ಇದೊಂದು ಮಾರ್ಮಿಕ ಕಥೆ.
ಇಂದಿನ ಕಾಲಕ್ಕೆ ಎಷ್ಟು ಸೂಕ್ತವೋ ಹೇಗೆ
ಅನ್ವಯಿಸಬಹುದೋ ತಿಳಿಯದು. ಆದರೆ,
ಒಂದು ವೇಳೆ ಬದುಕಿನಲ್ಲಿ ಅಳವಡಿಸಿಕೊಂಡರೆ,
ಅದು ಧನ್ಯಾತ್ಮಕವಾಗಿ ಬದಲಾಗುವುದರಲ್ಲಿ
ಸಂಶಯವಿರದು ಎನ್ನುತ್ತದೆ ಒಳಮನಸ್ಸು.
ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈಮುರಿದು ದುಡಿಯುತ್ತಿದ್ದ. ಗಳಿಕೆಯಿಂದ ಅಕ್ಕಿ,ಬೇಳೆ ತಂದು ಅಡುಗೆ
ಮಾಡುತ್ತಿದ್ದ. ಅತಿಥಿಗಳಿಗಾಗಿ ಕಾಯುತ್ತಿದ್ದ. ಯಾರಾದರೊಬ್ಬರು ಬಂದೇ ಬರುತ್ತಿದ್ದರು. ಆ ಕಾಲದಲ್ಲಿ ಇಂದಿನಂತೆ
ರೆಸ್ಟುರಾಗಳು,ಹೊಟೇಲುಗಳು ಇರಲಿಲ್ಲ. ಅನ್ನ ಮಾರುವುದು ಪಾಪ ಎಂಬ ಭಾವನೆ ಇತ್ತು. ಬಾಗಿಲಿಗೆ ಬಂದವರು,
ಅತಿಥಿಗಳು,ಭಗವಂತನ ರೂಪ ಎಂಬ ಚಿಂತನೆ ಇತ್ತು. ಅನ್ನ,ವಸತಿ ನೀಡುವುದು ಭಾಗ್ಯ ಎಂದು ಪರಿಗಣಿಸಲಾಗುತ್ತಿತ್ತು.
ಅಂದೂ ಹೀಗೆ ಕಾಯುತ್ತಿರುವಾಗ ಸಂತರ ಗುಂಪೊಂದು ಅತ್ತ ಬಂತು. ಇವನ ಆಹ್ವಾನ ಕೇಳಿ, "ಬರಲು ಅಡ್ಡಿ ಇಲ್ಲ. ಆದರೆ ನಮ್ಮ
ಕೆಲವು ನಿಯಮಗಳಿವೆ. ನಾವು ಬೆವರಿನ ದುಡಿಮೆಯ ಅನ್ನ ಮಾತ್ರ ಸ್ವೀಕರಿಸುತ್ತೆವೆ ಮತ್ತು ದುಡಿಮೆ ನ್ಯಾಯಮಾರ್ಗದ್ದಾಗಿರಬೇಕು.
ನಾವು ಇಲ್ಲಿಂದ ಹೋಗುವವರೆಗೆ ನೀನು ನಮ್ಮೋಂದಿಗೇ ಇರಬೇಕು. ಈ ಕ್ಷಣದಿಂದ ನಾವು ಹೋಗುವವರೆಗಿನ ಎಲ್ಲಾ ಒಳ್ಳೆಯ, ಕೆಟ್ಟ
ಫಲಗಳಲ್ಲಿ ನೀನು ಭಾಗೀದಾರನಾಗಿರಬೇಕು. ಆಗಬಹುದು ಎಂದಾದರೆ ನಾವು ಒಳಗೆ ಬರುತ್ತೇವೆ" ಎಂದರು. ಇವನು ಒಪ್ಪಿದ. ಎಲ್ಲರೂ
ಭೋಜನ ಸ್ವೀಕರಿಸಿ ಅಡ್ಡಾದರು.
ಮಧ್ಯರಾತ್ರಿಯಾಗಿತ್ತು. ಯಾರೋ ಓಡುತ್ತಿರುವ ಶಬ್ದ ಕೇಳಿಸಿತು. ಏನು. ಎತ್ತ ಎಂದು ನೋಡುವಷ್ಟರಲ್ಲಿ ಬಟ್ಟೆಯ ಗಂಟೊಂದು ಇವರ
ಮಧ್ಯೆ ಬಂದು ಬಿತ್ತು. ಅದರ ಹಿಂದೆಯೆ ದೊಂದಿಯ ಬೆಳಕು ಹಿಡಿದ ರಾಜಭಟರೂ ಒಳಬಂದರು. ಬಂದವರೇ ಇವರೆಲ್ಲರನ್ನು
ಹೆಡೇಮುರಿ ಕಟ್ಟಿ, ರಾಜನ ಮುಂದೆ ನಿಲ್ಲಿಸಿದರು. ರಾಜ ಇವರನ್ನು ದೀರ್ಘವಾಗಿ ದೄಷ್ಟಿಸಿ ನೋಡಿ, "ನೋಡಿದರೆ ಇವರು
ಸಾಧುಗಳಂತೆ ಕಾಣುತ್ತಾರೆ. ಇವರು ಕಳ್ಳರೆಂದು ನನ್ನ ಮನಸ್ಸು ಒಪ್ಪುತ್ತಿಲ್ಲ." ಎಂದ. ಕೂಡಲೇ ಹಿರಿಯ ಸಾಧು, "ರಾಜನ್,
ನಿನೇಣಿಸಿದಂತೆ ನಾವು ಸಾಧುಗಳು, ಅಲೆಮಾರಿಗಳು. ಈ ರಾತ್ರಿ ಈ ಮನುಷ್ಯನ ಬೆವರಿನ ಅನ್ನವುಂಡು ವಿಶ್ರಮಿಸುತ್ತಿರುವಾಗ
ಯಾರೋ ಆ ಗಂಟನ್ನು ಒಳಗೆಸೆದರು. ಈ ಪುನ್ಯಾತ್ಮನದು ನಿಜವಾದ ಸಂತನ ಬದುಕೇ ಇರಬೇಕು. ಏಕೆಂದರೆ, ಇವನ ಅನ್ನದಿಂದ
ನಮಗೆ ರಾಜದರ್ಶನ ಪ್ರಾಪ್ತಿಯಾಯಿತು.. ಆದರೆ ಕೈ-ಕಾಲು ಕಟ್ಟಿ ತಂದ ಶಿಕ್ಷೆ ಹಾಗೂ ಕಳ್ಳತನದ ಆರೋಪವೂ ಬಂತು. ಅದು ಈ
ಗಂಟಿನ ಸಂಸರ್ಗದಿಂದ ಉಂಟಾಯಿತು. ಈ ಗಂಟಿನಲ್ಲಿ ಅಧರ್ಮದ ವಸ್ತು ಇರಬೇಕು" ಎಂದ.
ಗಂಟನ್ನು ಬಿಡಿಸಿದಾಗ ಮಹಾರಾಣಿಯ ಒಡವೆಗಳು ಕಂಡವು. ಅರೇ, ರಾಣಿಯ ವಸ್ತು ಅಧರ್ಮದ್ದಾಗುವುದೆಂತು? ಏನೋ ರಹಸ್ಯವಿದೆ
ಎಂದು ರಾಜ ರಾಣಿಯನ್ನು ಕರೆಸಿದ. "ಇವು ನನ್ನ ಒಡವೆಗಳೇನೋ ನಿಜ. ಆದರೆ ಭಂಡಾರದಿಂದ ಬಂದವು ಅಲ್ಲ. ದೇವಮಂದಿರಗಳ
ಉಸ್ತುವಾರಿ ನೋಡುವ ಅಧಿಕಾರಿಯ ಪತ್ನಿ ಇವುಗಳನ್ನು ಉಡುಗೊರೆಯಾಗಿ ನೀಡಿದ್ದಳು" ಎಂದಳು.
ಅಧಿಕಾರಿಯನ್ನು ಕರೆಸಲಾಯಿತು. ರಾಜಸಭೆಯ ಕರೆ ಎಂದಾಗಲೇ ಅಧಿಕಾರಿ ನಡುಗಲು ಶುರುಮಾಡಿದ. ರಾಜನ ಮುಂದೆ ನಿಲ್ಲಿಸಿದಾಗ ಅವನ ಮುಖ ಕಪ್ಪಿಟ್ಟಿತು.
ರಾಜನ ಕಾಲಿಗೆ ಬಿದ್ದು ತನ್ನ ತಪ್ಪನ್ನು ಮನ್ನಿಸುವಂತೆ ಬೇಡತೊಡಗಿದ. ನಡೆದ ವಿಷಯವಿಷ್ಟು, ಅವ ದೇವಸ್ಥಾನಗಳ ಹುಂಡಿಯಲ್ಲಿ
ಬೀಳುವ ಚಿನ್ನ, ಹಣದಿಂದ ಭೂಮಿಕಾಣಿ ಕೊಳ್ಳುತ್ತಿದ್ದ. ಹೆಂಡತಿಗೆ ಆಭರಣಗಳನ್ನು ಮಾಡಿಸುತ್ತಿದ್ದ. ಒಂದು ಸಣ್ಣ ಭಾಗ ಅವನ ಸ್ವಂತಕ್ಕೆ
ಹೋಗುತ್ತಿತ್ತು. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಕೂಡಲೇ ಸಾಧುವೆಂದ, "ಇದು ದೇಗುಲಗಳ ಜೀರ್ಣೋಧ್ದಾರಕ್ಕೆ, ಕೆರೆಕಟ್ಟೆ
ಕಟ್ಟಲು, ಸಾಲು ಮರ ನೆಡಲು, ಗುರುಕುಲಗಳಿಗೆ ವಿನಿಯೋಗವಾಗಬೇಕಾಗಿದ್ದ ದೇಣಿಗೆ. ಸ್ವಂತಕ್ಕೆ ಉಪಯೋಗಿಸುವುದು
ಅಧರ್ಮವಾಯಿತು. ಅದರ ಸ್ಪರ್ಶದಿಂದ ನಮಗೆ ಶಿಕ್ಷೆಯಾಯಿತು."
ಇಂದು ನಮ್ಮ ಬದುಕಿನ ವಿಧಾನ ಬದಲಾಗಿದೆ. ಅನ್ನ ವಿಕ್ರಯ ಹಾಗೂ ವಿಕ್ರಯದ ಅನ್ನ ಸ್ವೀಕಾರ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.
"ತಿನ್ನುವ ಅನ್ನದ ಮೂಲ", "ಅದು ಧರ್ಮಸಮ್ಮತವಾದ ಗಳಿಕೆಯಾಗಿರಬೇಕು", ಪರಾನ್ನದಲ್ಲಿ ಅದರ ಧಾತೄವಿನ ಕರ್ಮಲೇಪವೂ
ಇರುತ್ತದೆ" ಎಂಬುದೇ ಒಂದು "ಮಿಥ್ಯೆ" ಎಂದು ಪರಿಗಣಿಸುತ್ತೇವೆ. ಹೇಗೆ ಬಂದರೇನು, ಹಣ ಹಣವೇ.
ಅದು ಇರುವುದೇ ನಮ್ಮ ಸುಖಕ್ಕಾಗಿ ಎಂಬ ಭಾವನೆ ಬಲವಾಗಿ ಬೇರುಬಿಟ್ಟಿದೆ ನಮ್ಮಲ್ಲಿ.
No comments:
Post a Comment