Friday 6 November 2015

ದುಃಖವೇ ಸುಖದ ಮೊದಲ ಸೋಪಾನ

ವೈರಾಗ್ಯ ಶತಕ, ನೀತಿಶತಕ, ಶೃಂಗಾರ ಶತಕಗಳೆಂಬ ಕೃತಿಗಳ ಕರ್ತೃ ರಾಜಾ ಭರ್ತೃಹರಿ. . ಇವನು ಮಾಳವ ದೇಶದ ರಾಜನಾಗಿದ್ದ. ಫಲವತ್ತಾಗಿದ್ದ ವಿಸ್ತಾರ ಭೂಪ್ರದೇಶ, ಅವನನ್ನು ಗೌರವಿಸುವ ಪ್ರಜೆಗಳು,ಬುದ್ಧಿವಂತ ಮಂತ್ರಿವರ್ಗ, ಶೂರ ಸೇನೆ....ಹೀಗೆ ಸರ್ವ ರೀತಿಯಲ್ಲೂ  ಸಮೃದ್ಧ ದೇಶದ ಅಧಿಪತಿಯಾಗಿದ್ದ. ಇವನ ಪತ್ನಿ ಲೋಕೋತ್ತರ ಸುಂದರಿ ಪಿಂಗಳಾ. ಸ್ವರ್ಗಲೋಕದಿಂದ ಧರೆಗಿಳಿದು ಬಂದಿರುವಳೋ ಎಂಬಂಥ ಅದ್ಭುತ ಸೌಂದರ್ಯ ಇವಳದು. ರಾಜಾ ಭತೃಹರಿಗೆ ಇವಳಲ್ಲಿ ಹುಚ್ಚು ಎನ್ನಬಹುದಾದಷ್ಟು ಮೋಹ. ಇವಳು ಅವನ ಬದುಕಿನ ಕೇಂದ್ರವಾಗಿದ್ದಳು ಎಂದರೆ ಸರಿಯಾದೀತು. ಸದಾ ಅಂತಃಪುರದಲ್ಲಿ ಇವಳೊಂದಿಗೆ ಸಂಗೀತ,ನೃತ್ಯ,ಮಧುಪಾನಗಳೊಂದಿಗೆ ನಿರತನಾಗಿರುತ್ತಿದ್ದ. ಪಿಂಗಳೆಯ ಮಾತೇ ಅವನಿಗೆ ವೇದವಾಕ್ಯವಾಗಿತ್ತು. ತತ್ತ್ವಶಃ ಪಿಂಗಳೆಯೇ ರಾಜ್ಯದ ಆಡಳಿತ ನಡೆಸುತ್ತಿದ್ದಳು ಎಂದರೆ ಸರಿಯಾದೀತು!


ಹೀಗೆ ಭೋಗಮಾಯಾವಶನಾಗಿದ್ದ ರಾಜನಿಗೆ ಒಂದು ಅಪರೂಪದ ಹಣ್ಣು ಉಡುಗರೆಯಾಗಿ ಬಂತು. ಅದೊಂದು ಅಪರೂಪದ,ವಿಶಿಷ್ಟ ಶಕ್ತಿಗಳಿಂದ ಕೂಡಿದ ಹಣ್ಣಾಗಿತ್ತು. ಅದನ್ನು ತಿಂದವರು ನಿರೋಗಿಗಳು,ಪೂರ್ಣಾಯುಷಿಗಳು ಆಗುತ್ತಿದ್ದರು. ಹಿಮಾಲಯದ ತಪ್ಪಲಲ್ಲಿ ಬೆಳೆವ ಈ ಹಣ್ಣನ್ನು ಅಲ್ಲಿಂದ ಬಂದ ಸಂನ್ಯಾಸಿಗಳು ರಾಜನಿಗೆಂದೇ ತಂದಿದ್ದರು. ಸ್ವೀಕರಿಸಿದ ರಾಜನಿಗೆ ಒಂದು ಯೋಚನೆ ಬಂತು. ತಾನು ನೀರೋಗಿಯೂ ಪೂರ್ಣಾಯುಷಿಯೂ ಆಗುತ್ತೇನೆ ಸರಿ. ಆದರೆ, ತನ್ನ ಮನದನ್ನೆ ಪಿಂಗಳೆ,ವೃದ್ಧೆ, ರೋಗಿಯಾಗಿ ಸಾಯುತ್ತಾಳೆ. ಅನಂತರ ತಾನು ಬದುಕಿರುವುದೆಂತು? ಆದುದರಿಂದ ಈ ಹಣ್ಣನ್ನು ಅವಳು ತಿನ್ನುವುದೇ ಸರಿ ಎಂದುಕೊಂಡು ಮತ್ತು ಅವಳಿಗೆ ಹಣ್ಣನ್ನು ಉಡುಗೊರೆಯಾಗಿ ನೀಡಿದ.

ಪಿಂಗಳೆಗೆ ರಾಜನ ಮೇಲೆ ಗೌರವವೇನೋ ಇತ್ತು, ಆದರೆ ಪ್ರೇಮವಿರಲಿಲ್ಲ. ಮಹಾರಾಣಿಯ ಪದವಿ ತರುವ ಅಧಿಕಾರ,ಸುಖಭೋಗಗಳಿಗಾಗಿ ಅವಳು ಭತೃಹರಿಯೊಂದಿಗೆ ಇದ್ದಳು. ಅಷ್ಟೇ. ಅವಳ ಪ್ರೇಮಿ ಅಶ್ವ ಶಾಲೆಯ ಅಶ್ವಪಾಲಕನಾಗಿದ್ದ!. ಪಿಂಗಳೆ ತನ್ನ ಪತಿ ಮಧುಪಾನದಿಂದ ಮತ್ತನಾಗಿ ಬೋಧ ಕಳೆದುಕೊಂಡಾಗ,ಗುಟ್ಟಿನಲ್ಲಿ ತನ್ನ ಪ್ರಿಯಕರನನ್ನು ಸೇರುತ್ತಿದ್ದಳು.  ತನಗೆ ಪ್ರಾಣಕ್ಕಿಂತ ಪ್ರಿಯನಾಗಿದ್ದ ಅವನಿಗೆ ಈ ಹಣ್ನನ್ನವಳು ನೀಡಿದಳು.

ಈ ಅಶ್ವಪಾಲಕನಿಗೆ ಆ ಊರಿನ ವೇಶ್ಯೆಯ ಮೇಲೆ ಮೋಹ! ಪಿಂಗಳೆಯಿಂದ ಸಿಗುವ ದುಡ್ಡು ಕಾಸಿಗಾಗಿ ಅವಳನ್ನು ಒಲೈಸುತ್ತಿದ್ದರೂ, ಅವನ ಪ್ರೇಮ ವೈಶ್ಯೆಯ ಮೇಲಿತ್ತು. ಅವನು ಅವಳಿಗೆ ಪಿಂಗಳೆಯಿಂದ ಪಡೆದ ಹಣ್ಣನ್ನು ನೀಡಿದ. ವೇಶ್ಯೆ ಪರಮ ಸಾಧ್ವಿ. ಕುಲದಿಂದ ವೇಶ್ಯಾವೃತ್ತಿಯಲ್ಲಿದ್ದರೂ, ಅದನ್ನು ಧರ್ಮದಿಂದ ಪಾಲಿಸುತ್ತಿದ್ದಳು. "ಭಗವಂತಾ, ಮುಂದಿನ ಜನ್ಮದಲ್ಲಾದರೂ ನಿನ್ನ ಪಾದದ ಧೂಳಾಗಿ ಜನ್ಮ ನೀಡು. ಇಂಥ ಹೀನ ವೃತ್ತಿಯಿಂದ ಪಾಪಲೇಪವಾಗದಂತೆ ನನ್ನನ್ನು ನಡೆಸು" ಎಂದು ಬೇಡುತ್ತಿದ್ದಳು. ಅವಳ ಈ ಮನೋಭಾವನೆಯಿಂದಲೇ ಅಶ್ವಪಾಲಕ ಅವಳಿಗೆ ಮರುಳಾಗಿದ್ದ.

ಹಣ್ಣಿನ ವಿಶೇಷ ಗುಣಗಳ ಬಗ್ಗೆ ತಿಳಿಯುತ್ತಲೇ ಅವಳಿಗೆ ಈ ಹಣ್ಣು ಈ ದೇಶದ ರಾಜನಿಗೆ ಸಲ್ಲಬೇಕು ಎನಿಸಿತು. ಪ್ರಜಾವತ್ಸಲನಾದ ಅವನಿಗೆ ಪೂರ್ಣಾಯುಸ್ಸಿನ ಹಕ್ಕು ಎಂದುಕೊಂಡು ಸೀದಾ ಅರಮನೆಗೆ ಬಂದು ಮಹಾರಾಜ ಭತೃಹರಿಯ ಮುಂದೆ ಹಣ್ಣನ್ನಿಟ್ಟಳು. ಹಣ್ಣನ್ನು ನೋಡುತ್ತಲೇ ರಾಜನಿಗೆ ಅದರ ಗುರುತು ಸಿಕ್ಕಿತು. ತನಗೆ ಸಾಧುಗಳು ನೀಡಿದ ಹಣ್ಣಿದು. ರಾಣಿ ಪಿಂಗಳೆಗೆ ನೀಡಿದ್ದು, ಈ ವೈಶ್ಯೆಯ ಕೈಗೆ ಬಂದದ್ದೆಂತು?ಎಂದು ಆಶ್ಚರ್ಯಗೊಂಡ.

ವಿಚಾರಿಸಲಾಗಿ ಅಶ್ವಪಾಲಕನಿಂದ ಸಿಕ್ಕಿತು ಎಂದು ತಿಳಿಯಿತು. ಅವನನ್ನು ಕರೆಸಿ ಪ್ರಶ್ನಿಸಿದರೆ, ಪಿಂಗಳೆಯಿಂದ ಎಂದು ತಿಳಿಯಿತು. ರಾಜನಿಗೆ ಆಘಾತವಾಯಿತು. ಪ್ರಾಣಕ್ಕಿಂತ ಪ್ರಿಯಳೆಂದು ಭಾವಿಸಿದ ಹೆಣ್ಣು ತನ್ನವಳಲ್ಲ! ಹಾಗಾದರೆ ತನ್ನದೆಂಬುದು ಯಾವುದು?ಎಂಬ ಪ್ರಶ್ನೆ ಉದಯಿಸಿತು. ಅನ್ನಾಹಾರಾಗಳನ್ನು ದೂರ ಮಾಡಿದ. ಏಕಾಂತದಲ್ಲಿ ಧ್ಯಾನಮಗ್ನನಾದ. ಜನ್ಮಾಂತರಗಳ ನೆನಪು ಮರುಕಳಿಸಿತು. ಸತ್ಯದರ್ಶನವಾಯಿತು. ಯಾವುದು ತಾನಲ್ಲ,ತನ್ನದಲ್ಲ. ಒಂದು ಜನ್ಮದ ಸಂಭಂಧಗಳನ್ನೇ ಶಾಶ್ವತ ಎಂದು ಭ್ರಮಿಸಿ,ಜೀವಿ,ನಾನಾ ರೀತಿಯ ಬಂಧನಗಳನ್ನು ಸೃಷ್ಟಿಸುತ್ತಾನೆ. ಜೇಡ ತಾನೇ ಹೆಣೆದ ಬಲೆಯಲ್ಲಿ ಬಂಧಿಯಾಗುವಂತೆ,ತಾನೇ ತನ್ನ ಕರ್ಮಬಂಧನಗಳಲ್ಲಿ ಸೆರೆಯಾಗುತ್ತಾನೆ. ಕನಿಷ್ಠ ತನ್ನ ಕಣ್ಣು ತೆರೆಯಿತು. ವಾಸ್ತವದ ದರ್ಶನವಾಯಿತು. ಪಿಂಗಳೆ ಗುರುವಾಗಿ ಬಂದಳು,ಎಂದುಕೊಂಡು,ದೇಶ-ಕೋಶ ತ್ಯಜಿಸಿದ.

ಪರಮ ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ. ಅಪೂರ್ವ ಗ್ರಂಥಗಳನ್ನು ರಚಿಸಿದ! ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ವಿಧಿಯನ್ನು ಹಳಿಯುತ್ತೇವೆ. ಇಂಥ ಸ್ಥಿತಿಯನ್ನು "ತಂದಿಟ್ಟ" ಭಗವಂತನನ್ನು ದೂರುತ್ತೇವೆ. ಇದು ತಮಗೆ ಸರಿಯಾದುದಲ್ಲ ಎನ್ನುತ್ತಾ ಮತ್ತಷ್ಟು ಗೊಂದಲಿಸುತ್ತೇವೆ. ಸಂಕಷ್ಟಗಳು ಮಾಯೆಯ ಪರದೆ ಸರಿಸುವ "ಹೇತು"ಮಾತ್ರ ಎನ್ನುವುದು ಮರೆಯುತ್ತೇವೆ. ಇವು ನಿಜವಾದ ಅರ್ಥದಲ್ಲಿ "ಭಗವಂತ"ನ "ವರ","ಆಶೀರ್ವಾದ".



ಮಹಾಭಾರತದ ಯುದ್ಧ ಮುಗಿದು ಕೌರವ ಸಂಹಾರವಾಗಿ ಧರ್ಮರಾಯನಿಗೆ ಸಿಂಹಾಸನ ಲಭಿಸಿ ಪಟ್ಟಾಭಿಷೇಕವಾಯಿತು. ಕರ್ತವ್ಯ ಮುಗಿಸಿದ ಶ್ರೀ ಕೃಷ್ಣ ಪರಮಾತ್ಮ ದ್ವಾರಕೆಗೆ ಹೊರಟ. ರಾಜಮಾತೆ ಕುಂತಿ ಕಣ್ಣೀರು ಹರಿಸುತ್ತಾ ಒಂದು ಕಡೆ ನಿಂತಿದ್ದಳು. ಕೃಷ್ಣ, "ತಾಯೇ, ನೀನೀಗ ರಾಜಮಾತೆ! ನಿನ್ನ ಕಷ್ಟಗಳೆಲ್ಲಾ ಕೊನೆಯಾದವು. ಇನ್ನೂ ಏಕೆ ದುಃಖಿಸುತ್ತಿ?" ಎಂದು ಕೇಳಿದ. ಕುಂತಿಯ ಉತ್ತರ ಇಂತಿತ್ತು, "ಕೃಷ್ಣಾ,ಕಷ್ಟಗಳು ಸಾಲುಗಟ್ಟಿ ಬರುತ್ತಿರುವಾಗ, 'ಕೃಷ್ಣಾ' 'ಕೃಷ್ಣಾ' ಎಂದು ಮೊರೆ ಇಡುತ್ತಿದ್ದೆ. ಕಾಮ್ಯ ಭಕ್ತಿಯಿಂದಲೇ ಇರಲಿ, ದಿನದಲ್ಲಿ ನೂರು ಬಾರಿ ನಿನ್ನ ನೆನಪಾಗುತ್ತಿತ್ತು. ಇನ್ನೂ ರಾಜಮಾತೆಯ ಸ್ಥಾನದಲ್ಲಿ ಕಷ್ಟವೆಂಬುದೇ ಇಲ್ಲವೆಂದಾದಾಗ ನಿನ್ನ ನೆನಪಾಗುವುದೇ? ನಿನ್ನ ನಾಮಸ್ಮರಣೆ ಬರುವುದೇ? ಕೃಷ್ಣಾ, ನಿನ್ನ ಭವಹರಿಯುವುದೇ?" ಎಂದು ಪ್ರಶ್ನಿಸಿದಳು.

ಭವದುಃಖವನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ದುಃಖ ದುಃಖವೇ ಅಲ್ಲ. ಸುಖದ ಮೊದಲ ಸೋಪಾನ ಎಂಬುದು ಅರಿವಾಗುತ್ತದೆ.








No comments:

Post a Comment

CLICK HERE