲ್ಲ! ಬೈಕಿನಲ್ಲಿ ಪಯಣಿಸುವಾಗ ಸಿಗುವ ರೋಮಾಂಚನ, ಆಟೋರಿಕ್ಷಾಗಳು ರಸ್ತೆಯಲ್ಲಿ ಗಡಗಡಿಸುತ್ತಾ ಓಡುವಾಗಿನ ಅನುಭವ, ಒಂದೇ ಎರಡೇ. ಇಲ್ಲಿನ ವೈವಿಧ್ಯತೆ ಪ್ರತಿಕ್ಷಣ ಒಂದು ಅನೂಹ್ಯ ಅನುಭವದ ಗಣಿ ಈ ದೇಶ. ಇದನ್ನು ಕಳೆದುಕೊಳ್ಳಲು ನಾ ಬಯಸುವುದಿಲ್ಲ."




ಇದೊಂದು ನೈಜ ಚಿತ್ರಣ. ಇದು ಪ್ರತಿಯೊಂದು ಜೀವಿಯ ಸುಪ್ತಾತಿಸುಪ್ತ ಮನಸ್ಸಿನ ಚಿತ್ರವೂ ಹೌದು. ಮೂಲಭೂತವಾಗಿ ಮನಸ್ಸು ಸ್ವಾತಂತ್ರ್ಯ ಪ್ರೇಮಿ. ಸ್ವಾತಂತ್ರ್ಯ ಅಂದರೆ, ಸ್ವಚ್ಚಾಂಧತೆ ಎಂಬ ತಿಳಿವಳಿಕೆ ಇದೆ. ನಮಗೆ ಬೇಕಾದುದನ್ನು ಬೇಕೆನಿಸಿದ ಕಡೆ ಮಾಡುವಂಥದ್ದು ಸ್ವಚ್ಚಂದತೆ. ಇಲ್ಲಿ ಸಹಜೀವಿಗಳ ಪರಿವೆ ಇಲ್ಲ. 'ತಾನು' ಎಂಬುದೇ ಮುಖ್ಯ. ಈ 'ನಾನು' ಆ ಹೊತ್ತಿನಲ್ಲಿ ತನಗೆ ಸರಿ ಕಂಡಂತೆ ನಡೆಯುತ್ತದೆ. ಪರಿಣಾಮದ ಚಿಂತೆ ಮಾಡುವುದಿಲ್ಲ. ಸ್ವಾತಂತ್ರ್ಯ ಹೀಗಲ್ಲ. ತಾನು, ತನ್ನೊಂದಿಗಿರುವವರೂ ಒಂದಾಗಿ ತಮ್ಮ ತಮ್ಮ ಪರಿಧಿಯೊಳಗೆ ಆನಂದವಾಗಿ ಬದುಕುವುದೇ ಸ್ವಾತಂತ್ರ್ಯ. ಆದರೆ ಒಂದು ಮಾತಂತೂ ಸತ್ಯ. ಪ್ರತಿಯೊಂದು ಜೀವಿಯೂ ಮುಖ್ಯವಾಗಿ ಮನುಷ್ಯ ಜೀವಿ ಸತತವಾಗಿ ತಾನು ಈಗಿರುವ ಸ್ಥಿತಿಗಿಂತ ಭಿನ್ನವಾಗಿ ಮೇಲೇರಲು ಬಯಸುತ್ತದೆ. ನಿರಂತರವಾಗಿ ಇದಕ್ಕಾಗಿ ಹುಡುಕಾಟ ಮಾಡುತ್ತದೆ.



No comments:

Post a Comment

CLICK HERE