ಬಾಲಕ ಪಾಣಿನಿ ಶತದಡ್ಡ ಎಂದೇ ಪರಿಗಣಿಸಲ್ಪಟ್ಟಿದ್ದ. ಒಮ್ಮೆ ಸಹನೆ ಹಾರಿಹೋದ
ಗುರುಗಳು, ಅವನನ್ನು ಶಿಕ್ಷಿಸಲು ಕೈ ಮುಂದೆ ಚಾಚುವಂತೆ ಆಜ್ಞಾಪಿಸಿದರು. ಮುಂದೆ
ಚಾಚಿದ ಅಂಗೈ ಕಂಡು ಅವರ ಬೆತ್ತ ತಡೆಯಿತು. "ಛೇ! ನಿನ್ನ ಅಂಗೈಯಲ್ಲಿ
ವಿದ್ಯಾರೇಖೆಯೆ ಇಲ್ಲ. ನೀನು ಕಲಿಯುವುದಾದರೂ ಹೇಗೆ?" ಎಂದರು. ಬಾಲಕ
ಪಾಣಿನಿ ಮುಗ್ಧತೆಯಿಂದ, "ಹಾಗೆಂದರೇನು ಗುರುಗಳೇ? ರೇಖೆಗಳಿಲ್ಲದಿದ್ದರೆ ವಿದ್ಯೆ
ಹತ್ತುವುದಿಲ್ಲ ಎನ್ನುವಿರಾ? ಒಂದು ವೇಳೆ ರೇಖೆಗಳನ್ನು ಸ್ರಷ್ಟಿಸಿದರೆ ನಾನು ವಿದ್ಯೆ
ಕಲಿಯಬಲ್ಲೆನೆ?" ಎಂದು ಪ್ರಶ್ನಿಸಿದ. ಬಾಲಕನ ಹುಚ್ಚು ಪ್ರಶ್ನೆ ಎಂದುಕೊಂಡು
ಗುರುಗಳು, "ಹಾಗೇನಾದರೂ ಆದರೆ ವಿದ್ಯೆ ತಲೆಗೆ ಹತ್ತಬಹುದು" ಎಂದರು ಹಗುರವಾಗಿ.
panini mathematician |
ಪಾಣಿನಿ ಚಾಕುವಿನಿಂದ ತನ್ನ ಅಂಗೈಗಳ ಮೇಲೆ ಆಳವಾಗಿ ರೇಖೆಗಳನ್ನು ಕೊರೆದ.
ಗಾಯ ಮಾಗಿದಾಗ ಅವನ ಕೈ ರೇಖೆಗಳಿಂದ ತುಂಬಿಹೋಗಿತ್ತು.! ಪಾಣಿನಿ ಹಗಲು-
ರಾತ್ರಿ ಅಭ್ಯಾಸ ಮಾಡಿದ. ಇಂದು ಸಂಸ್ಕ್ರತ ವ್ಯಾಕರಣ ಶಾಸ್ತ್ರದಲ್ಲಿ ಪಾಣಿನಿ ಬರೆದ
ಗ್ರಂಥಗಳು ಆಕರ ಗ್ರಂಥಗಳಾಗಿ ಉಪಯೋಗಿಸಲ್ಪಡುತ್ತವೆ. ಇವನ ಬಗ್ಗೆ ಒಂದು
ದಂತ ಕಥೆಯಿದೆ. ಒಮ್ಮೆ ಪರಮೇಶ್ವರ ಇವನ ಮುಂದೆ ಪ್ರತ್ಯಕ್ಷನಾಗಿ ಡಮರುಗ
ಬಾರಿಸಿದನಂತೆ. ಅದರ ಶಬ್ದದಲ್ಲಿ ಪಾಣಿನಿ ಹದಿನಾಲ್ಕು ರೀತಿಯ ನಾದಗಳನ್ನು
ಗುರುತಿಸಿ 'ಮಾಹೇಶ್ವರ ಸೂತ್ರಗಳು' ಎಂಬ ಗ್ರಂಥವನ್ನೇ ರಚಿಸಿದ. ಕ್ರಿ. ಪೂ.
ಮುನ್ನೂರಐವತ್ತು ವರ್ಷಗಳ ಹಿಂದೆ ಎಂದು ತಜ್ಞರು ಪಾಣಿನಿಯ ಕಾಲಮಾನವನ್ನು
ಗುರುತಿಸಿದ್ದಾರೆ, ಅಂದರೆ ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ
ನಡೆದ ಕಥೆ ಇದು ಎಂದಾಯಿತು. ತನ್ನ ಭವಿಷ್ಯವನ್ನು ತಾನೇ ಬರೆದುಕೊಂಡ
ಅಪರೂಪದ ಧೀಮಂತ ಭಾರತೀಯನ ಕಥೆ ಇದು.
ಕನಸು ಕಾಣುವುದನ್ನು ಇಂದಿನ ಮಗು ಮರೆತಿದೆ. ಒಂದು ವೇಳೆ ಅಯಾಚಿತವಾಗಿ
ಕನಸು ಬಿದ್ದರೂ ಅದರಲ್ಲಿ ದಿನನಿತ್ಯದ ಓದು, ಮನೆಪಾಠ, ಅನುತ್ತೀರ್ಣತೆಯ ಭಯ,
ಹೆತ್ತವರಿಗೆ ನಿರಾಸೆಯುಂಟುಮಾಡುವ ಹೆದರಿಕೆಗಳು ಪೆಡಂಭೂತವಾಗಿ ಕಾಡುತ್ತವೆ.
ತನ್ನನ್ನು ತಾನು ಆದರಿಸುವ, ತನ್ಮೂಲಕ ಜಗತ್ತನ್ನೇ ಗೆಲ್ಲುವ ಕನಸು ಕಾಣಬೇಕು
ಈ ಕಂದ. ಪಾಣಿನಿಯಂತೆ ತನ್ನ ಭವಿಷ್ಯವನ್ನೂ ಪ್ರತಿಯೊಂದು ಮಗುವೂ ತಾನೇ
ರೂಪಿಸಬೇಕು. ಆಗ ಈ ಜಗತ್ತು ಒಂದು ಸುಂದರ, ಸಹ್ಯ ಜಗತ್ತಾಗುವುದರಲ್ಲಿ ಸಂಶಯವಿಲ್ಲ.
No comments:
Post a Comment