Tuesday, 25 October 2016

ಸತ್ಯ ದರ್ಶನ



ಬಿಂಬಸಾರ ರಾಜ ಮಗಧ ರಾಜ್ಯವನ್ನು ಆಳುತ್ತಿದ್ದ ಕಾಲವದು. ಆಗೊಮ್ಮೆ ಮಹಾವೀರ ಜೈನಮತ ಪ್ರತಿಪಾದಕ, ಆ ದಾರಿಯಾಗಿ ಪಯಣಿಸುತ್ತಿದ್ದ. ವಿಶ್ರಾಂತಿಗೆಂದು ಊರ ಹೊರಗಿನ ಮರಗಳ ತೋಪಿನಲ್ಲಿ ಬಿಡು ಬಿಟ್ಟಿದ್ದ. ಪ್ರತಿದಿನ ಬೆಳಿಗ್ಗೆ ಸಂಜೆ ಜನಸಾಗರ ಆ ತೋಪಿನೆಡೆಗೆ ಹೋಗುವುದನ್ನು ರಾಜ ಬಿಂಬಸಾರ ಗಮನಿಸಿದ. ಪ್ರತಿ ದಿನ ಹೀಗೆ ಮಂದಿ ಹೋಗುವುದೆಲ್ಲಿಗೆ ಎಂದು ವಿಚಾರಿಸಲಾಗಿ ಅವರು ಮಹಾಮುನಿಯ ದರ್ಶನಕ್ಕಾಗಿ ಹೋಗುತ್ತಾರೆ ಎಂದು ತಿಳಿದು ಬಂತು.




Image have all standard licence belongs to Concerned person. Copying is purely offensive.


ಬಿಂಬಸಾರನಿಗೆ ಆಶ್ಚರ್ಯವಾಯಿತು. ತಾನು ಈ ದೇಶದ ರಾಜ. ತಾನು ಹೇಳಿಕಳಿಸಿದರೆ, ಕೆಲವೊಮ್ಮೆ ಒತ್ತಾಯದಿಂದ ಈ ಅರಮನೆಯ ಆವರಣಕ್ಕೆ ಬರುತ್ತಾರೆ. ಇಲ್ಲದಿದ್ದರೆ ಯಾರೂ ಈ ಅಂಗಳದಲ್ಲಿ ಕಾಲಿಡುವುದಿಲ್ಲ. ಅಂಗಳ ಹೋಗಲಿ, ಅರಮನೆಯ ಮುಂದಿರುವ ರಸ್ತೆಯಲ್ಲಿ ನಡೆಯುವುದೂ ಇಲ್ಲ. ಅಂಥವರು ಈಗ ಹೀಗೆ ದಂಡು ಕಟ್ಟಿಕೊಂಡು ಯಾರನ್ನೋ ಕಾಣಲು ಹೋಗುವುದೆಂದರೇನು? ಏನಿದೆ ಅವನಲ್ಲಿ ಅಂಥ ವಿಶೇಷ? ಎಂದುಕೊಂಡು ಮಹಾವೀರ ಮುನಿಗಳ ಬಗ್ಗೆ ವಿಚಾರಿಸಲು ಶುರು ಮಾಡಿದ.ಕಡೆಗೆ ತಿಳಿದು ಬಂದದ್ದೇನೆಂದರೆ, ಮುನಿಗಳಿಗೆ ಸತ್ಯದರ್ಶನವಾಗಿದೆಯಂತೆ. ಆದುದರಿಂದ ಅವರು ಮಹ್ಹಾತ್ಮಾರಂತೆ. ಅವರ ದರುಶನದಿಂದ ಮಂಗಳವಾಗುವುದಂತೆ. ಆದುದರಿಂದ ಮಂದಿ ಹೀಗೆಲ್ಲ ಮುಗಿಬೀಳುತ್ತಾರಂತೆ. ಹೇಗಾದರೂ ಮಾಡಿ ಈ ಸತ್ಯವನ್ನು ತನ್ನದಗಿರಿಸಿಕೊಳ್ಳಬೇಕೆಂಬ ಯೋಚನೆ ಬಿಂಬಸಾರನ ತಲೆಗೆ ಹೊಕ್ಕಿತು. ಸುಲಭವಾದ ಉಪಾಯವೆಂದರೆ, ಇದ್ದವರಿಂದ ಅದನ್ನು ಕೊಂಡುಕೊಳ್ಳುವುದು.ಸರಿ, ತಟ್ಟೆ ತುಂಬಾ ಹೊನ್ನು ತುಂಬಿ ಮಂತ್ರಿಗಳಿಗೆ ಸತ್ಯ ತರುವಂತೆ ಹೇಳಿದ. ಹೋದ ಮಂತ್ರಿಗಳು ಬರಿಗೈಲಿ ಮರಳಿ ಬಂದರು. ಮುನಿಗಳು ಇವರತ್ತ ನೋಡಿ ನಸುನಕ್ಕರು ಮಾತ್ರವಂತೆ. ಸರಿ, ಸ್ವತಃ ಚಕ್ರವರ್ತಿಯೇ ಹೊರಟ ಸತ್ಯ ತರಲು. ಹಿಂದಿನಿಂದ ಗಡಿ ತುಂಬಿದ ಧನವೂ ಹೊರಟಿತು. ಎಲ್ಲವನ್ನೂ ಮುನಿಯ ಪದತಲದಲ್ಲಿಟ್ಟು ಬಿಂಬಸಾರ ತನ್ನ ಬೇಡಿಕೆ ಮುಂದಿಟ್ಟ. ಮುನಿಗಳು ಇವನನ್ನು ದಿಟ್ಟಿಸಿ ನೋಡಿ ನಸುನಕ್ಕರು ಅಷ್ಟೇ. ಸರಿ, ಬಿಂಬಸಾರನಿಗೆ ತನ್ನ ಉಡುಗೊರೆ ಕಡಿಮೆಯಾಗಿರಬೇಕು, ಆದಕ್ಕೆ ಇವರು ಒಪ್ಪುತ್ತಿಲ್ಲ ಎಂದುಕೊಂಡ. ಬಂದಿದ್ದ ಗಾಡಿ ಎರಡಾಯಿತು, ನಾಲ್ಕಾಯಿತು, ಹತ್ತಾಯಿತು.ಕಿಂಚಿತ್ ಬದಲಾವಣೆಯೂ ಮಹಾವೀರರ ಕಡೆಯಿಂದ ಬರಲಿಲ್ಲ. ಕಡೆಗೆ ಬಿಂಬಸಾರ ತಲೆಯ ಮೇಲಿನ ಕಿರೀಟ, ಪಟ್ಟದ ಕತ್ತಿ, ಮುದ್ರೆಯುಂಗುರಗಳನ್ನು ಅವರ ಮುಂದಿಟ್ಟು ಈಗಲಾದರೂ ಸತ್ಯ ದಯಪಾಲಿಸಿ ಎಂದ.
ಆಗ ಮುನಿಗಳು ಬಾಯಿಬಿಟ್ಟರು, "ರಾಜನ್, ಈ ಸತ್ಯವನ್ನು ಹುಡುಕುತ್ತಾ ನಾನು ಬದುಕಿನ ನಲವತ್ತು ವರ್ಷಗಳನ್ನು ಕಳೆದಿದ್ದೇನೆ. ನಾನೊಬ್ಬ ರಾಜಕುಮಾರನಾಗಿದ್ದೆ ಎಂಬುದು ನಿನಗೆ ತಿಳಿದಿರಬೇಕು. ಈ ಸತ್ಯಕ್ಕಾಗಿ ನಾನು ರಾಜ್ಯವನ್ನೂ ತ್ಯಜಿಸಿದೆದುದರಿಂದ ಆದುದರಿಂದ ಅದನ್ನು ಮಾರಲಾರೆ. ಮತ್ತೆ ದಾನ ಮಾಡಲಾರೆ. ಒಂದು ವಿಚಾರವಿದೆ. ನಿನ್ನ ರಾಜ್ಯದಲ್ಲಿ ಇಂಥ ಒಬ್ಬ ಮನುಷ್ಯನಿದ್ದಾನೆ. ಆವನಿಗೂ ಸತ್ಯದರ್ಶನವಾಗಿದೆ. ಬಹುಶಃ ನಿನಗೆ ಅವನಿಂದ ಉಪಯೋಗವಾಗಬಹುದು, ಹೋಗಿ ನೋಡು" ಎಂದರು.




Image have all standard licence belongs to Concerned person. Copying is purely offensive.



ಬಿಂಬಸಾರ 'ಆ' ಮನುಷ್ಯನನ್ನರಸಿ ಹೋದ. ಅವನೊಬ್ಬ ಹಾದಿ, ಬೀದಿಗಳ ಕಸ ಗುಡಿಸುವ ಬಡಮಾಲಿ. ಅರಮನೆಯ ಶುಭ್ರಮನೆಯಲ್ಲಿದ್ದ ಹೊನ್ನ ರಥ ಕೊಳಗೇರಿಯ ಮನೆಯ ಮುಂದೆ ನಿಂತೊಡನೆ ಗಡಬಡಿಸಿ 'ಆ' ಮನುಷ್ಯ ಎದ್ದು ಹೊರಗೆ ಬಂದ. ಮಹಾರಾಜರ ಮುಂದಿಟ್ಟ ಬೇಡಿಕೆ ಕೇಳಿದ, ಮತ್ತೆ ಹೇಳಿದ : "ಮಹಾಪ್ರಭೋ, ನಾನೋರ್ವ ಬಡ ಕೂಲಿ. ಸತ್ಯವಿದೆ ನನ್ನಲ್ಲಿಯವುದೇ ಪ್ರತಿಫಲ ಬೇಡ ನನಗೆ. ನಾನು ನನ್ನ ಸತ್ಯವನ್ನು ನಿಮಗೆ ನೀಡಬಲ್ಲೆ. ಆದರೆ, ನೀವದನ್ನು ತೆಗೆದುಕೊಳ್ಳಬಲ್ಲಿರಾ?. ಸ್ವೀಕರಿಸಲು ಪಕ್ವವಾಗಿದೆಯೇ ನಿಮ್ಮ ಬುದ್ಧಿ, ಮನಸ್ಸು, ದೇಹ? ನಾನು ಅದರ ಬಗ್ಗೆ ಮಾತನಾಡಿದರೆ, ನಿಮಗೆ ಕೇಳಿಸುವುದು ಕೇವಲ ಭಾಷೆಯ, ಪದಗಳ ಚಮತ್ಕಾರ ಮಾತ್ರ. ಸತ್ಯಗಳನ್ನು ಪದಗಳೊಳಗೆ ಸೇರಿಸಲಾಗದು. ಮತ್ತು ನಾನು ಕಂಡ, ಕಾಣುವ ಸತ್ಯ ನಿಮ್ಮ ಸತ್ಯವಾಗದು. ಸತ್ಯದರ್ಶನ ಒಂದು ವೈಯಕ್ತಿಕ ಆತ್ಮಾನುಭವ. ಪದಗಳೊಳಗೆ ಹೆಣೆಯುವ ಕಸರತ್ತಲ್ಲ" ಎಂದ ನಮ್ರತೆಯಿಂದ.ಇಂದು ಪದಗಳ ಕಸರತ್ತು ನಡೆಯುತ್ತಿದೆ. ಸಾಹಿತ್ಯಾತ್ಮಕ ಅಲಂಕಾರದೊಂದಿಗೆ ಮಠಾಧಿಪತಗಳ, ಆಧ್ಯಾತ್ಮಿಕ ನೇತಾರರೆಂದು ಬೀಗುವವರ, ಅದಕ್ಕೆಂದೇ ಅಸಂಖ್ಯ ಪುಸ್ತಕ, ಪತ್ರಿಕೆಗಳಿಂದ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಜನರು ಇದೇ "ಸತ್ಯ" ಎಂದು ನಂಬುತ್ತಾರೆ. ಕೆಲವರು ನಂಬುವ ನಟನೆ ಮಾಡುತ್ತಾರೆ. ಏಕೆಂದರೆ, ಯಾವುದಾದರೂ ಒಂದು ಮತ, ಜಾತಿ, ಪಂಥ ಯಾ ಗುರುವಿನೊಂದಿಗೆ ತಮ್ಮನು ಬಹಿರಂಗವಾಗಿ ಗುರುತಿಸಿಕೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿ ಅದಕ್ಕೆ ಅಲ್ಲವೇ??

Monday, 24 October 2016

ನಾವ್ಯಾರು? ಭಾಗ-೨

ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕಾದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಈ ಬಗ್ಗೆ ತಿಳಿವಳಿಕೆ ಮುರುಟಿ ಹೋಗುತ್ತದೆ. ಹೇಗಿದೆ ಈ 'ನಾನೆಂಬ' ಅಹಂಕಾರ !!?

ಒಂದು ದೃಷ್ಟಾಂತ ಕಥೆ ಹೀಗಿದೆ :
aham brahasmi
Image have all standard licence belongs to Concerned person. Copying is purely offensive.
ಮರಕುಟಿಗ ಒಂದು ಮರದ ಕೊಂಬೆಯ ಮೇಲೆ ಕುಳಿತು ತನ್ನ ಕೊಕ್ಕಿನಿಂದ ಮರ ಕೊರೆಯುತ್ತಿತ್ತು. ಆ ಕ್ಷಣಕ್ಕೆ ಸಿಡಿಲು ಬಡಿದು ಕೊಂಬೆ ತುಂಡಾಗಿ ನೆಲಕ್ಕೆ ಬಿತ್ತು. ಮರಕುಟಿಗನ ಅಹಂಕಾರ ಪುಟಿದೆದ್ದಿತು. "ನಾನೆಂಥ ಬಲಶಾಲಿ ಎಂದು ಜಗತ್ತಿಗೇ ಗೊತ್ತಾಯಿತು. ಒಂದು ಕೊಕ್ಕಿನ ಹೊಡೆತಕ್ಕೆ ಕೊಂಬೆಯೇ ಮುರಿದು ಬಿತ್ತು ನೋಡು" ಎಂದು ಹಾಡಿಕೊಂಡು ಕಾಡು ತಿರುಗಿತು.

ಈ ಅಹಂಕಾರವೇ ಆಂತರ್ಯದ ಒಳಗಿಳಿಯುವಲ್ಲಿನ ಅಡ್ಡಿ. 

ಬದುಕಿನಲ್ಲಿ ಬರುವ ಸುಖ-ದುಃಖ, ಸ್ಥಾನಮಾನ, ಸಿರಿತನ, ಬಡತನ ಎಲ್ಲವೂ ಕಳೆದ ಜನುಮಗಳ ಕರ್ಮಶೇಷದಿಂದ ಪ್ರಾಪ್ತವಾಗುವಂತವು. ಅದನ್ನು ನಮ್ಮದೇ ಸಾಧನೆ ಎಂದುಕೊಳ್ಳುವುದು ಮಾಯೆ. ಈ ಮಾಯೆಯನ್ನು ಗುರುತಿಸಿ, ಅದರ ಆವರಣದಿಂದ ಹೊರಬರುವುದೇ ಬದುಕಿನ ಗುರಿ. ನಾವು ನಾವಲ್ಲ.
Image have all standard licence belongs to Concerned person. Copying is purely offensive.


ಹೀಗೆ ಬಳುವಳಿಯಾಗಿ ಬಂದ ವಂಶಾನುಗತ  ಸ್ವಭಾವಗಳು, ದೇಹಪ್ರಕೃತಿ, ಪರಿಸರ ಇದೆಲ್ಲದರೊಂದಿಗೆ ನಾವೇ ರೂಪಿಸಿ ಜೊತೆಗೆ ತಂದ 'ವಿಧಿ' ಎಂಬ ಜನುಮಾಂತರದ ಕರ್ಮಗಳು.

ಸಂತ ಮೊದಲು ಶ್ರೀಗಂಧ, ಬೆಳ್ಳಿ, ಚಿನ್ನ, ವಜ್ರ ವೈಢೂರ್ಯಗಳ ನಿಧಿ ತೋರಿಸುತ್ತಾನೆ. ಎಲ್ಲಿ ಮನಸ್ಸು ಚಿಂತನೆಗೆ ಹತ್ತಿತೋ ಕರ್ಮಪಾಕದ ಬಾವಿಯೊಳಗಿಳಿದು, ಜಯಿಸಿ ಹೊರಬರುವ ಹಾದಿ ತೋರಿಸುವ ಆಶ್ವಾಸನೆ ನೀಡುತ್ತಾನೆ.
ಮರಕುಟಿಗ ನವಿಲಾಗುತ್ತದೆ. ಬದುಕು ಭವಮುಕ್ತವಾಗುತ್ತದೆ.

Wednesday, 19 October 2016

ನಾವ್ಯಾರು? ಭಾಗ-೧

ಒಬ್ಬ ಕಾಡಿನಲ್ಲಿದ್ದ ಒಣಗಿದ ಮರ ಕಡಿದು, ಸಿಗಿದು ಹೊರೆ ಕಟ್ಟಿ ಪೇಟೆಗೆ ಹೊತ್ತಿಕೊಂಡು ಹೋಗಿ ಮಾರಿ, ಬಂದ ಒಂದಿಷ್ಟು ಕಾಸುಗಳಿಂದ ಕುಟುಂಬದ ಹೊಟ್ಟೆ ಹೊರೆಯುವವನಿದ್ದ.

ಒಂದು ದಿನ ಸರ್ವಸಂಗ ಪರಿತ್ಯಾಗಿಯೊಬ್ಬ ಎದುರಾದ ಇವನಿಗೆ. ತನ್ನ ಕಷ್ಟಗಳನ್ನು ಅವನೊಂದಿಗೆ ಹೇಳಿಕೊಂಡು ಪರಿಹಾರ ಬೇಡಿದ.
ಸಂತನೆಂದ, "ಪರಿಹಾರ ಇದೆ. ಆದರೆ, ನೀನು ತೊಂದರೆಗಳನ್ನು ಎದುರಿಸಲು ತಯಾರಿರಬೇಕು. ನೀನೀಗ ಕಾಡಿನ ಅಂಚಿನಿಂದ ಕಟ್ಟಿಗೆ ಸಂಗ್ರಹಿಸುತ್ತಿರುವೆ. ಒಂದಿಷ್ಟು ಸ್ವಲ್ಪ ಕಾಡಿನ ಒಳಗಡೆ ಹೋಗಿ ನೋಡು. ಉಪಾಯೋಗವಾಗಬಹುದು". ಸರಿ ಎಂದು ಇವನು ಕಾಡಿನ ಒಳಹೊಕ್ಕ.


Who are we?
Image Source : Google Images


ಹೆದರಿಕೆ ಹಿಂದೆಳೆಯುತ್ತಿದ್ದರೂ ಒಂದಿಷ್ಟು ಧೈರ್ಯದಿಂದ ಕಾಡಿನ ಒಳಗಡೆ ನಡೆದ. ಕಾಡಿನ ಒಳಗಡೆ ಥಂಡಿಯಾಗಿ ಶ್ರೀಗಂಧದ ಮರಗಳು.!! ಒಂದು ವರ್ಷ ಕೂತು ತಿನ್ನುವಷ್ಟು ಕಾಸು ಸಿಕ್ಕಿತು...

ಮಾರನೆಯ ದಿನ ಸಂತನನ್ನು ಕಂಡು ಕೃತಜ್ಞತೆ ತಿಳಿಸಿದ.  ಸಂತ ನಸುನಗುತ್ತಾ ಹೇಳಿದ "ಇದು ಒಂದು ಹೆಜ್ಜೆಯಾಯಿತು. ಇನ್ನೆರಡು ಹೆಜ್ಜೆ ಮುಂದಿಡು. ಏನಾಗುವುದೋ ನೋಡೋಣ" ಎಂದ.

ಕೆಲವು ದಿನಗಳ ಅನಂತರ ಇವ ಇನ್ನೂ ಮುಂದೆ ಹೋದ. ಅಲ್ಲಿ ಭರ್ಜರಿ ಬೆಳ್ಳಿಯ ನಿಕ್ಷೇಪವಿತ್ತು. ಸಂತ ಮತ್ತೂ ಮುಂದೆ ಹೋಗುವಂತೆ ಆಗ್ರಹಿಸಿದ. ಅಲ್ಲಿ ಚಿನ್ನ, ವಜ್ರದ ಅಪಾರ ನಿಧಿ ಸಿಕ್ಕಿತು. ಕಟ್ಟಿಗೆ ಮಾರುವ ಬಡವ ಸಿರಿವಂತನಾದ. ತಾನೊಂದು ಕಾಲದಲ್ಲಿ ಪಡುತ್ತಿದ್ದ ಕಷ್ಟಗಳನ್ನು ಮರೆತುಬಿಟ್ಟ. ಆದರೂ ನನ್ನನ್ನು ಈ ಸ್ಥಿತಿಗೆ ತಂದ ಸಂತ ಅವನ ನೆನಪಿನಲ್ಲಿ ಸ್ಥಿರವಾಗಿದ್ದ.

ಒಮ್ಮೆ ಅವನನ್ನು ಕಂಡು ತನ್ನೊಂದು ಸಂದೇಹ ಪರಿಹರಿಸಿಕೊಳ್ಳಬೇಕೆನಿಸಿತು. ಹೋಗಿ, ಅವನ ಮುಂದೆ ಕುಳಿತು ತನ್ನ ಅನುಮಾನ ಮುಂದಿಟ್ಟ. ಅದು ಹೀಗಿತ್ತು : "ನಿಮಗೆ ಕಾಡಿನ ಮಧ್ಯದಲ್ಲಿದ್ದ ಅಪಾರ ನಿಧಿಯ ಅರಿವಿತ್ತು. ಅದನ್ನು ನೀವೇ ಉಪಯೋಗಿಸಿಕೊಂಡು, ಸಿರಿವಂತರಾಗಿ . ಸುಖವಾಗಿರದೇ, ಈ ಕಾಡಂಚಿನಲ್ಲಿ ಮುರುಕು ಗುಡಿಸಲಿನಲ್ಲಿ, ಕಾಲಕಾಲಕ್ಕೆ ಅನ್ನಾಹಾರಗಳಿಲ್ಲದೆ ಬಳಲುವುದೇಕೆ?"


Who are we?
Image Source : Google Images
ಸಂತ ಉತ್ತರಿಸಿದ " ಇವೆಲ್ಲಕ್ಕೂ ಮಿಗಿಲಾದ ಸಂಪತ್ತೊಂದು ನನ್ನೊಳಗೆ ವ್ಯಾಪಕವಾಗಿದೆ. ಅದರ ಮುಂದೆ ಈ ಸಂಪತ್ತು ತೀರಾ ನಗಣ್ಯ. ಮತ್ತೆ ಇದರ ಅಗತ್ಯವೂ ನನಗಿಲ್ಲ. ನಿಜವಾದ ಸಂಪತ್ತನ್ನು ಹೊಂದುವಾಸೆ ಇದ್ದರೆ, ಎಲ್ಲವನ್ನೂ ಬಿಟ್ಟು ಬಾ. ಈ ಮರದ ಕೆಳಗೆ ನನ್ನೊಂದಿಗಿರು. ಅದನ್ನು ಹೊಂದುವ ಬಗ್ಗೆ ಕಲಿಸುತ್ತೇನೆ." ಎಂದ.



ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಇದೆ 'ನಾನೆಂಬ' ಅಹಂಕಾರ!!?



ಭೌತಿಕ ವಿಷಯಸುಖವೇ ಸುಖವೆಂಬ ಚಿಂತನೆಗೆ ನಾವು ಹೊಂದುಕೊಂಡಿದ್ದೇವೆ. ಅದೇ ಬದುಕಾಗಿ ಹೋಗಿದೆ. ಒಂದು ಸಣ್ಣ ಕಿಡಿಯಿಂದ ಮೊದಲಾಗುವ ಈ ಭಾವ,ಒಂದರಿಂದ ಎರಡಾಗಿ, ನಾಲ್ಕಾಗಿ ಮತ್ತೆ ಸಹಸ್ರ ಬಹುವಾಗಿ ನಮ್ಮನ್ನು ತನ್ನಲ್ಲಿ ಸೆಳೆದು ಜೀರ್ಣಿಸಿಕೊಳ್ಳುತ್ತದೆ. ನಮ್ಮ ಅಹಂಕಾರಕ್ಕೆ ಈ ಭೌತಿಕ ವಿಜಯ ನೀರೆರೆದು ಬೃಹತೃಕ್ಷವಾಗಿ  ಬೆಳೆಸುತ್ತದೆ. 




                                                                                                                           --ಮುಂದುವರೆಯುವುದು......

Tuesday, 26 April 2016

ಪರಸ್ಪರ ನಂಬಿಕೆ ನಮ್ಮ ಬದುಕಿನ ಬುನಾದಿ

ಬಹಳ ಹಿಂದೆ ನಡೆದ ಕಥೆಯಂತೆ ಇದು. ಬಹಳ ಓದಿಕೊಂಡಿದ್ದ ಪಂಡಿತನಿಗೆ ಎಣ್ಣೆಯ ಅಗತ್ಯ ಬಿತ್ತು. ಆಗ ಎಣ್ಣೆ ಬೇಕಾದರೆ ಎಣ್ಣೆ ತೆಗೆಯುವ ಗಾಣಿಗರ ಮನೆಯಿಂದ ಪಡೆಯುತ್ತಿದ್ದರು. ಅದು ಶುದ್ಧವೂ, ಕಡಿಮೆ ಬೆಲೆಯದ್ದೂ ಆಗಿರುತಿತ್ತು. ಹೀಗೆ ಪಂಡಿತ ಗಾಣಿಗನ ಮನೆಗೆ ಹೋದ. ಮನೆಯಂಗಳದಲ್ಲಿ ಗಾಣಕ್ಕೆ ಎತ್ತು ಕಟ್ಟಿದ್ದರು. ಅದು ಗಾಣವನ್ನೆಳೆಯುತ್ತಾ ಸುತ್ತು ಸುತ್ತು ತಿರುಗುತಿತ್ತು. ಅದರ ಕತ್ತಿಗೆ ಕಟ್ಟಿದ ಘಂಟೆ ಘಣ ಘಣ ಶಬ್ದ ಮಾಡುತ್ತಿತ್ತು. ಆದರೆ, ಅದರ ಒಡೆಯ ಎಲ್ಲಿಯೂ ಕಾಣಲಿಲ್ಲ. ಪಂಡಿತನಿಗೆ ಆಶ್ಚರ್ಯವಾಯಿತು.



ಧ್ವನಿ ಎತ್ತಿ ಒಡೆಯನನ್ನು ಹೊರಗೆ ಕರೆದರು. ತಮಗೆ ಬೇಕಾಗಿರುವುದನ್ನು ತಿಳಿಸಿ, "ಅಯ್ಯಾ! ನೀನಿಲ್ಲದಿರುವಾಗ ಈ ಎತ್ತು ಸರಿಯಾಗಿ ಗಾಣ ತಿರಿಗಿಸುತ್ತದೆ ಎಂದು ನಿನಗೆ ಹೇಗೆ ತಿಳಿಯುತ್ತದೆ?" ಎಂದು ಪ್ರಶ್ನಿಸಿದರು. 


"ಸ್ವಾಮೀ, ಅದರ ಕತ್ತಿನಲ್ಲಿರುವ ಘಂಟೆ ಶಬ್ದ ಮಾಡುತ್ತಿದ್ದರೆ ಅದು ತಿರುಗುತ್ತಿದೆ ಎಂದು ಅರ್ಥ, ಶಬ್ದ ನಿಂತರೆ ಅದೂ ನಿಂತಿದೆ ಎಂದರ್ಥ. ನಾನು ಬೇರೆ ಕೆಲಸ ಮಾಡುತ್ತಿರುತ್ತೇನೆ. ಅದು ಅದರ ಪಾಡಿಗೆ ಕೆಲಸ ಮಾಡುತ್ತದೆ" ಎಂದುತ್ತರಿಸಿದ.



"ಸರಿಯೇ. ಆದರೆ ಅದು ನಿಂತ ಕಡೆಯೇ ತಲೆಯಲ್ಲಾಡಿಸುತ್ತಿದ್ದರೂ ಶಬ್ದವಾಗುತ್ತದಲ್ಲ!? ನಿನಗೆ ಮೋಸ ಮಾಡಲೆಂದಲ್ಲ, ಸುಸ್ತಾಗಿರಬಹುದು. ಆಗ ಅನಿವಾರ್ಯವಾಗಿ ಅದು ಕೆಲಸ ಮಾಡದು. ಏನೆನ್ನುತ್ತಿ?"



ಎತ್ತಿನೊಡೆಯ ಪ್ರೀತಿಯಿಂದ ಎತ್ತಿನ ಕತ್ತು ಸವರುತ್ತಾ, "ಸ್ವಾಮೀ, ನಾನಾಗಲೀ ನನ್ನ ಎತ್ತಾಗಲಿ ಓದಿ ಕೊಂಡವರಲ್ಲ! ಬುದ್ಧಿವಂತರಲ್ಲ! ಸರಳ ಬದುಕು ನಮ್ಮದು. ನಾನಿದನ್ನು ಪ್ರೀತಿ, ಗೌರವಗಳಿಂದ ಕಾಣುತ್ತೇನೆ. ಅದರ ಮನಸ್ಸಿನಲ್ಲೂ ಹಾಗೇ ಇದೆ ಎಂಬ ನಂಬಿಕೆ ನಮ್ಮದು. ಒಂದು ವೇಳೆ ಸುಸ್ತಾಗಿ ಅದು ವಿಶ್ರಾಂತಿ ಪಡೆಯಬಹುದು. ಆದರೆ, ಆಗ ಅದು ಘಂಟೆಯ ಶಬ್ದ ಮಾಡಿ, ನಾನು ಕೆಲಸ ಮಾಡುತ್ತಿದ್ದೇನೆ ಎಂಬ ತಪ್ಪು ಭಾವನೆ ತರಲು ಮಾತ್ರ ಪ್ರಯತ್ನಿಸದು. ಅದು ಅಗತ್ಯವೂ ಇಲ್ಲ. ಪರಸ್ಪರ ನಂಬಿಕೆ ನಮ್ಮ ಬದುಕಿನ ಬುನಾದಿ" ಎಂದ.




ಬದುಕೇ ನಂಬಿಕೆಯ ಸಂಕೀರ್ಣ ವರ್ತುಲದೊಳಗಿದೆ. ಕನಿಷ್ಠ ನಮ್ಮ ಜೀವಿತ ಕಾಲದಲ್ಲಿ ಸೂರ್ಯ ಉರಿದುರಿದು ಕಪ್ಪು ರಂಧ್ರವಾಗಲಾರ ಎಂದು ನಂಬಿ ಅವನನ್ನು ಪ್ರತ್ಯಕ್ಷ ಭಗವಂತ ಎಂದು ಆರಾಧಿಸುತ್ತೇವೆ. ಅವನಿಂದ ಹೊರಹೊಮ್ಮುವ ನೀಲಾತೀತ ಕಿರಣಗಳಿಂದ ನಾನಾ ರೋಗಗಳು ಬರುತ್ತವೆ ಎಂದು ತಿಳಿದಿದೆ ನಮಗೆ. ಆದರೆ ಅದರಿಂದ ರಕ್ಷಣಾ ಕವಚಾವಾಗಿ ಓಝೋನ್ ಆವರಣವನ್ನೂ ನೀಡಿದೆ ಪ್ರಕೃತಿ. ನಮ್ಮ ದುರಾಸೆ, ಅಜ್ಞಾನದಿಂದ ಅದನ್ನು ಹಂತ ಹಂತವಾಗಿ ನಾಶಪಡಿಸುವುದರಲ್ಲಿ ಸೂರ್ಯನ ಪಾತ್ರವೇನೂ ಇಲ್ಲವಲ್ಲ! ಅವನ ಸುತ್ತ ನಮ್ಮ ಪರಿಭ್ರಮಣದಿಂದ ಹಗಲು-ರಾತ್ರಿ, ಮಳೆ-ಬೆಳೆಗಳು ಕ್ರಾಮಭದ್ದವಾಗಿ ನಡೆಯುತ್ತಿವೆ. ಆದರೆ ಮುಂದಿನ ಕ್ಷಣ ನಮ್ಮ ಉಹೆಗೂ ನಿಲುಕದ ಯಾವುದೋ ಒಂದು ಆಕಾಶಕಾಯವೋ ಮತ್ತಿನ್ನೇನೋ ಭೂಮಿಗೆ ಬಡಿಯಲೂಬಹುದು. ಆದರೆ ಹಾಗಾಗಲಾರದು ಎಂಬ ನಂಬಿಕೆಯ ಸೂರಿನಡಿ, ಕೆಟ್ಟ ಕನಸುಗಳಿಲ್ಲದೇ ರಾತ್ರಿ ಕಳೆಯುತ್ತದೆ.



ಪ್ರಕೃತಿ ನಮಗೆ ಅಂದರೆ, ಮನುಷ್ಯ, ಪಕ್ಷಿ, ಪ್ರಾಣಿ, ಸಸ್ಯಸಂಕುಲಕ್ಕೆ ಅಗತ್ಯವಿರುವ ಎಲ್ಲಾ ಸರಕುಗಳನ್ನು ಯಥೇಚ್ಛವಾಗಿ ಸ್ರವಿಸುತ್ತದೆ. ಮನುಷ್ಯನ ಅತಿಯಾಸೆ, ಪ್ರಕೃತಿಯ ಮೇಲೆ ಅವನ ಅಪನಂಬಿಕೆಯಿಂದ ಅಸಮತೋಲನವಾಗುತ್ತದೆ. ನಿತ್ಯಹರಿದ್ವರ್ಣದ ಕಾಡು ನಾಶ, ಪಶು-ಪಕ್ಷಿ ತಳಿಗಳ ಅವನಾಶ, ಮನುಷ್ಯ ಮನುಷ್ಯರಲ್ಲೇ ಸಾಮಾಜಿಕ, ಆರ್ಥಿಕ ಬೇಧಗಳು. ಇವೆಲ್ಲ ನಮ್ಮಿಂದ. ಅಂದರೆ ಮನುಷ್ಯರಿಂದ  ಸೃಷ್ಟಿಸ್ಪಟ್ಟಿದ್ದು. 

ಋಷಿವಾಕ್ಯ ಹೇಳುತ್ತದೆ, "ಸಮಾನೀ ವ ಆಕೂತಿಃ | ಸಮಾನಾ ಹೃದಯಾನಿ ವಃ ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || ಉದ್ದೇಶಗಳು ಒಂದಾಗಿರಲಿ. ಹೃದಯಗಳು ಒಂದಾಗಿ ಮಿಡಿಯಲಿ. ಮನಸ್ಸು ಒಂದೇ ಆಗಿರಲಿ. ಈ ರೀತಿ ನಮ್ಮ ಒಳಿತು ಒಟ್ಟಿಗೆ ಸಿದ್ಧಿಸಲಿ."

Friday, 4 March 2016

ಅತ್ಯುತ್ತಮರು ಯಾರು?

ಒಂದಾನೊಂದು ಕಾಲದಲ್ಲಿ ಒಬ್ಬನಿಗೆ ಮೂವರು ಗಂಡು ಮಕ್ಕಳಿದ್ದರು. ಮೂವರೂ ವೈದ್ಯ ವೃತ್ತಿಯನ್ನಾರಿಸಿಕೊಂಡರು. ಮೂರು ಮಂದಿ ವೈದ್ಯರಾದರೂ ಕಡೆಯ ಮಗ ಜಗದ್ವಿಖ್ಯಾತನಾದ. ಯಾರ ಬಾಯಲ್ಲಿ ನೋಡಿದರು ಕೊನೆಯವನದೇ ಮಾತು. ಪ್ರಖ್ಯಾತಿಯೊಂದಿಗೆ ಅಪಾರ ಸಿರಿವಂತನೂ ಆದ. ಏಕೆಂದರೆ, ಮಿಕ್ಕೆಲ್ಲ ವೈದ್ಯರೂ ಅಸಾಧ್ಯ ಎಂದು ಕೈಬಿಟ್ಟ ರೋಗಿಗಳಿಗೂ ಅವನು ಚಿಕಿತ್ಸೆ ನೀಡುತ್ತಿದ್ದ. ಹೆಚ್ಚಿನವರು ಗುಣಮುಖರಾಗುತ್ತಿದ್ದರು. ಇದೇ ಅವನ ಪ್ರಖ್ಯಾತಿಯ ಗುಟ್ಟಾಗಿತ್ತು.
Image Source : Google Images






ಇದರ ಬಗ್ಗೆ ವೈದ್ಯರ ತಂದೆಯನ್ನು ಪ್ರಶ್ನಿಸಿದಾಗ, "ನನ್ನ ಮೂವರೂ ಮಕ್ಕಳು ವೈದ್ಯ ವಿದ್ಯೆಯಲ್ಲಿ ಪಂಡಿತರೇ! ಆದರೆ ಮೂವರೂ ರೋಗಿಗಳನ್ನು ನೋಡುವ ದೃಷ್ಟಿಕೋನವೇ ಬೇರೆ. ಮೊದಲನೆಯವ ಅವನ ವಲಯದಲ್ಲಿ ಬರುವವರನ್ನು ನಿರೋಗಿಗಳಾಗಿ ಬದುಕುವುದು ಹೇಗೆ ಎಂಬ ಬಗ್ಗೆ ತಿಳಿಸಿ ಹೇಳುತ್ತಾನೆ. ಉತ್ತಮವಾದ ಆಹಾರ, ವ್ಯಾಯಾಮ, ಮನಸ್ಥಿತಿಗಳನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು, ದೇಹಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ತನ್ಮೂಲಕ ರೋಗಗಳನ್ನು ಬರದಂತೆ ತಡೆಗಟ್ಟಬಹುದು ಎನ್ನುವುದು ಅವನ ರೋಗ ವಿಧಾನದ ಸೂತ್ರ. ಆದರೆ, ಇದರಿಂದ ಅವನ ಉಪಸ್ಥಿತಿಯೇ ಜನರಿಗೆ ತಿಳಿದಿಲ್ಲ. ಅವನು ಅತ್ಯುತ್ತಮ ವೈದ್ಯ. ಆದರೂ ಮಂದಿ ಅವನನ್ನು ಗುರುತಿಸುವುದಿಲ್ಲ. ಅವನು ಅಜ್ಞಾತನಾಗಿಯೇ ಉಳಿದಿದ್ದರೂ ನನ್ನ ಅಭಿಮತದಂತೆ ಇವನು, ಇವನಂಥವರೇ ಮೊದಲಿನ ಸಾಲಿನ ವೈದ್ಯರು!


ಇನ್ನು ಎರಡನೆಯವನನ್ನು ನೋಡಿದಾಗ ಇವನು ರೋಗಗಳನ್ನು ಮೊದಲ ಮತ್ತು ಎರಡನೆಯ ಹಂತದಲ್ಲಿ ಗುರುತಿಸುತ್ತಾನೆ. ತಕ್ಕ ಚಿಕಿತ್ಸೆ ನೀಡುತ್ತಾನೆ. ನೋವು ಪರಿಹರಿಸುತ್ತಾನೆ. ಆದರೆ ತೀರಾ ಕೈ ಮೀರುವವರೆಗೆ ಇವನು ಕಾಯುವುದಿಲ್ಲ. ಆದುದರಿಂದ ಇವನೊಬ್ಬ ಸಾಮಾನ್ಯ ವೈದ್ಯ ಎಂದು ಹೆಸರುವಾಸಿಯಾಗಿದ್ದಾನೆ. ಹತ್ತರಲ್ಲಿ ಇವ ಹನ್ನೊಂದನೆಯವನು.


ಕಡೆಯ ಮಗ ಹಾಗಲ್ಲ. ರೋಗ ತೀರಾ ವಿಷಮಿಸುವವರೆಗೆ ಕಾದು ಅನಂತರವೇ ಚಿಕಿತ್ಸೆಗೆ ಕೈ ಹಾಕುತ್ತಾನೆ. ಅಥವಾ ರೋಗ ವಿಷಮಿಸಿದೆ ಎಂಬ ಭ್ರಮೆ ಹುಟ್ಟಿಸಿ, ರೋಗಿ ಹಾಗೂ ರೋಗಿಯ ಸಂಬಂಧಿಕರಿಗೆ ಗೊಂದಲ ಉಂಟು ಮಾಡುತ್ತಾನೆ. ಅನಂತರ ನಾನಾ ತರದಲ್ಲಿ ಚಿಕಿತ್ಸೆ ನಡೆಸುವ ದೃಶ್ಯಗಳು ಸಂಯೋಜಿಸಲ್ಪಡುತ್ತವೆ. ಕಾಣುವವರು ಮೂಗಿನ ಮೇಲೆ ಬೆರಳಿಡುವಂತೆ ಇವು ನಡೆಯುತ್ತವೆ. ಕಡೆಗೆ ರೋಗಿ ಗುಣಮುಖನಾಗುತ್ತಿರುವಾಗ ಇವನ ಕೀರ್ತಿಗಾನ ನಡೆಯುತ್ತದೆ. ಇವನು ಧನ್ವಂತರಿಯ ಅವತಾರ ಎಂಬ ಮಾತು ಹರಡುತ್ತದೆ.


 ಆದರೆ ವಾಸ್ತವದಲ್ಲಿ ಇವನು ಅಧಮಾಧಮ. ಒಂದು, ಅವನ ಚಿಕಿತ್ಸೆಯ ಹಿಂದಿರುವ ಕುತ್ಸಿತಭಾವ! ಹಣ ಮತ್ತು ಕ್ಯಾತಿಯ ಕಾಮನೆಗಾಗಿ ನಡೆಸುವ ಅಧರ್ಮ! ತನ್ಮೂಲಕ ಜೀವಗಳಿಗಾಗುವ ಅನಾನುಕೂಲ ಹಾಗೂ ನೋವು. ಇವುಗಳಿಂದ ಅವನು ಖ್ಯಾತನಾದರೂ ಗಣ್ಯ ಎನಿಸಿದರೂ ಅವನು ಅಧಮಾಧಮ!

ಎರಡನೆಯವನ ಬಗ್ಗೆ ಹೆಚ್ಚೇನೂ ಹೇಳಲಿಕ್ಕಿಲ್ಲ. ಅವನೊಬ್ಬ ಸಾಮಾನ್ಯ ವೈದ್ಯ. ರೋಗ ಪತ್ತೆ ಹಚ್ಚಿ ಅದನ್ನು ನಿಧಾನಿಸುವುದು ಮಾತ್ರ ಅವನ ಕೆಲಸ. ಆದರೆ ಮೊದಲವನೆಯನೇ ಅತ್ಯುತ್ತಮ ವೈದ್ಯ ಹಾಗೂ ಅತ್ಯುತ್ತಮ ಮನುಷ್ಯ ಜೀವಿ"


Image Source : Google Images.


ಈ ತತ್ವವನ್ನು ಬದುಕಿಗೆ ಅನ್ವಯಿಸಿ ನೋಡೋಣ. ಅತ್ಯುತ್ತಮ ರಾಜಕಾರಿಣಿ ಯಾರು? ದೇಶದಲ್ಲಿ ಕ್ಷೋಭೆಯುಂಟಾಗದಂತೆ, ಸರ್ವ ರೀತಿಯಲ್ಲಿ ಶಾಂತಿ ಇರುವಂತೆ ಯೋಜಿಸುವವನೇ ಉತ್ತಮ ರಾಜಕಾರಿಣಿ ಅಲ್ಲವೇ?

ಅತ್ಯುತ್ತಮ ಧರ್ಮಗುರುವ್ಯಾರು? ಯಾವುದೇ ಗೊಂದಲಗಳುಂಟಾಗದಂತೆ ಸತ್ಯ-ಧರ್ಮಗಳ ಹಾದಿಯಲ್ಲಿ ನಡೆದು, ತನ್ನವರನ್ನು ನದೆಸುವವನೆ ಉತ್ತಮ ಗುರು.

ಹೀಗೆ ರಕ್ಷಣೆ, ವಿದ್ಯಾದಾನದಿಂದ ಮೊದಲು ಮಾಡಿ ಪ್ರತಿಯೊಂದು ರಂಗಕ್ಕೂ ಈ ತತ್ವವನ್ನು ಅನ್ವಯಿಸಿ ನೋಡಿದಾಗ, ಇಂದು ನಾವು ಕಾಣುವ ಪ್ರತಿಯೊಂದು ಗೌದಲುಗಳಿಗೂ ಮೂರನೆಯ ವರ್ಗದ ಅಧಮಾಧಮರೇ ಕಾರಣ ಎಂಬ ಅರಿವಾಗುತ್ತದೆ.


Thursday, 11 February 2016

ಮಾತು ಮನೆ ಹಾಳು ಮಾಡೀತು!

ಒಂದು ಹಳ್ಳಿಯಲ್ಲಿ ಗಂಡ-ಹೆಂಡತಿ ಸುಖವಾಗಿದ್ದರು. ಮದುವೆಯಾಗಿ ಹತ್ತು ವರ್ಷ ಕಳೆದಿರಲಿಲ್ಲ. ಅನ್ಯೋನ್ಯತೆಯ ಶಿಖರದಲ್ಲಿ ವಿಹರಿಸುವ ಕಾಲವಾಗಿತ್ತು. ಗಂಡ ಬೆಳಗಾಗೆದ್ದು ಹೊಲಕ್ಕೆ ಹೋಗುತ್ತಿದ್ದ. ಹೆಂಡತಿ ರೊಟ್ಟಿ,ಪಲ್ಲೆ, ಮೊಸರು ಕಟ್ಟಿಕೊಂಡು ಮಧ್ಯಾಹ್ನ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿದ್ದಳು. ಇಬ್ಬರೂ ಲಲ್ಲೆಯಾಡುತ್ತಾ ಊಟ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಗಂಡ ಮನೆಗೆ ಮರಳುತ್ತಿದ್ದ. ದಾರಿಯಲ್ಲಿ ಒಂದೇ ಒಂದು ಸಣ್ಣ ಗಿಳಾಸು ಹೆಂಡ ಹೊಟ್ಟೆ ಸೇರುತಿತ್ತು. ಆದರೆ ಅದರಿಂದ ಅವರ ಅನ್ಯೋನ್ಯತೆಗೇನೂ ತೊಂದರೆ ಬಂದಿರಲಿಲ್ಲ. ಎಲ್ಲಿಯವರೆಗೆಂದರೆ, ಒಂದು ದಿನ ಊರು ತಿರುಗುವ ಜೋಗಿಯೊಬ್ಬನ ಭೇಟಿಯಾಗುವ ತನಕ...


Image Source: Art and crafts school US












         ಒಂದು ಸಂಜೆ ಹೆಂಡದಂಗಡಿಯಲ್ಲಿ ಜೋಗಿಯ ಮಾತುಕತೆ ನಡೆದಿತ್ತು. ಮಾತಿನ ಮಧ್ಯೆ ಅವನು, "ಹೆಣ್ಣು ಬರೀ ಹೆಣ್ಣೆಂದು ನಂಬಬೇಡಿ. ಅವಳಲ್ಲಿ ಮೂವತ್ತಾರು ಕಪಟ ಗುಣಗಳಿವೆ. ಸಮಯ ಬಂದರೆ ಹೆಣ್ಣು ಅದನ್ನು ಉಪಯೋಗಿಸುತ್ತಾಳೆ. ಎಂದು, ಯಾವುದಕ್ಕೆ, ಹೇಗೆ ಇವುಗಳನ್ನು ಬಳಸುತ್ತಾಳೋ ಯಾರು ಕಾಣರು" ಎಂದ. ನಮ್ಮ ರೈತನ ತಲೆಗೆ ಇದು ಬಲವಾಗಿ ನಾಟಿತು. ಸೀದಾ ಮನೆಗೆ ಬಂದ. ಹೆಂಡತಿಯ ಮುಂದೆ ನಿಂತು ಜೋಗಿ ಹೇಳಿದ ಮಾತುಗಳನ್ನ ತಿಳಿಸಿದ ಮತ್ತು ನಿನ್ನ ಮೂವತ್ತಾರು ಗುಣಗಳನ್ನು ತೋರಿಸು ಎಂದ. ಪಾಪ, ಹೆಂಡತಿಗೆ ತಲೆ-ಬುಡ ಅರ್ಥವಾಗಲಿಲ್ಲ. ಇಂಥದನ್ನು ತಾನೆಂದೂ ಕೇಳಿದ್ದಿಲ್ಲ ಎಂದಳು. ಇವನು ಕೇಳಲೇ ಇಲ್ಲ. ಅನುನಾಯಿಸಿದ, ಗದರಿದ. ಯಾವುದೂ ಕೆಲಸ ಮಾಡದಾಗ ನಾಲ್ಕು ಬಾರಿಸಿದ. ಹೆಂಡತಿ ಹೈರಾಣಾದಳು.

ಇದು ಮಾರನೆಯ ದಿನವೂ ಮುಂದುವರಿಯಿತು. ಸಂಶಯ ಭೂತ ಒಮ್ಮೆ ಒಳಹೊಕ್ಕಿತೆಂದರೆ, ಅದನ್ನು ಹೊರಹಾಕುವುದು ಬಲು ಕಷ್ಟ. ಅದು ಒಳ ಬರದಂತೆ ನೋಡಿಕೊಳ್ಳುವುದೇ ಒಳಿತು. ಹೀಗೆ ಜೋಗಿಯ ಮಾತೆಂಬ ಭೂತ ನಮ್ಮ ಈ ಸುಖಿ ಸಂಸಾರವನ್ನು ದುಃಖಿಯನ್ನಾಗಿ ಮಾಡಿತು. "ನಿನ್ನ ಮೂವತ್ತಾರು ಗುಣ ತೋರಿಸುವ ತನಕ ನಾನು ನಿನ್ನೊಂದಿಗೆ ಸುಖವಾಗಿರಲಾರೆ" ಎಂದ ಪತಿರಾಯ. ಈಗ ಹೆಂಡತಿ ಎಚ್ಚರಗೊಂಡಳು. ಹೇಗಾದರೂ ಇವನ ಮೂರ್ಖತನಕ್ಕೆ ಮದ್ದೆರೆಯಬೇಕು ಎಂದು ಯೋಚಿಸತೊಡಗಿದಳು.

ಒಂದೆರಡು ದಿನ ಕಳೆದಿರಬಹುದು. ಮಧ್ಯಾಹ್ನದ ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೊರಟಿದ್ದಳು. ದಾರಿಯಲ್ಲಿ ಸಣ್ಣ ಕೊಳದ ತುಂಬಾ ಮೀನಿರುವುದು ಕಂಡಿತು. ಚಕ್ಕನೆ ಅವಳಿಗೊಂದು ಉಪಾಯ ಹೊಳೆಯಿತು. ನೀರಿನ ಮಡಕೆ ತುಂಬಾ ಮೀನು ಹಾಕಿಕೊಂಡು ತಮ್ಮ ಹೊಲಕ್ಕೆ ಹೋದಳು.

ಮರದ ಕೆಳಗೆ ಸಣ್ಣದೊಂದು ಗುಂಡಿ ತೋಡಿ ತಂದ ನೀರು, ಮೀನು ಸುರಿದು, ಅಣತಿ ದೂರದಲ್ಲಿ ಬುತ್ತಿ ಇಟ್ಟು ಗಂಡನನ್ನು ಕರೆದಳು. ಗಂಡ ಬರುತ್ತಿರುವಂತೆ, ಮೀನು ಕಂಡ. "ಅರೆ! ಇದೇನು, ಇಂದು ಇಲ್ಲಿ ಮೀನು" ಎಂದು ಹೆಂಡತಿಯನ್ನು ಕರೆದು ತೋರಿಸಿದ. ಅವಳು ಏನೂ ಗೊತ್ತಿಲ್ಲದವಳಂತೆ ನೀರಿನ ಮಡಕೆಯಲ್ಲಿ ಮೀನು ಹಿಡಿದು ತುಂಬಿಕೊಂಡಳು. ಗಂಡ ಸಂಜೆಯ ಉಟಕ್ಕೆ ಮೀನು ಹುರಿಡಿಡುವಂತೆ ಹೇಳಿದ.

ಹುಡುಗಿ ಮೀನು ಕರಿದು, ಅಡುಗೆ ಮನೆಯ ಅಟ್ಟದ ಮೇಲೆ ಬಚ್ಚಿಟ್ಟಳು. ಗಂಡ ಎಂದಿನಂತೆ ಸಾರಾಯಿ ಅಂಗಡಿಗೆ ಹೋಗಿ ಮೀನಿನ ಉಟಕ್ಕೆ ತಯಾರಾಗಿ ಮನೆಗೆ ಬಂದ. ತಟ್ಟೆಗೆ ಬಿದ್ದದ್ದು ಬರೀ ಬೇಳೆ,ತರಕಾರಿ ಮಾತ್ರ! ಇವನ ಪಿತ್ತ ನೆತ್ತಿಗೇರಿತು. "ಮೀನು ಎಲ್ಲಿ?" ಎಂದರೆ, "ಯಾವ ಮೀನು?" ಎಂದಳು ಹೆಂಡತಿ. ಮಾತಿಗೆ ಮಾತು ಬೆಳೆಯಿತು. ಗಂಡ ಕೈ ಎತ್ತಿದ. ಹೆಂಡತಿ ಎಂದಿಗಿಂತ ಜೋರಾಗಿ ಬೊಬ್ಬೆ ಹೊಡೆದಳು. ನೆರೆಕೆರೆಯವರು ಒಟ್ಟಾದರು. ಇವ ಪಾಪ, ಇದ್ದ ಸಂಗತಿ ತಿಳಿಸಿದ. ಕೇಳಿದ ಮಂದಿ ಬಿದ್ದು ಬಿದ್ದೂ ನಕ್ಕರು. "ಮಾವಿನಮರದ ಕೆಳಗೆ ಹೊಂಡ ಎಂದರೇನು? ಅದರಲ್ಲಿ ಭರ್ತಿ ಬಾಳೇಮೀನು ಎಂದರೇನು? ಹಗಲಿನಲ್ಲಿಯೂ ಕುಡಿದು ಕಂಡಿರಬೇಕು" ಎಂದರು. ಕಾರಣವಿಲ್ಲದೆ ಹೂವಿನಂಥ ಹುಡುಗಿಯ ಮೇಲೆ ಕೈಮಾಡುತ್ತೀಯಾ? ಎಂದು ಮೈ ಪುಡಿಯಾಗುವಷ್ಟು ಬಡಿದರು. ನಾಳೆ ಅವರ ತವರಿಗೆ ಹೇಳಿಕಳಿಸುತ್ತೇವೆ ಎಂದು ಹೆದರಿಸಿ ಹೊರಟುಹೋದರು.

ಅಂಗಳದಲ್ಲಿ ನರಳುತ್ತಾ ಬಿದ್ದವನನ್ನು ಆಸರೆ ಇತ್ತು ಮನೆ ಒಳಗೆ ಕರೆತಂದಳು ಹೆಂಡತಿ. ಬಿಸಿನೀರಿನಲ್ಲಿ ಬಟ್ಟೆ ಅದ್ದಿ ಶಾಖ ಕೊಟ್ಟಳು. ಗಾಯಗಳಿಗೆ ಮುಲಾಮು ಹಚ್ಚಿದಳು. ಮುಂದೆ ತಟ್ಟೆ ಇಟ್ಟು ಬಿಸಿಬಿಸಿ ಅನ್ನ, ಸಾರು, ಹುರಿದ ಮೀನು ಬಡಿಸಿದಳು. ಅಚ್ಚರಿಯಿಂದ ಕಣ್ಣು ಕಣ್ಣು ಬಿಟ್ಟ ಗಂಡನನ್ನು ನಸುನಗುತ್ತಾ ನೋಡಿ, "ಮೂವತ್ತಾರು ಗುಣಗಳಲ್ಲಿ ಇದು ಒಂದನೆಯದು. ಉಳಿದವುಗಳನ್ನು ನೀನು ಬೇಕೇ ಬೇಕೆಂದರೆ ಕಾಲಕ್ರಮೇಣ ತೋರಿಸುತ್ತೇನೆ. ಇರಲಿ, ಹೇಗಿತ್ತು ಮೊದಲನೆಯದು, ಖುಷಿಯಾಯಿತೆ? ಊಟ ಮಾಡಿದ ನಂತರ ಹೇಳುವಿಯುವಂತೆ" ಎಂದಳು.


Image Source: National Geographic magazine




                                                                              ಇದು ಒಂದು ಚೆಂದದ ವಾರ್ಲೀ ಕಥೆ. ವಾರ್ಲೀ ಬುಡಕಟ್ಟು ಜನಾಂಗದಲ್ಲಿ ಹೆಣ್ಣಿಗೆ ಗೌರವ ಸ್ಥಾನವಿದೆಯಂತೆ ಅಥವಾ ಇತ್ತಂತೆ. ಅವರಲ್ಲಿ ಮಾತ್ರವಲ್ಲ, ಭಾರತೀಯ ಸಂಸ್ಕ್ರತಿಯಲ್ಲೇ ಹೆಣ್ಣನ್ನು ದೇವತೆ, ಅವಳಿಂದಲೇ ಕುಟುಂಬ, ಅವಳೇ ದೇವತೆ ಎನ್ನುತ್ತಿದ್ದ ಕಾಲವೂ ಒಂದಿತ್ತಲ್ಲ!!? 

Tuesday, 12 January 2016

ಅಂತಃಕರಣ

Theme: All love is expansion; all selfishness is contraction. love is therefore the only law of life. He who loves lives, he who is selfish is dying . Therefore, love for love's sake, because it is law of law, just as you breathe to live.


'
ಕಡು ಲೋಭಿಯೊಬ್ಬನಿದ್ದ. ಆತುಲೈಶ್ವರ್ಯವಿದ್ದರೂ ಕೈಯೆತ್ತಿ ಚಿಕ್ಕಾಸನ್ನೂ ದಾನ ಮಾಡುತ್ತಿರಲಿಲ್ಲ. ಅವನ ಮನೆಗೆಂದೂ ಅತಿಥಿಗಳು ಬರುವ ಪದ್ಧತಿ ಇರಲಿಲ್ಲ. ಏಕೆಂದರೆ, ಮನೆಯ ಸುತ್ತ ಎತ್ತರದ ಗೋಡೆ ಕಟ್ಟಿ, ಪುಟ್ಟದೊಂದು ಬಾಗಿಲಿಟ್ಟು, ಅದಕ್ಕೆ ಬೀಗ ಜಡಿದು, ಬೀಗದ ಕೈಯನ್ನು ಸದಾ ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ. ಮನೆಯಲ್ಲಿ ಎಲ್ಲರಿಗೂ ಅರ್ಧ ಹೊಟ್ಟೆಯ ಊಟ ಮಾತ್ರ! ಅಗತ್ಯವಿರುವಷ್ಟೇ ಬಟ್ಟೆಬರೆ! ಇವೆಲ್ಲದಕ್ಕೂ ಚೆಂದದ ಹೆಸರಿಟ್ಟಿದ್ದ."ಸರಳ ಬದುಕು"
ಮನೆಯವರೆಲ್ಲ ಇದರಿಂದ ಬೇಸತ್ತುಹೋಗಿದ್ದರು. ಊರಿನವರು ಎದುರೆದುರಿಗೇ "ಉಂಡ ಕೈಯಿಂದ ಕಾಗೆ ಓಡಿಸುವ ಜಿಪುಣ" ಎಂದು ಆಡಿಕೊಂಡು ನಗುತ್ತಿದ್ದರು.

The child in us. Traveling from Zhangmu (Nepal-Tibet border) to the Tibetan capital - Lhasa you can see road workers all along the Friendship Highway. The Chinese industrialization has affected Tibet a great deal. But despite the Chinese government's attempts to settle Chinese population across the Tibetan Plateau, the Roof of the World still remains a place where only the Tibetans can survive its harsh climate conditions. A Tibetan boy holding the hand of his father who works on the road construction, Tibet. (Photo and caption by Aanand Joshi)
ಹೆಂಡತಿ ಮಾತ್ರ ಸಮಯ ಸಿಕ್ಕಾಗಲೆಲ್ಲ, "ಸಿರಿ ಬರುವುದು ಊರಿನ ಹಿತಕ್ಕಾಗಿ, ಅಗತ್ಯವಿರುವವರಿಗೆ ಸಹಾಯ ಮಾಡಲಿಕ್ಕಾಗಿ. ನಾವು ಈ ಐಶ್ವರ್ಯದ ಕಾವಲುಗಾರರು ಮಾತ್ರ. ಊರಿನಲ್ಲಿ ತುತ್ತಿಗಾಗಿ ಪರದಾಡುವವರಿಗೆ ಅನ್ನ ಹಾಕಿದರೆ ಪರಮಾತ್ಮನಿಗೆ ತೃಪ್ತಿಯಾಗುತ್ತದೆ. ಕೂಡಿಟ್ಟು ಸತ್ತರೆ ರೌರವ ನರಕ ಪ್ರಾಪ್ತಿ ಖಂಡಿತ" ಎಂದೆಲ್ಲ ಹಿತ ಹೇಳುವ ಪ್ರಯತ್ನ ಮಾಡುತ್ತಿದ್ದಳು. ಎಲ್ಲವೂ ಬೊರ್ಕಲ್ಲ ಮೇಲೆ ಜಡಿ ಮಳೆ ಸುರಿದಂತಾಗುತ್ತಿತ್ತು.

ಒಂದು ದಿನ ಆ ಊರಿಗೆ ಪ್ರಸಿದ್ಧ ಜ್ಯೋತಿಷಿಗಳೊಬ್ಬರು ಬರುತ್ತಿದ್ದಾರೆಂದೂ ಅವರೆಂದದ್ದು ಎಂದೂ ಸುಳ್ಳಾಗಿಲ್ಲ ಎಂದೂ ಯಾರಿಂದಲೂ ಕಾಸು ಸ್ವೀಕರಿಸದೇ ಭವಿಷ್ಯ ಹೇಳುತ್ತಾರೆಂದೂ ತಿಳಿಯಿತು. ನಮ್ಮ ಜಿಪುಣನ ಕಿವಿಗೂ ಇದು ಬಿಟ್ಟು. ಕಾಸು ಕೀಳದೇ ಮುಂದಾಗುವುದನ್ನು ಹೇಳುವ ಮೂರ್ಖ ಸಿಕ್ಕಿರುವಾಗ, ತನ್ನ ಬಗ್ಗೆ ಒಂದಿಷ್ಟು ಕೇಳಿ ತಿಳಿದುಕೊಳ್ಳಬೇಕೆನಿಸಿತು. ಸರಿ, ಇವನೂ ಜ್ಯೋತಿಷಿಯಿರುವಲ್ಲಿಗೆ ಹೋದ.

ಕವಡೆ ಉರುಳಿಸಿ, ಗುಣಿಸಿ, ಭಾಗಿಸಿ, ನೋಡಿದ ಜ್ಯೋತಿಷಿ, ಜಿಪುಣನನ್ನೇ ದೀರ್ಘವಾಗಿ ದಿಟ್ಟಿಸಿದ."ಹೇಳಲೋ ಬೇಡವೋ ಎಂದು ಯೋಚಿಸುತ್ತಿದ್ದೇನೆ. ನೀನು ಕಡು ಲೋಭಿ. ಕವಡೆ ಖರ್ಚು ಮಾಡುವವನಲ್ಲ. ಇದರಿಂದ ನಿನಗೆ ರೌರವ ನರಕ ಕಾದಿದೆ. ಅದೂ ಕೇವಲ ಆರು ತಿಂಗಳಲ್ಲಿ. ಆರು ತಿಂಗಳು ಕಳೆದು ಏಳನೆಯ ತಿಂಗಳ ಬೆಳಗನ್ನು ನೀನು ಕಾಣುವುದಿಲ್ಲನಿಞ್ನ ಸಾವು ಹಾಗೂ ನರಕವಾಸ ಖಚಿತ"

ಇವನ ಜೀವವೇ ಹಾರಿಹೋಯಿತು. ಇಷ್ಟು ಕಷ್ಟದಿಂದ ಕೂಡಿಟ್ಟ ಸಿರಿ ಯಾರದ್ದೋ ಪಾಲಾಗಿ, ಅವರು ತಿಂದುಂಡು ಮೋಜು ಮಾಡುವ ಕಲ್ಪನೆಯಿಂದಲೇ ಬೆವರತೊಡಗಿದ.
ಮತ್ತೆ ಇನ್ನೊಂದು ವಿಚಾರವೂ ಅವನ ತಲೆಗೆ ಬಂತು. ಜಿಪುಣ, ಹಿಮಟ ಇತ್ಯಾದಿ ಹೆಸರು ಕೇಳಿ ಹೀನಾಯಪಡುತ್ತಿದ್ದೆ. ಒಂದಿಷ್ಟು ದಾನ ಮಾಡಿ ಒಳ್ಳೆಯ ಹೆಸರು ಗಳಿಸಿದರೆ ಹೇಗೆ? ಹಾಗೆ ದಾನದಿಂದ ನರಕವಾಸ ತಪ್ಪಲೂ ಬಹುದಲ್ಲ ಎಂದು ಯೋಚಿಸಿದ. ಸರಿ ಎನಿಸಿತು. ಕೂಡಲೇ ತೀರಾ ಬಡವರನ್ನು ಒಂದುಗೂಡಿಸಿ ಅಕ್ಕಿ, ಬೇಳೆ, ಬಟ್ಟೆ, ಒಂದಿಷ್ಟು ದುಡ್ಡು ವಿತರಿಸಿದ. ಅವರು ಸಂತೋಷದಿಂದ ಇವನನ್ನು ದೀರ್ಘಕಾಲ ಬದುಕುವಂತೆ ಹರಸಿದರು. ಒಂದು ರೀತಿಯ ವಿಚಿತ್ರ ತೃಪ್ತಿ ಎನಿಸಿತು. ಅವರ ಹಾರೈಕೆ ಕೇಳಿ ಸಾವಿನ ಹೆದರಿಕೆ ಹಿಂದೆ ಸರಿದಂತೆನಿಸಿತು. ಮತ್ತೆ ಒಂದಿಷ್ಟು ದಾನ ಮಾಡಿದ. ಇದು ಮುಂದುವರಿಯುತ್ತಿದ್ದಂತೆ ಇವನ ಖ್ಯಾತಿ ಹರಡಿತು!
A Wrinkle in Time. Beauty is in the eye of the beholder. (Photo and caption by Aanand Joshi)


ಕೊಡುಗೈ ದೊರೆ, ದಾನಿ, ಆಧುನಿಕ ಕರ್ಣ ಎಂದರು ಮಂದಿ. ನೀಡುವದರಿಂದ ಉಂಟಾಗುವ ಸುಖವೇ ಒಂದು ರೀತಿಯ ಗೀಳಾಯಿತು. ವರುಷಗಳಿಂದ ಕೂಡಿಟ್ಟದ್ದು ಹೊರಗೆ ಬಂದು, ದೀನರ ಜೋಳಿಗೆ ಸೇರಿತು. ರೌರವ ನರಕದ ಹೆದರಿಕೆ ಕಳೆಯಿತು. ಇದರೊಂದಿಗೆ ಜ್ಯೋತಿಷಿ ಹೇಳಿದ ಸಾವಿನ ಗಡುವೂ ಕಳೆಯಿತು. ಯಮ ಬರಲಿಲ್ಲ. ಕತ್ತಿಗೆ ಕುಣಿಕೆ ಬೀಳಲಿಲ್ಲ. ಜಿಪುಣನಿಗೆ ಆಶ್ಚರ್ಯವಾಯಿತು. ಇದರೊಂದಿಗೆ ಒಂದು ರೀತಿಯ ಸಂದೇಹವೂ ಉಂಟಾಯಿತು. ಸಮಜಾಯಿಷಿ ಕೇಳೋಣ ಎಂದರೆ, ಜ್ಯೋತಿಷಿ ಉರೂ ಬಿಟ್ಟು ಕೆಲವು ಕಾಲವಾಗಿತ್ತು. ದನದ ಬಲದಿಂದ ಸಾವು ದೂರವಾಯಿತೇ? ನರಕವಾಸ ತಪ್ಪುತ್ತದೆ ಎಂದರೆ ಇದೇ ಏನು? ಅಥವಾ ಭೌತಿಕ, ಮಾನಸಿಕ ಜಿಪುಣತನದಿಂದ ಒಂದು ರೀತಿಯ ನರಕವಾಸ ತನ್ನದಾಗಿರಲ್ಲವೇ? ಅದು ದೂರವಾದುದಂತೂ ಖಂಡಿತ. ಮನೆಯಲ್ಲಿನ ವಾತಾವರಣವೂ ಸುಖ, ಸಂತೋಷದಿಂದ ಕೂಡಿದೆ. ಇದೇ ಸ್ವರ್ಗವಲ್ಲವೇ? ಎಂದೆಲ್ಲ ಯೋಚನೆಗಳು ಕಾಡಿದವು. ಇವೆಲ್ಲಕ್ಕಿಂತ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿದಾಗ ತನ್ನೊಳಗಾಗುವ ಸಂತೋಷ, ಧನ್ಯತಾಭಾವ ಗೀಳಾಗಿ ಬದಲಾಗಿತ್ತು.! ನಿಧಾನವಾಗಿ ಮೋಹ ಕಳೆಯಿತು. ಧನಕಾಮನೆಯ ಮೋಹ ಮಾತ್ರವಲ್ಲ, ಭವವೇ ನಿಸ್ಸಾರ, ಇದಕ್ಕಿಂತ ಹಿರಿದಾದುದೇನೋ ಇದೆ ಎನಿಸಿತು. ಕಡು ಜಿಪುಣ, ಬಿಡುಗಡೆಯ ಹಾದಿಯ ಪಥಿಕನಾಗಿದ್ದ.

ವೈರಾಗ್ಯದಲ್ಲೂ ಹಲವು ರೀತಿ. ಅಭಾವ ವೈರಾಗ್ಯ, ಒಂದು ವಸ್ತುವನ್ನು ಹೊಂದುವ ಸಮರ್ಥ್ಯವಿಲ್ಲದಿದ್ದಾಗ ಉಂಟಾಗುತ್ತದೆಯಂತೆ. ಯಾರಾದರೂ ಸತ್ತದ್ದನ್ನು ಕಾಣುವಾಗ "ಬದುಕೇ ಇಷ್ಟು, ಸಾಯುವಾಗ ಖಾಲಿ ಕೈಯಿಂದ ಹೋಗುವುದೇ ಸೈ" ಎನ್ನುವುದು ಸ್ಮಶಾನ ವೈರಾಗ್ಯ. ತಡೆಯಲಾರದ ಉದರಶೂಲೆ ರೋಗಗಳನ್ನು ಸಂಕೇತಿಸುತ್ತದೆ. ರೋಗಿ, " ಬದುಕು ಸಾಕು, ತಡೆಯಲಾರೆ ನೋವುಗಳನ್ನು, ಸಾವು ಬರಲಪ್ಪಾ" ಎನ್ನುವುದು ಉದಾರ ವೈರಾಗ್ಯ. ಅತ್ಯುತ್ತಮವಾದ ನಾಲ್ಕನೆಯ ರೂಪ ಸ್ವಭಾವ ವೈರಾಗ್ಯ. ಇದು ಸ್ವಭಾವವಾಗಿ ಬರದಿದ್ದರೂ ಸಾಧನೆಯಿಂದ, ಚಿಂತನೆಯಿಂದ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ಬಲ್ಲವರು.


CLICK HERE