Friday, 30 October 2015

ಕುರುಡು ನ್ಯಾಯಾಲಯದ ಬಲಿಪಶುಗಳು.


ವಿಶ್ವವಿಖ್ಯಾತ ನೃತ್ಯಗಾರ್ತಿ ಮಲ್ಲಿಕಾ ಸಾರಾಭಾಯಿ ಒಂದು ಕಥೆ ಹೇಳುತ್ತಾರೆ. ಒಂದಾನೊಂದು ಕಾಡಿನಲ್ಲಿ ಒಕ್ಕಣ್ಣಿನ ಒಂದು ಮಂಗವಿತ್ತಂತೆ. ಒಂದು ದಿನ ಸುರಸುಂದರಿಯಾದ ಹೆಣ್ಣು ಮಗಳೊಬ್ಬಳು ಕಾಡಿನೊಳಗೆ ಬರುತ್ತಿರುವುದು ಕಂಡಿತು. ಅರೆ! ಇವಳ್ಯಾಕೆ ಇಂಥ ಕಾಡಿನೊಳಗೆ ಬರುತ್ತಿದ್ದಾಳೆ ಎಂದು ಯೋಚಿಸಿತದು. ಹಾಗೆಯೇ ಅವಳನ್ನು ಇನ್ನಷ್ಟು ಚೆನ್ನಾಗಿ ನೋಡುವ ಆಸೆಯಿಂದ ಅದು ಎತ್ತರದ ಮರವನ್ನೇರಿ ಅಡಗಿ ಕುಳಿತುಕೊಂಡಿತು. 

ಈ ಹೆಣ್ಣುಮಗಳು ಬ್ರಾಹ್ಮಣನೊಬ್ಬನ ಪತ್ನಿ ಸುಶೀಲೆ,ಸುಗುಣೆ. ಅವಳ ಹೆಸರು ಸೇಖ್ರಿ. ಅವಳು ಬಂದು ಮಂಗ ಕುಳಿತಿದ್ದ ಮರದ ಅಡಿಯಲ್ಲಿಯೇ ಕುಳಿತುಕೊಂಡಳು. ಆ ಕ್ಷಣದಲ್ಲಿ ಆಕಾಶದಲ್ಲಿ ಭಯಂಕರ ಶಬ್ದವಾಯಿತು. ಆಕಾಶ ಇಬ್ಭಾಗವಾಯಿತು. ದೇವತೆಗಳ ರಾಜ ಇಂದ್ರ ಧರೆಗಿಳಿದು ಬಂದ. ಅವನ ಕಣ್ಣಿಗೆ ಪರಮಸುಂದರಿಯಾದ ಸೇಖ್ರಿ ಕಂಡುಬಂದಳು. ಅವಳ ಮುಂದೆ ತನ್ನ ಪ್ರೇಮನಿವೇದನೆ ಮಾಡಿದ. ಅವಳು ಒಪ್ಪಲಿಲ್ಲ. ಇಂದ್ರನಿಗೆ ಕೋಪ ಬಂತು. ತನ್ನಂಥವನನ್ನು ಈ ಯಃಕಶ್ಚಿತ್ ಹೆಂಗಸು ತಿರಸ್ಕರಿಸುವುದು ಎಂದರೇನು? ಇವಳಿಗೆ ತಕ್ಕ ಶಾಸ್ತಿಯಾಗಬೆಕು ಎಂದು ನಿರ್ಧರಿಸಿದ. ಅವನ ಅಹಂಕಾರ ಬುಸುಗುಟ್ಟಿತು. 


ಅವಳನ್ನು ಹಿಡಿದೆಳೆದು, ಅವಳ ಮೇಲೆ ಆಕ್ರಮಣ ಮಾಡಿದ. ಹೊರಟುಹೋದ. ಎಷ್ಟು ಹೊತ್ತಾದರೂ ಪತ್ನಿ ಮನೆಗೆ ಮರಳದಿರಲು ಚಿಂತೆಗೊಂಡು ಅವಳ ಪತಿ ಅವಳನ್ನು ಹುಡುಕುತ್ತಾ ಬಂದವ ದುಃಖಿಸುತ್ತಾ ಕುಳಿತ ಪತ್ನಿಯನ್ನು ನೋಡಿದ. ನಡೆದುದ್ದನ್ನೆಲ್ಲ ತಿಳಿದುಕೊಂಡವನಿಗೆ ಭಯಂಕರ ಕೋಪ ಬಂತು. ತನ್ನ ತಪೋಬಲದಿಂದ ದೇವತೆಗಳನ್ನು ಭೂಮಿಗೆ ಎಳೆತಂದು ತನಗೆ (ಹೆಂಡತಿಗಲ್ಲ!) ನ್ಯಾಯ ಸಿಗಬೇಕು ಎಂದು ಹಠ ಹಿಡಿದ. ದೇವತೆಗಳ ರಾಜನೇ ಇಂದ್ರ. ಅವನ ವಿರುಧ್ದ ದ್ವನಿ ಎತ್ತುವವರಾರು? ಸರಿ, ಜಗದೊಡೆಯ ಮಹಾವಿಷ್ಣುವಿಗೆ ಅಪೀಲು ಹೋಯಿತು. 
ವಿಷ್ಣು ಇಂದ್ರನನ್ನು ಕರೆಸಿದ. ಇಂದ್ರ ನಿರಾಕರಿಸಿದ. ತನ್ನ ಮೇಲೆ ಸುಳ್ಳು ಆಪಾದನೆ ಹೊರಸಲಾಗಿದೆ ಎಂದ. ಒಂದೋ ತನ್ನ ಬಗ್ಗೆ ಎದುರು ಮಾತಾಡುವವರಿಲ್ಲ. ಎರಡನೆಯದಾಗಿ ಯಾರು ಸಾಕ್ಷಿಗಳಿರಲಾರರು ಎಂಬ ಭಂಢ ಧೈರ್ಯ ಅವನಿಗೆ. !! ಆದರೆ ಹಾಗಾಗಲಿಲ್ಲ. ಮರದಲ್ಲಿದ್ದ ಒಂಟಿ ಕಣ್ಣಿನ ಮಂಗ ಸಾಕ್ಷಿಯಾಗಿತ್ತಲ್ಲ!  ಸರಿ, ಮಂಗನಿಗೆ ಕರೆ ಹೋಯಿತು. ಅದಕ್ಕೆ ಯಾರ ಹೆದರಿಕೆಯೂ ಇರಲಿಲ್ಲ.! ತಾನು ಸೇಖ್ರಿಯನ್ನು ಕಂಡ ಕ್ಷಣದಿಂದ ಏನೇನು ನಡೆಯಿತು ಎಂದು ವಿವರ ಹೇಳಿತದು.

ಇಂದ್ರನ ಅಪರಾಧ ಸಾಬೀತಾಯಿತು.! ವಿಷ್ಣು "ಇಂದ್ರನ ಅಪರಾಧ ಸಾಬೀತಾಯಿತು. ಸ್ತ್ರೀಗೆ ಅವಮಾನ ಮಾಡಿದ ಅವನಿಗೆ ಶಿಕ್ಷೆಯಾಗಲೇಬೇಕು. ನೆರೆದಿರುವ ಬುದ್ಧಿವಂತರು ಶಿಕ್ಷೆ ಯಾವ ರೀತಿಯಾಗಬೇಕು ಎಂದು ನಿರ್ಧರಿಸಲಿ" ಎಂದು ಹೇಳಿದ.

ನೆರೆದ ಪ್ರಾಜ್ಞರು! ಅವರವರಲ್ಲೇ ಮಾತನಾಡಿಕೊಂಡರು."ಇಂದ್ರನಿಗೆ ಯಾವ ರೀತಿಯ ಶಿಕ್ಷೆಯಾದರೂ ಅದು ದೇವತೆಗಳ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದುಹೋಗುತ್ತದೆ. ಇಂದ್ರನ ಪರವಾಗಿ ಯಾರಾದರೊಬ್ಬರಿಗೆ ,ಯಾವುದಾದರೊಂದಕ್ಕೆ ಶಿಕ್ಷೆ ನೀಡುವುದೇ ಸೂಕ್ತ.! ದೇವಲೋಕಕ್ಕೆ ಇದರಿಂದ ತೊಂದರೆ ಆಗಬಾರದು" ಎಂದು ನಿರ್ಧಾರವಾಯಿತು.

ಸರಿ,ಇಂದ್ರನ ಕುದುರೆಗಳಲ್ಲಿ ಒಂದನ್ನು ಬಲಿ ನೀಡಲಾಯಿತು.! ಇದು ಇಂದ್ರನಿಗಾದ ಶಿಕ್ಷೆಯೆಂದು ಮಂದಿ ಘೋಷಿಸಿದರು. ಎಲ್ಲರೂ ಹೊರಟುಹೋದರು. ಇತ್ತ ಬ್ರಾಹ್ಮಣ, "ನೀನು ಬ್ರಷ್ಟೆ! ಇಂದ್ರ ಮುಟ್ಟಿದವಳು. ಆದುದರಿಂದ ನನ್ನ ಸಹಧರ್ಮಿಣಿಯಾಗಲು ಅಯೋಗ್ಯಳು. ನಾನು ನಿನ್ನನ್ನು ತ್ಯಜಿಸುತ್ತಿದ್ದೇನೆ "ಎಂದು ಹೇಳಿ ಹೊರಟುಹೋದ.


ತಪ್ಪು ಮಾಡಿದವ ಇಂದ್ರ, ಪ್ರಾಣ ತೆತ್ತದ್ದು ಪಾಪದ ಕುದುರೆ. ತಪ್ಪು ಮಾಡದವಳು ಸೇಖ್ರಿ.ಶಿಕ್ಷೆಯಾದದ್ದು ನಿರಪರಾಧಿ ಸೇಖ್ರಿಗೆ. ಸಾಕ್ಷಿ ಹೇಳಿದ್ದು ಒಕ್ಕನ್ಣಿನ ಮಂಗ. ಅದು ಇಂದ್ರನ ಕೆಂಗಣ್ಣಿಗೆ ಗುರಿಯಾಯಿತು. 'ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ' ನ್ಯಾಯ ಹೇಳಿದ ಪ್ರಾಜ್ಞರು ಸಮಾಧಾನದ ನಿಟ್ಟಿಸಿರು ಬಿಟ್ಟರು.


ಇದೊಂದು ಕಥೆ! ವ್ಯಥೆಯೂ ಹೌದು. ನಮ್ಮ ದೇಶದಲ್ಲಿ ಇಂಥ ನೂರಾರು ಅತ್ಯಾಚಾರದ ಸುದ್ದಿಗಳು ಬರುತ್ತವೆ. ಓದುತ್ತೇವೆ. ಅಯ್ಯೋ ಪಾಪ ಎನ್ನುತ್ತೇವೆ.! ಮಾರನೇ ದಿನ ಮತ್ತೊಂದು ಭೀಭತ್ಸ,ಭಯಾನಕ ಸುದ್ದಿ ನಿನ್ನೆಯದನ್ನು ನೇಪಥ್ಯಕ್ಕೆ ಸರಿಸುತ್ತದೆ. ಸಮಾಜ,ನ್ಯಾಯಾಂಗ,ರಕ್ಷನಾಂಗ,ಸರಕಾರ ಒಕ್ಕಣ್ಣ ಮಂಗಗಳಾಗಿವೆ. ಕುರುಡಲ್ಲದಿದ್ದರೂ ಒಂದು ಕಣ್ಣು ಮುಚ್ಚಿಕೊಂಡಿರುತ್ತದೆ. ಯಾಕೆ?

ಇಂಥ ಘಟನೆಗಳಲ್ಲೂ ನಿಜವಾದ ಅಪರಾಧಿಯನ್ನು ಜಗತ್ತು ಕಾಣುವುದೇ ಇಲ್ಲ. ಯಾವುದೋ ಒಂದು ಪಾಪದ ಕುದುರೆ ಬಲಿಪಶುವಾಗುತ್ತದೆ. ಬೆದರಿಕೆ ಹಣದ ಆಮಿಷ ಇದಕ್ಕೆ ಕಾರಣವಾಗುತ್ತದೆ.

Story courtesy..: Mrs.Sandhya Pai.

No comments:

Post a Comment

CLICK HERE