ಬೇಡನೊಬ್ಬ ಹಕ್ಕಿಗಳನ್ನು ಹಿಡಿಯಲು ಬಲೆ ಹರಗಿದ. ಮೇಲಿನಿಂದ ಒಂದಷ್ಟು ಕಾಳು ಚೆಲ್ಲಿದ. ಕಾಳಿನಾಸೆಗೆ ಬಂದ ಹಕ್ಕಿಗಳ ಕಾಲುಗಳು ಬಲೆಯಲ್ಲಿ ಸಿಕ್ಕಿಕೊಂಡವು. ಹಸಿವು ಹೇಳಹೆಸರಿಲ್ಲದಂತೆ ಮಾಯವಾಯಿತು. ಪ್ರಾಣಭೀತಿಯಿಂದ ತತ್ತರಿಸುತ್ತಿರುವಂತೆ, ಪಕ್ಷಿಗಳ ರಾಜ ಅಲ್ಲಿಗೆ ಬಂದ. ಇವುಗಳ ದುರವಸ್ಥೆ ಕಂಡ. ಒಂದು ಕ್ಷಣ ಯೋಚಿಸಿ,
"ಪ್ರೀಯ ಗೆಳೆಯರೇ, ನೀವು ಹಿಂದು ಮುಂದು ಯೋಚಿಸದೆ ಕಾಳಿನ ಮೇಲೆರಗಿದ್ದುದು ತಪ್ಪು. ಇಂಥ ನಿರ್ಜನ ಪ್ರದೇಶದಲ್ಲಿ ಜನಸಂಚಾರವೇ ಇಲ್ಲದಕಡೆ ಇಷ್ಟು ಕಾಳು ಬಿದ್ದದ್ದು ಹೇಗೆ ಎಂದು ಆಲೋಚನೆ ಮಾಡಬೇಕಿತ್ತು. ಅದನ್ನು ಮರೆತು ಸೆರೆಯಾಗಿರುವಿರಿ. ಆದುದು ಆಯಿತು. ಈಗ ಸಮಸ್ಯೆಗೆ ಪರಿಹಾರವೇನೆಂದು ಯೋಚಿಸೋಣಾ. ನಿಮ್ಮ ಕಾಲುಗಳು ಬಂಧಿಸಲ್ಪಟ್ಟಿವೆ, ಆದರೆ ರೆಕ್ಕೆಗಳು ಸ್ವತಂತ್ರವಾಗಿವೆ. ಎಲ್ಲರೂ ಒಂದೇ ಬಾರಿಗೆ ಹಾರಿದರೆ ಈ ಬಲೆಯನ್ನೇ ಹೊತ್ತುಕೊಂಡು, ದೂರ ಹಾರಿ ಹೋಗಬಹುದು. ಅದೋ, ಅತ್ತ ಬೇಡ ಬರುತ್ತಿರುವುದು ಕಾಣುತ್ತಿದೆ. ಒಮ್ಮೆಗೇ ಹಾರಿ. ಒಂದು, ಎರಡು, ಮೂರು ಎಂದ ಕೂಡಲೇ ಹಾರಲು ಶುರುಮಾಡಿ." ಎಂದ.
ಸಮರ್ಥ ನಾಯಕನಿದ್ದರೆ ಎಂಥ ಆಪತ್ತಿನಿಂದಲೂ ಪಾರಾಗಬಹುದು ಎನ್ನುತ್ತದೆ ಒಂದು ಪ್ರಾಚೀನೋಕ್ತಿ. ಕಥೆಯ ಮೊದಲ ಭಾಗ ಇಲ್ಲಿಗೆ ಮುಗಿಯುತ್ತದೆ. ಮುಂದೇನಾಯಿತು? ನೋಡೋಣ:
ಹಕ್ಕಿಗಳು ಬಲೆಯನ್ನು ಹೊತ್ತು ಹಿಂದಿನಿಂದ ಹಾರಿ ಬರುತ್ತಿದ್ದರೆ, ಮುಂದೆ ಹಕ್ಕಿಗಳ ನಾಯಕನಿದ್ದ. ಬೇಡ ಇವೆರಡನ್ನೂ ಕಂಡ. ಹಕ್ಕಿಗಳು ಮೇಲೆ ಹಾರುತ್ತಿದ್ದರೆ, ಕೆಳಗಿನಿಂದ ಇವನು ಓಡುತ್ತಾ ಹಿಂಬಾಲಿಸಿದ.ಪಕ್ಷಿಗಳ ನಾಯಕನ ಕಣ್ಣಿಗಿದು ಬಿತ್ತು. ಕೊಂಚ ಕೆಳಗೆ ಬಂದು, "ಅಯ್ಯಾ! ಹಕ್ಕಿಗಳು ನಿನ್ನ ಕೈಗೆ ಸಿಗಲಾರವು. ಆದುದರಿಂದ ಹಿಂಬಾಲಿಸಿ ಆಯಾಸ ಮಾಡಿಕೊಳ್ಳಬೇಡ" ಎಂದಿತು.
ಆಗ ಬೇಡ "ಪಕ್ಷಿಗಳೊಂದಿಗೆ ನನ್ನ ಬಲೆಯೂ ನಷ್ಟವಾಗುತ್ತದೆ. ಕನಿಷ್ಟ ಬಲೆಯಾದರೂ ಸಿಗಬಹುದು ಎಂಬುದು ನಾನು ಹೀಗೆ ಹಿಂಬಾಲಿಸುತ್ತಿರುವುದಕ್ಕೆ ಒಂದು ಕಾರಣ.ಎರಡನೆಯ ಕಾರಣ, ಪಕ್ಷಿಗಳ ಸ್ವಭಾವವು ನನಗೆ ತಿಳಿದಿದೆ. ಇವುಗಳೆಲ್ಲವನ್ನೂ ಪಕ್ಷಿಗಳೇ ಎಂದು ಕರೆಯುತ್ತಾರೆ ನಿಜವೇ.. ಆದರೆ ಇವುಗಳಲ್ಲಿ ಅನೇಕ ಭೇದಗಳಿವೆ. ಕೆಲವು ಸಣ್ಣವು, ಕೆಲವು ದೊಡ್ಡವು, ಕೆಲವು ದೀರ್ಘಕಾಲ ಹಾರಬಲ್ಲವಾದರೆ, ಮತ್ತೆ ಕೆಲವು ಸ್ವಲ್ಪ ದೂರ ಹಾರುವಷ್ಟರಲ್ಲಿಯೇ ದಣಿಯುವವು. ಕೆಲವು ವಲಸೆ ಬಂದವಾಗಿದ್ದರೆ, ಮತ್ತೆ ಕೆಲವು ಮೂಲದಿಂದಲೂ ಇಲ್ಲಿಯೇ ಇರುವವು. ಕೆಲವಕ್ಕೆ ಬಲೆಯ ಭಾರ ಹೊತ್ತು ಹಾರುವ ಶಕ್ತಿಯಿದ್ದರೆ, ಕೆಲವಕ್ಕೆ ಇಲ್ಲ. ಹಾಗಾಗಿ, ಕ್ರಮೇಣ ಈ ಭೇದಗಳಿಂದ ಅವುಗಳಲ್ಲಿ ವೈಮನಸ್ಯ ಬರುವುದರಲ್ಲಿ ಸಂದೇಹವಿಲ್ಲ. ಆ ಘಳಿಗೆಯವರೆಗೂ ಕಾದರೆ, ನನಗೆ ಬಲೆಯೊಂದಿಗೆ ಹಕ್ಕಿಗಳೂ ಸಿಗುತ್ತವೆ. ತಾಳ್ಮೆ ಇದ್ದರಾಯಿತು.!" ಎಂದುತ್ತರಿಸಿದ.
ಹಕ್ಕಿಗಳ ನಾಯಕನಿಗೆ ವಿಸ್ಮಯ ಹಾಗೂ ಖೇದಯಾಯಿತು.
ಛೆ! ಈ ಬೇಡ ನಮ್ಮನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ! ಹೀಗಾಗದಂತೆ ತಡೆಯಬೇಕು' ಎಂದುಕೊಂಡು ಮತ್ತೆ ತನ್ನವರನ್ನು ಸೇರಿಕೊಂಡಿತು. " ಗೆಳೆಯರೇ, ಈಗ ತಾನೆ ಬೇಡ ಹೀಗೆಂದ. ಯಾವ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳಬೇಡಿ. ದೂರಕ್ಕೆ ಹಾರಿ ಹೋಗಿ ಬಲೆಯಿಂದ ಬಿಡುಗಡೆ ಹೊಂದುವ ಹಾದಿ ಕಂಡುಕೊಳ್ಳೋಣ" ಎಂದಿತು.
ಅಲ್ಲಿಯವರೆಗೂ ಕೇವಲ ಸಾವಿನಿಂದ ಪಾರಾಗುವ ಒಂದೇ ಚಿಂತೆಯಲ್ಲಿದ್ದ ಹಕ್ಕಿಗಳಿಗೆ, ತಮ್ಮ ತಮ್ಮ ಬಲ ಹಾಗೂ ಬಲಹೀನತೆಯ ಅರಿವು ಬಂತು. ಬಲಶಾಲಿ ನಾನೇ ಏಕೆ ಹೆಚ್ಚು ಶ್ರಮವಹಿಸಬೇಕು? ನಮ್ಮಿಂದ ತಾನೆ ಈ ಪುಟ್ಟ ಹಕ್ಕಿಗಳು ಜೀವದಾನ ಪಡೆಯುವವು ಎಂಬ ಅಹಂಕಾರದಿಂದ ಬಾಯಿಗೆ ಬಂದಂತೆ ಮಾತನಾಡತೊಡಗಿದವು. ಇವುಗಳ ಕಿರಿಕಿರಿ ತಡೆಯಲಾರದೆ ಉಳಿದವು ಕೊಸರಾಡತೊಡಗಿದವು. ಸಮತೋಲನ ತಪ್ಪಿತು. ಜಗಳದಲ್ಲಿಯೇ ಇದ್ದ ಶಕ್ತಿಯೂ ಸೋರಿ ಹೋಗತೊಡಗಿತು. ಬಲೆ ಸಮೇತ ನೆಲಕ್ಕೆ ಬಿದ್ದವು.! ಅಲ್ಲಿ ಸಮಯಕ್ಕೆ ಸರಿಯಾಗಿ ತಲುಪಿದ ಬೇಡ ಇವುಗಳನ್ನು ಹೊತ್ತು ನಡೆದ. ಇದು ಕಥೆಯ ಸಹಜ ಮುಕ್ತಾಯವಾಯಿತು.
ಇದು ಬೇಡ ಮತ್ತು ಹಕ್ಕಿಗಳ ಕಥೆ. ಹಾಗೆನಿಸುತ್ತಿದೆಯೇ?
ನಮ್ಮ ಕಥೆಯೂ ಅಂದರೆ, ಭಾರತೀಯನ ಕಥೆಯೂ ಅನಿಸುವುದಿಲ್ಲವೇ?
|
ಭಾರತವೆಂಬ ಭೂಮಿಯಲ್ಲಿ ಬಾರಿಬಾರಿಗೂ ಬೇಡರು ಬಂದರು.ಕಾಳು ಚೆಲ್ಲದೇ, ಶ್ರಮ ಪಡದೆಯೇ ಬಹಳಷ್ಟು ಸಲ ವಿಜಯ ಸಾಧಿಸಿದರು. ಚರಿತ್ರೆಯಿಂದ ಪಾಠ ಕಲಿಯದ ಭಾರತೀಯ ಮತ್ತೆ ಮತ್ತೆ ಬಲೆಯಲ್ಲಿ ಸೆರೆಯಾದ.
ಮೊಘಲ, ಪೋರ್ಚುಗೀಸ್,ಇಂಗ್ಲೀಷ್ ಎಂಬ ಹೆಸರುಗಳಿಂದ ಈ ಬೇಡರು ನಾನಾ ರೀತಿಯ ಹುನ್ನಾರ ನಡೆಸಿದರು. ಭಾರತದ ನೆಲದ ಮೇಲೆ ವಿದೇಶಿ ಬಾವುಟಗಳು ಹಾರಿದವು.
ಕೆಲವೇ ಕೆಲವು ಕಾಳುಗಳಾಸೆಗೆ ನಮ್ಮವರೇ ನಮ್ಮ ಭೂಮಿಯ ತುಣುಕುಗಳನ್ನು ಮಾರಾಟ ಮಾಡಿದರು. ಬಂದವರು ಸರ್ವ ರೀತಿಯಿಂದ ಧನ, ಮನಗಳನ್ನು ದೋಚಿದರು.
ಸಂಪತ್ತು ಸೂರೆಯಾಯಿತು. ಸಾಮ, ದಾನ, ಭೇದ, ದಂಡಗಳಿಂದ ಭಾರತೀಯರನ್ನು ಮಣಿಸಲಾಯಿತು. ಇಲ್ಲಿಲ್ಲದಂತೆ ಮತಾಂತರ ನಡೆಯಿತು. ಧರ್ಮ ಅರ್ಥ ಕಳೆದುಕೊಂಡಿತ್ತು.ಮತವಾಗಿತ್ತು.
ಇಷ್ಟರಲ್ಲಿ ಭಾರತೀಯರಲ್ಲಿ ಆತ್ಮಸ್ಥೈರ್ಯ ದುರ್ಬಲವಾಗಿ ಹೋಗಿತ್ತು. ಅವರಿಗೆ ನಮ್ಮ ಪರಂಪರಾನುಗತ ನಂಬಿಕೆಯ ಮೇಲೆ ಸಂದೇಹವುಂಟಾಗಿತ್ತು. ಸುಲಭವಾಗಿ ಬಲೆಗೆ ಬಿದ್ದ.
ಮತ್ತೆ ಕೆಲವರಲ್ಲಿ ಅಸಹನೆ ಇದ್ದರೂ ಬದುಕಲಿಕ್ಕಾಗಿ ಅವರು ಬಾಯಿ ಮುಚ್ಚಿಕೊಂಡಿದ್ದರು. ಆದರೆ, ಇದು ಬಹಳ ಕಾಲ ನಡೆಯಲಿಲ್ಲ. ಸ್ವಭಾವತಃ ಸ್ವತಂತ್ರ ಮನೋಭಾವ ಮೇಲೆದ್ದು ಬಂತು. ಸ್ವಾತಂತ್ರ್ಯದ ರಣಕಹಳೆ (೧೮೫೭ ರ್ ಹೊತ್ತಿಗೆ 'ಸಿಪಾಯಿ ದಂಗೆ') ಮೊಳಗಿತು. ಸಾವಿರಾರು ಮಂದಿ ಸಂತೋಷದಿಂದ ಬಲಿದಾನ ಮಾಡಿದರು. ಹತ್ತಾರು ನಾಯಕರು ಇವರನ್ನು ಮುನ್ನೆಡಿಸಿದರು.
ಸರಿಸುಮಾರು ನೂರು ವರ್ಷಗಳ ಸಂಘರ್ಷದ ಅನಂತರ ಭಾರತ ಸ್ವತಂತ್ರ್ಯವಾಯಿತು ಅಥವಾ ಹಾಗೆಂದಿತು ಜಗತ್ತು. ಬ್ರೀಟಿಷರು ಭಾರತದ ಆಡಳಿತದಿಂದ ಹೊರನಡೆದರು ಅಷ್ಟೇ. ಅಲ್ಲಿಯವರೆಗೆ ಬದುಕಿನ ಗುರಿಯಾಗಿದ್ದ 'ಸ್ವಾತಂತ್ರ್ಯ' ಮಂತ್ರ ಲಕ್ಷ್ಯ ಕಳೆದುಕೊಂಡಿತ್ತು.
ಯಾವುದೂ ಬದಲಾಗಲಿಲ್ಲ. ಆಳುವವ,ಆಳಿಸಿಕೊಳ್ಳುವವ ಎಂಬ ಭಾವ ಬದಲಾಗಲಿಲ್ಲ, ದಮನ ನೀತಿ ಬದಲಾಗಲಿಲ್ಲ. ಅಡಗಿ ಹೋಗಿದ್ದ ಸಾಮಾನ್ಯನ ದ್ವನಿ ಹೊರಬರಲಿಲ್ಲ. ನಮ್ಮ ಹಕ್ಕುಗಳಿಗಾಗಿಯಾದರೂ ಧ್ವನಿ ಎತ್ತಬೇಕಿತ್ತಲ್ಲ!?
ಬದಲಾಗಿ ಭ್ರಷ್ಟ ವ್ಯವಸ್ಥೆಯೊಂದು ಹುಟ್ಟಿಕೊಂಡಿತು. ಅಧಿಕಾರದ ಗದ್ದುಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಗೊತ್ತಾದದ್ದೇ ತಡ, ಪ್ರತಿಯೊಬ್ಬರೂ ಕುರ್ಚಿಗಾಗಿ ಬಡಿದಾಡತೊಡಗಿದರು. ಪಕ್ಷಗಳು ಹುಟ್ಟಿಕೊಂಡವು. ಇವುಗಳ ಕೈ ಬಲಪಡಿಸಲು ಪಕ್ಷಾಂತರ ಹುಟ್ಟಿಕೊಂಡಿತು.
ಇಲ್ಲಿಯೂ ಬೇಡರ ಹಾವಳಿ. ಕಾಳು ಚೆಲ್ಲಿ, ಹಕ್ಕಿ ಹಿಡಿಯುವ ಹುನ್ನಾರ! ಅತ್ತಿತ್ತ ಓಡಾಡಿ ಹತ್ತು ಜನ್ಮಗಳಿಗೆ ಸಾಕಾಗುವಷ್ಟು ಸಂಪಾದಿಸುವ ಹೊಸ ದಂಧೆ ಹುಟ್ಟಿತು!.
ಭ್ರಷ್ಟಾಚಾರದ ಸ್ವಾರ್ಥದ ಹೊಸ ಬಂಧನದಲ್ಲಿ ಭಾರತೀಯ ಮತ್ತೆ ಸೆರೆಯಾದ! ಇಷ್ಟಾದರೂ ಭಾರತ ಆಧುನಿಕ ಪಥದಲ್ಲಿ ಭರದಿಂದ ಮುಂದುವರಿಯುತಿತ್ತು. ಒಂದು ದಿನ ಜಗತ್ತಿನ ಅತ್ಯಂತ ಬಲಶಾಲಿ ದೇಶವಾಗುವ 'ಭಯ'ವಿತ್ತು.
ಪ್ರಭಾವಶಾಲಿ ರಾಷ್ಟ್ರಗಳಿಗದು ಸಮ್ಮತವಾಗಿರಲಿಲ್ಲ. ಇದನ್ನು ನಿಯಂತ್ರಿಸಲು ಯಾ ದಮನಿಸಲು ವ್ಯವಸ್ಥಿತ ಯೋಜನೆಗಳು ರೂಪುಗೊಂಡವು. 'ಭಯೋತ್ಪಾದನೆ' ಎಂಬ ಭಸ್ಮಾಸುರ ಹುಟ್ಟಿಕೊಂಡ.
ಇವನನ್ನು ಜತನದಿಂದ ಬೆಳೆಸಲಾಯಿತು. ಭಾರತದ ನೆಲದಲ್ಲಿ ಛೂ ಬಿಡಲಾಯಿತು. ಸಣ್ಣ ಪುಟ್ಟ ದಾಂಧಲೆಗಳನ್ನು ಸಹನೆಯಿಂದ ಕಂಡರು ನಮ್ಮ 'ನಾಯಕರು' ಏಕೆಂದರೆ ಇವರೆಲ್ಲ ಅದಾಗಲೇ ಓಟಿನ ಮೂಟೆಗಳಾಗಿದ್ದರು ನೋಡಿ. ಇದಕ್ಕಾಗಿ ಧ್ವನಿ ಎತ್ತಲೂ ಹೆದರಿಕೆ ಇವರಿಗೆ.
ನಮ್ಮ 'ಪ್ರಜಾಪ್ರಭುತ್ವ'ದ ನೀತಿ ಇದಕ್ಕೊಪ್ಪುವುದಿಲ್ಲವಲ್ಲ! ಕಾನೂನುಗಳು ಬೇರೆ ಬೇರಯಾದವು. ಭಾರತದ ಸಂವಿಧಾನ ಹೇಳುವಂತೆ, ನಮ್ಮದು 'ಧರ್ಮನಿರಪೇಕ್ಷ' ದೇಶ. ಸಕಲ ಧರ್ಮಗಳು ಈ ದೃಷ್ಟಿಯಲ್ಲಿ ಸಮಾನ. ಹಾಗಿರುವಾಗ ಸಮಾನ ಕಾನೂನುಗಳೇಕಿಲ್ಲ? ಭೇದ ನೀತಿ ಏಕೆ?
ಇಲ್ಲಿಯೂ ಗೊಂದಲವಿದೆ. ಧರ್ಮದ ಅರ್ಥ ಬೇರೆ, ಮತ ಜಾತಿಗಳ ಅರ್ಥ ಬೇರೆ. ಧರ್ಮಕ್ಕೆ ಸಮಾನ ಶಬ್ದವಿಲ್ಲ. ಧರ್ಮ ಒಂದು ಆಧ್ಯಾತಿಕ ಶಿಸ್ತು. ಅದನ್ನು ಪ್ರಾಚೀನರು ವ್ಯವಸ್ಥಿತವಾಗಿ , ಸಮಾಜದಲ್ಲಿನ ಸಹಬಾಳ್ವೆ, ಶಾಂತಿಗಾಗಿ ರೂಪಿಸಿದರು. ತನ್ಮೂಲಕ ವೈಯಕ್ತಿಕ, ಸಾಮಾಜಿಕ ಪ್ರಗತಿ ಸಾಧ್ಯ ಎಂದು ಕಂಡು ಕೊಂಡರು. ವೈಯಕ್ತಿಕವಾಗಿ ಯಾವ ಜಾತಿ, ಕೋಮು ಮತದವರಾಗಿದ್ದರೂ ಧರ್ಮದ ನೀತಿ ಸಂಹಿತೆ ಸಮಾನ.
'ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಭಾಗ್ಬವೇತ್' ಇದು ಧರ್ಮ.
ರಾಜಕಾರಣಿಗಳು ಭಯೋತ್ಪಾದನೆ ತಡೆಗಟ್ಟಲು ತೆಗೆದುಕೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಬಂದಿರುವವೇ? ಬರುವವೇ? ಗೊತ್ತಿಲ್ಲ!. ಮತ್ತೊಮ್ಮೆ ಭಯೋತ್ಪಾದಕರು ದಾಳಿ ನಡೆಸುವರೇ? ಹಿಂದೆಯೂ ಇದೇ ಪರಿಸ್ತಿತಿಗಳು ಬಂದಿದ್ದವು. ನಾವು ಕ್ಷಣಕಾಲ ನೊಂದು, ಗಲಾಟೆ ಮಾಡಿ ಮರೆತೆವು. ಚರಿತ್ರೆ ಮರುಕಳಿಸಿತು.ಮರುಕಳಿಸುತ್ತದೆ. ಮತ್ತೊಮ್ಮೆ ಮತ್ತೊಮ್ಮೆ ಗಾಯವಾಗುತ್ತದೆ. ರಕ್ತ ಸುರಿಯುತ್ತದೆ.ಮಾಯುತ್ತದೆ. ಕಲೆ ಉಳಿಯುತ್ತದೆ! ತಾಯಿ ಭಾರತಿ, ಭಾರತೀಯ ಸಾಮಾನ್ಯನ ದೇಹ,ಮನಸ್ಸು ಪೂರ್ತಿ ಕಲೆಗಳಿಂದ ತುಂಬಿ ಹೋಗುತ್ತದೆ.
ಎಲ್ಲಿಯವರೆಗೆ? ನಮ್ಮ ಉಳಿವಿಗಾಗಿ ನಾವು ಒಂದಾಗಿ ಎದ್ದು ನಿಲ್ಲುವವರೆಗೆ. ಹಕ್ಕು ಸಣ್ಣದಿರಲಿ, ದೊಡ್ಡದಿರಲಿ, ಗಾತ್ರ ರೂಪಗಳಲ್ಲಿ ಭಿನ್ನತೆ ಇದ್ದರೂ ನಾವು ಒಂದೇ ಎಂಬ ಭಾವ ಬಲಿಯುವವರೆಗೆ!
ಆಮಿಷಗಳೇನೆ ಇರಲಿ 'ಮೊದಲು ದೇಶ ಮತ್ತೆ ನಾನು' ಎನ್ನುವ ದೃಢತೆ ಮನೆಮಾಡುವವರೆಗೆ! ಎಲ್ಲಿ ಮನಕಳುಕಿರದೋ ಎಲ್ಲಿ ಈ ಅರಿವಿನ ಬೆಳಕಿನಿಂದ ಮನೆ ಬೆಳಗುತ್ತಿರುತ್ತದೋ ಅಲ್ಲಿ ಬಲೆ, ಕಾಳು, ಬೇಡ ಯಾವುದರ ಭಯವೂ ಇರಲಾರದು.
|
No comments:
Post a Comment