Saturday 4 April 2020

ಹುಟ್ಟು ಗುಣ...ಹೋಗದು

ಒಬ್ಬನಿಗೆ ಅಸಾಧ್ಯ ಕೋಪದ ರೋಗ ಇತ್ತು. 

ಕೋಪ, ಅಸೂಯೆ, ಮಾತ್ಸರ್ಯಗಳೆಲ್ಲವೂ ಅತೃಪ್ತ ಜೀವದ ಹೊರಮುಖಗಳು. 

ಒಂದು ವಿಧದ ರೋಗ ಇದು ಇಂಥ ರೋಗಿಗೆ ಮದುವೆಯಾಯಿತು. 

ಹೆಂಡತಿಯೊಂದಿಗೂ ಈ ಕೋಪ ಪ್ರದರ್ಶನವಾಯಿತು. 

ಒಂದು ದಿನ ಬಂದ ಕೋಪದಲ್ಲಿ ಹೆಂಡತಿಯನ್ನೆತ್ತಿ ಬಾವಿಗೆ ಹಾಕಿದ. 

ಹೆಂಡತಿ ಸತ್ತು ಹೋದಳು. 
ಈಗ ಇವನಿಗೆ ಎಚ್ಚರವಾಯಿತು. 

ಪಶ್ಚಾತಾಪದಿಂದ ಊರಿಗೆ ಬಂದಿದ್ದ ಮುನಿಗಳೆದುರುಗೆ ನಿಂತ. 

ತಾನು ಮಾಡಿದ ಮಹಾಪಾಪಗಳನ್ನು ಅರಿಹಿ ತನಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ 
ಒಂದು ಅವಕಾಶವಾಗಿ ಸನ್ಯಾಸ ದೀಕ್ಷೆ ನೀಡಬೇಕೆಂದು ಬೇಡಿದ.

ಮುನಿಗಳು, "ಮಗು ಸನ್ಯಾಸ ಸುಲಭವಲ್ಲ. 
ವಿವಸ್ತ್ರನಾಗಿ, ಬೇಡಿ ತಂದ ಆಹಾರವನ್ನು ಮಾತ್ರ ಸ್ವೀಕರಿಸಿ, 
ನೆಲದ ಮೇಲೆ ಮಲಗಿ ಬದುಕು ಕಳೆಯಬೇಕು" ಎಂದರು. 

ಇವನು ಕೂಡಲೇ ಉಟ್ಟವಸ್ತ್ರಗಳನ್ನು ಬಿಚ್ಚಿ ಎಸೆದ. 
"ಉಳಿದದ್ದನ್ನು ಪಾಲಿಸಿ ತೋರಿಸುತ್ತೇನೆ, ನೀಡಿ ದೀಕ್ಷೆ" ಎಂದ. 

ಮುನಿಗಳು ಬೆರಗಾದರು. 
"ಅರೇ! ಎಂಥ ದೃಢ ಸಂಕಲ್ಪ" ಎಂದುಕೊಂಡು ದೀಕ್ಷೆ ನೀಡಿದರು. 
"ಶಾಂತಿನಾಥ" ಎಂದು ನಾಮಕರಣ ಮಾಡಿದರು.


WWW.KARTAVYAA.BLOGSPOT.IN
Image may be subject to copyright.
ಶಾಂತಿನಾಥ ಕಠಿಣ ಬದುಕನ್ನು ಆರಿಸಿಕೊಂಡ. 

ಬರಿಗಾಲಿನಲ್ಲಿ, ಕಲ್ಲುಮುಳ್ಳುಗಳನ್ನು ಲೆಕ್ಕಿಸದೇ ನಡೆದ. 

ಎರಡು ದಿನಕ್ಕೊಮ್ಮೆ ಆಹಾರ ಸೇವಿಸಿದ. 
ಒಂದೇ ಪ್ರಹರ ನಿದ್ದೆ ಮಾಡಿದ. 

ಹೀಗೆ ಇವನ ತ್ಯಾಗ ಜೀವನದ ಕಥೆ ರಾಜ್ಯದಲ್ಲೆಲ್ಲಾ ಜನಜನಿತವಾಯಿತು. 

ಸ್ವತಃ ರಾಜಧಾನಿಯಿಂದ ಮಹಾರಾಜನೇ ಇವನನ್ನು ಕಾಣಲು ಬಂದ. 

ಇವನ ಖ್ಯಾತಿಯನ್ನು ಇವನ ಬಾಲ್ಯ ಮಿತ್ರನೂ ಕೇಳಿದ. 

ಸಿಟ್ಟಿನ ಮೊಟ್ಟೆಯಂತಿದ್ದ ಇವನು ಹೀಗಾದದ್ದು ಹೇಗೆ? 
ಎಂಬ ಸಂದೇಹ ಬಂತವನಿಗೆ. 

ಏನಿದ್ದರೂ ಕಣ್ಣಾರೆ ನೋಡಿದರೆ ಸೈ, ಎಂದುಕೊಂಡು ಇವನಿರುವಲ್ಲಿಗೆ ಬಂದ.


ಇವನಿಗೆ ನಮಸ್ಕರಿಸಿ. 
"ಸ್ವಾಮಿ, ತಮ್ಮ ನಾಮಧೇಯವೇನು?" ಎಂದು ಪ್ರಶ್ನಿಸಿದ. 
"ಶಾಂತಿನಾಥ" ಎಂದ ತ್ಯಾಗಿ. 
ಗೆಳೆಯ ಮತ್ತೆ "ಸ್ವಾಮಿ ಸರಿಯಾಗಿ ಕೇಳಿಸಲಿಲ್ಲ. 
ಮತ್ತೊಮ್ಮೆ ಕೇಳುತ್ತಿದ್ದೇನೆ. ನಿಮ್ಮ ಹೆಸರೇನು?" ಎಂದ.


ಶಾಂತಿನಾಥ ಮುಖದಲ್ಲಿ ಅಶಾಂತಿಯ ಗೆರೆಗಳು ಮೂಡಿದವು. 

ಮೊತ್ತಮೊದಲನೆಯದಾಗಿ ತನ್ನಂಥ ಜಗತ್ಪ್ರಸಿದ್ಧನ ಹೆಸರು 
ಕೇಳಿದ್ದೇ ಮಹಾಪರಾಧವಾಗಿತ್ತು. 

ಎರಡನೆಯ ಬಾರಿ ಕೇಳಿದ್ದು ಮತ್ತೂ ದೊಡ್ಡ ಅಪರಾಧವಾಗಿತ್ತು. 

ಎತ್ತರದ ದ್ವನಿಯಲ್ಲಿ "ಮೂರ್ಖ, ಇಡೀ ರಾಜ್ಯವೇ ಹಾಡಿ ಹೊಗಳುತ್ತದೆ ನನ್ನನ್ನು. 
ನೀನು ಹೆಸರು ಕೇಳುತ್ತಿರುವಿಯಲ್ಲಾ.
ಶಾಂತಿನಾಥ ನನ್ನ ಹೆಸರು" ಎಂದ.

ಬಾಲ್ಯಮಿತ್ರ ನಸುನಗುತ್ತಾ, 
"ಗೆಳೆಯಾ, ಹೆಸರು ಬದಲಾಗಿದೆ,ರೂಪ,ವೇಷ ಬದಲಾಗಿದೆ. 
ಆದರೆ ಮೂಲ ಸ್ವಭಾವ ಬದಲಾಗಿಲ್ಲ. 
ಅದೇ ಅಹಂಕಾರ,ಸಿಟ್ಟು,ಸೆಡವು ಅದೇ ಕುದಿಯುತ್ತಿರುವ ತಿರಸ್ಕಾರ. 
ಅಶಾಂತಿನಾಥರೆಂದೂ ಶಾಂತಿನಾಥರಾಗಲು ಸಾಧ್ಯವೇ?" 
ಎಂದು ಎದ್ದು ಹೋರಟುಹೋದ.


WWW.KARTAVYAA.BLOGSPOT.IN
IMAGE MAY BE SUBJECT TO COPYRIGHTS
ಇದೊಂದು ದೃಷ್ಟಾಂತ ಕಥೆ. 

ಇದರ ಒಳಹೊಕ್ಕು ನೋಡಿದರೆ 'ಇದು ನಾವೇ' ಎಂದು ಅರ್ಥವಾಗುತ್ತದೆ. 

ಯಾವ ಸಿಟ್ಟಿಗೆ ತಲೆಬಾಗಿ ಹೆಂಡತಿಯನ್ನು ಬಾವಿಗೆ ತಳ್ಳಿದನೋ, 
ಅದೇ ಸಿಟ್ಟಿನಿಂದ ಅವನು ವಿವಸ್ತ್ರನಾದ. 
ಅದೇ ಸಿಟ್ಟಿನಿಂದ ಆಹಾರ ತ್ಯಜಿಸಿದ, ದೇಹ ದಂಡಿಸಿದ. 
ಇದ್ಯಾವುದರಲ್ಲೂ ಪ್ರಾಯಶ್ಚಿತ್ತದ ಅಂಶವಿರಲಿಲ್ಲ. 

ಇದರ ಆಂತರ್ಯ ತಿಳಿಯದ ಮಂದಿ ಇವನ ಹೊರರೂಪಕ್ಕೆ ಜಯಕಾರ ಹಾಕಿದರು. 
ಮಂಗ ಮಧ್ಯ ಕುಡಿದಂತಾಯಿತು. 
ತನಗಿಂತ ಮೇಲಿನವನಿಲ್ಲ ಎಂಬ ಅಹಂಕಾರ ಸೇರಿಕೊಂಡಿತು. 
ಆದರೆ ಮೂಲ ಸ್ವಭಾವದಲ್ಲಿ ಎನಿತೂ ಬದಲಾವಣೆಯಾಗಿರಲಿಲ್ಲ.


ಪಶ್ಚಾತಾಪ ಎಂದರೆ, ಯಾವ ಸ್ವಭಾವದಿಂದ ತನ್ನಿಂದ ತಪ್ಪಾಯಿತೋ 

ಆ ಸ್ವಭಾವವನ್ನೇ ಸಮೂಲವಾಗಿ ಕಿತ್ತೊಗೆಯುವುದು. 

ಕೋಪ ಅಸೂಯೆ, ಮಾತ್ಸರ್ಯ ಮೇರೆ ಮೀರಿದ ಕಾಮನೆ 
ಇದೆಲ್ಲವೂ ಸುಖದ ಹಾದಿಯ ಮುಳ್ಳುಗಳು. 
ಇವುಗಳಿಂದ ಬಿಡುಗಡೆ ಹೊಂದುವುದೇ ಪ್ರಾಯಶ್ಚಿತ್ತ ಇಂದು 
ನಿನ್ನೆಯ ತಪ್ಪುಗಳ ನಿಂತಿದೆ ಎನ್ನುವ ಮಾತಿದೆ. 
ಕಾಲನಲ್ಲಿ ಸರಿದು ಹೋದ ಬದುಕಿನ ಅನುಭವಗಳನ್ನು 
ಮತ್ತೆ ಅನುಭವಿಸಿ ನೋಡುತ್ತಾ ಯಾವುದರಿಂದ ತನ್ನವರಿಗೆ ಹಿತವಾಗಿದೆಯೋ 
ಅದನ್ನು ಮರಳಿಸುತ್ತಾ, ಅಹಿತವಾಗಬಹುದಾದುದನ್ನು 
ಮರುಕಳಿಸದಂತೆ ನೋಡಿಕೊಳ್ಳುವುದೇ ಹೊಸ ಹುಟ್ಟಿಗೆ ನಾಂದಿ.


ಬದುಕೊಂದು ಅನಂತ ಯಾತ್ರೆ,ಇದರೆ ಹೆಜ್ಜೆ ಗುರುತುಗಳು ಲೆಕ್ಕವಿಲ್ಲದವು. 

ಅವು ಬರೀ ಗುರುತುಗಳು ಮಾತ್ರ. 

ಅವುಗಳಲ್ಲಿ ಮರಳಿ ಹೆಜ್ಜೆ ಇಡಲಾಗದು. 

ಆದರೆ, ಅವುಗಳ ಆಳವರಿತು, ಮುಂದಿನ ಹೆಜ್ಜೆಗಳನ್ನು ರೂಪಿಸಬಹುದು. 

ಈ ರೂಪಾಂತರದ ಮೊದಲ ಹೆಜ್ಜೆಯೇ ಯುಗಾದಿ. 

ಬೇವು ಬೆಲ್ಲಗಳ ಮಿಶ್ರಣವಾದ ಬದುಕನ್ನು ಬೇವು ಬೆಲ್ಲವಾಗಿಯೇ ಕಂಡು, 

ಬೆಲ್ಲವನ್ನು ಖುಶಿಯಾಗಿ ಮೆರ್ದಂತೇ ಜೀವನದಲ್ಲೂ ಬೆಲ್ಲದ 

ಸಿಹಿಯನ್ನು ಸವಿಯುವುದೇ ಯುಗದ ಆದಿ. 

ಜೀವನ ಅನಂತ ಯಾತ್ರೆಯಲ್ಲಿ ಪರಿಷ್ಕರಿಸಿದ ಮೊದಲ ಹೆಜ್ಜೆ ಇದು.

"ಜಗತ್ತು ಇಡೀ ಅಜ್ಞಾನದ ಆಳದಲ್ಲಿ ಮಲಗಿ ನಿದ್ದೆ ಹೋಗಿರುವಾಗ, ಎಚ್ಚೆತ್ತಿರುವವನೇ ಜ್ಞಾನಿ,ತಿಳಿದವ. ಅಂಥವನೇ "ಮುಕ್ತ". ಎಚ್ಚರಗೊಳ್ಳುವ ಪ್ರಯತ್ನವೇ ಹೊಸ ಮನ್ವಂತರಕ್ಕೆ ನಾಂದಿ"

Click here to LIKE US

Friday 26 January 2018

ಪರಿಪೂರ್ಣತೆ

ಅರುಣಾಚಲದ ಸಂತ ರಮಣಮಹರ್ಷಿಗಳನ್ನು ದ್ವೇಷಿಸುವ ಒಂದು ಗುಂಪು ಇತ್ತು. ಹೇಗಾದರೂ ಅವರ ತೇಜೋವಧೆ ಮಾಡಬೇಕೆಂದು ಕಾಯುತ್ತಿತ್ತು. ರಮಣರು ಪ್ರತಿದಿನ ಬೆಳಿಗ್ಗೆ ದೇವರನ್ನು ಕಾಣಲು ಹೋಗುತ್ತಾರೆ ಎಂಬ ವದಂತಿ ಇವರ ಕಿವಿಗೆ ಬಿತ್ತು. ದೇವರನ್ನು ಕಾಣಲು ಹೋಗುವುದು ಎಂದರೇನು? ಅವನೇನು ಸಶರೀರಿಯಾಗಿ ಬಂದಿವರ ಮುಂದೆ ನಿಲ್ಲುವನೇನು? ಇದೆಲ್ಲ ಮಂದಿಯ ಕಣ್ಣಿಗೆ ಧೂಳೆರಚಲು ಮಾಡಿದ ಕುತಂತ್ರ. ಹೇಗಾದರೂ ರಮಣರನ್ನು ಇದರಲ್ಲಿ ಸಿಕ್ಕಿ ಹಾಕಿಸಬೇಕು ಎಂಬೆಲ್ಲ ಯೋಚನೆ ಹಾಕಿಕೊಂಡು ರಮಣರಲ್ಲಿಗೆ ಬಂತು ಈ ಗುಂಪು.

"ಸ್ವಾಮೀ, ತಾವು ಪ್ರತಿದಿನ ಭಗವಂತನನ್ನು ಕಾಣಲು ಹೋಗುತ್ತೀರಂತೆ. ಮೂರು ಮೂರು ಗಂಟೆ ಅವರೊಂದಿಗೆ ಕಳೆಯುತ್ತೀರಂತೆ. ಎಲ್ಲರೂ ಕುರಿಗಳಲ್ಲ. ನೀವು ಹೀಗೆಲ್ಲ ಸುಳ್ಳು ವದಂತಿ ಹಬ್ಬಿಸಿ ಜನರನ್ನು ಮರುಳು ಮಾಡಿತ್ತೀರಿ ಎಂಬ ಸಂಶಯ ನಮಗಿದೆ. ಆದುದರಿಂದ ನಮಗೂ ನಿಮ್ಮ ದೇವರನ್ನು ನೋಡಬೆಕೆಂದಿದೆ. ಒಂದು ವೇಳೆ ಇದು ಬರೀ ಮಂದಿಯ ಊಹಾಪೋಹ ಎಂದಾದರೆ ನೀವೇ ಒಂದು ಸ್ಪಷ್ಟೀಕರಣ ನೀಡಿ ಇದು ಸುಳ್ಳು ಎಂದುಬಿಡಿ. ನಾವು ಹಾಗೇ ಜನರಿಗೆ ತಿಳಿಸಿಬಿಡುತ್ತೇವೆ" ಎಂದರು.


ರಮಣ ಮಹರ್ಷಿಗಳು ಒಂದು ಮುಗುಳುನಗೆಯೊಂದಿಗೆ ಸ್ಪಷ್ಟವಾಗಿ ಉತ್ತರಿಸಿದರು. " ನೀವು ಕೇಳಿದ ಸುದ್ದಿ ನೂರಕ್ಕೆ ನೂರರಷ್ಟು ಸತ್ಯ. ನಾನು ಪ್ರತಿದಿನ ಭಗವಂತನನ್ನು ಕಾಣಲು ಹೋಗುತ್ತೇನೆ. ಅವನು ನನ್ನ ಸೇವೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ನಾಳೆ ಬೆಳಿಗ್ಗೆ ನೀವು ನನ್ನೊಂದಿಗೆ ಬಂದರೆ ನಾನು ನಿಮಗೆ ನನ್ನ ದೇವರನ್ನು ತೋರಿಸಬಲ್ಲೆ"

ಕುತಂತ್ರ ಮಾಡಬಂದವರಿಗೂ ಗೊಂದಲ ಎನಿಸಿತು. ಯಾವುದೇ ಉದ್ವೇಗಕ್ಕೆ ಒಳಗಾಗದೇ, ಸ್ಪಷ್ಟವಾಗಿ ರಮಣರು ಅವರನ್ನು ತಮ್ಮೊಂದಿಗೆ ಬರುವಂತೆ ಆಹ್ವಾನಿಸಿದ್ದರು. ಕೇವಲ ಸತ್ಯದಲ್ಲಿ ಸ್ಥಿತನಾದವನಿಗೆ ಮಾತ್ರ ಇಂಥ ನಿಖರತೆ, ಸ್ಪಷ್ಟತೆ ಇರುತ್ತವೆ. ರಾತ್ರಿ ಕಳೆದು ಹಗಲಾಯಿತು. ರಮಣರು, ಸತ್ಯ ಕಾಣಲು ಬಂದವರೊಂದಿಗೆ ಹೊರಟರು. ಕಾಡಿನ ಹಾದಿಯಲ್ಲಿ ಸುಮಾರು ಎರಡು ಮೈಲಿಗಳಷ್ಟು ನಡೆದ ಅನಂತರ ಒಂದು ಸಣ್ಣ ಗುಡಿಸಲು ಕಂಡಿತು.



"
www.kartavyaa.blogspot.in

Image may be subject to copyrights.


2captcha


ರಮಣರು ಒಂದು ಕ್ಷಣ ತಡೆದು "ದಯವಿಟ್ಟು ಶಾಂತರಾಗಿರಿ. ನನ್ನ ದೇವರಿಗೆ ತೊಂದರೆಯಾಗದಿರಲಿ" ಎಂದವರೇ ಗುಡಿಸಲು ಪ್ರವೇಶಿಸಿದರು. 


ಒಳಗೆ ಕುಷ್ಟ ರೋಗದಿಂದ ಕೈ,ಕಾಲುಗಳು ಕರಗಿಹೋದ ದಂಪತಿ ಇದ್ದರು. ಅವರ ವೃಣಗಳಿಂದ ಕೀವು,ರಕ್ತ ಸುರಿಯುತ್ತಿತ್ತು. ರಮಣರು ಅವರಿಗೆ ಸ್ನಾನ ಮಾಡಿಸಿದರು. ವೃಣಗಳನ್ನು ಶುಚಿಗೊಳಿಸಿ ಔಷಧಿ ಹಚ್ಚಿದರು. ಅಡುಗೆ ಮಾಡಿ ತಮ್ಮ ಕೈಯಿಂದ ಊಟ ಮಾಡಿಸಿದರು. ಮಿಕ್ಕಿದ್ದನ್ನು ಮುಚ್ಚಿಟ್ಟು, ಹೊರಗೆ ಬಂದರು. ನಡೆಯುತ್ತಿರುವುದನ್ನು ನೋಡುತ್ತಿರುವವರ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ರಮಣರು ಬೇರಾವುದೇ ವಿವರಣೆ ನೀಡುವ ಅಗತ್ಯವಿರಲಿಲ್ಲ. ಸಂತರ ಕಾಲಿಗೆ ಬಿದ್ದು "ಭಗವಾನ್, ನೀವು ನಮ್ಮ ದೇವರನ್ನು ಕಂಡಿರುವಿರಂತೆ, ನಾವೂ ನಮ್ಮ ಈ ನಡೆದಾಡುವ ದೇವರನ್ನು ಕಂಡೆವು. ಅವನು ನಡೆವ ಹಾದಿಯನ್ನು ಆರಿಸಿಕೊಂಡಿದ್ದೇವೆ. ನಮ್ಮನ್ನು ಕ್ಷಮಿಸಿ ಎಂದು ಮಾತ್ರ ಬೇಡುತ್ತೇವೆ." ಎಂದರು


www.kartavyaa.blogspot.in

Image may be subject to copyrights.

ಇದು ಪರಿಪೂರ್ಣತೆಗೆ ಸಂದವರು ನಡೆವ ಪರಿ. ಅವರು ಎಂದೂ ತಾವು ಮಾಡುವ ಮಹತ್ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಪ್ರತಿಯೊಂದು ಕ್ಷಣವೂ, ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ಭಗವಂತನ, ವಿಶ್ವ ಚೈತನ್ಯದ ಸಾನಿಧ್ಯವನ್ನು, ಅಸ್ತಿತ್ವವನ್ನು ಕಾಣುತ್ತಾ ಅನುಭವಿಸುತ್ತಾ ಬದುಕು ಸವೆಸುವುದು ಸಂತರ ಲಕ್ಷಣ. ನರ ಬೇರೆ ಅಲ್ಲ ನಾರಾಯಣ ಬೇರೆ ಅಲ್ಲ.

Like us over here

Sunday 17 September 2017

ಮೂಲ ಮರೆತ ಸಾಂಪ್ರದಾಯಿಕ ಆಚರಣೆಗಳು

.
ಅನೇಕ ವರ್ಷಗಳಷ್ಟು ಕಾಲ ಶ್ರಮಿಸಿ, ತಪಿಸಿ ಒಬ್ಬ ಬೆಂಕಿಯನ್ನು 
ಉತ್ಪಾದಿಸುವ ವಿದ್ಯೆ ಕಂಡುಹಿಡಿದ.

ತಾನು ಕಂಡುಕೊಂಡ ಈ ವಿದ್ಯೆಯಿಂದ 
ಮನುಕುಲಕ್ಕೆ ಉಪಯೋಗವಾಗ ಬೇಕೆಂದು ಬಯಸಿದ.

ಯಾರಿಗೆ ಇದರಿಂದ ತುಂಬಾ 
ಉಪಯೋಗವಾಗಬಹುದು ಎಂದು ಚಿಂತಿಸಿದ.

"ಹಿಮಾಚ್ಛಾದಿತ ಪರ್ವತಾವಳಿಗಳಲ್ಲಿ ವಾಸಿಸುವವರಿಗೆ" ಎನಿಸಿತವನಿಗೆ.

ಅಗತ್ಯವಿರುವ ಸಕಲ ಸಾಮಗ್ರಿಗಳನ್ನು 
ಕಟ್ಟಿಕೊಂಡು ಅಂಥದೊಂದ್ದು ಪ್ರದೇಶಕ್ಕೆ ಹೋದ. 

ಅಲ್ಲಿಯ ಮಂದಿ ಬೆಂಕಿ ಹೊತ್ತಿ ಉರಿಯುವ, 
ಅದರಿಂದ ಉಂಟಾಗುವ ಶಾಖದ ಪರಿಣಾಮ 
ಕಂಡು ಆಶ್ಚರ್ಯಪಟ್ಟರು,ಸಂತೋಷಿಸಿದರು.


www.kartavyaa.blogspot.in
Image may be subject to copyrights
ಅವನಿತ್ತ ಉಪಕರಣಗಳನ್ನು ಪರೀಕ್ಷಿಸಿ ನೋಡುವ 
ಗಲಾಟೆಯಲ್ಲಿ ಇವನ ಉಪಕಾರ ಸ್ಮರಣೆ ಮಾಡುವುದನ್ನು 
ಮರೆತು ಬಿಟ್ಟರು. 
ಇವರ ಸಂತಸ ಕಂಡು ಆನಂದಿಸುತ್ತಾ 
ಇವ ಮೆಲ್ಲನೆ ಅಲ್ಲಿಂದ ಹೊರಟು ಬಂದ. 

ಅವನಿಗೆ ಕೀರ್ತಿ ಕಾಮನೆ ಇರಲಿಲ್ಲ,
ಪ್ರತಿಫಲ ಬೇಕಿರಲಿಲ್ಲ. 
ನಾಲ್ಕು ಮಂದಿಗೆ ಸುಖವಾದರೆ ಸಾಕಿತ್ತು.


ಸರಿ, ಅಲ್ಲಿಂದ ಮತ್ತೊಂದು ಊರಿಗೆ ಬಂದ. 

ಅಲ್ಲಿಯ ಮಂದಿ ತೆರೆದ ಬಾಹುಗಳಿಂದ 
ಅವನನ್ನು ಸ್ವಾಗತಿಸಿದರು. 

ಅವನು ಮಾಡಿದ ಚಮತ್ಕಾರ ಕಂಡು ಪರವಶರಾದರು. 

ಆದರೆ ಆ ಊರಿನ ಮುಖಿಯನಾದ, ದೇವಸ್ಥಾನದ ಅರ್ಚಕನಿಗೆ 

ಇವನ ಜನಪ್ರಿಯತೆಯಿಂದ ಅಸೂಯೆ ಎನಿಸಿತು. 

ಸದ್ದಿಲ್ಲದೆ ವಿಷ ಪ್ರಾಶನ ಮಾಡಿಸಿ ಇವನನ್ನು ಕೊಂದು ಹಾಕಿದ.! 

ಅಪರಾಧದ ಅಪವಾದ ತನ್ನ ಮೇಲೆ ಬರುವುದನ್ನು ತಪ್ಪಿಸಲು, 

ಇವನ ಚಿನ್ನದ ಪುತ್ಥಳಿ ಮಾಡಿಸಿದ. ಚಂದದ ಗುಡಿ ಕಟ್ಟಿಸಿ ಪುತ್ಥಳಿ 

ಅದರಲ್ಲಿಡಿಸಿದ. ಅವನು ತಂದ ಬೆಂಕಿ ಉತ್ಪಾದಿಸುವ ಉಪಕರಣಗಳನ್ನು 

ಒಂದು ಸಂದೂಕದಲ್ಲಿಟ್ಟು ಸಂದೂಕದ ಸುತ್ತ ಬೃಂದಾವನ ಕಟ್ಟಿಸಿದ.

ಇದು ಇಷ್ಟಕ್ಕೆ ನಿಲ್ಲಲಿಲ್ಲ.ಅರ್ಚಕ 
ಇವನ ಬಗ್ಗೆ ಒಂದು ಬೃಹತ್ ಗ್ರಂಥವನ್ನೇ ಬರೆದ. 

ಅವನ ಹುಟ್ಟು ಹೇಗೆ ದೈವಿಕ ರೀತಿಯಲ್ಲಾಯಿತು. 

ಅಯೋನಿಜನಾಗಿ ಬಂದ ಇವನು ಬೆಳೆದ ರೀತಿ, 
ಮಾಡಿದ ಅಸಂಖ್ಯ ಪವಾಡಗಳನ್ನು ಈ ಪುಸ್ತಕದಲ್ಲಿ ದಾಖಲಾಯಿಸಲಾಯಿತು. 

ಗ್ರಂಥವನ್ನು ರೇಶಿಮೆಯಲ್ಲಿ ಸುತ್ತಿ ಗುಡಿಯ ಪ್ರಮುಖ ಸ್ಥಾನದಲ್ಲಿಡಲಾಯಿತು. 
ಪ್ರತಿ ದಿನ ವಿಗ್ರಹಕ್ಕೆ ಪೂಜೆಯಾಗುವಾಗ ಆರತಿ ಎತ್ತುವ ವ್ಯವಸ್ಥೆಯಾಯಿತು.


ಈ ಗ್ರಂಥ ಅತ್ಯಂತ ಪವಿತ್ರವಾದುದು. 
ಆದುದರಿಂದ ಇದರ ಪ್ರತಿಗಳು ಎಲ್ಲೆಲ್ಲಿರುವುವೋ ಅಲ್ಲಲ್ಲಿ 
ನಿತ್ಯ ಪೂಜೆಯಾಗಬೇಕು ಎಂದು ಕಟ್ಟಳೆಯಾಯಿತು. 

ಅಗ್ನಿ ಜನಕನಿಗೆ ಸಂತ ಸ್ಥಾನ ನೀಡಲಾಯಿತು. 

ಜತನದಿಂದ ಇವನ ಚರಿತ್ರೆ ಪೂಜಾ ವಿಧಾನಗಳು, 
ಇವನ ಕುರಿತ ಗ್ರಂಥಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲಾಯಿತು. 

ಈ ಬಗ್ಗೆ ಅಧಿಕಾರಯುತವಾಗಿ ಪ್ರವಚನಗಳು ನಡೆದವು. 
ಪುಸ್ತಕದಲ್ಲಿರುವ ವಿಷಯ ಯಾ ಸಂತ ಯಾ ಪ್ರವಚನಕಾರರನ್ನು 
ಪ್ರಶ್ನಿಸಿದವರನ್ನು ದಮನಿಸಲಾಯಿತು. 

ಒಟ್ಟಿನಲ್ಲಿ ಕಾಲಕ್ರಮೇಣ ಇದೊಂದು ಬರೀ 
'ಸಾಂಪ್ರದಾಯಿಕ' ಆಚರಣೆಯಾಗಿಯೇ ಉಳಿದು ಹೋಯಿತು.


ಮೊದಮೊದಲು ಬೆಂಕಿ ಮಾಡುವುದನ್ನು ಕಲಿತ 
ಕೆಲವೇ ಕೆಲವರು ಸತ್ತು ಹೋದರು. ಹೊಸಬರ್ಯಾರೂ ಕಲಿಯಲಿಲ್ಲ. 

ಅದಕ್ಕೆ ಅವಕಾಶವೂ ಇರಲಿಲ್ಲವೆನ್ನಿ.
 ಕ್ರಮೇಣ ಈ ಮಂದಿ ಆಚರಣೆಗಳಲ್ಲಿ, 
ಎಷ್ಟು ಮಗ್ನರಾಗಿ ಹೋದರೆಂದರೆ ಬೆಂಕಿ ಮಾಡುವುದನ್ನೇ ಮರೆತು ಬಿಟ್ಟರಂತೆ.


ಇದು ಮನು ಕುಲದ ಪರಂಪರೆಯ ಕಥೆಯೂ ಹೌದು. 

ಯಾರೋ ಪ್ರಾಚೀನದಲ್ಲಿ ಬದುಕಿನ ಮೂಲ, 

ಬದುಕಿನ ಪರಿ, ತನ್ಮೂಲಕ ಪರಿಪೂರ್ಣತೆಯತ್ತ 

ನಡೆವ ಹಾದಿಯನ್ನು ಕಂಡರು. ಕಂಡದ್ದು ಹಿತವೆನಿಸಿತು. 

ಮುಂದಿನವರಿಗೂ ಉಪಯೋಗಕ್ಕೆ ಬರಲಿ ಎಂದು ನಾನಾ ರೂಪದಲ್ಲಿ ಉಳಿಸಿಯೂ ಹೋದರು.


www.kartavyaa.blogspot.in
Image may be subject to copyrights
ಈ ಮುಂದಿನವರಲ್ಲಿ ಕೆಲವು ಮಂದಿ ಸ್ವಾರ್ಥ ಸಾಧಕರಿದ್ದರು. 

ವಿಷಯ ಇಷ್ಟು ಸುಲಭ ಎಂದು ಮಿಕ್ಕವರು ತಿಳಿದುಕೊಂಡರೆ 
ನಮ್ಮ ಸುಖಕ್ಕೆ ಕೊಡಲಿ ಏಟಾಗಬಹುದೆಂದು ಹುನ್ನಾರ ನಡೆಸಿದರು. 

"ಭಗವಂತನಿಗೆ ಕೋಪ ಬರುತ್ತದೆ" ಎನ್ನುತ್ತಾ ಮಡಿ,ಮೈಲಿಗೆ, 
ಸಂಪ್ರದಾಯಗಳ ಬೇಲಿ ಇಟ್ಟರು. ಒಳಗಿನವರು, 
ಹೊರಗಿನವರನ್ನು ಕತ್ತಲಲ್ಲಿಟ್ಟರು. 

ಕ್ರಮೇಣ ಇವರಿಗೂ ತಿರುಳು ಮರೆಯಿತು. 
ಆಚರಣೆಗಳು ಮಾತ್ರ ಉಳಿದವು. 

ಮುಂದೆ ಇದೇ ಬದುಕಾಗಿ ಹೋಯಿತು..

Monday 21 August 2017

ಬದಲಾವಣೆ ನಮ್ಮಿಂದಲೇ!

ಮೂರು ಸಾವಿರ ವರ್ಷಗಳಿಂದ ನಮ್ಮ ಮೇಲೆ ಮತ್ತೆ ಮತ್ತೆ ಆಕ್ರಮಣಗಳಾಗುತ್ತಲೇ ಇತ್ತು.

ಆದರೆ, ಸ್ವರಕ್ಷಣೆಗಾಗಿ ಮಾತ್ರ. ಈ ನೆಲದಲ್ಲಿ ಯುದ್ಧಗಳಾದವೇ ಹೊರತು, ನಾವೆಂದೂ ಅನ್ಯ ದೇಶಗಳ ಮೇಲೆ ಆಕ್ರಮಣ ಮಾಡಲಿಲ್ಲ.
ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು ಮಾತ್ರ ಅಂದರೆ, ಸ್ವಾತಂತ್ರ್ಯದ ಬೆಲೆ ಮತ್ತು ರುಚಿಗಳು ನಮಗೆ ತಿಳಿದಿತ್ತು.



ಗುಲಾಮರಿಗೆ ಗೌರವವಿಲ್ಲ ಎಂಬುದು ತಿಳಿದ ಮಾತು.
ಸ್ವತಂತ್ರ್ಯ ನೆಲದಲ್ಲಿ ಬದುಕುವವನಿಗೆ ಮಾತ್ರ ಆತ್ಮಗೌರವದಿಂದ ತಲೆ ಎತ್ತಿ ನಡೆಯುವುದು ಸಾಧ್ಯ.

ಇಂಥ ಸ್ವಾಭಿಮಾನೀ ದೇಶವೂ ಪರಕೀಯರ ಕೈವಶವಾಯಿತು.

ಬೇರೆ ಮತ, ನಂಬಿಕೆಗಳು ಇಲ್ಲಿ ಆಳಿದವರೂ ಸಾಮ, ದಾನ, ಬೇಧ ದಂಡಗಳಿಂದ ಸಾರಾಸಗಟಾಗಿ ಮತಾಂತರ ನಡೆಸಿದರು.

ಮುಂದೆ ಅವರ ದೊರೆತನ ಮುಗಿದರೂ ಬಿಟ್ಟುಹೋದ ನಂಬಿಕೆಗಳಿಗೆ ಕೊನೆಯಾಗಲಿಲ್ಲ.

ಮೂಲತಃ ಭಾರತದ ಬುನಾದಿ, ಅದರ ಸನಾತನದ ಸಮಾಜಪರ ನಿಯಮಗಳು.

ಇದನ್ನೇ ನಾವು 'ಧರ್ಮ' ಎಂದೆವು.

ಆದರೆ ಹೊಸತಾಗಿ ಸೇರ್ಪಡೆಯಾದ ನಂಬಿಕೆಗಳು ಇದಕ್ಕೆ ಭಿನ್ನವಾಗಿದ್ದವು.

ಸ್ವಾರ್ಥಪೂರಿತವಾಗಿದ್ದವು. ಆದರೂ ಬದುಕಲಿಕ್ಕಾಗಿ ಮಾತ್ರ ಒತ್ತಾಯದಿಂದ ಒಪ್ಪಿಕೊಂಡವರ ಮುಂದಿನ ಪೀಳಿಗೆಗಳು,

ಮೂಲಭೂತವಾಗಿರಬೇಕಾದ ಅಧ್ಯಯನದ ಕೊರತೆಯಿಂದ ಇವುಗಳನ್ನು ಸತ್ಯವೆಂದು ನಂಬಿದವು.

ಹೀಗೆ ಶುರುವಾಯಿತು ಭಾರತದ ಐಕ್ಯಮತದಲ್ಲಿ ಒಂದು ತೆಳ್ಳೆನೆಯ ಬಿರುಕು.

ಸ್ವಾತಂತ್ರ್ಯ ಬಂದ ಅನಂತರವೂ ಈ ಬಿರುಕು ಮುಚ್ಚಲಿಲ್ಲ.

ಬದಲಿಗೆ ಮತ್ತೆ ಬಂದ ರಾಜಕಾರಣಿಗಳ ಸ್ವಾರ್ಥಸಾಧನೆಯಲ್ಲಿ ಇದೇ ಬಿರುಕು ಬಲಿತು,ಭಾರತವನ್ನು ವಿಭಜನೆ ಮಾಡುವಲ್ಲಿ ಸಫಲವಾಯಿತು.

ಕಾರಣ ಒಂದೇ, ಸಮರ್ಥ ನಾಯಕತ್ವದ ಕೊರತೆ! ನಾಯಕರಿಲ್ಲದ ದೇಶ ಇದು.

ಇಂದು 'ರಾಜಕಾರಣಿ' ಎಂಬ ಹೆಸರಿನಡಿ ಆಳುವವರು. ನಿರ್ವಾಹಕರು ಮಾತ್ರ ಅರ್ಥಾತ್ 'ಮ್ಯಾನೇರ್ಜಸ್' ನಾಯಕ ಪದದ ಲಕ್ಷಣವೆಂದರೆ, ಅವನು ಯಾವುದೇ ಸನ್ನಿವೇಶದಲ್ಲಿ ದೇಶ, ದೇಶವಾಸಿಗಳನ್ನು ತನಗಿಂತ ಮೊದಲು ಪರಿಗಣಿಸುವವನಿರಬೇಕು. ೨೪/೭ ದೇಶದ ಹಿತವೇ ಮಂತ್ರವಾಗಿರುವವನಾಗಿರಬೇಕು.
ಇದ್ದಾರೇನು, ನಿಮಗೆ ತಿಳಿದಂತೆ ಇಂಥವರು?



ಎಲ್ಲಿಯವರೆಗೆ ನಾವು ತಲೆ ಎತ್ತಿ ನಿಲ್ಲಲು ಶಕ್ತರಿಲ್ಲವೋ ಅಲ್ಲಿಯವರೆಗೆ ಜಗತ್ತು ನಮ್ಮನ್ನು ಗುರುತಿಸುವುದಿಲ್ಲ.

ಏಕೆಂದರೆ, ಇಂದಿನ ಜಗತ್ತಿನಲ್ಲಿ ಸರ್ವಸಮರ್ಥತೆಯೇ ಗುರುತಿನ ಚೀಟಿ.

ಆರ್ಥಿಕವಾಗಿ, ಸಾಮಾಜಿಕವಾಗಿ ನಾವಿಂದು ಅಗಾಧವಾಗಿ ಬೆಳೆದಿದ್ದೇವೆ.

ಕಳೆದ ಆರು ಶತಮಾನಗಳಲ್ಲಿ ಜಗತ್ತು ಬೆರಗಾಗುವಷ್ಟು ಬದಲಾಗಿದ್ದೇವೆ.

ಆದರೆ ನಮ್ಮ ಸೈನಿಕ ಬಾಲ ಸಶಕ್ತವಾಗಿಲ್ಲ ಎಂಬುದು ಖೇದಕರ.

ಇಷ್ಟಿದ್ದೂ ನಾವೊಂದು ಅಭಿವೃದ್ಧಿಶೀಲ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಹಿಂಜರಿಯುತ್ತೇವೆ.
ಏಕೆ?
ನಮ್ಮ ಯಾವುದೇ ಸಾಧನೆಯನ್ನು ನಾವು ಮುಕ್ತ ಕಂಠದಿಂದ ಹೇಳಿಕೊಳ್ಳಲಾರದಾಗಿದ್ದೇವೆ.

ಬಹುಶಃ ಶತಮಾನಗಳಷ್ಟು ಗುಲಾಮಗಿರಿಯ ಅನುಭವದಿಂದ ಧ್ವನಿ ಸೇದಿ ಹೋಗಿರಬಹುದು.

ಬದಲಿಗೆ ನಾವು ನಮ್ಮ ತಪ್ಪುಗಳನ್ನು ಮುಚ್ಚಿಡಲೋ, ಬೇರೆಯವರ ಹೆಗಲಿಗೆ ವರ್ಗಾಯಿಸಲೋ ನೋಡುತ್ತೇವೆ.

ನಮ್ಮ ಸರ್ಕಾರದ ಕಾರ್ಯವೈಖರಿ ಸರಿ ಇಲ್ಲ ಎಂದು ಆಳುವ ಪಕ್ಷವನ್ನು, ಎದುರು ಪಕ್ಷದವರು ನಾವು ಸೇರಿಯೇ ದೂರುತ್ತೇವೆ.

ಇವರನ್ನು ಚುನಾವಣೆಯ ಮೂಲಕ ಆರಿಸಿ ಕಳಿಸಿದ್ದು 'ನಾವೇ' ಎಂಬುದನ್ನು ಮರೆಯುತ್ತೇವೆ.


ನಮ್ಮ ನಲ್ಲಿಯಲ್ಲಿ ನೀರು ಬರುವುದು, ತ್ಯಾಜ್ಯ ವಿಲೇವಾರಿ, ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ, ವಿದ್ಯುತ್ ಕೈಕೊಡುವುದು, ಯಾವಾಗ ಬೇಕಾದರೆ ಆಗ,ಯಾರು ಬೇಕಾದರೂ ಮುಷ್ಕರ ಹೂಡುವುದು, ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆ, ದೇಶದಲ್ಲಿ ಕೊಲೆ,ಸುಲಿಗೆಗಳಲ್ಲಿ ಹೆಚ್ಚಳ, ಈ ರೀತಿಯ ದೂರುಗಳು.

ಇವೆಲ್ಲವೂ ಸತ್ಯವೇ ಇರಬಹುದು.
ಹೌದು ಕೂಡ.

ಆದರೆ, ಇದಕ್ಕಾಗಿ ಮಾತನಾಡುವುದೊಂದರ ಹೊರತಾಗಿ, ದೂರುವುದರ ಹೊರತಾಗಿ ನಾವೇನು ಮಾಡಿದ್ದೇನೆ?
kartavyaa
Image may be subject to copyrights



ನಾವು ಈ ವ್ಯವಸ್ಥೆಯ ಒಂದು ಅಂಗ.

ಬದಲಾವಣೆ ನಮ್ಮಿಂದಲೇ ಶುರುವಾಗಬೇಕು.

ಏಕೆಂದರೆ, ಜಗತ್ತನ್ನು ಬದಲಾಯಿಸುವುದು ನಮ್ಮಿಂದ ಆಗುತ್ತದೋ ಇಲ್ಲವೋ ತಿಳಿಯದು.

ನಾವು ಬದಲಾಗುವುದು ಮಾತ್ರ ಖಂಡಿತ ಸಾಧ್ಯ.

ನಮ್ಮ ಜಾತಿ,ಮತ,ನಂಬಿಕೆ ಎಲ್ಲವೂ ನಮ್ಮ ವೈಯಕ್ತಿಕ.

ಆದರೆ, ನಂಬಿಕೆ ಈ ದೇಶದ ಸುರಕ್ಷಿತತೆಗೆ ಭಾದಕ ತರುವಂತಿದ್ದರೆ, ಅದರಿಂದ ನಮ್ಮ ದೇಶದ ಅಮಾಯಕರ ರಕ್ತ ಚೆಲ್ಲುವಂತಾದರೆ ಆ ನಂಬಿಕೆ, ಮತವನ್ನು ತ್ಯಜಿಸುವುದೇ ಸೂಕ್ತ.


ನೀರು ಬಂದದ್ದೆಲ್ಲಿಂದ? ಕೊಳದ ನೀರೋ. ಮಳೆಯ ನೀರೋ, ಬಾವಿಯ ನೀರೋ ಎಂದು ಪ್ರಶ್ನಿಸದು ಸಮುದ್ರ.

ತನ್ನ ಮೇಲೆ ಬಿದ್ದ ಹನಿಯನ್ನು ಆದರದಿಂದ ಆಲಿಂಗಿಸಿಕೊಳ್ಳುತ್ತದೆ. ತನ್ನಲ್ಲಿ ಒಂದಾಗಿರಿಸುತ್ತದೆ.
ಕಡೆಗೆ ತಾನೇ ಬಿಂದುವಾಗಿ ಹೋಗುತ್ತದೆ.

ಸಾಗರಕ್ಕೆ ಉಪಮೆ ಸಾಗರವೇ.

ಈ ದೇಶಕ್ಕೆ ಉಪಮೆ ಈ ದೇಶವೇ.

ಹಿಂದೂ, ಮುಸಲ್ಮಾನ, ಸೀಖ್, ಜೈನ, ಪಾರಸಿ, ಕ್ರಿಶ್ಚಿಯನ್ ಯಾರೇ ಇರಲಿ, ಪ್ರೇಮದಿಂದ, ಆದರದಿಂದ ತನ್ನಲ್ಲಿ ಸ್ಥಾನ ನೀಡುತ್ತದೆ ಈ ಪುಣ್ಯಭೂಮಿ.

ಆದರೆ ಅವಳ ಮಕ್ಕಳು ನಾವು ಹಾಗಲ್ಲ. ನಾನು ಆ ಜಾತಿಯವ,ಈ ಜಾತಿಯವ ಎನ್ನುತ್ತಾ ಸಿಡಿದು ನಿಲ್ಲುತ್ತೇವೆ.

ಅವಳನ್ನು ನಗ್ನಗೊಳಿಸುತ್ತೇವೆ,ಬರಿದು ಮಾಡುತ್ತೇವೆ. ಆದರೂ ಕಣ್ಣು,ಕಿವಿ, ಬಾಯಿ ಮುಚ್ಚಿ ನೋಡುತ್ತೇವೆ.


೨೦೦೮, ನವೆಂಬರ್ ೨೬ ರಂದು ಭಾರತದ ನೆಲದ ಮೇಲೆ, ಅವಳ ಮಕ್ಕಳ ಕೈವಾಡದೊಂದಿಗೆ ಮಾರಣಹೋಮ ನಡೆಯಿತು. ಮುಂಬೈ ಹೊತ್ತಿ ಉರಿಯಿತು. ವಿಶ್ವ ನಡುಗಿತು. ಉಗ್ರರು ತಾಂಡವ ನಡೆಸಿದರು. ನೂರಾರು ಮಂದಿ ಸತ್ತರು.

ಈ ದಿನದವರೆಗೆ ಈ ಅಮಾನುಷ ಕ್ರತ್ಯ ನಡೆಸಿಯೂ ಬೆನ್ನು ಬಲಕ್ಕೆ ನಿಂತ ದೇಶವನ್ನು ನಿಖರ ರೂಪದಲ್ಲಿ ತರಾಟೆಗೆ ತೆಗೆದುಕೊಂಡಿಲ್ಲ. ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಏನು ಬದಲಾವಣೆಯಾಗಿದೆ ಗೊತ್ತಿಲ್ಲ.!!?

Monday 14 August 2017

ನಾವು ಭಾರತೀಯರೇ? ಸೆರೆ ಸಿಕ್ಕ ಪಕ್ಷಿಗಳೇ?


ಬೇಡನೊಬ್ಬ ಹಕ್ಕಿಗಳನ್ನು ಹಿಡಿಯಲು ಬಲೆ ಹರಗಿದ. ಮೇಲಿನಿಂದ ಒಂದಷ್ಟು ಕಾಳು ಚೆಲ್ಲಿದ. ಕಾಳಿನಾಸೆಗೆ ಬಂದ ಹಕ್ಕಿಗಳ ಕಾಲುಗಳು ಬಲೆಯಲ್ಲಿ ಸಿಕ್ಕಿಕೊಂಡವು. ಹಸಿವು ಹೇಳಹೆಸರಿಲ್ಲದಂತೆ ಮಾಯವಾಯಿತು. ಪ್ರಾಣಭೀತಿಯಿಂದ ತತ್ತರಿಸುತ್ತಿರುವಂತೆ, ಪಕ್ಷಿಗಳ ರಾಜ ಅಲ್ಲಿಗೆ ಬಂದ. ಇವುಗಳ ದುರವಸ್ಥೆ ಕಂಡ. ಒಂದು ಕ್ಷಣ ಯೋಚಿಸಿ,


"ಪ್ರೀಯ ಗೆಳೆಯರೇ, ನೀವು ಹಿಂದು ಮುಂದು ಯೋಚಿಸದೆ ಕಾಳಿನ ಮೇಲೆರಗಿದ್ದುದು ತಪ್ಪು. ಇಂಥ ನಿರ್ಜನ ಪ್ರದೇಶದಲ್ಲಿ ಜನಸಂಚಾರವೇ ಇಲ್ಲದಕಡೆ ಇಷ್ಟು ಕಾಳು ಬಿದ್ದದ್ದು ಹೇಗೆ ಎಂದು ಆಲೋಚನೆ ಮಾಡಬೇಕಿತ್ತು. ಅದನ್ನು ಮರೆತು ಸೆರೆಯಾಗಿರುವಿರಿ. ಆದುದು ಆಯಿತು. ಈಗ ಸಮಸ್ಯೆಗೆ ಪರಿಹಾರವೇನೆಂದು ಯೋಚಿಸೋಣಾ. ನಿಮ್ಮ ಕಾಲುಗಳು ಬಂಧಿಸಲ್ಪಟ್ಟಿವೆ, ಆದರೆ ರೆಕ್ಕೆಗಳು ಸ್ವತಂತ್ರವಾಗಿವೆ. ಎಲ್ಲರೂ ಒಂದೇ ಬಾರಿಗೆ ಹಾರಿದರೆ ಈ ಬಲೆಯನ್ನೇ ಹೊತ್ತುಕೊಂಡು, ದೂರ ಹಾರಿ ಹೋಗಬಹುದು. ಅದೋ, ಅತ್ತ ಬೇಡ ಬರುತ್ತಿರುವುದು ಕಾಣುತ್ತಿದೆ. ಒಮ್ಮೆಗೇ ಹಾರಿ. ಒಂದು, ಎರಡು, ಮೂರು ಎಂದ ಕೂಡಲೇ ಹಾರಲು ಶುರುಮಾಡಿ." ಎಂದ.



ಸಮರ್ಥ ನಾಯಕನಿದ್ದರೆ ಎಂಥ ಆಪತ್ತಿನಿಂದಲೂ ಪಾರಾಗಬಹುದು ಎನ್ನುತ್ತದೆ ಒಂದು ಪ್ರಾಚೀನೋಕ್ತಿ. ಕಥೆಯ ಮೊದಲ ಭಾಗ ಇಲ್ಲಿಗೆ ಮುಗಿಯುತ್ತದೆ. ಮುಂದೇನಾಯಿತು? ನೋಡೋಣ:

ಹಕ್ಕಿಗಳು ಬಲೆಯನ್ನು ಹೊತ್ತು ಹಿಂದಿನಿಂದ ಹಾರಿ ಬರುತ್ತಿದ್ದರೆ, ಮುಂದೆ ಹಕ್ಕಿಗಳ ನಾಯಕನಿದ್ದ. ಬೇಡ ಇವೆರಡನ್ನೂ ಕಂಡ. ಹಕ್ಕಿಗಳು ಮೇಲೆ ಹಾರುತ್ತಿದ್ದರೆ, ಕೆಳಗಿನಿಂದ ಇವನು ಓಡುತ್ತಾ ಹಿಂಬಾಲಿಸಿದ.ಪಕ್ಷಿಗಳ ನಾಯಕನ ಕಣ್ಣಿಗಿದು ಬಿತ್ತು. ಕೊಂಚ ಕೆಳಗೆ ಬಂದು, "ಅಯ್ಯಾ! ಹಕ್ಕಿಗಳು ನಿನ್ನ ಕೈಗೆ ಸಿಗಲಾರವು. ಆದುದರಿಂದ ಹಿಂಬಾಲಿಸಿ ಆಯಾಸ ಮಾಡಿಕೊಳ್ಳಬೇಡ" ಎಂದಿತು.

ಆಗ ಬೇಡ "ಪಕ್ಷಿಗಳೊಂದಿಗೆ ನನ್ನ ಬಲೆಯೂ ನಷ್ಟವಾಗುತ್ತದೆ. ಕನಿಷ್ಟ ಬಲೆಯಾದರೂ ಸಿಗಬಹುದು ಎಂಬುದು ನಾನು ಹೀಗೆ ಹಿಂಬಾಲಿಸುತ್ತಿರುವುದಕ್ಕೆ ಒಂದು ಕಾರಣ.ಎರಡನೆಯ ಕಾರಣ, ಪಕ್ಷಿಗಳ ಸ್ವಭಾವವು ನನಗೆ ತಿಳಿದಿದೆ. ಇವುಗಳೆಲ್ಲವನ್ನೂ ಪಕ್ಷಿಗಳೇ ಎಂದು ಕರೆಯುತ್ತಾರೆ ನಿಜವೇ.. ಆದರೆ ಇವುಗಳಲ್ಲಿ ಅನೇಕ ಭೇದಗಳಿವೆ. ಕೆಲವು ಸಣ್ಣವು, ಕೆಲವು ದೊಡ್ಡವು, ಕೆಲವು ದೀರ್ಘಕಾಲ ಹಾರಬಲ್ಲವಾದರೆ, ಮತ್ತೆ ಕೆಲವು ಸ್ವಲ್ಪ ದೂರ ಹಾರುವಷ್ಟರಲ್ಲಿಯೇ ದಣಿಯುವವು. ಕೆಲವು ವಲಸೆ ಬಂದವಾಗಿದ್ದರೆ, ಮತ್ತೆ ಕೆಲವು ಮೂಲದಿಂದಲೂ ಇಲ್ಲಿಯೇ ಇರುವವು. ಕೆಲವಕ್ಕೆ ಬಲೆಯ ಭಾರ ಹೊತ್ತು ಹಾರುವ ಶಕ್ತಿಯಿದ್ದರೆ, ಕೆಲವಕ್ಕೆ ಇಲ್ಲ. ಹಾಗಾಗಿ, ಕ್ರಮೇಣ ಈ ಭೇದಗಳಿಂದ ಅವುಗಳಲ್ಲಿ ವೈಮನಸ್ಯ ಬರುವುದರಲ್ಲಿ ಸಂದೇಹವಿಲ್ಲ. ಆ ಘಳಿಗೆಯವರೆಗೂ ಕಾದರೆ, ನನಗೆ ಬಲೆಯೊಂದಿಗೆ ಹಕ್ಕಿಗಳೂ ಸಿಗುತ್ತವೆ. ತಾಳ್ಮೆ ಇದ್ದರಾಯಿತು.!" ಎಂದುತ್ತರಿಸಿದ.



ಹಕ್ಕಿಗಳ ನಾಯಕನಿಗೆ ವಿಸ್ಮಯ ಹಾಗೂ ಖೇದಯಾಯಿತು.
ಛೆ! ಈ ಬೇಡ ನಮ್ಮನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ! ಹೀಗಾಗದಂತೆ ತಡೆಯಬೇಕು' ಎಂದುಕೊಂಡು ಮತ್ತೆ ತನ್ನವರನ್ನು ಸೇರಿಕೊಂಡಿತು. " ಗೆಳೆಯರೇ, ಈಗ ತಾನೆ ಬೇಡ ಹೀಗೆಂದ. ಯಾವ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳಬೇಡಿ. ದೂರಕ್ಕೆ ಹಾರಿ ಹೋಗಿ ಬಲೆಯಿಂದ ಬಿಡುಗಡೆ ಹೊಂದುವ ಹಾದಿ ಕಂಡುಕೊಳ್ಳೋಣ" ಎಂದಿತು.

ಅಲ್ಲಿಯವರೆಗೂ ಕೇವಲ ಸಾವಿನಿಂದ ಪಾರಾಗುವ ಒಂದೇ ಚಿಂತೆಯಲ್ಲಿದ್ದ ಹಕ್ಕಿಗಳಿಗೆ, ತಮ್ಮ ತಮ್ಮ ಬಲ ಹಾಗೂ ಬಲಹೀನತೆಯ ಅರಿವು ಬಂತು. ಬಲಶಾಲಿ ನಾನೇ ಏಕೆ ಹೆಚ್ಚು ಶ್ರಮವಹಿಸಬೇಕು? ನಮ್ಮಿಂದ ತಾನೆ ಈ ಪುಟ್ಟ ಹಕ್ಕಿಗಳು ಜೀವದಾನ ಪಡೆಯುವವು ಎಂಬ ಅಹಂಕಾರದಿಂದ ಬಾಯಿಗೆ ಬಂದಂತೆ ಮಾತನಾಡತೊಡಗಿದವು. ಇವುಗಳ ಕಿರಿಕಿರಿ ತಡೆಯಲಾರದೆ ಉಳಿದವು ಕೊಸರಾಡತೊಡಗಿದವು. ಸಮತೋಲನ ತಪ್ಪಿತು. ಜಗಳದಲ್ಲಿಯೇ ಇದ್ದ ಶಕ್ತಿಯೂ ಸೋರಿ ಹೋಗತೊಡಗಿತು. ಬಲೆ ಸಮೇತ ನೆಲಕ್ಕೆ ಬಿದ್ದವು.! ಅಲ್ಲಿ ಸಮಯಕ್ಕೆ ಸರಿಯಾಗಿ ತಲುಪಿದ ಬೇಡ ಇವುಗಳನ್ನು ಹೊತ್ತು ನಡೆದ. ಇದು ಕಥೆಯ ಸಹಜ ಮುಕ್ತಾಯವಾಯಿತು.
ಇದು ಬೇಡ ಮತ್ತು ಹಕ್ಕಿಗಳ ಕಥೆ. ಹಾಗೆನಿಸುತ್ತಿದೆಯೇ?

ನಮ್ಮ ಕಥೆಯೂ ಅಂದರೆ, ಭಾರತೀಯನ ಕಥೆಯೂ ಅನಿಸುವುದಿಲ್ಲವೇ?


Image have all standard licence belongs to Concerned person. Copying is purely offensive.
ಭಾರತವೆಂಬ ಭೂಮಿಯಲ್ಲಿ ಬಾರಿಬಾರಿಗೂ ಬೇಡರು ಬಂದರು.ಕಾಳು ಚೆಲ್ಲದೇ, ಶ್ರಮ ಪಡದೆಯೇ ಬಹಳಷ್ಟು ಸಲ ವಿಜಯ ಸಾಧಿಸಿದರು. ಚರಿತ್ರೆಯಿಂದ ಪಾಠ ಕಲಿಯದ ಭಾರತೀಯ ಮತ್ತೆ ಮತ್ತೆ ಬಲೆಯಲ್ಲಿ ಸೆರೆಯಾದ.



ಮೊಘಲ, ಪೋರ್ಚುಗೀಸ್,ಇಂಗ್ಲೀಷ್ ಎಂಬ ಹೆಸರುಗಳಿಂದ ಈ ಬೇಡರು ನಾನಾ ರೀತಿಯ ಹುನ್ನಾರ ನಡೆಸಿದರು. ಭಾರತದ ನೆಲದ ಮೇಲೆ ವಿದೇಶಿ ಬಾವುಟಗಳು ಹಾರಿದವು.

ಕೆಲವೇ ಕೆಲವು ಕಾಳುಗಳಾಸೆಗೆ ನಮ್ಮವರೇ ನಮ್ಮ ಭೂಮಿಯ ತುಣುಕುಗಳನ್ನು ಮಾರಾಟ ಮಾಡಿದರು. ಬಂದವರು ಸರ್ವ ರೀತಿಯಿಂದ ಧನ, ಮನಗಳನ್ನು ದೋಚಿದರು.

ಸಂಪತ್ತು ಸೂರೆಯಾಯಿತು. ಸಾಮ, ದಾನ, ಭೇದ, ದಂಡಗಳಿಂದ ಭಾರತೀಯರನ್ನು ಮಣಿಸಲಾಯಿತು. ಇಲ್ಲಿಲ್ಲದಂತೆ ಮತಾಂತರ ನಡೆಯಿತು. ಧರ್ಮ ಅರ್ಥ ಕಳೆದುಕೊಂಡಿತ್ತು.ಮತವಾಗಿತ್ತು.

ಇಷ್ಟರಲ್ಲಿ ಭಾರತೀಯರಲ್ಲಿ ಆತ್ಮಸ್ಥೈರ್ಯ ದುರ್ಬಲವಾಗಿ ಹೋಗಿತ್ತು. ಅವರಿಗೆ ನಮ್ಮ ಪರಂಪರಾನುಗತ ನಂಬಿಕೆಯ ಮೇಲೆ ಸಂದೇಹವುಂಟಾಗಿತ್ತು. ಸುಲಭವಾಗಿ ಬಲೆಗೆ ಬಿದ್ದ.

ಮತ್ತೆ ಕೆಲವರಲ್ಲಿ ಅಸಹನೆ ಇದ್ದರೂ ಬದುಕಲಿಕ್ಕಾಗಿ ಅವರು ಬಾಯಿ ಮುಚ್ಚಿಕೊಂಡಿದ್ದರು. ಆದರೆ, ಇದು ಬಹಳ ಕಾಲ ನಡೆಯಲಿಲ್ಲ. ಸ್ವಭಾವತಃ ಸ್ವತಂತ್ರ ಮನೋಭಾವ ಮೇಲೆದ್ದು ಬಂತು. ಸ್ವಾತಂತ್ರ್ಯದ ರಣಕಹಳೆ (೧೮೫೭ ರ್ ಹೊತ್ತಿಗೆ 'ಸಿಪಾಯಿ ದಂಗೆ') ಮೊಳಗಿತು. ಸಾವಿರಾರು ಮಂದಿ ಸಂತೋಷದಿಂದ ಬಲಿದಾನ ಮಾಡಿದರು. ಹತ್ತಾರು ನಾಯಕರು ಇವರನ್ನು ಮುನ್ನೆಡಿಸಿದರು.



ಸರಿಸುಮಾರು ನೂರು ವರ್ಷಗಳ ಸಂಘರ್ಷದ ಅನಂತರ ಭಾರತ ಸ್ವತಂತ್ರ್ಯವಾಯಿತು ಅಥವಾ ಹಾಗೆಂದಿತು ಜಗತ್ತು. ಬ್ರೀಟಿಷರು ಭಾರತದ ಆಡಳಿತದಿಂದ ಹೊರನಡೆದರು ಅಷ್ಟೇ. ಅಲ್ಲಿಯವರೆಗೆ ಬದುಕಿನ ಗುರಿಯಾಗಿದ್ದ 'ಸ್ವಾತಂತ್ರ್ಯ' ಮಂತ್ರ ಲಕ್ಷ್ಯ ಕಳೆದುಕೊಂಡಿತ್ತು.



ಯಾವುದೂ ಬದಲಾಗಲಿಲ್ಲ. ಆಳುವವ,ಆಳಿಸಿಕೊಳ್ಳುವವ ಎಂಬ ಭಾವ ಬದಲಾಗಲಿಲ್ಲ, ದಮನ ನೀತಿ ಬದಲಾಗಲಿಲ್ಲ. ಅಡಗಿ ಹೋಗಿದ್ದ ಸಾಮಾನ್ಯನ ದ್ವನಿ ಹೊರಬರಲಿಲ್ಲ. ನಮ್ಮ ಹಕ್ಕುಗಳಿಗಾಗಿಯಾದರೂ ಧ್ವನಿ ಎತ್ತಬೇಕಿತ್ತಲ್ಲ!?



ಬದಲಾಗಿ ಭ್ರಷ್ಟ ವ್ಯವಸ್ಥೆಯೊಂದು ಹುಟ್ಟಿಕೊಂಡಿತು. ಅಧಿಕಾರದ ಗದ್ದುಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಗೊತ್ತಾದದ್ದೇ ತಡ, ಪ್ರತಿಯೊಬ್ಬರೂ ಕುರ್ಚಿಗಾಗಿ ಬಡಿದಾಡತೊಡಗಿದರು. ಪಕ್ಷಗಳು ಹುಟ್ಟಿಕೊಂಡವು. ಇವುಗಳ ಕೈ ಬಲಪಡಿಸಲು ಪಕ್ಷಾಂತರ ಹುಟ್ಟಿಕೊಂಡಿತು.

ಇಲ್ಲಿಯೂ ಬೇಡರ ಹಾವಳಿ. ಕಾಳು ಚೆಲ್ಲಿ, ಹಕ್ಕಿ ಹಿಡಿಯುವ ಹುನ್ನಾರ! ಅತ್ತಿತ್ತ ಓಡಾಡಿ ಹತ್ತು ಜನ್ಮಗಳಿಗೆ ಸಾಕಾಗುವಷ್ಟು ಸಂಪಾದಿಸುವ ಹೊಸ ದಂಧೆ ಹುಟ್ಟಿತು!.


ಭ್ರಷ್ಟಾಚಾರದ ಸ್ವಾರ್ಥದ ಹೊಸ ಬಂಧನದಲ್ಲಿ ಭಾರತೀಯ ಮತ್ತೆ ಸೆರೆಯಾದ! ಇಷ್ಟಾದರೂ ಭಾರತ ಆಧುನಿಕ ಪಥದಲ್ಲಿ ಭರದಿಂದ ಮುಂದುವರಿಯುತಿತ್ತು. ಒಂದು ದಿನ ಜಗತ್ತಿನ ಅತ್ಯಂತ ಬಲಶಾಲಿ ದೇಶವಾಗುವ 'ಭಯ'ವಿತ್ತು.

ಪ್ರಭಾವಶಾಲಿ ರಾಷ್ಟ್ರಗಳಿಗದು ಸಮ್ಮತವಾಗಿರಲಿಲ್ಲ. ಇದನ್ನು ನಿಯಂತ್ರಿಸಲು ಯಾ ದಮನಿಸಲು ವ್ಯವಸ್ಥಿತ ಯೋಜನೆಗಳು ರೂಪುಗೊಂಡವು. 'ಭಯೋತ್ಪಾದನೆ' ಎಂಬ ಭಸ್ಮಾಸುರ ಹುಟ್ಟಿಕೊಂಡ.

ಇವನನ್ನು ಜತನದಿಂದ ಬೆಳೆಸಲಾಯಿತು. ಭಾರತದ ನೆಲದಲ್ಲಿ ಛೂ ಬಿಡಲಾಯಿತು. ಸಣ್ಣ ಪುಟ್ಟ ದಾಂಧಲೆಗಳನ್ನು ಸಹನೆಯಿಂದ ಕಂಡರು ನಮ್ಮ 'ನಾಯಕರು' ಏಕೆಂದರೆ ಇವರೆಲ್ಲ ಅದಾಗಲೇ ಓಟಿನ ಮೂಟೆಗಳಾಗಿದ್ದರು ನೋಡಿ. ಇದಕ್ಕಾಗಿ ಧ್ವನಿ ಎತ್ತಲೂ ಹೆದರಿಕೆ ಇವರಿಗೆ.


ನಮ್ಮ 'ಪ್ರಜಾಪ್ರಭುತ್ವ'ದ ನೀತಿ ಇದಕ್ಕೊಪ್ಪುವುದಿಲ್ಲವಲ್ಲ! ಕಾನೂನುಗಳು ಬೇರೆ ಬೇರಯಾದವು. ಭಾರತದ ಸಂವಿಧಾನ ಹೇಳುವಂತೆ, ನಮ್ಮದು 'ಧರ್ಮನಿರಪೇಕ್ಷ' ದೇಶ. ಸಕಲ ಧರ್ಮಗಳು ಈ ದೃಷ್ಟಿಯಲ್ಲಿ ಸಮಾನ. ಹಾಗಿರುವಾಗ ಸಮಾನ ಕಾನೂನುಗಳೇಕಿಲ್ಲ? ಭೇದ ನೀತಿ ಏಕೆ?


ಇಲ್ಲಿಯೂ ಗೊಂದಲವಿದೆ. ಧರ್ಮದ ಅರ್ಥ ಬೇರೆ, ಮತ ಜಾತಿಗಳ ಅರ್ಥ ಬೇರೆ. ಧರ್ಮಕ್ಕೆ ಸಮಾನ ಶಬ್ದವಿಲ್ಲ. ಧರ್ಮ ಒಂದು ಆಧ್ಯಾತಿಕ ಶಿಸ್ತು. ಅದನ್ನು ಪ್ರಾಚೀನರು ವ್ಯವಸ್ಥಿತವಾಗಿ , ಸಮಾಜದಲ್ಲಿನ ಸಹಬಾಳ್ವೆ, ಶಾಂತಿಗಾಗಿ ರೂಪಿಸಿದರು. ತನ್ಮೂಲಕ ವೈಯಕ್ತಿಕ, ಸಾಮಾಜಿಕ ಪ್ರಗತಿ ಸಾಧ್ಯ ಎಂದು ಕಂಡು ಕೊಂಡರು. ವೈಯಕ್ತಿಕವಾಗಿ ಯಾವ ಜಾತಿ, ಕೋಮು ಮತದವರಾಗಿದ್ದರೂ ಧರ್ಮದ ನೀತಿ ಸಂಹಿತೆ ಸಮಾನ.


'ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಭಾಗ್ಬವೇತ್' ಇದು ಧರ್ಮ.



ರಾಜಕಾರಣಿಗಳು ಭಯೋತ್ಪಾದನೆ ತಡೆಗಟ್ಟಲು ತೆಗೆದುಕೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಬಂದಿರುವವೇ? ಬರುವವೇ? ಗೊತ್ತಿಲ್ಲ!. ಮತ್ತೊಮ್ಮೆ ಭಯೋತ್ಪಾದಕರು ದಾಳಿ ನಡೆಸುವರೇ? ಹಿಂದೆಯೂ ಇದೇ ಪರಿಸ್ತಿತಿಗಳು ಬಂದಿದ್ದವು. ನಾವು ಕ್ಷಣಕಾಲ ನೊಂದು, ಗಲಾಟೆ ಮಾಡಿ ಮರೆತೆವು. ಚರಿತ್ರೆ ಮರುಕಳಿಸಿತು.ಮರುಕಳಿಸುತ್ತದೆ. ಮತ್ತೊಮ್ಮೆ ಮತ್ತೊಮ್ಮೆ ಗಾಯವಾಗುತ್ತದೆ. ರಕ್ತ ಸುರಿಯುತ್ತದೆ.ಮಾಯುತ್ತದೆ. ಕಲೆ ಉಳಿಯುತ್ತದೆ! ತಾಯಿ ಭಾರತಿ, ಭಾರತೀಯ ಸಾಮಾನ್ಯನ ದೇಹ,ಮನಸ್ಸು ಪೂರ್ತಿ ಕಲೆಗಳಿಂದ ತುಂಬಿ ಹೋಗುತ್ತದೆ.


ಎಲ್ಲಿಯವರೆಗೆ? ನಮ್ಮ ಉಳಿವಿಗಾಗಿ ನಾವು ಒಂದಾಗಿ ಎದ್ದು ನಿಲ್ಲುವವರೆಗೆ. ಹಕ್ಕು ಸಣ್ಣದಿರಲಿ, ದೊಡ್ಡದಿರಲಿ, ಗಾತ್ರ ರೂಪಗಳಲ್ಲಿ ಭಿನ್ನತೆ ಇದ್ದರೂ ನಾವು ಒಂದೇ ಎಂಬ ಭಾವ ಬಲಿಯುವವರೆಗೆ!

ಆಮಿಷಗಳೇನೆ ಇರಲಿ 'ಮೊದಲು ದೇಶ ಮತ್ತೆ ನಾನು' ಎನ್ನುವ ದೃಢತೆ ಮನೆಮಾಡುವವರೆಗೆ! ಎಲ್ಲಿ ಮನಕಳುಕಿರದೋ ಎಲ್ಲಿ ಈ ಅರಿವಿನ ಬೆಳಕಿನಿಂದ ಮನೆ ಬೆಳಗುತ್ತಿರುತ್ತದೋ ಅಲ್ಲಿ ಬಲೆ, ಕಾಳು, ಬೇಡ ಯಾವುದರ ಭಯವೂ ಇರಲಾರದು.


kartavyaa.blogspot.in
Image have all standard licence belongs to Concerned person. Copying is purely offensive.





Thursday 10 August 2017

ಬದುಕಿನ ಸಾರ

ವೃದ್ಧ ಮುಲ್ಲಾ ನಾಸಿರುದ್ದೀನನನ್ನು ನಿದ್ರಾಹೀನತೆ ಕಾಡುತಿತ್ತು. ದಿನಗಟ್ಟಲೇ ನಿದ್ರೆ ಬಾರದೆ ನಲುಗುತ್ತಿದ್ದವನಿಗೆ ನಿದ್ರೆ ಬರಿಸಲು ಹಲವು ಪ್ರಯತ್ನಗಳಾದವು.

ಬಿಸಿನೀರಿನ ಸ್ನಾನ, ಅಂಗಮರ್ದನ, ತಲೆಗೆ ನಿದ್ರೆ ಬರುವ ಎಣ್ಣೆ ತಿಕ್ಕುವುದು ಎಲ್ಲವೂ ಮುಗಿಯಿತು. ನಿದ್ರೆ ಮಾತ್ರ ದೂರವೇ ಉಳಿಯಿತು.

ಕಡೆಗ್ಯಾರೋ ಸಮ್ಮೋಹಿನಿಯನ್ನು ಪ್ರಯೋಗಿಸುವಂತೆ ಸೂಚಿಸಿದರು.

ಸರಿ, ಹಿಪ್ನಾಟಿಸ್ಟನನ್ನು ಕರೆಸಲಾಯಿತು.

ಅರ್ಧ ಕತ್ತಲಾಗಿದ್ದ ಕೋಣೆತ ಆರಾಮಾಸನದ ಮೇಲೆ ಕುಳಿತ ಮುಲ್ಲಾನನ್ನು ಕಂಡು ವೈದ್ಯ, "ನೀವು ಆರಾಮಾಗಿ ಒರಿಗಿಕೊಂಡಿರಿ. ಮಾಡಬೇಕಾದುದನ್ನೆಲ್ಲಾ ನಾನು ಮಾಡುತ್ತೇನೆ. ನೀವೇನೂ ಚಿಂತೆ ತೆಗೆದುಕೊಳ್ಳದಿರಿ" ಎಂದ.

ಸರಿ, ಒರಿಗಿಕೊಂಡು ಕೈಕಾಲು ಸಡಿಲ ಬಿಟ್ಟ ಮುಲ್ಲಾ.
ವೈದ್ಯ ಪಾಕೆಟ್ ವಾಚಿಗೆ ನೂಲು ಕಟ್ಟಿ, ಮುಲ್ಲಾನ ಮುಖದ ಮುಂದೆ ಒಲಾಡಿಸತೊಡಗಿದ.

ಅದು ಅತ್ತಿಂದಐತ್ತ ಓಲಾಡುತ್ತಿರುವಂತೆ, "ನೋಡಿ, ನೀವೀಗ ಸಂಪೂರ್ಣವಾಗಿ ರಿಲ್ಯಾಕ್ಸ್ ಆಗಿರುವಿರಿ. ಮೈ ಮನಸ್ಸುಗಳೆರದಡೂ ಸಂಪೂರ್ಣ ಸಡಿಲವಾಗಿವೆ. ಈಗ ನೋಡಿ, ನಿಮಗೆ ನಿದ್ರೆ ಬರತೊಡಗಿದೆ. ಕಣ್ಣ ರೆಪ್ಪೆಗಳು ಭಾರವಾಗಿ ಮುಚ್ಚಿಕೊಳ್ಳತೊಡಗಿವೆ. ನಿಧಾನವಾಗಿ ನಿದ್ರೆಗಿಳಿಯುತ್ತಿರುವಿರಿ" ಎನ್ನತೊಡಗಿದ.

ಆಶ್ಚರ್ಯವೆಂಬಂತೆ ಮುಲ್ಲಾರ ಕಣ್ಣಿವೆಗಳು ಮುಚ್ಚಿಕೊಳ್ಳತೊಡಗಿದವು.
ಮೈ ಸಡಿಲು ಬಿದ್ದು, ತಲೆ ಒಂದು ಕಡೆ ವಾಲಿತು. ವಿಜಯದ ನಗೆ ಬೀರುತ್ತಾ ವೈದ್ಯ ಅಲ್ಲಿದ್ದವರನ್ನು ಹೊರಗೆ ಕಳಿಸಿದ. ಮುಲ್ಲಾನ ಮೊಮ್ಮಗ ಮಾತ್ರ ಉಳಿದುಕೊಂಡ. ವೈದ್ಯ ಕಳ್ಳ ಬೆಕ್ಕಿನಂತೆ ಹೆಜ್ಜೆ ಹಾಕುತ್ತಾ ಹೊರನಡೆಯುತ್ತಿರುವಂತೆ, ಮುಲ್ಲಾನ ಬಲಗಣ್ಣು ಕೊಂಚವೇ ತೆರೆದುಕೊಂಡಿತು. "ಹೋದನೇನು ಆ ಹುಚ್ಚ? ನಿದ್ರೆ ಮಾಡಿಸುತ್ತಾನಂತೆ. ಇಷ್ಟು ಹೊತ್ತು ವಟವಟ ಎನ್ನುತ್ತಲೇ ಇದ್ದ. ವಟವಟ ಕೇಳುತ್ತಾ, ವಟವಟದ ಮೇಲೆ ಧ್ಯಾನವಿರುಸುತ್ತಾ ನಿದ್ರೆ ಮಾಡೆಂದರೆ ಹೇಗೆ? ನಿದ್ರೆ ಎಂದರೇನು ಎಂದೇ ತಿಳಿಯದವ ನಿದ್ರಾ ವೈದ್ಯನಂತೆ!" ಎಂದ ಪಿಸುದನಿಯಲ್ಲಿ.


ಈ ಕೆಲವೇ ಮಾತುಗಳಲ್ಲಿ ಬದುಕಿನ ಸಾರ ಪೂರ್ತಿ ಇದೆ.


My Kartavyaa
Image have all standard licence belongs to Concerned person. Copying is purely offensive.


ಬದುಕನ್ನು ಕಟ್ಟುವ ಕಟ್ಟಿಸುವ ಧಾವಂತದಲ್ಲಿ ಬದುಕನ್ನು ಕಳೆದುಕೊಳ್ಳುತ್ತಿರುವವರು ನಾವು.
ಮಗು ಹುಟ್ಟಿದ ಕ್ಷಣದಿಂದ ಅದರ 'ವಿದ್ಯಾಭ್ಯಾಸ'ವೆಂಬ ಭ್ರಮೆಯ ವಿಷವರ್ತುಲದಲ್ಲಿ ಸಿಕ್ಕಿ ಬಿಳುತ್ತೇವೆ.
ಈ ಗಲಾಟೆಯಲ್ಲಿ ಅದರ ಸಹಜ ಪ್ರವೃತ್ತಿಗಳನ್ನು ಕೊಲ್ಲುತ್ತಾ, ಅದನ್ನು ಬಲವಂತದ ಬೆಳವಣಿಗೆಗೆ ಹಚ್ಚುತ್ತೇವೆ.
ಅದನ್ನು ಸಹಜ, ಸುಂದರ ಬಾಲ್ಯದಿಂದ ವಂಚಿತಗೊಳಿಸುತ್ತಾ, ಅದರಿಂದ ನಮಗೆ ಸಿಗಬಹುದಾದ, ಸುಖವನ್ನೂ ಕಳೆದುಕೊಳ್ಳುತ್ತೇವೆ.

ಇದೇ ಮುಂದುವರೆಯುತ್ತದೆ. ನಾವೇ ಸೃಷ್ಟಿಸಿಕೊಂಡ ಸುಖದ ಮರೀಚಿಕೆಯ ಹಿಂದೆ ಬಿದ್ದು, ಕೈಯಲ್ಲಿರುವ ಸುಖ ಅನುಭವಿಸುವುದನ್ನು ಕಳೆದುಕೊಳ್ಳುತ್ತೇವೆ.


Monday 12 June 2017

‘ಅವಳಿ’ಗೆ ನಮನ

ರಾಮಾಯಣ, ಮಹಾಭಾರತದ ಕಥೆಗಳು ಭಾರತೀಯರ ಬದುಕಿನ ಒಂದು ಅಂಗ.

ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಿಟ್ಟದ್ದರೂ ಅವುಗಳಲ್ಲಿನ ಮೌಲ್ಯಗಳನ್ನು ಇಂದೂ ಬದುಕಿಗೆ ಅಳವಡಿಸಿಕೊಳ್ಳಬಹುದು ಎಂಬ ಮಾತಿದೆ.

ಹೌದೇನು? ಯಾವ ಮೌಲ್ಯಗಳನ್ನು?

ರಾಮಾಯಣವನ್ನು, ಅದರಲ್ಲಿನ ಕೆಲವು ಪಾತ್ರಗಳನ್ನು ವಿಶ್ಲೇಷಿಸೋಣ.

ರಾಮ ಸೀತೆಯ ಕೈಹಿಡಿದ. ಕೋಮಲೆ, ರಾಜಕುಮಾರ ಪತಿಯನ್ನೆ ಪರದೈವ ಎಂದು ನಂಬಿದ ಸೀತೆ ಪತಿಗೃಹಕ್ಕೆ ಬಂದಳು.

ರಾಮಚಂದ್ರ ಪಟ್ಟಾಭಿಷೇಕಕ್ಕೆ ತಯಾರಿಯಾಗುತ್ತಿರುವಂತೆ, ಕೈಕೆಯಿ ತನ್ನ ಮಗ ಭರತನಿಗೆ ಪಟ್ಟ ಕಟ್ಟುವ ಹಾಗೂ ಶ್ರೀರಾಮನನ್ನು ವನವಾಸಕ್ಕಟ್ಟುವ ಬೇಡಿಕೆ ಮುಂದಿಟ್ಟಳು.


ಅದೂ ದಶರಥ ಹಿಂದೆಂದೋ ಕೊಟ್ಟ ವಚನಕ್ಕೆ ಅನುಸಾರವಾಗಿಯೇ ಎಂಬುದನ್ನು ಮರೆಯಲಾಗದು. ಪಿತೃವಚನಕ್ಕೆ ಬಧ್ಹನಾದ ರಾಮ ಕಾಡಿಗೆ ಹೊರಟ.


ಸೀತೆ ಹಿಂದೆ ಉಳಿದು, ಅರಮನೆಯಲ್ಲಿ ಸುಖವಾಗಿರಬಹುದಿತ್ತು. ಆದರೆ, ಅವಳೂ ಪತಿಯ ಸುಃಖ ದುಃಖಗಳಲ್ಲಿ ಸಮಭಾಗಿತ್ವದ ಕರ್ತವ್ಯ ಪಾಲನೆಗಾಗಿ ರಾಮನ ಹಿಂದೆ ನಡೆದಳು.


ಅಲ್ಲಿ ಏನೇನು ಕಷ್ಟಗಳನ್ನು ಅನುಭವಿಸಿದಳೋ, ನೀರಿಗಾಗಿ, ಹಸಿವಿನಿಂದ ಬಳಲಿದಳೋ ದಾಖಲೆಗಳಿಲ್ಲ. ಮುಂದೆ ಸೀತಾಪಹರಣವಾಯಿತು.ರಾವಣ ಕ್ರೂರ, ಭೀಬತ್ಸರೂಪಿ ರಾಕ್ಷಸಿಯರ ಕಾವಲಿನಲ್ಲಿ ಅವಳನು ವನವೊಂದರಲ್ಲಿ ಸೆರೆ ಇಟ್ಟ.


ಮರವೊಂದರ ಕೆಳಗೆ ಸದಾ ಭೀತಿಯ ಛತ್ರದಡಿ, ರಾವಣನ ಕ್ರೂರ ಅಸಾಧು ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಸೀತೆ ದಿನ ಕಳೆದಳು.

ಮುಂದೆ ರಾಮ, ರಾವಣರ ಯುದ್ಧ ನಡೆದು, ಸೀತಾ ತಾಯಿಗೆ ಬಿಡುಗಡೆ ದೊರಕಿತು. ಸಾಮ್ರಾಜ್ಞಿಯಾದಳು.

ಇಲ್ಲಿಗೂ ಅವಳ ದುರ್ದಶೆ ಕೊನೆಯಾಗಲಿಲ್ಲ. ಯಾರೋ ಒಬ್ಬ ಅನಾಮಿಕನ ಮಾತಿಗೆ ಬೆಲೆಕೊಟ್ಟು ಶ್ರೀರಾಮಚಂದ್ರ ಗರ್ಭೀಣಿ ಸೀತೆಯನ್ನು ತ್ಯಾಗ ಮಾಡಿದ.

ಅಲ್ಲಿಂದಲೇ ಮುಂದೆ ಸೀತೆ ಭೂ ತಾಯಿಯಲ್ಲಿ ಒಂದಾದಳು. ಇಷ್ಟು ಕಥೆ.


ಒಂದು ಚಿಂತನಾರ್ಹ ವಿಷಯ ಇಲ್ಲಿದೆ. ಸೀತೆಯಂತೆ ಶ್ರೀರಾಮಚಂದ್ರನು ಹಲವು ವರ್ಷಗಳ ಕಾಲ ಏಕಾಂಗಿಯಾಗಿದ್ದ. ಪತ್ನಿ ವಿಯೋಗ,ವಿರಹದಿಂದ ನೊಂದಿದ್ದ ಅವನ ಶೀಲವನ್ನು ಯಾರೂ ಶಂಕಿಸಲಿಲ್ಲ.
ಏಕೆ?

ತನ್ನನ್ನು ಅಕಾರಣ ತ್ಯಜಿಸಿದಾಗಲೂ, ಸೀತೆ ಪ್ರತಿಭಟಿಸಲಿಲ್ಲ. ತನ್ನ ಪತಿಯ ನಿರ್ಧಾರವೇ ಸಾಧುವಾದುದೆಂದು ಸಾಧಿಸಿದಳು. ಅವಳು ಎಂದೂ ಪತಿಯ ಪತ್ನಿನಿಷ್ಠೆಯನ್ನು ಶಂಕಿಸಲಿಲ್ಲವಲ್ಲ!


ಹಾಗಾದರೆ ಶೀಲ, ನಿಷ್ಠೆಗಳು ಸ್ತ್ರೀಗೆ ಮಾತ್ರ ಅನ್ವಯಿಸುತ್ತವೆಯೇ?ಮಹಾಭಾರತದ ದ್ರೌಪದಿಯನ್ನು ಐವರು ವಿವಾಹವಾದರು. ಅದೂ ಅವರ ತಾಯಿಯ ಅಣಿಯಂತೆ. ಮಾತೃವಾಕ್ಯ ಪರಿಪಾಲನೆ ಮಾಡಿದ ವೀರಾಧಿವೀರ ಪಾಂಡವರು ದ್ರೌಪದಿಯ ಒಪ್ಪಿಗೆ ಕೇಳಲಿಲ್ಲ!


ಅವಳ ಬೇಕು ಬೇಡಗಳನ್ನು ಅರಿಯಲಿಲ್ಲ. ಮುಂದೆ ಧರ್ಮರಾಯ, ಧರ್ಮದ ಸಾಕಾರಮೂರ್ತಿ ತನ್ನ ತಮ್ಮಂದಿರೊಂದಿಗೆ ಪತ್ನಿಯನ್ನು ದ್ಯೂತಕ್ಕೆ ಪಣವಾಗಿ ಬಳಸಿಕೊಂಡ.

ಅವಳನ್ನು ಒಂದು ವಸ್ತುವನ್ನಾಗಿ ಪರಿಗಣಿಸಿದ.ಗೆಲ್ಲುವ ಸಾಧ್ಯತೆಯೇ ಇರಲಿಲ್ಲ. ಸೋತ.

ಅವಳ ಮುಡಿ ಹಿಡಿದು ತುಂಬಿದ ಸಭೆಗೆ ಎಳೆದು ತರಲಾಯಿತು. ರಜಸ್ವಲೆಯಾಗಿದ್ದ. ಏಕವಸ್ತ್ರಧಾರಿಣಿಯನ್ನು ತೊಡೆ ತಟ್ಟಿ 'ಬಾ ನನ್ನ ತೊಡೆ ಏರು' ಎಂದು ಕರೆದ ದುರ್ಯೋಧನ.


ವಯೋವೃದ್ಧರು, ಜ್ಞಾನವೃದ್ಧರು ಇದ್ದ ತುಂಬಿದ ಸಭೆಯಲ್ಲಿ ಒಬ್ಬರೂ ಈ ಅನ್ಯಾಯದ ವಿರುದ್ಧ ಚಕಾರವೆತ್ತಲಿಲ್ಲ. ವಿವಸ್ತ್ರಳನ್ನಾಗಿ ಮಾಡಲು ಅವಳ ಸೀರೆ ಸೆಳೆದ ದುಶ್ಯಾಸನ.

ಗಂಡ ಸತ್ತಾಗ ಹೆಂಡತಿಯನ್ನೂ ಅವನ ಚಿತೆಯ ಮೇಲಿಟ್ಟು ಜೀವಂತವಾಗಿ ಸುಟ್ಟು ಹಾಕಿದ ಸಂಸ್ಕೃತಿ ನಮ್ಮದು.

ಅವಳ ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿ, ಚಾಪೆಯ ಮೇಲೆ ಮಲಗಿಸಿ, ಒಂದೇ ಹೊತ್ತು ಊಟ ಹಾಕಿ, ಶುಭ ಸಮಾರಂಭಗಳಿಂದ ಹೊರಹಾಕುತ್ತಿದ್ದರು.


Image have all standard licence belongs to Concerned person. Copying is purely offensive.


ಆದರೆ, ಒಬ್ಬನೇ ಒಬ್ಬ ಗಂಡೂ 'ಪತಿ'ಯಾಗಿ ಹೆಂಡತಿಯ ಚಿತೆಯಲ್ಲಿ ಸಹಗಮನ ಮಾಡಿದ ದಾಖಲೆ ಇಲ್ಲ.

ಪತ್ನಿಯ ನೆನಪಿನಲ್ಲಿ ಸುಖಭೋಗಗಳನ್ನು ತ್ಯಾಗಮಾಡಿದವನೇ ಇಲ್ಲ! ಹೆಣ್ಣನ್ನು ಬಲತ್ಕಾರದಿಂದ ಒಂದು ಛಾಯೆಯನ್ನಾಗಿ ಮಾಡಲಾಯಿತು.

ಅವಳು ಪತಿಯೆಂಬ ರೂಪವನ್ನು ಬದುಕಿನ ಗುರಿಯಾಗಿ, ಸರ್ವಸ್ವವಾಗಿ ಒಪ್ಪಿಕೊಳ್ಳುವಂತೆ ಮಾಡಲಾಯಿತು. ಇಂದೂ ಇದು ಬದಲಾಗಲಿಲ್ಲ.

ಹೆಣ್ಣು ಸರ್ವ ರಂಗಗಳಲ್ಲಿಯೂ ಕಾಲಿಟ್ಟಿದ್ದಾಳೆ.

ಗಂಡಿನಂತೆ ಕೂದಲು ಕತ್ತರಿಸಿಕೊಂಡು, ಜೀನ್ಸ್ ಶರ್ಟ್ ಧರಿಸುತ್ತಾಳೆ. ಹೊರಗೆ ದುಡಿಯುತ್ತಾಳೆ.

ಆಂತರ್ಯದಲ್ಲಿ ಶತಶತಮಾನಗಳಿಂದ ವಂಶವಾಹಿನಿಗಳಲ್ಲಿ ಅಚ್ಚೊತ್ತಿದ ಗಂಡಿನ ಸರ್ವಶ್ರೇಷ್ಠತೆಯ ರೂಪ, ದಬ್ಬಾಳಿಕೆ, ಶೋಷಣೆಗಳ ಭೀಕರತೆ, ಪುರುಷ ವೇಷಭೂಷಣ, ರೂಪಗಳ ಅನುಕರಣೆಯಾಗಿ ಹೊರಬಿಳುತ್ತಿದೆ.


ಗಂಡಾಗ ಬಯಸುತ್ತಾಳೆ. ಆದರೆ, ಅವಳ ಸಹಜ ಸ್ವಭಾವವು ಬದಲಾಗಿಲ್ಲ. ಪತ್ನಿತ್ವ, ಮಾತೃತ್ವದ ಕೋಮಲ ಭಾವನೆಗಳಿನ್ನೂ ಹಸಿಯಾಗಿವೆ.

ಗೃಹಸ್ವಾಮಿನಿಯಾಗಿ, ಪತ್ನಿಯಾಗಿ, ತಾಯಿಯಾಗಿ ಬದುಕುವ ಅದಮ್ಯ ಸ್ವಭಾವವು ಒಂದು ಕಡೆ, ನೋವುಗಳಿಗೆ ಕಾರಣನಾದ ಪುರುಷನೇ ತಾನಾಗಿ ಅವುಗಳಿಂದ ಬಿಡುಗಡೆ ಹೊಂದದ ಸುಪ್ತ ಕಾಮನೆ ಇನ್ನೊಂದು ಕಡೆ!

ಇಬ್ಬಗೆಯ ಈ ಒತ್ತಡದಲ್ಲಿ ನಲುಗುತ್ತಿದ್ದಾಳೆ ಇಂದಿನ ಸ್ತ್ರೀ! ಪ್ರಪಂಚಾದ್ಯಂತ ದ್ರೌಪದಿಯರೂ, ಸೀತೆಯರೂ ಇನ್ನೂ ಜೀವಂತವಾಗಿದ್ದಾರೆ.

ಎಲ್ಲಿಯೋ ಕೆಲವರು ಮಾತ್ರ ಈ ಚೌಕಟ್ಟಿನಿಂದ ಹೊರಬಂದಿದ್ದಾರೆ ಎಂದುಕೊಂಡಿದ್ದೇವೆ.

ಶತಮಾನಗಳಿಂದ ನೋವುಂಡು, ಇಷ್ಟೇಲ್ಲಾ ಶೋಷಣೆಯಲ್ಲೂ ಮನುಷ್ಯ ಸಂತತಿಯನ್ನು ಉಳಿಸಿ, ಬೆಳೆಸಿದ 'ಅವಳಿ'ಗೆ ನಮನ.

Copyright © 2017-18 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 
 anandajoshi@datamail.in +91-9483998343 ) 

CLICK HERE