Tuesday, 17 March 2015

ಅಂತಃಕರಣದ ಅಂತರಾಳ



ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಕಾಲದಲ್ಲಿ 

ಅಬ್ರಹಾಂ ಲಿಂಕನ್ ರಾಷ್ಟ್ರಾಧ್ಯಕ್ಷರಾಗಿದ್ದರು. ಯುದ್ಧ ನಡೆಯುತ್ತಿದ್ದ ರಾಜ್ಯಗಳಲ್ಲಿ 

ತಾವೇ ಸ್ವತಃ ಸಂಚರಿಸುತ್ತಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿದ್ದವರನ್ನು 

ಭೇಟಿಯಾಗಿ ಸಾಂತ್ವನ ಹೇಳುತ್ತಿದ್ದರು. ಹೀಗೆ ಅವರು ಸಂಚರಿಸುವಾಗ ರಕ್ಷಕ ಪಡೆ

 ಯಾ ಸಂಗಾತಿಗಳೂ ಇರುತ್ತಿರಲಿಲ್ಲ. ಒಂದು ದಿನ ಹೀಗೆ ಗಾಯಾಳುಗಳನ್ನು 

ಕಾಣುತ್ತಿರುವಾಗ ನಡೆದ ಘಟನೆ ಇದಂತೆ.


ಒಬ್ಬ ಇಪ್ಪತ್ತೆರಡರ ಹರೆಯದ ಯೋಧ ಮರಣಾಂತಿಕವಾಗಿ ಗಾಯಗೊಂಡಿದ್ದ. 

ಅತೀವ ರಕ್ತಸ್ರಾವದಿಂದ ಸಾವಿನಂಚಿನಲ್ಲಿದ್ದ. ಅಬ್ರಹಾಂ ಲಿಂಕನ್ ಇವನನ್ನು 

ನೋಡಿದರು. ಅವನ ಹತ್ತಿರ ಹೋಗಿ ಅವನ ಕೈಹಿಡಿದು , "ಮಗೂ, ತುಂಬಾ 

ನೋವಾಗುತ್ತಿದೆಯೇನು?" ಎಂದರು. ಅವನಿಗೆ ಏನೂ ಸರಿಯಾಗಿ ಕಾಣದಷ್ಟು 

ಭಯಂಕರ ವೇದನೆಯಾಗುತ್ತಿತ್ತು. ಆದರೂ ಕ್ಷೀಣ ಸ್ವರದಲ್ಲಿ " ಹೌದು ಸ್ವಾಮೀ, 

ತುಂಬಾ ನೋವಾಗುತ್ತಿದೆ. ನಾನು ಸಾಯುತ್ತಿದ್ದೇನೆ ಎಂದು ನನಗೆ ಗೊತ್ತಿದೆ. 

ಸಾವಿನ ಬಗ್ಗೆ ಭಯವಾಗುತ್ತಿದೆ. ನನ್ನ ತಾಯಿಗೆ ನಾನೊಬ್ಬನೇ ಮಗ. ಅವಳು ಎಷ್ಟು 

ದುಃಖಳಿಸುತ್ತಾಳೋ ಎಂದು ಅಳು ಬರುತ್ತಿದೆ. ಒಂದಿಷ್ಟು ನೀರು ಬೇಕಿತ್ತು" ಎಂದ.

ಅಬ್ರಹಾಂರ ಕಣ್ಣಿನಿಂದ ನೀರಿಳಿಯಿತು. ಎದ್ದು ಹೋಗಿ ನೀರು ತಂದು ಕುಡಿಸಿದರು. 

ಆಗವನು, "ಸ್ವಾಮೀ, ನನ್ನ ತಾಯಿಗೊಂದು ಸಂದೇಶ ಕಳುಹಿಸಬೇಕಾಗಿತ್ತು. 

ಬರೆಯಲು ನನ್ನ ಕೈ ನಡುಗತ್ತದೆ. ಕಣ್ಣು ಮಂಜಾಗಿ ಕಾಣುತ್ತಿಲ್ಲ.ದಯವಿಟ್ಟು ನನಗೆ 

ಬರೆದು ಕೊಡಬಹುದೇ?" ಎಂದು ವಿನಂತಿಸಿದ. ಲಿಂಕನ್ನರು ಕಾಗದ, ಪೆನ್ನು 

ಕೈಗೆತ್ತಿಕೊಂಡು ಅವನು ಹೇಳಿದಂತೆಯೇ ಬರೆದರು. ಅನಂತರ ಕಡೆಯಲ್ಲಿ...' 

ಇಂಧನ ಸೇವಕ', ಈ ರಾಷ್ಟ್ರದ ಅಧ್ಯಕ್ಷ ಅಬ್ರಹಾಂ ಲಿಂಕನ್' ಎಂದು ಬರೆದರು.


ಹುಡುಗನ ಗಮನಕ್ಕಿದು ಬಂತು. " ಅಧ್ಯಕ್ಷರೇ, ನೀವು ನಿಜವಾಗಿಯೂ ಲಿಂಕನ್ನರೇ? 

ಇಂದು ನನ್ನ ಜೀವನ ಧನ್ಯವಾಯಿತು. ಈ ದೇಶಕ್ಕಾಗಿ ಸಾವು ಬರುತ್ತಿದೆ ಎಂಬ ತೃಪ್ತಿ 

ಇತ್ತು. ಈಗ ಈ ದೇಶದ ಅಧ್ಯಕ್ಷರ ದರ್ಶನ ಭಾಗ್ಯವೂ ಕಡೆಗಾಲದಲ್ಲಿ ಒದಗಿತು 

ಎಂದು ಸಂತೋಷ ಆಗುತ್ತಿದೆ" ಎನ್ನುತ್ತಿರುವಂತೆಯೇ ಉಸಿರು 

ಹಿಡಿದುಕೊಳ್ಳತೊಡಗಿತು. ಸಾವು ಮತ್ತೊಂದು ಹೆಜ್ಜೆ ಹತ್ತಿರ ಬಂದಿತ್ತು.


ಸ್ವಲ್ಪ ಸುಧರಿಸಿಕೊಂಡು ಕ್ಷೀಣ ಧ್ವನಿಯಲ್ಲಿ ಮತ್ತೆ ಮಾತನಾಡಿದ, "ಮಾನ್ಯರೇ, 

ನನಗೆ ಒಂಟಿತನ ಕಾಡುತ್ತಿದೆ. ಒಂಟಿಯಾಗಿಯೇ ಸಾಯುವೆನೇನೋ ಎಂಬ 

ಹೆದರಿಕೆಯಾಗುತ್ತಿದೆ. ದಯಮಾಡಿ ಸ್ವಲ್ಪವೇ ಹೊತ್ತು ನನ್ನ ಹತ್ತಿರ 

ಕುಳಿತುಕೊಳ್ಳಬಹುದೇ? ಅದೋ ನೋಡಿ, ಅಲ್ಲಿ ಮೃತ್ಯುದೇವತೆ  ಬರುತ್ತಿದ್ದಾನೆ" 

ಎಂದ ನಡುಗುವ ಸ್ವರದಲ್ಲಿ.


ಲಿಂಕನ್ನರು ಅವನ ಪಕ್ಕದಲ್ಲಿ ಕುಳಿತರು. ಅವನ ಎರಡೂ ಕೈಗಳನ್ನು ತಮ್ಮ 

ಅಂಗೈಯಿಂದ ಅಪ್ಪಿ ಹಿಡಿದರು. ತಲೆ ನೇವರಿಸಿದರು, "ಮಗೂ, ನಾನು ನಿನ್ನೊಂದಿಗೆ 

ಇರುತ್ತೇನೆ. ನೀನು ಏಕಾಂಗಿಯಲ್ಲ. ಇಡೀ ರಾಷ್ಟ್ರ ನಿನ್ನೊಂದಿಗಿದೆ. ನಿನಗೆ ನಾವೆಲ್ಲ 

ಕೃತಜ್ನರು. ಶಾಂತವಾಗಿ ನಿದ್ದೆ ಮಾಡು.ಮೃತ್ಯುದೇವತೆಯಲ್ಲ ಸಾಕ್ಷಾತ್ ಭಗವಂತ 

ನಿನ್ನನ್ನು ಎದುರುಗೊಳ್ಳಲು ಬಂದಿದ್ದಾನೆ" ಎಂದರು ಮಮತೆಯಿಂದ. ಅವರ 

ಕಣ್ಣುಗಳಿಂದ ಧಾರೆಧಾರೆಯಾಗಿ ಕಣ್ಣೀರು ಹರಿಯುತ್ತಿತ್ತು. ಹುಡುಗನ ಮುಖದಲ್ಲಿದ್ದ 

ಹೆದರಿಕೆ ಮಾಯವಾಯಿತು. ಮುಖ ಶಾಂತವಾಗಿ ಒಂದು ಸಣ್ಣ ಮಂದಹಾಸ 

ಮೂಡಿತು. ಅವನು ಕಣ್ಣು ಮುಚ್ಚಿದ. ಸ್ವಲ್ಪ ಹೊತ್ತಿನಲ್ಲಿಯೇ ಅವನ ಪ್ರಾಣಪಕ್ಷಿ 

ಹಾರಿಹೋಯಿತು. ಸಾವಿನ ಹೊಸ್ತಿಲಲ್ಲಿದ್ದ ಒಬ್ಬ ಸಾಮಾನ್ಯ ಸೈನಿಕನ ನೋವು, 

ಹೆದರಿಕೆಗಳನ್ನು ಆ ದೇಶದ ಅಧ್ಯಕ್ಷ ಹಂಚಿಕೊಂಡಿದ್ದರು. ಅವನು ಸುಖವಾಗಿ ಸಾಯಲು ಸಹಾಯ ಮಾಡಿದ್ದರು.


ಬದುಕೆಂದರೇನು? ಸಮಸ್ತ ಜೀವಜಂತುಗಳ ಜೀವನ ಪ್ರೇಮವನ್ನು ಯಾ ಬದುಕಿನ 

ಬಗೆಯ ಪ್ರೀತಿಯನ್ನು ಪ್ರೀತಿಸುವುದೇ ಗೌರವಿಸುವುದೇ ನಿಜವಾದ ಬದುಕು 

ಎನ್ನುತ್ತಾರೆ ಬಲ್ಲವರು. ಹಳೆಯ ಹಿಂದಿ ಚಿತ್ರ 'ಶ್ರೀಮಾನ್ ೪೨೦' ರಲ್ಲಿ ಒಂದು ಸುಂದರ ಹಾಡಿದೆ -


                         'ಕಿಸೀಕಿ ಮುಸ್ಕುರಾಹಟೋಪೆ ಹೋ ನಿಖಾರ್, ಕಿಸೀಕಿ ದರ್ದ್                               ಹೋ ಸಕೇತೋ ಲೇ ಉದಾರ್ |
                          ಕಿಸೀಕಿ ವಾಸತೋ ಹೋ ತೇರೆ ದಿಲ್ ಮೆ ಪ್ಯಾರ್, ಜೀನಾ                                  ಇಸೀಕಿ ನಾಮ್ ಹೈ || 

 ಅನ್ಯರ ಸಂತೋಷದಲ್ಲಿ ಮುಖವರಳಿದರೆ, ಅನ್ಯರ ನೋವುಗಳನ್ನು ಒಂದಿಷ್ಟು ಕಡ ಪಡೆಯುವಂತಾದರೆ |
 ಅನ್ಯರಿಗಾಗಿ ನಿಮ್ಮ ಹೃದಯದಲ್ಲಿ ಒಂದಿಷ್ಟು ಪ್ರೇಮವಿದ್ದರೆ ಬದುಕಿಗೆ ಇನ್ನೊಂದು ಹೆಸರಿದು ||


ಒಮ್ಮೆ ಶಿರಡಿ ಸಾಯಿಬಾಬಾರನ್ನು ಭಕ್ತನೊಬ್ಬ ಊಟಕ್ಕೆ ಆಹ್ವಾನಿಸಿದ. ಒಪ್ಪಿದರು 

ಬಾಬಾ. ಆದರೆ ಹೊತ್ತು ನೇತ್ತಿಗೇರುತ್ತಿರುವಂತೆ ಒಂದು ಕಟು ನಾಯಿ ಮಾತ್ರ 

ಬಂತು. ಕಜ್ಜಿಯಾಗಿ ವ್ರಣಗಳಿಂದ ಕೀವು ವಸರುತ್ತಿದ್ದ ನಾಯಿ ಒಸರುತ್ತಿದ್ದ ನಾಯಿ 

ಹೊಸ್ತಿಲಿಗೆ ಬರುತ್ತಿರುವಂತೆ ಮನೆಯೊಡೆಯ ಸಿಟ್ಟಿಗೆದ್ದ. ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯ 

ತುಂಡನ್ನೆತ್ತಿ ನಾಲ್ಕು ಬಾರಿಸಿದ. ನಾಯಿ ನೋವಿನಿಂದ ನರಳುತ್ತಾ ಓಡಿಹೋಯಿತು.

 ಮಧ್ಯಾಹ್ನ ಕಳೆದು ಸಂಜೆಯಾದರೂ ಬಾಬಾ ಬರಲೇ ಇಲ್ಲ. ಭಕ್ತ ಬಾಬಾರನ್ನು 

ಹುಡುಕಿಕೊಂಡು ಹೋದ. ಬಾಬಾ ಅಡ್ಡಾಗಿದ್ದರು. ಮೈ-ಕೈಯೆಲ್ಲಾ ಬಾಸುಂಡೆಗಳು! 

ಕೆಲವು ಕಡೆ ಚರ್ಮ ಕಿತ್ತು ಬಂದು ರಕ್ತ ಒಸರುತ್ತಿತ್ತು. ಈ ಭಕ್ತ ಹೌಹಾರಿದ!. 

"ಸ್ವಾಮೀ, ಇದೇನಾಯಿತು! ಯಾರು ಹೊಡೆದರು ಈ ಪರಿ? ಯಾರಂತ ಹೇಳಿ, ಗ್ರಹಚಾರ ಬಿಡಿಸುತ್ತೇನೆ ಅವನದು" ಎಂದ.


ಬಾಬಾ ತಲೆ ಎತ್ತಿ ನೋಡಿ, "ಎದುರಿಗೆ ನಿಂತಿದ್ದಾನೆ. ಮಧ್ಯಾಹ್ನ ಹಸಿದು ನಿನ್ನ 

ಬಾಗಿಲಿಗೆ ಬಂದರೆ ಹೀಗೆ ಹೊಡೆದೆಯಲ್ಲಾ? ನ್ಯಾಯವೇ?" ಎಂದರು.


ವಿಶ್ವಾತ್ಮ ಪ್ರಜ್ನೆ ಇರುವವ ಎಂದೂ ಹಿಂಸಿಸಲಾರ. ಸಮಸ್ತ ಚರಾಚರ ಜಗತ್ತಿನಲ್ಲಿ ಅವನಿಗೆ "ತಾನೇ" ಕಾಣುತ್ತಾನೆ.

No comments:

Post a Comment

CLICK HERE