Friday, 4 March 2016

ಅತ್ಯುತ್ತಮರು ಯಾರು?

ಒಂದಾನೊಂದು ಕಾಲದಲ್ಲಿ ಒಬ್ಬನಿಗೆ ಮೂವರು ಗಂಡು ಮಕ್ಕಳಿದ್ದರು. ಮೂವರೂ ವೈದ್ಯ ವೃತ್ತಿಯನ್ನಾರಿಸಿಕೊಂಡರು. ಮೂರು ಮಂದಿ ವೈದ್ಯರಾದರೂ ಕಡೆಯ ಮಗ ಜಗದ್ವಿಖ್ಯಾತನಾದ. ಯಾರ ಬಾಯಲ್ಲಿ ನೋಡಿದರು ಕೊನೆಯವನದೇ ಮಾತು. ಪ್ರಖ್ಯಾತಿಯೊಂದಿಗೆ ಅಪಾರ ಸಿರಿವಂತನೂ ಆದ. ಏಕೆಂದರೆ, ಮಿಕ್ಕೆಲ್ಲ ವೈದ್ಯರೂ ಅಸಾಧ್ಯ ಎಂದು ಕೈಬಿಟ್ಟ ರೋಗಿಗಳಿಗೂ ಅವನು ಚಿಕಿತ್ಸೆ ನೀಡುತ್ತಿದ್ದ. ಹೆಚ್ಚಿನವರು ಗುಣಮುಖರಾಗುತ್ತಿದ್ದರು. ಇದೇ ಅವನ ಪ್ರಖ್ಯಾತಿಯ ಗುಟ್ಟಾಗಿತ್ತು.
Image Source : Google Images






ಇದರ ಬಗ್ಗೆ ವೈದ್ಯರ ತಂದೆಯನ್ನು ಪ್ರಶ್ನಿಸಿದಾಗ, "ನನ್ನ ಮೂವರೂ ಮಕ್ಕಳು ವೈದ್ಯ ವಿದ್ಯೆಯಲ್ಲಿ ಪಂಡಿತರೇ! ಆದರೆ ಮೂವರೂ ರೋಗಿಗಳನ್ನು ನೋಡುವ ದೃಷ್ಟಿಕೋನವೇ ಬೇರೆ. ಮೊದಲನೆಯವ ಅವನ ವಲಯದಲ್ಲಿ ಬರುವವರನ್ನು ನಿರೋಗಿಗಳಾಗಿ ಬದುಕುವುದು ಹೇಗೆ ಎಂಬ ಬಗ್ಗೆ ತಿಳಿಸಿ ಹೇಳುತ್ತಾನೆ. ಉತ್ತಮವಾದ ಆಹಾರ, ವ್ಯಾಯಾಮ, ಮನಸ್ಥಿತಿಗಳನ್ನು ಬೆಳೆಸಿಕೊಳ್ಳುವುದರಿಂದ ಮನಸ್ಸು, ದೇಹಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ತನ್ಮೂಲಕ ರೋಗಗಳನ್ನು ಬರದಂತೆ ತಡೆಗಟ್ಟಬಹುದು ಎನ್ನುವುದು ಅವನ ರೋಗ ವಿಧಾನದ ಸೂತ್ರ. ಆದರೆ, ಇದರಿಂದ ಅವನ ಉಪಸ್ಥಿತಿಯೇ ಜನರಿಗೆ ತಿಳಿದಿಲ್ಲ. ಅವನು ಅತ್ಯುತ್ತಮ ವೈದ್ಯ. ಆದರೂ ಮಂದಿ ಅವನನ್ನು ಗುರುತಿಸುವುದಿಲ್ಲ. ಅವನು ಅಜ್ಞಾತನಾಗಿಯೇ ಉಳಿದಿದ್ದರೂ ನನ್ನ ಅಭಿಮತದಂತೆ ಇವನು, ಇವನಂಥವರೇ ಮೊದಲಿನ ಸಾಲಿನ ವೈದ್ಯರು!


ಇನ್ನು ಎರಡನೆಯವನನ್ನು ನೋಡಿದಾಗ ಇವನು ರೋಗಗಳನ್ನು ಮೊದಲ ಮತ್ತು ಎರಡನೆಯ ಹಂತದಲ್ಲಿ ಗುರುತಿಸುತ್ತಾನೆ. ತಕ್ಕ ಚಿಕಿತ್ಸೆ ನೀಡುತ್ತಾನೆ. ನೋವು ಪರಿಹರಿಸುತ್ತಾನೆ. ಆದರೆ ತೀರಾ ಕೈ ಮೀರುವವರೆಗೆ ಇವನು ಕಾಯುವುದಿಲ್ಲ. ಆದುದರಿಂದ ಇವನೊಬ್ಬ ಸಾಮಾನ್ಯ ವೈದ್ಯ ಎಂದು ಹೆಸರುವಾಸಿಯಾಗಿದ್ದಾನೆ. ಹತ್ತರಲ್ಲಿ ಇವ ಹನ್ನೊಂದನೆಯವನು.


ಕಡೆಯ ಮಗ ಹಾಗಲ್ಲ. ರೋಗ ತೀರಾ ವಿಷಮಿಸುವವರೆಗೆ ಕಾದು ಅನಂತರವೇ ಚಿಕಿತ್ಸೆಗೆ ಕೈ ಹಾಕುತ್ತಾನೆ. ಅಥವಾ ರೋಗ ವಿಷಮಿಸಿದೆ ಎಂಬ ಭ್ರಮೆ ಹುಟ್ಟಿಸಿ, ರೋಗಿ ಹಾಗೂ ರೋಗಿಯ ಸಂಬಂಧಿಕರಿಗೆ ಗೊಂದಲ ಉಂಟು ಮಾಡುತ್ತಾನೆ. ಅನಂತರ ನಾನಾ ತರದಲ್ಲಿ ಚಿಕಿತ್ಸೆ ನಡೆಸುವ ದೃಶ್ಯಗಳು ಸಂಯೋಜಿಸಲ್ಪಡುತ್ತವೆ. ಕಾಣುವವರು ಮೂಗಿನ ಮೇಲೆ ಬೆರಳಿಡುವಂತೆ ಇವು ನಡೆಯುತ್ತವೆ. ಕಡೆಗೆ ರೋಗಿ ಗುಣಮುಖನಾಗುತ್ತಿರುವಾಗ ಇವನ ಕೀರ್ತಿಗಾನ ನಡೆಯುತ್ತದೆ. ಇವನು ಧನ್ವಂತರಿಯ ಅವತಾರ ಎಂಬ ಮಾತು ಹರಡುತ್ತದೆ.


 ಆದರೆ ವಾಸ್ತವದಲ್ಲಿ ಇವನು ಅಧಮಾಧಮ. ಒಂದು, ಅವನ ಚಿಕಿತ್ಸೆಯ ಹಿಂದಿರುವ ಕುತ್ಸಿತಭಾವ! ಹಣ ಮತ್ತು ಕ್ಯಾತಿಯ ಕಾಮನೆಗಾಗಿ ನಡೆಸುವ ಅಧರ್ಮ! ತನ್ಮೂಲಕ ಜೀವಗಳಿಗಾಗುವ ಅನಾನುಕೂಲ ಹಾಗೂ ನೋವು. ಇವುಗಳಿಂದ ಅವನು ಖ್ಯಾತನಾದರೂ ಗಣ್ಯ ಎನಿಸಿದರೂ ಅವನು ಅಧಮಾಧಮ!

ಎರಡನೆಯವನ ಬಗ್ಗೆ ಹೆಚ್ಚೇನೂ ಹೇಳಲಿಕ್ಕಿಲ್ಲ. ಅವನೊಬ್ಬ ಸಾಮಾನ್ಯ ವೈದ್ಯ. ರೋಗ ಪತ್ತೆ ಹಚ್ಚಿ ಅದನ್ನು ನಿಧಾನಿಸುವುದು ಮಾತ್ರ ಅವನ ಕೆಲಸ. ಆದರೆ ಮೊದಲವನೆಯನೇ ಅತ್ಯುತ್ತಮ ವೈದ್ಯ ಹಾಗೂ ಅತ್ಯುತ್ತಮ ಮನುಷ್ಯ ಜೀವಿ"


Image Source : Google Images.


ಈ ತತ್ವವನ್ನು ಬದುಕಿಗೆ ಅನ್ವಯಿಸಿ ನೋಡೋಣ. ಅತ್ಯುತ್ತಮ ರಾಜಕಾರಿಣಿ ಯಾರು? ದೇಶದಲ್ಲಿ ಕ್ಷೋಭೆಯುಂಟಾಗದಂತೆ, ಸರ್ವ ರೀತಿಯಲ್ಲಿ ಶಾಂತಿ ಇರುವಂತೆ ಯೋಜಿಸುವವನೇ ಉತ್ತಮ ರಾಜಕಾರಿಣಿ ಅಲ್ಲವೇ?

ಅತ್ಯುತ್ತಮ ಧರ್ಮಗುರುವ್ಯಾರು? ಯಾವುದೇ ಗೊಂದಲಗಳುಂಟಾಗದಂತೆ ಸತ್ಯ-ಧರ್ಮಗಳ ಹಾದಿಯಲ್ಲಿ ನಡೆದು, ತನ್ನವರನ್ನು ನದೆಸುವವನೆ ಉತ್ತಮ ಗುರು.

ಹೀಗೆ ರಕ್ಷಣೆ, ವಿದ್ಯಾದಾನದಿಂದ ಮೊದಲು ಮಾಡಿ ಪ್ರತಿಯೊಂದು ರಂಗಕ್ಕೂ ಈ ತತ್ವವನ್ನು ಅನ್ವಯಿಸಿ ನೋಡಿದಾಗ, ಇಂದು ನಾವು ಕಾಣುವ ಪ್ರತಿಯೊಂದು ಗೌದಲುಗಳಿಗೂ ಮೂರನೆಯ ವರ್ಗದ ಅಧಮಾಧಮರೇ ಕಾರಣ ಎಂಬ ಅರಿವಾಗುತ್ತದೆ.


No comments:

Post a Comment

CLICK HERE