ಆ ಊರಿಗೆ ಪರಮ ಜ್ಞಾನಿ ಎನಿಸಿಕೊಂಡವರೊಬ್ಬರು ಬಂದಿದ್ದರು. ಸತ್ಸಂಗದ
ಸಮಯದಲ್ಲಿ ಬಹಳಷ್ಟು ವಿಷಯಗಳು ಬಂದವು. ಪರಮಾತ್ಮ, ಆತ್ಮ, ಪ್ರಾರಬ್ಧ,
ಮರುಹುಟ್ಟು.... ಹೀಗೆ ಅನೇಕ ವಿಷಯಗಳ ಬಗ್ಗೆ ಜಿಜ್ಞಾಸುಗಳು ಕುತೂಹಲ
ವ್ಯಕ್ತಪಡಿಸಿದರು. ಜ್ಞಾನಿಗಳು ಉತ್ತರಿಸಿದರು. ಕಡೆಗೊಬ್ಬ ಎದ್ದುನಿಂತು
"ಸ್ವಾಮಿಗಳೇ, ನಾನು ಮಾಂಸ ತಿನ್ನುತ್ತೇನೆ. ಇದು ಸರಿಯೋ ತಪ್ಪೋ?" ಎಂದು ಪ್ರಶ್ನಿಸಿದ.
ಅಲ್ಲೀಯವೇರೆಗೆ ಗಿಜಿಗಿಜಿ ಮಾತುಗಳಿಂದ ಜೀವಂತವಾಗಿದ್ದ ಸಭೆಯಲ್ಲಿ ಒಮ್ಮೆಗೇ
ನಿಶ್ಶಬ್ದ ಆವರಿಸಿತು. ಏಕೆಂದರೆ, ಮಾಸಂಹಾರ ಯುಕ್ತವೇ ಅಲ್ಲವೇ ಎಂಬ ಸಂದೇಹ
ಮಾತ್ರವಲ್ಲ, ಸಭೆಯಲ್ಲಿ ಸಸ್ಯಾಹಾರ, ಮಾಸಂಹಾರಗಳ ಬಗ್ಗೆ ಖಚಿತ
ಅಭಿಪ್ರಾಯಾಗಳಿರುವವರೂ ಇದ್ದರೂ. ಎರಡೂ ಪಂಗಡದವರಿಗೆ ತಮ್ಮ ವಾದವೇ
ಸರಿಯಾದುದು ಎಂಬ ನಂಬಿಕೆಯೂ ಬಲವಾಗಿಯೇ ಇತ್ತು. ಈಗ ಜ್ಞಾನಿಗಳ ಉತ್ತರ
ಯಾರ ಪರವಾಗಿದ್ದರೂ, ಮತ್ತೊಂದು ಪಂಗಡಕ್ಕೆ ಇರಿಸುಮುರಿಸಾಗುವುದಂತೂ
ಖಂಡಿತವಾಗಿತ್ತು. ಹಾಗೆಂದೇ ಎಲ್ಲರ ಗಮನವೂ ಉತ್ತರದತ್ತ ತಿರುಗಿತು.
ಜ್ಞಾನಿಗಳ ಉತ್ತರ ಪ್ರಶ್ನೆ ರೂಪದಲ್ಲಿಯೇ ಇತ್ತು. ಅವರೆಂದರು, "ಮಾಸಂಹಾರ
ಮಾಡಿದಾಗ ನಿನಗೆ ಹೇಗೆನಿಸುತ್ತದೆ? ಸಂತೋಷ, ತ್ರಪ್ತಿಯಾಗುತ್ತದೋ. ಏನೋ
ಅಹಿತ ಭಾವನೆ ಉಂಟಾಗುತ್ತದೋ?" ಅವನೆಂದ, "ಅಷ್ಟು
ಸಮಾಧಾನವಾಗುವುದಿಲ್ಲ. ಏನೋ ಒಂದು ರೀತಿಯ ತಪ್ಪಿತಸ್ಥ, ಅಪರಾಧೀ ಭಾವ
ಕಾಡುತ್ತದೆ". ಜ್ಞಾನಿಗಳು, "ಹಾಗಾದರೆ ಮಾಂಸ ತಿನ್ನಬೇಡ ಎನ್ನುವುದು ನನ್ನ
ಸಲಹೆ" ಎಂದುತ್ತರಿಸಿದರು. ಶಾಖಾಹಾರಿಗಳ ಗುಂಪಿಗೆ ಜೀವ ಬಂತು. "ಹೌದು
ಹೌದು. ನಮ್ಮ ನಾಲಿಗೆಯ ರುಚಿ ತಣಿಸಲು ಪ್ರಾಣಿಹತ್ಯೆ ಮಾಡುವುದು ಪಾಪ. ಮತ್ತು
ನಮ್ಮ ಹಾಗೆ ಬದುಕುವ ಹಕ್ಕು ಪ್ರಾಣಿಗಳಿಗೂ ಇದೆ. ಈ ಭಿಭತ್ಸ್ಯ ಅಭ್ಯಾಸವನ್ನು
ನಿಷೇಧಿಸಬೇಕು" ಎಂಬಿತ್ಯಾದಿ ಕೂಗುಗಳು ಕೇಳಿಬಂದವು. ಮಾಂಸಾಹಾರಿಗಳ
ಮುಖ ಚಿಕ್ಕದಾಯಿತು. ಒಂದು ರೀತಿಯಲ್ಲಿ ಅವರಿಗೆ ಮುಖಭಂಗವಾಯಿತು.
ಹೀಗೆ ಮುಖಭಂಗಗೊಂಡವನೊಬ್ಬ ಎದ್ದು ನಿಂತ. "ಸ್ವಾಮಿ, ನಾನು ಮಾಸಂಹಾರಿ,
ದಿನನಿತ್ಯ ನನಗೆ ಮಾಂಸ ಬೇಕು. ತಿನ್ನುವಾಗ, ತಿಂದ ಅನಂತರ ನನಗೆ
ಸಂತೋಷವಾಗುತ್ತದೆ. ಇದಕ್ಕೇನು ಹೇಳುತ್ತೀರಿ?" ಎಂದ. ಜ್ಞಾನಿಗಳು
ತಲೆದೂಗುತ್ತಾ, "ಹಾಗಾದರೆ ನೀನು ಮಾಂಸ ತಿನ್ನಬೇಕು" ಎಂದು ಉತ್ತರಿಸಿದರು.
ಈಗ ಮಾಂಸಾಹಾರಿಗಳ ಗುಂಪು "ಸಾಧು, ಸಾಧು ಮಾಂಸಾಹಾರವೂ ಒಳ್ಳೆಯದು.
ಮಾಂಸ ತಿನ್ನುವುದು ತಪ್ಪಲ್ಲ" ಎಂದು ಕೂಗಾಡತೊಡಗಿದರು.
ಜ್ಞಾನಿಗಳ ಮುಖದಲ್ಲಿ ಒಂದು ನಗು ಕಾಣಿಸಿಕೊಂಡಿತು. ಮೊದಲು
ಮುಗುಳುನಗುವಾಗಿ ಕಂಡದ್ದು, ನಿಧಾನವಾಗಿ ಹರಡಿ ಹೊರ ಹರಿಯಿತು. ಜ್ಞಾನಿ
ಹೋ ಹೋ... ಎನ್ನುತ್ತಾ ಬಿದ್ದು ಬಿದ್ದು ನಗತೊಡಗಿದರು. ನಗು ಸಾಂಕ್ರಾಮಿಕ.
ಮೊದಮೊದಲು ಆಶ್ಚರ್ಯದಿಂದ ಜ್ಞಾನಿಯನ್ನು ನೋಡುತ್ತಾ ನಿಂತವರಲ್ಲಿ ಒಂದು
ತರದ ವಿದ್ಯುತ್ ಸಂಚಾರವಾದಂತಾಯಿತು. ಈ ನಗುವಿನ ಮೋಡಿಗೆ ಸಿಲುಕಿ
ಅವರು ನಗತೊಡಗಿದರು. ನಗುವಿನ ತರಂಗಗಳಿಂದ ಇಡೀ ಕೊಠಡಿ
ತುಂಬಿಹೋಯಿತು. ಜ್ಞಾನಿ ನಗುತ್ತಿದ್ದರೂ ನಿರ್ಭಾವದಿಂದ ಇದನ್ನು ಗಮನಿಸುತ್ತಲೇ ಇದ್ದರು.
ಜ್ಞಾನಿಯ ನಗು ಫಕ್ಕನೆ ನಿಂತುಹೋಯಿತು. ಮಿಕ್ಕವರೂ ನಕ್ಕು ನಕ್ಕು ಸುಸ್ತಾಗಿ
ಕಡೆಗೊಮ್ಮೆ ನಗು ನಿಲ್ಲಿಸಿದರು. ಜ್ಞಾನಿ ಅವರತ್ತ ತಿರುಗಿ, "ಏಕೆ ನಗುತ್ತಿರುವಿರಿ?"
ಎಂದರು. ಮಂದಿಯಲ್ಲಿ ಉತ್ತರ ಇರಲಿಲ್ಲ. ಮತ್ತೆ ಕೇಳಿದರು "ಈಗ ಹೇಗೆನಿಸುತ್ತದೆ?"
ಈಗ ಅವರಲ್ಲಿ ಉತ್ತರವಿತ್ತು. "ಬಹಳ ಹಿತವೆನುಸುತ್ತಿದೆ. ಮೈ-ಮನಸ್ಸುಗಳೆಲ್ಲಾ
ಹತ್ತಿಯಂತೆ ಹಗುರವಾಗಿದೆ". "ಅಯ್ಯಂದಿರಾ, ಆಹಾರವೂ ಹೀಗೆ ಏಕೆ ತಿನ್ನುತ್ತೇವೆ?
ಹೆಚ್ಚಿನವರಲ್ಲಿ ಉತ್ತರವಿಲ್ಲ. ಹಸಿವು ತಣಿಸಲು! ನಾಲಿಗೆಯ ಚಪಲದಿಂದ!
ತಿನ್ನದಿದ್ದರೆ ದೇಹ ಸೊರಗುತ್ತದೆ! ಸಾಯುತ್ತೇವೆ. ಹೀಗೆ ಹಲವು ಅರ್ಥಹೀನ
ಉತ್ತರಗಳಿವೆ ನಮ್ಮಲ್ಲಿ. ಆದರೆ ವಾಸ್ತವ ಅದಲ್ಲ. ಆಹಾರವೇ ದೇಹ, ಆಹಾರವೇ
ಮನಸ್ಸು, ಬುದ್ಧಿ,ಆಹಾರವೇ ಜೀವಚೈತನ್ಯವು ಕೂಡ. ದೇಹ ಆಹಾರದ ಸ್ಥೂಲ
ರೂಪವಾದರೆ ಮನಸ್ಸು ಸೂಕ್ಷ್ಮರೂಪ. ಇಲ್ಲಿ ಸಾವಿರ ರೂಪದಲ್ಲಿ ನಾನಾ ಭಾವಗಳು
ಹುದುಗಿರುತ್ತವೆ. ಈ ಭಾವಗಳ ತೀವ್ರತೆ, ಮತ್ತವುಗಳ ಪ್ರತಿಕ್ರಿಯೆ ಆಹಾರದಿಂದಲೇ!
ಇನ್ನೂ ಆತ್ಮವೆಂದು ಕರೆಯಲ್ಪಡುವ ಜೀವಚೈತನ್ಯ ಮತ್ತೆ ಮತ್ತೆ ದೇಹ ಧರಿಸಿ
ಬರುವುದು ಭಾವ ಮತ್ತದರ ಪ್ರತಿಕ್ರಿಯೆಗಳಿಂದ ಉಂಟಾಗುವ ಕರ್ಮಗಳಿಂದ.
ವಾಸ್ತವದಲ್ಲಿ ಸಸ್ಯ, ಮಾಂಸಗಳೆರಡೂ ಚೈತನ್ಯದ ಭಿನ್ನ ರೂಪಗಳು ಮಾತ್ರ. ಹೀಗೆ
ಕಾಣುವ ಬ್ರಹ್ಮಜ್ಞಾನಿಗೆ ಈ "ತಿನ್ನುವಿ"ಕೆಯಿಂದ ಯಾವುದೇ ಪರಿಣಾಮ ಆಗದು.
ಏಕೆಂದರೆ ಅವನ ಸ್ಥಿತಿಯಲ್ಲಿ ಆಹಾರ ದೇಹಧಾರಣೆಗಾಗಿ ಮಾತ್ರ. ಇಲ್ಲಿ ಬ್ರಹ್ಮ
ಬ್ರಹ್ಮನನ್ನು, ಬ್ರಹ್ಮನಿಗಾಗಿ ಭುಜಿಸುತ್ತಾನೆ. ಆಹಾರ ಪ್ರಸಾದ ಮಾತ್ರ.
ಇನ್ನು ಸಾಮಾನ್ಯ ಮನುಷ್ಯನಿಗೆ ತಾನು ತಿನ್ನುವ ಆಹಾರದಿಂದಲೇ ಆರೋಗ್ಯ
ಲಭಿಸಬೇಕು. ಆರೋಗ್ಯವೆಂದರೇನು? ಆರೋಗ್ಯವಂತ ಮನುಷ್ಯನಿಗೆ
ಕಾಮನೆಗಳಿರುವುದೇ ಇಲ್ಲ. ಇದು ಸತ್ಯ. ಅನಾರೋಗ್ಯಗಳಿಗೆ ಪ್ರಮುಖ ಕಾರಣವೇ
ಕಾಮನೆಗಳು. ಆರೋಗ್ಯವಂತ ಮನಸ್ಸು ಶಾಂತವಾಗಿರುತ್ತದೆ. ಇಲ್ಲಿ
ತುಮುಲಗಳಿಲ್ಲ. ಜೀವನದ ಯಾವುದೇ ದುಖಃ, ನಿರಾಸೆಗಳನ್ನು ಅದು
ಯಶಸ್ವಿಯಾಗಿ ಎದುರಿಸಬಲ್ಲದು. ಇದರ ಪರಿಣಾಮವಾಗಿ ಅದರ ದೈಹಿಕ ಆರೋಗ್ಯ
ಸದಾ ಸುಸ್ಥಿತಿಯಲ್ಲಿರುತ್ತದೆ. ಕಾಮನೆಗಳು ಎಂದರೆ ಮನದಾಳದಲ್ಲಿ ಹುದುಗಿರುವ
ಯಾವುದೋ ಅಪರಿಪೂರ್ಣತೆ ಯಾ ಕುಂದುಗಳನ್ನು ತುಂಬಿಕೊಳ್ಳುವ ಪ್ರಯತ್ನ ಮಾತ್ರ.
ಆದುದರಿಂದ ಆಹಾರ ಅವರವರ ಬುದ್ಧಿಮತ್ತೆಯ ಮೇಲೆ ಹೊಂದಿಕೊಡಿದೆ. ಹಿಂಸೆ
ಸದಾ ವ್ಯರ್ಜ್ಯವೇ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಕೇವಲ
ಮಾಂಸಾಹಾರದಿಂದ ಮಾತ್ರ ಹಿಂಸೆ ಎಂಬುದು ಸರಿಯಲ್ಲ. ದ್ವೇಷ, ಸಿಟ್ಟು, ಕ್ರೌರ್ಯ,
ಮಾತ್ಸರ್ಯಗಳೊಂದಿಗೆ ಅಡುಗೆ ಮಾಡಿದರೆ, ತಿಂದರೆ ಅದೂ ಹಿಂಸೆಯೇ. ಮಾಂಸ
ಭೌತಿಕವೂ ಹೌದು, ಮಾನಸಿಕವೂ ಹೌದು" ಎಂದು ಮಾತು ಮುಗಿಸಿದರು ಜ್ಞಾನಿಗಳು...