Wednesday, 19 October 2016

ನಾವ್ಯಾರು? ಭಾಗ-೧

ಒಬ್ಬ ಕಾಡಿನಲ್ಲಿದ್ದ ಒಣಗಿದ ಮರ ಕಡಿದು, ಸಿಗಿದು ಹೊರೆ ಕಟ್ಟಿ ಪೇಟೆಗೆ ಹೊತ್ತಿಕೊಂಡು ಹೋಗಿ ಮಾರಿ, ಬಂದ ಒಂದಿಷ್ಟು ಕಾಸುಗಳಿಂದ ಕುಟುಂಬದ ಹೊಟ್ಟೆ ಹೊರೆಯುವವನಿದ್ದ.

ಒಂದು ದಿನ ಸರ್ವಸಂಗ ಪರಿತ್ಯಾಗಿಯೊಬ್ಬ ಎದುರಾದ ಇವನಿಗೆ. ತನ್ನ ಕಷ್ಟಗಳನ್ನು ಅವನೊಂದಿಗೆ ಹೇಳಿಕೊಂಡು ಪರಿಹಾರ ಬೇಡಿದ.
ಸಂತನೆಂದ, "ಪರಿಹಾರ ಇದೆ. ಆದರೆ, ನೀನು ತೊಂದರೆಗಳನ್ನು ಎದುರಿಸಲು ತಯಾರಿರಬೇಕು. ನೀನೀಗ ಕಾಡಿನ ಅಂಚಿನಿಂದ ಕಟ್ಟಿಗೆ ಸಂಗ್ರಹಿಸುತ್ತಿರುವೆ. ಒಂದಿಷ್ಟು ಸ್ವಲ್ಪ ಕಾಡಿನ ಒಳಗಡೆ ಹೋಗಿ ನೋಡು. ಉಪಾಯೋಗವಾಗಬಹುದು". ಸರಿ ಎಂದು ಇವನು ಕಾಡಿನ ಒಳಹೊಕ್ಕ.


Who are we?
Image Source : Google Images


ಹೆದರಿಕೆ ಹಿಂದೆಳೆಯುತ್ತಿದ್ದರೂ ಒಂದಿಷ್ಟು ಧೈರ್ಯದಿಂದ ಕಾಡಿನ ಒಳಗಡೆ ನಡೆದ. ಕಾಡಿನ ಒಳಗಡೆ ಥಂಡಿಯಾಗಿ ಶ್ರೀಗಂಧದ ಮರಗಳು.!! ಒಂದು ವರ್ಷ ಕೂತು ತಿನ್ನುವಷ್ಟು ಕಾಸು ಸಿಕ್ಕಿತು...

ಮಾರನೆಯ ದಿನ ಸಂತನನ್ನು ಕಂಡು ಕೃತಜ್ಞತೆ ತಿಳಿಸಿದ.  ಸಂತ ನಸುನಗುತ್ತಾ ಹೇಳಿದ "ಇದು ಒಂದು ಹೆಜ್ಜೆಯಾಯಿತು. ಇನ್ನೆರಡು ಹೆಜ್ಜೆ ಮುಂದಿಡು. ಏನಾಗುವುದೋ ನೋಡೋಣ" ಎಂದ.

ಕೆಲವು ದಿನಗಳ ಅನಂತರ ಇವ ಇನ್ನೂ ಮುಂದೆ ಹೋದ. ಅಲ್ಲಿ ಭರ್ಜರಿ ಬೆಳ್ಳಿಯ ನಿಕ್ಷೇಪವಿತ್ತು. ಸಂತ ಮತ್ತೂ ಮುಂದೆ ಹೋಗುವಂತೆ ಆಗ್ರಹಿಸಿದ. ಅಲ್ಲಿ ಚಿನ್ನ, ವಜ್ರದ ಅಪಾರ ನಿಧಿ ಸಿಕ್ಕಿತು. ಕಟ್ಟಿಗೆ ಮಾರುವ ಬಡವ ಸಿರಿವಂತನಾದ. ತಾನೊಂದು ಕಾಲದಲ್ಲಿ ಪಡುತ್ತಿದ್ದ ಕಷ್ಟಗಳನ್ನು ಮರೆತುಬಿಟ್ಟ. ಆದರೂ ನನ್ನನ್ನು ಈ ಸ್ಥಿತಿಗೆ ತಂದ ಸಂತ ಅವನ ನೆನಪಿನಲ್ಲಿ ಸ್ಥಿರವಾಗಿದ್ದ.

ಒಮ್ಮೆ ಅವನನ್ನು ಕಂಡು ತನ್ನೊಂದು ಸಂದೇಹ ಪರಿಹರಿಸಿಕೊಳ್ಳಬೇಕೆನಿಸಿತು. ಹೋಗಿ, ಅವನ ಮುಂದೆ ಕುಳಿತು ತನ್ನ ಅನುಮಾನ ಮುಂದಿಟ್ಟ. ಅದು ಹೀಗಿತ್ತು : "ನಿಮಗೆ ಕಾಡಿನ ಮಧ್ಯದಲ್ಲಿದ್ದ ಅಪಾರ ನಿಧಿಯ ಅರಿವಿತ್ತು. ಅದನ್ನು ನೀವೇ ಉಪಯೋಗಿಸಿಕೊಂಡು, ಸಿರಿವಂತರಾಗಿ . ಸುಖವಾಗಿರದೇ, ಈ ಕಾಡಂಚಿನಲ್ಲಿ ಮುರುಕು ಗುಡಿಸಲಿನಲ್ಲಿ, ಕಾಲಕಾಲಕ್ಕೆ ಅನ್ನಾಹಾರಗಳಿಲ್ಲದೆ ಬಳಲುವುದೇಕೆ?"


Who are we?
Image Source : Google Images
ಸಂತ ಉತ್ತರಿಸಿದ " ಇವೆಲ್ಲಕ್ಕೂ ಮಿಗಿಲಾದ ಸಂಪತ್ತೊಂದು ನನ್ನೊಳಗೆ ವ್ಯಾಪಕವಾಗಿದೆ. ಅದರ ಮುಂದೆ ಈ ಸಂಪತ್ತು ತೀರಾ ನಗಣ್ಯ. ಮತ್ತೆ ಇದರ ಅಗತ್ಯವೂ ನನಗಿಲ್ಲ. ನಿಜವಾದ ಸಂಪತ್ತನ್ನು ಹೊಂದುವಾಸೆ ಇದ್ದರೆ, ಎಲ್ಲವನ್ನೂ ಬಿಟ್ಟು ಬಾ. ಈ ಮರದ ಕೆಳಗೆ ನನ್ನೊಂದಿಗಿರು. ಅದನ್ನು ಹೊಂದುವ ಬಗ್ಗೆ ಕಲಿಸುತ್ತೇನೆ." ಎಂದ.



ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಇದೆ 'ನಾನೆಂಬ' ಅಹಂಕಾರ!!?



ಭೌತಿಕ ವಿಷಯಸುಖವೇ ಸುಖವೆಂಬ ಚಿಂತನೆಗೆ ನಾವು ಹೊಂದುಕೊಂಡಿದ್ದೇವೆ. ಅದೇ ಬದುಕಾಗಿ ಹೋಗಿದೆ. ಒಂದು ಸಣ್ಣ ಕಿಡಿಯಿಂದ ಮೊದಲಾಗುವ ಈ ಭಾವ,ಒಂದರಿಂದ ಎರಡಾಗಿ, ನಾಲ್ಕಾಗಿ ಮತ್ತೆ ಸಹಸ್ರ ಬಹುವಾಗಿ ನಮ್ಮನ್ನು ತನ್ನಲ್ಲಿ ಸೆಳೆದು ಜೀರ್ಣಿಸಿಕೊಳ್ಳುತ್ತದೆ. ನಮ್ಮ ಅಹಂಕಾರಕ್ಕೆ ಈ ಭೌತಿಕ ವಿಜಯ ನೀರೆರೆದು ಬೃಹತೃಕ್ಷವಾಗಿ  ಬೆಳೆಸುತ್ತದೆ. 




                                                                                                                           --ಮುಂದುವರೆಯುವುದು......

No comments:

Post a Comment

CLICK HERE