Tuesday 17 March 2015

ಅಂತಃಕರಣದ ಅಂತರಾಳ



ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಕಾಲದಲ್ಲಿ 

ಅಬ್ರಹಾಂ ಲಿಂಕನ್ ರಾಷ್ಟ್ರಾಧ್ಯಕ್ಷರಾಗಿದ್ದರು. ಯುದ್ಧ ನಡೆಯುತ್ತಿದ್ದ ರಾಜ್ಯಗಳಲ್ಲಿ 

ತಾವೇ ಸ್ವತಃ ಸಂಚರಿಸುತ್ತಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿದ್ದವರನ್ನು 

ಭೇಟಿಯಾಗಿ ಸಾಂತ್ವನ ಹೇಳುತ್ತಿದ್ದರು. ಹೀಗೆ ಅವರು ಸಂಚರಿಸುವಾಗ ರಕ್ಷಕ ಪಡೆ

 ಯಾ ಸಂಗಾತಿಗಳೂ ಇರುತ್ತಿರಲಿಲ್ಲ. ಒಂದು ದಿನ ಹೀಗೆ ಗಾಯಾಳುಗಳನ್ನು 

ಕಾಣುತ್ತಿರುವಾಗ ನಡೆದ ಘಟನೆ ಇದಂತೆ.


ಒಬ್ಬ ಇಪ್ಪತ್ತೆರಡರ ಹರೆಯದ ಯೋಧ ಮರಣಾಂತಿಕವಾಗಿ ಗಾಯಗೊಂಡಿದ್ದ. 

ಅತೀವ ರಕ್ತಸ್ರಾವದಿಂದ ಸಾವಿನಂಚಿನಲ್ಲಿದ್ದ. ಅಬ್ರಹಾಂ ಲಿಂಕನ್ ಇವನನ್ನು 

ನೋಡಿದರು. ಅವನ ಹತ್ತಿರ ಹೋಗಿ ಅವನ ಕೈಹಿಡಿದು , "ಮಗೂ, ತುಂಬಾ 

ನೋವಾಗುತ್ತಿದೆಯೇನು?" ಎಂದರು. ಅವನಿಗೆ ಏನೂ ಸರಿಯಾಗಿ ಕಾಣದಷ್ಟು 

ಭಯಂಕರ ವೇದನೆಯಾಗುತ್ತಿತ್ತು. ಆದರೂ ಕ್ಷೀಣ ಸ್ವರದಲ್ಲಿ " ಹೌದು ಸ್ವಾಮೀ, 

ತುಂಬಾ ನೋವಾಗುತ್ತಿದೆ. ನಾನು ಸಾಯುತ್ತಿದ್ದೇನೆ ಎಂದು ನನಗೆ ಗೊತ್ತಿದೆ. 

ಸಾವಿನ ಬಗ್ಗೆ ಭಯವಾಗುತ್ತಿದೆ. ನನ್ನ ತಾಯಿಗೆ ನಾನೊಬ್ಬನೇ ಮಗ. ಅವಳು ಎಷ್ಟು 

ದುಃಖಳಿಸುತ್ತಾಳೋ ಎಂದು ಅಳು ಬರುತ್ತಿದೆ. ಒಂದಿಷ್ಟು ನೀರು ಬೇಕಿತ್ತು" ಎಂದ.

ಅಬ್ರಹಾಂರ ಕಣ್ಣಿನಿಂದ ನೀರಿಳಿಯಿತು. ಎದ್ದು ಹೋಗಿ ನೀರು ತಂದು ಕುಡಿಸಿದರು. 

ಆಗವನು, "ಸ್ವಾಮೀ, ನನ್ನ ತಾಯಿಗೊಂದು ಸಂದೇಶ ಕಳುಹಿಸಬೇಕಾಗಿತ್ತು. 

ಬರೆಯಲು ನನ್ನ ಕೈ ನಡುಗತ್ತದೆ. ಕಣ್ಣು ಮಂಜಾಗಿ ಕಾಣುತ್ತಿಲ್ಲ.ದಯವಿಟ್ಟು ನನಗೆ 

ಬರೆದು ಕೊಡಬಹುದೇ?" ಎಂದು ವಿನಂತಿಸಿದ. ಲಿಂಕನ್ನರು ಕಾಗದ, ಪೆನ್ನು 

ಕೈಗೆತ್ತಿಕೊಂಡು ಅವನು ಹೇಳಿದಂತೆಯೇ ಬರೆದರು. ಅನಂತರ ಕಡೆಯಲ್ಲಿ...' 

ಇಂಧನ ಸೇವಕ', ಈ ರಾಷ್ಟ್ರದ ಅಧ್ಯಕ್ಷ ಅಬ್ರಹಾಂ ಲಿಂಕನ್' ಎಂದು ಬರೆದರು.


ಹುಡುಗನ ಗಮನಕ್ಕಿದು ಬಂತು. " ಅಧ್ಯಕ್ಷರೇ, ನೀವು ನಿಜವಾಗಿಯೂ ಲಿಂಕನ್ನರೇ? 

ಇಂದು ನನ್ನ ಜೀವನ ಧನ್ಯವಾಯಿತು. ಈ ದೇಶಕ್ಕಾಗಿ ಸಾವು ಬರುತ್ತಿದೆ ಎಂಬ ತೃಪ್ತಿ 

ಇತ್ತು. ಈಗ ಈ ದೇಶದ ಅಧ್ಯಕ್ಷರ ದರ್ಶನ ಭಾಗ್ಯವೂ ಕಡೆಗಾಲದಲ್ಲಿ ಒದಗಿತು 

ಎಂದು ಸಂತೋಷ ಆಗುತ್ತಿದೆ" ಎನ್ನುತ್ತಿರುವಂತೆಯೇ ಉಸಿರು 

ಹಿಡಿದುಕೊಳ್ಳತೊಡಗಿತು. ಸಾವು ಮತ್ತೊಂದು ಹೆಜ್ಜೆ ಹತ್ತಿರ ಬಂದಿತ್ತು.


ಸ್ವಲ್ಪ ಸುಧರಿಸಿಕೊಂಡು ಕ್ಷೀಣ ಧ್ವನಿಯಲ್ಲಿ ಮತ್ತೆ ಮಾತನಾಡಿದ, "ಮಾನ್ಯರೇ, 

ನನಗೆ ಒಂಟಿತನ ಕಾಡುತ್ತಿದೆ. ಒಂಟಿಯಾಗಿಯೇ ಸಾಯುವೆನೇನೋ ಎಂಬ 

ಹೆದರಿಕೆಯಾಗುತ್ತಿದೆ. ದಯಮಾಡಿ ಸ್ವಲ್ಪವೇ ಹೊತ್ತು ನನ್ನ ಹತ್ತಿರ 

ಕುಳಿತುಕೊಳ್ಳಬಹುದೇ? ಅದೋ ನೋಡಿ, ಅಲ್ಲಿ ಮೃತ್ಯುದೇವತೆ  ಬರುತ್ತಿದ್ದಾನೆ" 

ಎಂದ ನಡುಗುವ ಸ್ವರದಲ್ಲಿ.


ಲಿಂಕನ್ನರು ಅವನ ಪಕ್ಕದಲ್ಲಿ ಕುಳಿತರು. ಅವನ ಎರಡೂ ಕೈಗಳನ್ನು ತಮ್ಮ 

ಅಂಗೈಯಿಂದ ಅಪ್ಪಿ ಹಿಡಿದರು. ತಲೆ ನೇವರಿಸಿದರು, "ಮಗೂ, ನಾನು ನಿನ್ನೊಂದಿಗೆ 

ಇರುತ್ತೇನೆ. ನೀನು ಏಕಾಂಗಿಯಲ್ಲ. ಇಡೀ ರಾಷ್ಟ್ರ ನಿನ್ನೊಂದಿಗಿದೆ. ನಿನಗೆ ನಾವೆಲ್ಲ 

ಕೃತಜ್ನರು. ಶಾಂತವಾಗಿ ನಿದ್ದೆ ಮಾಡು.ಮೃತ್ಯುದೇವತೆಯಲ್ಲ ಸಾಕ್ಷಾತ್ ಭಗವಂತ 

ನಿನ್ನನ್ನು ಎದುರುಗೊಳ್ಳಲು ಬಂದಿದ್ದಾನೆ" ಎಂದರು ಮಮತೆಯಿಂದ. ಅವರ 

ಕಣ್ಣುಗಳಿಂದ ಧಾರೆಧಾರೆಯಾಗಿ ಕಣ್ಣೀರು ಹರಿಯುತ್ತಿತ್ತು. ಹುಡುಗನ ಮುಖದಲ್ಲಿದ್ದ 

ಹೆದರಿಕೆ ಮಾಯವಾಯಿತು. ಮುಖ ಶಾಂತವಾಗಿ ಒಂದು ಸಣ್ಣ ಮಂದಹಾಸ 

ಮೂಡಿತು. ಅವನು ಕಣ್ಣು ಮುಚ್ಚಿದ. ಸ್ವಲ್ಪ ಹೊತ್ತಿನಲ್ಲಿಯೇ ಅವನ ಪ್ರಾಣಪಕ್ಷಿ 

ಹಾರಿಹೋಯಿತು. ಸಾವಿನ ಹೊಸ್ತಿಲಲ್ಲಿದ್ದ ಒಬ್ಬ ಸಾಮಾನ್ಯ ಸೈನಿಕನ ನೋವು, 

ಹೆದರಿಕೆಗಳನ್ನು ಆ ದೇಶದ ಅಧ್ಯಕ್ಷ ಹಂಚಿಕೊಂಡಿದ್ದರು. ಅವನು ಸುಖವಾಗಿ ಸಾಯಲು ಸಹಾಯ ಮಾಡಿದ್ದರು.


ಬದುಕೆಂದರೇನು? ಸಮಸ್ತ ಜೀವಜಂತುಗಳ ಜೀವನ ಪ್ರೇಮವನ್ನು ಯಾ ಬದುಕಿನ 

ಬಗೆಯ ಪ್ರೀತಿಯನ್ನು ಪ್ರೀತಿಸುವುದೇ ಗೌರವಿಸುವುದೇ ನಿಜವಾದ ಬದುಕು 

ಎನ್ನುತ್ತಾರೆ ಬಲ್ಲವರು. ಹಳೆಯ ಹಿಂದಿ ಚಿತ್ರ 'ಶ್ರೀಮಾನ್ ೪೨೦' ರಲ್ಲಿ ಒಂದು ಸುಂದರ ಹಾಡಿದೆ -


                         'ಕಿಸೀಕಿ ಮುಸ್ಕುರಾಹಟೋಪೆ ಹೋ ನಿಖಾರ್, ಕಿಸೀಕಿ ದರ್ದ್                               ಹೋ ಸಕೇತೋ ಲೇ ಉದಾರ್ |
                          ಕಿಸೀಕಿ ವಾಸತೋ ಹೋ ತೇರೆ ದಿಲ್ ಮೆ ಪ್ಯಾರ್, ಜೀನಾ                                  ಇಸೀಕಿ ನಾಮ್ ಹೈ || 

 ಅನ್ಯರ ಸಂತೋಷದಲ್ಲಿ ಮುಖವರಳಿದರೆ, ಅನ್ಯರ ನೋವುಗಳನ್ನು ಒಂದಿಷ್ಟು ಕಡ ಪಡೆಯುವಂತಾದರೆ |
 ಅನ್ಯರಿಗಾಗಿ ನಿಮ್ಮ ಹೃದಯದಲ್ಲಿ ಒಂದಿಷ್ಟು ಪ್ರೇಮವಿದ್ದರೆ ಬದುಕಿಗೆ ಇನ್ನೊಂದು ಹೆಸರಿದು ||


ಒಮ್ಮೆ ಶಿರಡಿ ಸಾಯಿಬಾಬಾರನ್ನು ಭಕ್ತನೊಬ್ಬ ಊಟಕ್ಕೆ ಆಹ್ವಾನಿಸಿದ. ಒಪ್ಪಿದರು 

ಬಾಬಾ. ಆದರೆ ಹೊತ್ತು ನೇತ್ತಿಗೇರುತ್ತಿರುವಂತೆ ಒಂದು ಕಟು ನಾಯಿ ಮಾತ್ರ 

ಬಂತು. ಕಜ್ಜಿಯಾಗಿ ವ್ರಣಗಳಿಂದ ಕೀವು ವಸರುತ್ತಿದ್ದ ನಾಯಿ ಒಸರುತ್ತಿದ್ದ ನಾಯಿ 

ಹೊಸ್ತಿಲಿಗೆ ಬರುತ್ತಿರುವಂತೆ ಮನೆಯೊಡೆಯ ಸಿಟ್ಟಿಗೆದ್ದ. ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯ 

ತುಂಡನ್ನೆತ್ತಿ ನಾಲ್ಕು ಬಾರಿಸಿದ. ನಾಯಿ ನೋವಿನಿಂದ ನರಳುತ್ತಾ ಓಡಿಹೋಯಿತು.

 ಮಧ್ಯಾಹ್ನ ಕಳೆದು ಸಂಜೆಯಾದರೂ ಬಾಬಾ ಬರಲೇ ಇಲ್ಲ. ಭಕ್ತ ಬಾಬಾರನ್ನು 

ಹುಡುಕಿಕೊಂಡು ಹೋದ. ಬಾಬಾ ಅಡ್ಡಾಗಿದ್ದರು. ಮೈ-ಕೈಯೆಲ್ಲಾ ಬಾಸುಂಡೆಗಳು! 

ಕೆಲವು ಕಡೆ ಚರ್ಮ ಕಿತ್ತು ಬಂದು ರಕ್ತ ಒಸರುತ್ತಿತ್ತು. ಈ ಭಕ್ತ ಹೌಹಾರಿದ!. 

"ಸ್ವಾಮೀ, ಇದೇನಾಯಿತು! ಯಾರು ಹೊಡೆದರು ಈ ಪರಿ? ಯಾರಂತ ಹೇಳಿ, ಗ್ರಹಚಾರ ಬಿಡಿಸುತ್ತೇನೆ ಅವನದು" ಎಂದ.


ಬಾಬಾ ತಲೆ ಎತ್ತಿ ನೋಡಿ, "ಎದುರಿಗೆ ನಿಂತಿದ್ದಾನೆ. ಮಧ್ಯಾಹ್ನ ಹಸಿದು ನಿನ್ನ 

ಬಾಗಿಲಿಗೆ ಬಂದರೆ ಹೀಗೆ ಹೊಡೆದೆಯಲ್ಲಾ? ನ್ಯಾಯವೇ?" ಎಂದರು.


ವಿಶ್ವಾತ್ಮ ಪ್ರಜ್ನೆ ಇರುವವ ಎಂದೂ ಹಿಂಸಿಸಲಾರ. ಸಮಸ್ತ ಚರಾಚರ ಜಗತ್ತಿನಲ್ಲಿ ಅವನಿಗೆ "ತಾನೇ" ಕಾಣುತ್ತಾನೆ.

Tuesday 10 March 2015

ನಿರ್ಭೀತ ಸ್ವಾತಂತ್ರ್ಯ ಸೇನಾನಿಗಳಿಗಿದೋ ನಮ್ಮ ನಮನ..... ಭಾಗ-೨


ಅವನ ಬಾಯಿಂದ ಚೀತ್ಕಾರವೊಂದು ಹೊರಬಿತ್ತು. ನೆರೆದವರು ಉಸಿರು 

ಬಿಗಿಹಿಡಿದಿದ್ದರು, ಹಾಹಾಕಾರ ಮಾಡಿದರು. ಅಷ್ಟೇ, ಯಾರಿಗೂ ಅವನನ್ನು ಮೇಲೆತ್ತುವ ಧೈರ್ಯವಿರಲಿಲ್ಲ.

ಆದರೆ, ಅಲ್ಲಿ ನಿಂತಿದ್ದ ಗುರುಗಳು, ಹಿಂದುಮುಂದೆ ನೋಡದೆ, ಕೊಳಕ್ಕೆ ಹಾರಿ ಅವನನ್ನು ಮೇಲೆತ್ತಿ ತಂದರು.

 ಈಗ ನೆರೆದವರು ದಂಗಾದರು. ಆಮ್ಲ ಗುರುಗಳು ಯಾ ವಿದ್ಯಾರ್ಥಿಯ ದೇಹಗಳ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.


ಕನಿಷ್ಠ ಅವರ ಮೈಗಳ ಮೇಲೆ ಒಂದೇ ಒಂದು ಬೊಬ್ಬೆಯೂ ಬಂದಿರಲಿಲ್ಲ.!

ಅಚ್ಚರಿ ಎನಿಸುತ್ತದೆಯೇ? ಕಾರಣ ನೋಡಿ! ಅಸಲಿಗೆ ಅದು ಆಮ್ಲದ ಬದಲಿಗೆ 

ಸಾಮಾನ್ಯ ನೀರು ತುಂಬಿದ ಕೊಳವಾಗಿತ್ತು. ಆಮ್ಲ ಇದೆ ಎಂಬ ಸುದ್ದಿ 

ಹರಡಲಾಗಿತ್ತು.! ಅಲ್ಲಿಯವೆರೆಗೆ ಎಷ್ಟೋ ಕಡಿಮೆ ಅಗಲದ ಹಲಗೆಯ ಮೇಲೆ 

ನಿರ್ಭಯವಾಗಿ ನಡೆಯಲು ಅಭ್ಯಾಸ ಮಾಡಿದ ವಿದ್ಯಾರ್ಥಿ, ಕೊಳದ ತಳದಲ್ಲಿದ್ದ 

ಮೂಳೆಯ ತುಂಡುಗಳನ್ನು ಕಂಡ ತಕ್ಷಣ ತನ್ನ ಗತಿಯೂ ಹೀಗೇ ಆಗಬಹುದು ಎಂಬ 

ಭಯದಿಂದ ಸಮತೋಲನ ಕಳೆದುಕೊಂಡಿದ್ದ.ಯಾರ ಮನಸ್ಸಿನಲ್ಲಿ ಭಯವಿಲ್ಲವೋ,

 ಹಿಂಸಾ ಭಯವಿಲ್ಲವೋ ಅಲ್ಲಿ ವಿಶ್ವ ಪ್ರೇಮ ಮನೆ ಮಾಡುತ್ತದೆ. ಇಂಥವರನ್ನು 

ಯಾವ ಹಿಂಸ್ರ ಪ್ರಾಣಿಯೂ ಹಿಂಸಿಸದು, ಕೊಲ್ಲದು. ಈ ಪ್ರೇಮ ಭಾವವೇ 

"ಮೈತ್ರೀ". ಭಾರತ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ಗಮನಿಸಿದಾಗ ಈ 

ನಿರ್ಭಯತೆ ನಿಜ ಅರ್ಥದಲ್ಲಿ ತೆರೆದುಕೊಳ್ಳುತ್ತದೆ. ನಮಗೆ ತಿಳಿದಿರುವ ಹೆಸರುಗಳು 

ಕೆಲವೇ ಕೆಲವು. ವೀರ ಸಾವರ್ಕರ್, ಭಗತ್ ಸಿಂಗ್, ಸುಖದೇವ್, ಸುಭಾಷ್ 

ಚಂದ್ರಬೋಸ್.... ಹೀಗೆ ಕೆಲವರಷ್ಟೇ! ಆದರೆ ಹೆಸರು ತಿಳಿಯದ 

ಸಾವಿರಾರು ಮಂದಿ ಈ ನಿರ್ಭಯತೆಯನ್ನು ಸಾಧಿಸಿದರು. ಬ್ರಿಟಿಷರ ಭಂದನಕ್ಕೆ 

ಒಳಗಾದರೆ ಅನುಭವಿಸಬೇಕಾಗುವ ಅಮಾನುಷ ಹಿಂಸೆ. ಕಡೆಗೆ ಬರಬಹುದಾದ 

ಸಾವಿನ ಬಗೆಯ ಸಂಪೂರ್ಣ ಜ್ನಾನದಿಂದಲೇ ಅವರ ವಿರುದ್ಧ ಸಿಡಿದೆದ್ದು, ಹೋರಾಡಿದರು.

 

ಸತ್ತವರಿಗೆ. ಅಂಗಾಂಗ ಕಳೆದುಕೊಂಡವರಿಗೆ, ವಿದ್ಯಾಭ್ಯಾಸ ನಿಲ್ಲಿಸಿ ಭವಿಷ್ಯ 

ಕಳೆದುಕೊಂಡವರಿಗೆ, ಮನೆಮಾರು ತ್ಯಜಿಸಿದವರಿಗೆ ಲೆಕ್ಕವಿಲ್ಲ! ಇವರೆಲ್ಲರನ್ನೂ 

ಇಂಥ ಭಯಾನಕ ಬದುಕಿಗೆ ಪ್ರೇರೆಪಿಸಿದ್ದು ಅವರ ದೇಶಪ್ರೇಮ, ಸ್ವಾತಂತ್ರ್ಯದ 

ಅಸೀಮ ಕಾಮನೆ. ಇವುಗಳ ಮುಂದೆ ಭಯ ಹಿಮ್ಮೆಟ್ಟಿತು.!



ಚಿತ್ತಕ್ಕೆ ಮೂರು ದೋಷಗಳಿವೆಯಂತೆ. ಆವರಣ, ಮಲ ಮತ್ತು ವಿಕ್ಷೇಪ.

ಆವರಣ ಎಂದರೆ, ನಮ್ಮ ಮೂಲ ಸ್ವರೂಪದ ತಿಳಿವಿಲ್ಲದೆ ಇರುವಿಕೆ. ಇದೇ ಮಾಯೆ.

ಮಲ ಎಂದರೆ ಭೌತಿಕ ಭೋಗಗಳ ಕಾಮನೆ. ಅವುಗಳಿಗಾಗಿ ಏನನ್ನೂ ಮಾಡಲು 

ಹೇಸದಿರುವುದು.ವಿಕ್ಷೇಪವೆಂದರೆ,ಚಂಚಲತೆ. ಯಾವುದರಲ್ಲೂ 

ಸ್ಥಿರವಾಗಿರದಿರುವುದು. ಇವುಗಳ ಒಟ್ಟು ಪರಿಣಾಮವೇ 'ಭಯ".

Sunday 8 March 2015

ನಿರ್ಭೀತ ಸ್ವಾತಂತ್ರ್ಯ ಸೇನಾನಿಗಳಿಗಿದೋ ನಮ್ಮ ನಮನ. ಭಾಗ-೧

ಬೌದ್ಧ ಗುರುಕುಲದಲ್ಲಿ ಮಧ್ಯಾವದಿ ಪರೀಕ್ಷೆ ನಡೆಯುತ್ತಿತ್ತು. ನಿರ್ಭಯತೆ ಸಂನ್ಯಾಸದ 

ಮೊದಲ ಹೆಜ್ಜೆ. ಭಯದ ಅಂತಿಮ ಯಾ ಮೂಲ ಸಾವಿನ ಭಯ. ಹಿಂಸ್ರ ಪಶುವಿಗೆ 

ಭಯಪಡುತ್ತೇವೆ. ಪಶುವಿನ ಭಯವಲ್ಲ.! ಪಶುವಿನಿಂದ ಉಂಟಾಗುವ ಸಾವಿನ 

ಭಯದಿಂದ ಭಯ ಉಂಟಾಗುತ್ತದೆ. ಹಾಗೇ ಕತ್ತಲ ಬಗ್ಗೆಯ ಭಯ. 


ಕತ್ತಲಲ್ಲಿ ಅಡಗಿರಬಹುದಾದ ಮರಣಕಾಕರಗಳಿಗೆ ಭಯಪಡುತ್ತೇವೆ. ಆಹಾರದ 

ಕೊರತೆ,ಅಪರಿಚಿತ ಜಾಗಗಳು ಇತ್ಯಾದಿಗಳ ಭಯದ ಹಿನ್ನಲೆಯೂ ಅಂತಿಮವಾಗಿ 

ಸಾವಿಗೆ ಕೊನೆಯಾಗುತ್ತದೆ. ಯಾರೂ ಈ ಮೄತ್ಯುವಿನ ಭಯದಿಂದ 

ಮುಕ್ತರಾಗುತ್ತಾರೋ ಅವರನ್ನು ಭಯ ಕಾಡದು. ಸಂನ್ಯಾಸಿಗೆ ದೇಹದ ಮೋಹ 


ಇರಬಾರದು. ಅಂದರೆ ಸಾವಿನ ಭಯ ಇರಬಾರದು. ಇದೇ ನಿಜವಾದ 'ಸಂ-ನ್ಯಾಸ'.

 "ದೇಹದಲ್ಲಿ ಇದ್ದರೂ ಇರದಂತೆ" ಇರುವವ ಸಂನ್ಯಾಸಿ.


ಸರಿ, ಮತ್ತೆ ಪರೀಕ್ಷೆಗೆ ಬರೋಣ. ತೀವ್ರತರದ ಆಮ್ಲ [Acid]  ತುಂಬಿದ ಕೊಳದ 

ಮೇಲೆ ಒಂದು ಉದ್ದದ ಹಲಗೆ ಹಾಸಲಾಗಿತ್ತು. ಒಂದೇ ಒಂದು ಅಡಿ ಅಗಲವಿದ್ದ ಆ 

ಮರದ ಮೇಲೆ ಹೆಜ್ಜೆ ಹಾಕುತ್ತಾ, ವಿದ್ಯಾರ್ಥಿ ಇಪ್ಪತ್ತು ಅಡಿ ಉದ್ದವಿದ್ದ ಕೊಳ 

ದಾಟಬೇಕಾಗಿತ್ತು. ಆಮ್ಲದ ಕೊಳದ ತಳಭಾಗದಲ್ಲಿ ಹಿಂದೆ ಕಾಲು ಜಾರಿ 


ಬಿದ್ದವರ ದೇಹದ ಮಾಂಸ, ಚರ್ಮ ಕರಗಿ ಹೋಗಿ, ಕೇವಲ ಮೂಳೆಗಳ 

ತುಂಡುಗಳು ಉಳಿದುಕೊಂಡ ಕುರುಹುಗಳು ಕಾಣಿಸುತ್ತಿದ್ದವು. ಆಮ್ಲದ ತೀವ್ರ ಘಾಟು

 ಮೂಗಿಗೆ ಕಿರಿಕಿರಿ ಮಾಡುತ್ತಿತ್ತು.ಈ ಕೊಳವನ್ನು ದಾಟಲು ಅಬ್ಯಾಸ ಬೇಕು. ಸಾಕಷ್ಟು

 ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳಲ್ಲಿ 

ಪ್ರತಿಯೊಬ್ಬರೂ ಒಂದೊಂದು ತಿಂಗಳು ಅಭ್ಯಾಸವನ್ನು ಮಾಡಿದ 

ಅನಂತರ [ಈ ಅಭ್ಯಾಸ ನೀರು ತುಂಬಿದ ಕೊಳದ ಮೇಲೆ ಮಾಡುತ್ತಿದ್ದರು.] ತಾನು 

ಸುಸೂತ್ರವಾಗಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಬಲ್ಲೆ ಎನ್ನುವ ವಿಶ್ವಾಸ ಹೊಂದಿದ 

ಅನಂತರವೇ ಈ ಆಮ್ಲ ಕೊಳದ ಮೇಲಿನ ನಡಿಗೆಗೆ ಅವಕಾಶ ನೀಡುತ್ತಿದ್ದರು. 

ಏಕೆಂದರೆ, ಇದು ಪರೀಕ್ಷೆ ಮಾತ್ರವಲ್ಲ, ಜೀವನ ಮರಣದ ಪ್ರಶ್ನೆಯೂ 


ಆಗಿತ್ತು. ಅಕಸ್ಮಾತ್ ಕಾಲು ಜಾರಿ ಕೊಳಕ್ಕೆ ಬಿದ್ದನೆಂದರೆ, ಕ್ಷಣದಲ್ಲಿ ಸಾವು 

ಸಂಭವಿಸುತ್ತಿತ್ತು. ಆದುದರಿಂದ ಸಂಪೂರ್ಣ ವಿಶ್ವಾಸ ಇರುವವ, ಸ್ವತಃ 

ತಾವಾಗಿಯೇ ಪರೀಕ್ಷೆಗೆ ಒಡ್ಡಿಕೊಳ್ಳುವವರೆಗೆ ಅವನಿಗೆ ಅಭ್ಯಾಸ ನಡೆಸುವ 

ಅವಕಾಶ ನೀಡುತ್ತಿದ್ದರು.ಹೀಗೆ ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ತಯಾರಾಗಿದ್ದ. ಅಂದು 

ಅಂತಿಮವಾಗಿ ಅವನು ಆಮ್ಲ ತುಂಬಿದ ಕೊಳದ ಮೇಲೆ ನಡೆಯುವವನಿದ್ದ. 

ಆತ್ಮವಿಶ್ವಾಸದಿಂದ ಗುರುಗಳಿಗೆ ನಮಸ್ಕರಿಸಿ ಹಲಗೆಯ ಮೇಲೆ 

ಹೆಜ್ಜೆಯಿಟ್ಟು, ಅರ್ಧದಷ್ಟು ಮುಂದೆ ಬಂದವ ಅಕಸ್ಮಾತಾಗಿ ಕೆಳಗೆ ದೄಷ್ಠಿ ಹರಿಸಿದ. 

ಅಷ್ಟೇ! ಅವನ ಮುಖ ಬಿಳಿಚಿಕೊಂಡಿತು. 

ಬಾಯಿಯ ಪಸೆ ಆರಿತು. ಕೈ-ಕಾಲು ನಡುಗತೊಡಗಿದವು. 

ನೋಡುನೋಡುತ್ತಿರುವಂತೆ ದೇಹ ವಾಲಿತು. ಅವನು ಸಮತೋಲನ 

ಕಳೆದುಕೊಂಡು ದೊಪ್ಪನೇ ಕೊಳಕ್ಕೆ ಬಿದ್ದ.


ಮುಂದುವರೆಯುವುದು.......

Wednesday 4 March 2015

ವಿಶ್ವ ರಹಸ್ಯ ತೆರೆದುಕೊಳ್ಳುವ ವಿಸ್ಮಯ.



ರಾಮಾಯಣದ ಒಂದು ಪ್ರಸಂಗ ಇದು. ಸೀತಾಪಹರಣವಾಯಿತು. ಸೀತೆಯನ್ನು 

ಹುಡುಕುತ್ತಾ ಕಾಡುಮೇಡು ಅಲೆಯುತ್ತಿದ್ದ ರಾಮ-ಲಕ್ಷಮ್ರಿಗೆ ಹನುಮಂತನ ಸಖ್ಯ 

ಲಭಿಸಿತು. ಸಮುದ್ರೋಲ್ಲಂಘನ ಮಾಡಿ ಲಂಕೆಯನ್ನು ಪ್ರವೇಶಿಸಿದನಂತೆ 

ಹನುಮಂತ. ಆಗ ಸರಿ ರಾತ್ರಿಯಾಗಿತ್ತು. ಲಂಕೆ ನಿದ್ರೆಯಲ್ಲಿ ಮುಳುಗಿತ್ತು. 

ಸೀತೆಯನ್ನರಸುತ್ತಾ ಹನುಮಂತ ರಾಕ್ಷಸ ರಾಜ ರಾವಣನ ಅಂತಃಪುರಕ್ಕೆ ಕಾಲಿಟ್ಟ. 

ನೂರಾರು ಸುರಸುಂದರಿಯರು ನೄತ್ಯ, ಸಂಗೀತಗಳಿಂದ ಬಳಲಿ ಮದ್ಯಪಾನದಿಂದ 

ಮತ್ತರಾಗಿ, ಮೈಮೇಲಿನ ಪರಿವೆ ಇಲ್ಲದೆ ಅಲ್ಲಲ್ಲಿ ಬಿದ್ದುಕೊಂಡಿದ್ದರು. ಮೈಮೆಲಿನ ವಸ್ತ್ರ ಅಸ್ತವ್ಯಸ್ತವಾಗಿತ್ತು.


ಹನುಮಂತ ಒಬ್ಬೊಬ್ಬರನ್ನೂ ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿ ನೋಡಿದ. ಮತ್ತೆ 

ಇವಳು ಸೀತಾಮಾತೆಯಲ್ಲ, ಇವಳಲ್ಲ ಎಂದು ತಿರಸ್ಕರಿಸುತ್ತಾ, ಕಟ್ಟಕಡೆಯ 

ವನಿತೆಯನ್ನೂ ಸೀತೆಯಲ್ಲ ಎಂದುಕೊಂಡು ಅಂತಃಪುರದಿಂದ ಹೊರಬಂದ. ಇಷ್ಟು 

ಮಂದಿ ಸುಂದರಿಯರನ್ನು ವಿವಸ್ತ್ರ ಸ್ಥಿತಿಯಲ್ಲಿ ಕಂಡಾಗಲೂ ಹನುಮಂತನ ಮನಸ್ಸು 

ವಿಕೃತಿಗೊಳಗಾಗಲಿಲ್ಲ. ಅವನು ಬಂದ ಕಾರಣದಿಂದ ವಿಚಲಿತನಾಗಲಿಲ್ಲ. 

ಸೀತಾಮಾತೆಯ ಇರುವಿಕೆಯಲ್ಲೇ ಮನಸ್ಸು ಮಗ್ನವಾಗಿತ್ತು. ಇದು ಒಂದು ಕಥೆ,



ಪ್ರಖ್ಯಾತ ಗುರು ಒಬ್ಬರಲ್ಲಿ ಒಬ್ಬ ಧ್ಯಾನ ಕಲಿಯಲು ಬಂದ. ಮುಖ್ಯವಾದ ವಿಷಯ 

ಎಂದರೆ, ಧ್ಯಾನವನ್ನು ಯಾರು ಯಾರಿಗೂ ಕಲಿಸಲಾಗದು. ಕುಳಿತುಕೊಳ್ಳಬೇಕಾದ 

ರೀತಿ, ಆಸನ, ಆಹಾರ ಇತ್ಯಾದಿಗಳ ಬಗ್ಗೆ ತಿಳಿಸಬಹುದು. ಇದು ಕೇವಲ ಸಿದ್ಧಾಂತ 

ಮಾತ್ರವಾಗಿರುತ್ತದೆ. ಆದರೆ ಮನಸ್ಸಿನ ನಿಯಂತ್ರಣ ವ್ಯಕ್ತಿಗತ. ಯಾರು ಯಾವ 

ರೀತಿಯಲ್ಲಿ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಬಹುದು ಎಂಬುದು ಕೇವಲ ಆ 

ವ್ಯಕ್ತಿಯಿಂದ ಮಾತ್ರ ಗುರುತಿಸಬಹುದಾದ ಕ್ರಿಯೆ ಇದು. ಸರಿ, ಗುರು ಈ 

ಧ್ಯಾನಾರ್ಥಿಗೆ ಧ್ಯಾನ ಎಂದರೇನು, ಇದಕ್ಕೆ ಯಾವ ರೀತಿಯ ಸಿದ್ಧತೆ ಬೇಕು 

ಎಂದೆಲ್ಲಾ ತಿಳಿಸಿ, ಕಡೆಗೆಂದರು, "ಏನಾದರೂ ಮನಸ್ಸಿನ್ನಲ್ಲಿ ಮಂಗ ಹೊಕ್ಕಲು 

ಮಾತ್ರ ಬಿಡಬೇಡ. ಇದೊಂದು ದೂರವಿಟ್ಟರೆ ಮೂರ್ಖನೂ ಧ್ಯಾನ ಮಾಡಬಹುದು" ಎಂದರು.


ಧ್ಯಾನಾರ್ಥಿಯ ಮನಸ್ಸಿನಲ್ಲಿ ಈ ಕಡೆಯ ವಾಕ್ಯ ಬಲವಾಗಿ ನೆಟ್ಟಿತು."ಆಹಾ! ಎಂಥ 

ಸುಲಭ ಧ್ಯಾನ. ಮಂಗವೊಂದರ ಹೊರತಾಗಿ ಬೇರೆಲ್ಲದರ ಬಗ್ಗೆಯೂ ಮನಸ್ಸು 

ನೆಟ್ಟರಾಯಿತು. ಎಂದುಕೊಂಡು, ಪೂರ್ವ ತಯಾರಿ ಪೂರೈಸಿದ. ಕಣ್ಣು ಮುಚ್ಚಿದ 

ಕ್ಷಣದಲ್ಲಿ ಗುರುವಿನ ಮಾತು ನೆನಪಾಯಿತು. ನೆನಪಾಯಿತೋ ಇಲ್ಲವೋ, 

ಮರ್ಕಟವೊಂದು ಮನಸ್ಸಿನ ಮೇಲೆ ಬಂದು, ಒಂದು ಕೊಂಬೆಯಿಂದ ಮತ್ತೊಂದಕ್ಕೆ 

ಹಾರತೊಡಗಿತು. ಓಡಿಸಿದರೆ ಮೈಮೇಲೆ ಬರುತ್ತಿತ್ತು. ಕಿಸಿಕಿಸಿ ನಗುತ್ತಿತ್ತು, ಹಲ್ಲು 

ತೋರಿಸಿ ಹೆದರಿಸುತ್ತಿತ್ತು, ಏನು ಮಾಡಿದರೂ ಹೋಗಲೊಲ್ಲದು. ಒಂದು ಗಂಟೆ 

ಕಳೆಯುವಷ್ಟರಲ್ಲಿ ಧ್ಯಾನರ್ಥಿ ಸುಸ್ತಾಗಿ ಹೋದ.

ಗುರುವಿನ ಮುಂದೆ ನಿಂತು ತನ್ನ ಕಷ್ಟ ಹೇಳಿಕೊಂಡ. ಗುರು ನಗುತ್ತಾ, 

"ಮೊದಲನೆಯದಾಗಿ ನಾನು ಮಂಗ ಎಂದದ್ದು ಮನಸ್ಸಿನ ಗುಣವನ್ನು, ನಿಜವಾದ 

ಮಂಗನನ್ನಲ್ಲ. ಮನಸ್ಸು ಎಂದೂ ಒಂದೆಡೆ ನಿಲ್ಲಲಾರದು. ಚಂಚಲತೆಯೇ ಅದರ 

ಸ್ವಭಾವ. ಅದನ್ನು ಒಂದಿಷ್ಟು ಮಾತ್ರ ಹದ್ದುಬಸ್ತಿನಲ್ಲಿ ಇಡುವ ಪ್ರಯತ್ನವೇ ಧ್ಯಾನ. 

ಪ್ರಯತ್ನದಿಂದ ಇದನ್ನು ಸ್ವಲ್ಪ ಮಟ್ಟಿಗೆ ಸಾಧಿಸಬಹುದು ನಿಜ. ಆದರೂ ನಿತ್ಯದ 

ಕೆಲಸಗಳಲ್ಲಿಯೇ ನಾವಿದನ್ನು ಸಾಧಿಸಬಹುದು. ಓದುವಾಗ ಬರೀ ಓದಬೇಕು. 

ತಿನ್ನುವಾಗ ಬೇರೆ ಯಾವ ಯೋಚನೆಗಳೂ ಇಲ್ಲದೆ ಊಟದಲ್ಲಿಯ ರೂಪ,ರಸ, ಗಂಧ, 

ಸ್ಪರ್ಶಗಳನ್ನು ಅನುಭವಿಸಬೇಕು. ಹೀಗೆ ಪ್ರತಿಯೊಂದು ಕೆಲಸವನ್ನೂ ಕೇವಲ 

ಅದರಲ್ಲಿಯೇ ಮನಸ್ಸಿಟ್ಟು ಮಾಡುವ ಅಭ್ಯಾಸವೇ ಧ್ಯಾನದ ಮೊದಲ ಹೆಜ್ಜೆ. ಇದೇ 

ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸುವ ಪರಿ" ಎಂದರು.

ಇಷ್ಟಕ್ಕೂ ಮನಸ್ಸು ಎಂದರೇನು? ಇದಕ್ಕೊಂದು ಭೌತಿಕ ಅಸ್ತಿತ್ವವೇ ಇಲ್ಲದಲ್ಲ. ಇದು 

ಮೆದುಳಲ್ಲ. ಮಿದುಳು ನರಗಳ ಮಧ್ಯೆ ಸಂವಹನ ನಡೆಸುವ ನ್ಯೂರಾನ್ ಗಳಲ್ಲ. 

ನರವ್ಯವಸ್ಥೆಯಲ್ಲ. ಹಾಗಾದರೆ ಮನಸ್ಸೆಂಬುದು ಎಲ್ಲಿದೆ? ಹುಟ್ಟಿದ ಕ್ಷಣದಿಂದ ಅಥವಾ 

ತಾಯಿಯ ಗರ್ಭವಾಸದಲ್ಲಿರುವಾಗಲೇ ಮಾಹಿತಿ ಸಂಗ್ರಹವಾಗುತ್ತದೆ. ಮುಂದೆ 

ಬದುಕಿಡೀ ಈ ಸಂಗ್ರಹದ ಆಧಾರದ ಮೇಲೆ ನಡೆಯುತ್ತದೆ ಎನ್ನುತ್ತದೆ ಇಂದಿನ 

ವಿಜ್ನಾನ. ಬಹುತೇಕವಾಗಿ ಇಂದಿನ ವಿಜ್ನಾನ ಇಡಿ ಜಗತ್ತೇ ಮಾಯೆ ಎನ್ನುತ್ತದೆ. ಹೇಗೆ?


ಈ ಕ್ಷಣ ನಾವು ಅಕ್ಷರಗಳನ್ನು ಓದುತ್ತಿದ್ದೇವೆ ಎಂಬುದು ಒಂದು ಭ್ರಮೆ. ಈ ಅಕ್ಷರಗಳ 

ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ, ಕಣ್ಣೆಂಬ ಕ್ಯಾಮೆರಾ ಮೂಲಕ, ಅಕ್ಷಿಪಟಲದ ಮೇಲೆ 

ಬಿಂಬವಾಗಿ, ಮಿದುಳು ಆ ಸಂಜ್ನೆಯನ್ನು ಗುರುತಿಸುವುದೇ ನೋಡುವಿಕೆ ಎಂಬ 

ಕ್ರಿಯೆ. ಬೆಳಕು ಕಣ್ಣಿನಲ್ಲಿ ಹಾಯುವ ಮತ್ತು ಅದನ್ನು ಗುರುತಿಸುವ ಕ್ರಿಯೆಯ ಮಧ್ಯೆ 

ಒಂದು ಕ್ಷಣ ಹಿಡಿಯುತ್ತದೆ, ಅಷ್ಟರಲ್ಲಿ ಕೈಯಲ್ಲಿರುವ ಕಾಗದದ 

ಸ್ಥಾನಪಲ್ಲಟವಾಗಿರಲೂ ಬಹುದು. ಮನಸ್ಸು ಗುರುತಿಸುವುದು ಅದು ಕ್ಷಣದ ಹಿಂದೆ 

ಕಂಡದ್ದನ್ನು. ಬ್ರಹ್ಮಾಂಡದಲ್ಲಿ ನಾವು ಈ ಕ್ಷಣ ಕಾಣುವುದೆಲ್ಲ ಭೂತಕಾಲಕ್ಕೆ 

ಸೇರಿಹೋದದ್ದೇ! ಎಲ್ಲವೂ ಒಂದು ರೀತಿಯ ಭ್ರಮೆಯೇ! ಆದುದರಿಂದ ಮನಸ್ಸು 

ಎಂದು ನಾವು ನಂಬಿರುವುದೆಲ್ಲವೂ ಈ ಪರಿಯ ಮಾಹಿತಿ ಸಂಗ್ರಹದಿಂದ 

ತುಂಬಿರುವ, ಪೂರ್ವಗ್ರಹ ಪೀಡಿತವಾದ ಯಾವುದೋ 'ಆ ಒಂದು'.

'ಆ ಒಂದು' ತನ್ನ ಅಸ್ತ್ವಿತ್ವವನ್ನು ಕಳೆದುಕೊಂಡು, ವಿಶ್ವಪ್ರಜ್ನೆಯಲ್ಲಿ ಒಂದಾದಾಗ ಆ 

ವಿಶ್ವರಹಸ್ಯ ತೆರೆದುಕೊಳ್ಳುತ್ತದೆ. ಭೌತಿಕವಾಗಿ ಹಾಗೂ ಅಧಿಭೌತಿಕವಾಗಿ 

ಬ್ರಹ್ಮಾಂಡದ ಹೊರ- ಒಳ ಹರಿವುಗಳು ಅರ್ಥವಾಗುತ್ತವೆ. ಮತ್ತೆ ತಿಳಿದುಕೊಳ್ಳಲು 

ಉಳಿಯುವುದೇನೂ ಇಲ್ಲ. ಆದುದರಿಂದ ಮತ್ತೆ ಹುಟ್ಟಿ ಬರುವ ಅಗತ್ಯವಿಲ್ಲ. ಜನನ-

ಮರಣಗಳ ಪರಿಭ್ರಮಣವಿಲ್ಲದೆ ಮುಕ್ತನಾಗುವ 'ಆತ್ಮ" ಯಾ 'ಚೈತನ್ಯ' ಇದು.

CLICK HERE