Wednesday, 4 March 2015

ವಿಶ್ವ ರಹಸ್ಯ ತೆರೆದುಕೊಳ್ಳುವ ವಿಸ್ಮಯ.



ರಾಮಾಯಣದ ಒಂದು ಪ್ರಸಂಗ ಇದು. ಸೀತಾಪಹರಣವಾಯಿತು. ಸೀತೆಯನ್ನು 

ಹುಡುಕುತ್ತಾ ಕಾಡುಮೇಡು ಅಲೆಯುತ್ತಿದ್ದ ರಾಮ-ಲಕ್ಷಮ್ರಿಗೆ ಹನುಮಂತನ ಸಖ್ಯ 

ಲಭಿಸಿತು. ಸಮುದ್ರೋಲ್ಲಂಘನ ಮಾಡಿ ಲಂಕೆಯನ್ನು ಪ್ರವೇಶಿಸಿದನಂತೆ 

ಹನುಮಂತ. ಆಗ ಸರಿ ರಾತ್ರಿಯಾಗಿತ್ತು. ಲಂಕೆ ನಿದ್ರೆಯಲ್ಲಿ ಮುಳುಗಿತ್ತು. 

ಸೀತೆಯನ್ನರಸುತ್ತಾ ಹನುಮಂತ ರಾಕ್ಷಸ ರಾಜ ರಾವಣನ ಅಂತಃಪುರಕ್ಕೆ ಕಾಲಿಟ್ಟ. 

ನೂರಾರು ಸುರಸುಂದರಿಯರು ನೄತ್ಯ, ಸಂಗೀತಗಳಿಂದ ಬಳಲಿ ಮದ್ಯಪಾನದಿಂದ 

ಮತ್ತರಾಗಿ, ಮೈಮೇಲಿನ ಪರಿವೆ ಇಲ್ಲದೆ ಅಲ್ಲಲ್ಲಿ ಬಿದ್ದುಕೊಂಡಿದ್ದರು. ಮೈಮೆಲಿನ ವಸ್ತ್ರ ಅಸ್ತವ್ಯಸ್ತವಾಗಿತ್ತು.


ಹನುಮಂತ ಒಬ್ಬೊಬ್ಬರನ್ನೂ ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿ ನೋಡಿದ. ಮತ್ತೆ 

ಇವಳು ಸೀತಾಮಾತೆಯಲ್ಲ, ಇವಳಲ್ಲ ಎಂದು ತಿರಸ್ಕರಿಸುತ್ತಾ, ಕಟ್ಟಕಡೆಯ 

ವನಿತೆಯನ್ನೂ ಸೀತೆಯಲ್ಲ ಎಂದುಕೊಂಡು ಅಂತಃಪುರದಿಂದ ಹೊರಬಂದ. ಇಷ್ಟು 

ಮಂದಿ ಸುಂದರಿಯರನ್ನು ವಿವಸ್ತ್ರ ಸ್ಥಿತಿಯಲ್ಲಿ ಕಂಡಾಗಲೂ ಹನುಮಂತನ ಮನಸ್ಸು 

ವಿಕೃತಿಗೊಳಗಾಗಲಿಲ್ಲ. ಅವನು ಬಂದ ಕಾರಣದಿಂದ ವಿಚಲಿತನಾಗಲಿಲ್ಲ. 

ಸೀತಾಮಾತೆಯ ಇರುವಿಕೆಯಲ್ಲೇ ಮನಸ್ಸು ಮಗ್ನವಾಗಿತ್ತು. ಇದು ಒಂದು ಕಥೆ,



ಪ್ರಖ್ಯಾತ ಗುರು ಒಬ್ಬರಲ್ಲಿ ಒಬ್ಬ ಧ್ಯಾನ ಕಲಿಯಲು ಬಂದ. ಮುಖ್ಯವಾದ ವಿಷಯ 

ಎಂದರೆ, ಧ್ಯಾನವನ್ನು ಯಾರು ಯಾರಿಗೂ ಕಲಿಸಲಾಗದು. ಕುಳಿತುಕೊಳ್ಳಬೇಕಾದ 

ರೀತಿ, ಆಸನ, ಆಹಾರ ಇತ್ಯಾದಿಗಳ ಬಗ್ಗೆ ತಿಳಿಸಬಹುದು. ಇದು ಕೇವಲ ಸಿದ್ಧಾಂತ 

ಮಾತ್ರವಾಗಿರುತ್ತದೆ. ಆದರೆ ಮನಸ್ಸಿನ ನಿಯಂತ್ರಣ ವ್ಯಕ್ತಿಗತ. ಯಾರು ಯಾವ 

ರೀತಿಯಲ್ಲಿ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಬಹುದು ಎಂಬುದು ಕೇವಲ ಆ 

ವ್ಯಕ್ತಿಯಿಂದ ಮಾತ್ರ ಗುರುತಿಸಬಹುದಾದ ಕ್ರಿಯೆ ಇದು. ಸರಿ, ಗುರು ಈ 

ಧ್ಯಾನಾರ್ಥಿಗೆ ಧ್ಯಾನ ಎಂದರೇನು, ಇದಕ್ಕೆ ಯಾವ ರೀತಿಯ ಸಿದ್ಧತೆ ಬೇಕು 

ಎಂದೆಲ್ಲಾ ತಿಳಿಸಿ, ಕಡೆಗೆಂದರು, "ಏನಾದರೂ ಮನಸ್ಸಿನ್ನಲ್ಲಿ ಮಂಗ ಹೊಕ್ಕಲು 

ಮಾತ್ರ ಬಿಡಬೇಡ. ಇದೊಂದು ದೂರವಿಟ್ಟರೆ ಮೂರ್ಖನೂ ಧ್ಯಾನ ಮಾಡಬಹುದು" ಎಂದರು.


ಧ್ಯಾನಾರ್ಥಿಯ ಮನಸ್ಸಿನಲ್ಲಿ ಈ ಕಡೆಯ ವಾಕ್ಯ ಬಲವಾಗಿ ನೆಟ್ಟಿತು."ಆಹಾ! ಎಂಥ 

ಸುಲಭ ಧ್ಯಾನ. ಮಂಗವೊಂದರ ಹೊರತಾಗಿ ಬೇರೆಲ್ಲದರ ಬಗ್ಗೆಯೂ ಮನಸ್ಸು 

ನೆಟ್ಟರಾಯಿತು. ಎಂದುಕೊಂಡು, ಪೂರ್ವ ತಯಾರಿ ಪೂರೈಸಿದ. ಕಣ್ಣು ಮುಚ್ಚಿದ 

ಕ್ಷಣದಲ್ಲಿ ಗುರುವಿನ ಮಾತು ನೆನಪಾಯಿತು. ನೆನಪಾಯಿತೋ ಇಲ್ಲವೋ, 

ಮರ್ಕಟವೊಂದು ಮನಸ್ಸಿನ ಮೇಲೆ ಬಂದು, ಒಂದು ಕೊಂಬೆಯಿಂದ ಮತ್ತೊಂದಕ್ಕೆ 

ಹಾರತೊಡಗಿತು. ಓಡಿಸಿದರೆ ಮೈಮೇಲೆ ಬರುತ್ತಿತ್ತು. ಕಿಸಿಕಿಸಿ ನಗುತ್ತಿತ್ತು, ಹಲ್ಲು 

ತೋರಿಸಿ ಹೆದರಿಸುತ್ತಿತ್ತು, ಏನು ಮಾಡಿದರೂ ಹೋಗಲೊಲ್ಲದು. ಒಂದು ಗಂಟೆ 

ಕಳೆಯುವಷ್ಟರಲ್ಲಿ ಧ್ಯಾನರ್ಥಿ ಸುಸ್ತಾಗಿ ಹೋದ.

ಗುರುವಿನ ಮುಂದೆ ನಿಂತು ತನ್ನ ಕಷ್ಟ ಹೇಳಿಕೊಂಡ. ಗುರು ನಗುತ್ತಾ, 

"ಮೊದಲನೆಯದಾಗಿ ನಾನು ಮಂಗ ಎಂದದ್ದು ಮನಸ್ಸಿನ ಗುಣವನ್ನು, ನಿಜವಾದ 

ಮಂಗನನ್ನಲ್ಲ. ಮನಸ್ಸು ಎಂದೂ ಒಂದೆಡೆ ನಿಲ್ಲಲಾರದು. ಚಂಚಲತೆಯೇ ಅದರ 

ಸ್ವಭಾವ. ಅದನ್ನು ಒಂದಿಷ್ಟು ಮಾತ್ರ ಹದ್ದುಬಸ್ತಿನಲ್ಲಿ ಇಡುವ ಪ್ರಯತ್ನವೇ ಧ್ಯಾನ. 

ಪ್ರಯತ್ನದಿಂದ ಇದನ್ನು ಸ್ವಲ್ಪ ಮಟ್ಟಿಗೆ ಸಾಧಿಸಬಹುದು ನಿಜ. ಆದರೂ ನಿತ್ಯದ 

ಕೆಲಸಗಳಲ್ಲಿಯೇ ನಾವಿದನ್ನು ಸಾಧಿಸಬಹುದು. ಓದುವಾಗ ಬರೀ ಓದಬೇಕು. 

ತಿನ್ನುವಾಗ ಬೇರೆ ಯಾವ ಯೋಚನೆಗಳೂ ಇಲ್ಲದೆ ಊಟದಲ್ಲಿಯ ರೂಪ,ರಸ, ಗಂಧ, 

ಸ್ಪರ್ಶಗಳನ್ನು ಅನುಭವಿಸಬೇಕು. ಹೀಗೆ ಪ್ರತಿಯೊಂದು ಕೆಲಸವನ್ನೂ ಕೇವಲ 

ಅದರಲ್ಲಿಯೇ ಮನಸ್ಸಿಟ್ಟು ಮಾಡುವ ಅಭ್ಯಾಸವೇ ಧ್ಯಾನದ ಮೊದಲ ಹೆಜ್ಜೆ. ಇದೇ 

ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸುವ ಪರಿ" ಎಂದರು.

ಇಷ್ಟಕ್ಕೂ ಮನಸ್ಸು ಎಂದರೇನು? ಇದಕ್ಕೊಂದು ಭೌತಿಕ ಅಸ್ತಿತ್ವವೇ ಇಲ್ಲದಲ್ಲ. ಇದು 

ಮೆದುಳಲ್ಲ. ಮಿದುಳು ನರಗಳ ಮಧ್ಯೆ ಸಂವಹನ ನಡೆಸುವ ನ್ಯೂರಾನ್ ಗಳಲ್ಲ. 

ನರವ್ಯವಸ್ಥೆಯಲ್ಲ. ಹಾಗಾದರೆ ಮನಸ್ಸೆಂಬುದು ಎಲ್ಲಿದೆ? ಹುಟ್ಟಿದ ಕ್ಷಣದಿಂದ ಅಥವಾ 

ತಾಯಿಯ ಗರ್ಭವಾಸದಲ್ಲಿರುವಾಗಲೇ ಮಾಹಿತಿ ಸಂಗ್ರಹವಾಗುತ್ತದೆ. ಮುಂದೆ 

ಬದುಕಿಡೀ ಈ ಸಂಗ್ರಹದ ಆಧಾರದ ಮೇಲೆ ನಡೆಯುತ್ತದೆ ಎನ್ನುತ್ತದೆ ಇಂದಿನ 

ವಿಜ್ನಾನ. ಬಹುತೇಕವಾಗಿ ಇಂದಿನ ವಿಜ್ನಾನ ಇಡಿ ಜಗತ್ತೇ ಮಾಯೆ ಎನ್ನುತ್ತದೆ. ಹೇಗೆ?


ಈ ಕ್ಷಣ ನಾವು ಅಕ್ಷರಗಳನ್ನು ಓದುತ್ತಿದ್ದೇವೆ ಎಂಬುದು ಒಂದು ಭ್ರಮೆ. ಈ ಅಕ್ಷರಗಳ 

ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ, ಕಣ್ಣೆಂಬ ಕ್ಯಾಮೆರಾ ಮೂಲಕ, ಅಕ್ಷಿಪಟಲದ ಮೇಲೆ 

ಬಿಂಬವಾಗಿ, ಮಿದುಳು ಆ ಸಂಜ್ನೆಯನ್ನು ಗುರುತಿಸುವುದೇ ನೋಡುವಿಕೆ ಎಂಬ 

ಕ್ರಿಯೆ. ಬೆಳಕು ಕಣ್ಣಿನಲ್ಲಿ ಹಾಯುವ ಮತ್ತು ಅದನ್ನು ಗುರುತಿಸುವ ಕ್ರಿಯೆಯ ಮಧ್ಯೆ 

ಒಂದು ಕ್ಷಣ ಹಿಡಿಯುತ್ತದೆ, ಅಷ್ಟರಲ್ಲಿ ಕೈಯಲ್ಲಿರುವ ಕಾಗದದ 

ಸ್ಥಾನಪಲ್ಲಟವಾಗಿರಲೂ ಬಹುದು. ಮನಸ್ಸು ಗುರುತಿಸುವುದು ಅದು ಕ್ಷಣದ ಹಿಂದೆ 

ಕಂಡದ್ದನ್ನು. ಬ್ರಹ್ಮಾಂಡದಲ್ಲಿ ನಾವು ಈ ಕ್ಷಣ ಕಾಣುವುದೆಲ್ಲ ಭೂತಕಾಲಕ್ಕೆ 

ಸೇರಿಹೋದದ್ದೇ! ಎಲ್ಲವೂ ಒಂದು ರೀತಿಯ ಭ್ರಮೆಯೇ! ಆದುದರಿಂದ ಮನಸ್ಸು 

ಎಂದು ನಾವು ನಂಬಿರುವುದೆಲ್ಲವೂ ಈ ಪರಿಯ ಮಾಹಿತಿ ಸಂಗ್ರಹದಿಂದ 

ತುಂಬಿರುವ, ಪೂರ್ವಗ್ರಹ ಪೀಡಿತವಾದ ಯಾವುದೋ 'ಆ ಒಂದು'.

'ಆ ಒಂದು' ತನ್ನ ಅಸ್ತ್ವಿತ್ವವನ್ನು ಕಳೆದುಕೊಂಡು, ವಿಶ್ವಪ್ರಜ್ನೆಯಲ್ಲಿ ಒಂದಾದಾಗ ಆ 

ವಿಶ್ವರಹಸ್ಯ ತೆರೆದುಕೊಳ್ಳುತ್ತದೆ. ಭೌತಿಕವಾಗಿ ಹಾಗೂ ಅಧಿಭೌತಿಕವಾಗಿ 

ಬ್ರಹ್ಮಾಂಡದ ಹೊರ- ಒಳ ಹರಿವುಗಳು ಅರ್ಥವಾಗುತ್ತವೆ. ಮತ್ತೆ ತಿಳಿದುಕೊಳ್ಳಲು 

ಉಳಿಯುವುದೇನೂ ಇಲ್ಲ. ಆದುದರಿಂದ ಮತ್ತೆ ಹುಟ್ಟಿ ಬರುವ ಅಗತ್ಯವಿಲ್ಲ. ಜನನ-

ಮರಣಗಳ ಪರಿಭ್ರಮಣವಿಲ್ಲದೆ ಮುಕ್ತನಾಗುವ 'ಆತ್ಮ" ಯಾ 'ಚೈತನ್ಯ' ಇದು.

No comments:

Post a Comment

CLICK HERE