Friday, 28 October 2016

ಬೆಳಕಿನ ಹಬ್ಬ ಸಮಸ್ತರಿಗೆ ಮಂಗಳ ತರಲಿ

ಇದೊಂದು ಚಂದದ ಕಥೆ ಒಂದು ವಿಧದಲ್ಲಿ ದೃಷ್ಟಾಂತ ಕಥೆಯೂ ಹೌದು. ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಬೆಂಕಿಯ ಬೆಳಕಿನ ಉಪಯೋಗ ತಿಳಿದವರು ಕೆಲವೇ ಕೆಲವು ಮಂದಿ ಇದ್ದರು. ಆದರೆ ಅವರಿಗೂ ಬೆಂಕಿ ಲಭ್ಯವಿರಲಿಲ್ಲ. ಏಕೆಂದರೆ, ದೂರದ ಪರ್ವತದ ಮೇಲೆ, ಕೋಟೆಮನೆ ಕಟ್ಟಿಕೊಂಡಿದ್ದ ರಾಕ್ಷಸನೊಬ್ಬ ಜಗತ್ತಿನ ಎಲ್ಲಾ  ಬೆಂಕಿ, ಬೆಳಕನ್ನೂ ಅಂಕೆಯಲ್ಲಿಟ್ಟುಕೊಂಡಿದ್ದ. ಅಥವಾ ಹಾಗೆಂದು ಪ್ರತೀತಿ ಇತ್ತು. ಕಂಡವರಿರಲಿಲ್ಲ ಎನ್ನುವ  ಮಾತು ಬೇರೆ. ಹಾಗೆಂದು ಪ್ರಯತ್ನಿಸಿದವರಿದ್ದವರಂತೆ. ಅದೂ ದಂತಕಥೆಯಾಗಿತ್ತೇ ಹೊರತು ಈ ತಲೆಮಾರಿನಲ್ಲಿರಲಿಲ್ಲ.



ಹೀಗಿದ್ದರಿಂದ ಜನ ಕತ್ತಲಾಗುವ ಮೊದಲೇ ಗೂಡು ಸೇರಿಕೊಳ್ಳುತ್ತಿದ್ದರು. ಹಸಿ ಹಸಿ ತಿನ್ನುತ್ತಿದ್ದರು. ಚಳಿಯಲ್ಲಿ ನಡುಗುತ್ತಾ ನರಳುತ್ತಿದ್ದರು. ಹೀಗಿದ್ದೂ ಯಾರೂ ಬೆಂಕಿ ತರುವ ಮನಸ್ಸು ಮಾಡಿರಲಿಲ್ಲ ಎಂಬುದೇ ಆಶ್ಚರ್ಯದ ಮಾತಾಗಿತ್ತು. ಹೀಗೆ ಬಹಳ ಕಾಲದ ಅನಂತರ ತುಂಬು ಕುಟುಂಬದ ಹುಡುಗನೊಬ್ಬನಿಗೆ ರಾಕ್ಷಸನ ಕಥೆ ತಿಳಿಯಿತು. ಮನಸ್ಸಿನಲ್ಲೊಂದು ಸಣ್ಣ ಬೀಜ ಬಿತ್ತು, ಬೆಂಕಿ ಎಂದರೇನು? ಅದರ ಬೆಳಕೆಂದರೇನು? ಹೇಗಿರಬಹುದು ಬೆಳಕಿನೊಂದಿಗಿನ ಬದುಕು! ಎಂದೆಲ್ಲಾ ಯೋಚಿಸಿದ. ಕಡೆಗೊಂದು ದಿನ ಬೆಳಕನ್ನು ಕಾಣದಿದ್ದರೆ ಬದುಕು ವ್ಯರ್ಥ ಎನ್ನುವಲ್ಲಿಗೆ ಬೆಳಕಿನ ಗೀಳು ಬಲವಾಯಿತು. ಹೆತ್ತವರಲ್ಲಿ ಹೇಳಿಕೊಂಡ. ಅವರು ಕಾಣದ ರಕ್ಕಸನ ಬಗ್ಗೆ ಕಥೆಗಳನ್ನು ಹೇಳುತ್ತಾ " ಬೇಡಪ್ಪಾ, ಅವನು ನಿನ್ನನ್ನು ತಿಂದು ಹಾಕುತ್ತಾನೆ, ಬೇಡ." ಎಂದು ತಿಳಿ ಹೇಳಿದರು..


Happy dipavali
Image have all standard licence belongs to Concerned person. Copying is purely offensive.

ಹುಡುಗನ ಚಿಂತನೆ ನಿರ್ಧಾರವಾಯಿತು. ಈ ಸಾವು ಎಂದರೇನು? ಎಂಬ ಹೊಸ ಪ್ರಶ್ನೆ ಹುಟ್ಟಿತು. ಸರಿ, ಒಂದು ದಿನ ಯಾರಿಗೂ ಹೇಳದೇ ಕೇಳದೆ ರಾಕ್ಷಸನನ್ನು ಹುಡುಕಿಕೊಂಡು ಹೊರಟ. ಎಷ್ಟೋ  ದಿನದ ಪಯಣದ ಅನಂತರ ದೂರದಲ್ಲಿ ಕೋಟೆಮನೆ ಕಂಡಿತು. ಕತ್ತಲಲ್ಲಿ ಅದರ ಕಿಟಕಿ, ಬಾಗಿಲುಗಳಿಂದ ಬೆಳಕು ಹೊರಹೊಮ್ಮುತ್ತಿರುವುದು ಕಾಣುತಿತ್ತು.

ಹುಡುಗ ಮೆಲ್ಲಮೆಲ್ಲನೆ ನಡೆದು, ಪೌಳಿಗೋಡೆ ಏರಿ, ಮನೆಯ ಕಿಟಕಿಯಿಂದ ಒಳಗೆ ಹಣಕಿದ. ಒಳಗ್ಯಾವ ರಕ್ಕಸನೂ ಕಾಣಲಿಲ್ಲ. ಬದಲಿಗೆ ಸುಂದರಾಂಗ ಯುವಕನೊಬ್ಬ ಏನನ್ನೋ ಓದುತ್ತಿದ್ದ. ಹುಡುಗ ಕಿಟಕಿ ಹಾರಿ  ಒಳಗೆ ಬಂದು ಈ ಸುಂದರಾಗನ ಮುಂದೆ ನಿಂತ. "ಬೆಳಕು ಹುಡುಕಿ ಬಂದೆಯೇನು? ಬಲು ದೂರದಿಂದ, ಬಲು ಶ್ರಮವಹಿಸಿ ಬಂದಿರುವಂತಿದೆ. ಸರಿ, ಮೊದಲು ಬೆಳಕಿನ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ಅಧ್ಯಯನ, ಅಭ್ಯಾಸ ಬೇಕು. ಅನಂತರ ಅದನ್ನು ಸರಿಯಾದ ರೀತಿಯಲ್ಲಿ ಅಗತ್ಯಕ್ಕನುಗುಣವಾಗಿ ಉಪಯೋಗಿಸಬಹುದು. ಬೆಳಕಿನ ಮೂಲ ಬೆಂಕಿ. ಹೆಚ್ಚು ಕಡಿಮೆಯಾದರೆ ಜಗತ್ತನ್ನೇ ಸುಟ್ಟು ಹಾಕಬಲ್ಲದು. ಅಡುಗೆಗೂ ಉಪಯೋಗಿಸಬಹುದು, ಶವ ದಹನಕ್ಕೂ ಉಪಯೋಗಿಸಬಹುದು, ಅನಂತರ ನೀನು ಬೆಳಕನೊಯ್ಯಲು ಯೋಗ್ಯನೋ ಇಲ್ಲವೋ ಎಂದು ನಿರ್ಧರಿಸಬೇಕು" ಎಂದ ಸುಂದರಾಂಗ.


Happy DEEpavali
Image have all standard licence belongs to Concerned person. Copying is purely offensive.

ಹುಡುಗ ಒಪ್ಪಿದ. ಅವನು ಹುಟ್ಟಿದ್ದೇ ಬೆಳಕನ್ನು ಅರಿಯಲು. ಹಗಲೂ ರಾತ್ರಿ ತಪಿಸಿದ. ನಿದ್ದೆಯಲ್ಲೂ ಬೆಳಕನ್ನು ಜಪಿಸಿದ. ಬೆಳಕಿನ ಮೂಲ ಬೆಂಕಿ. ಅಂದರೆ ತಪಿಸುವುದು ಮಂಥನ. ನಿರಂತರ ಧ್ಯಾನದಿಂದ ಮಾತ್ರವೇ ಇದು ಸಾಕಾರವಾಗುತ್ತದೆ. ಹಾಗೆ ಆಯಿತು. ಹುಡುಗನಿಗೆ ಬೆಂಕಿಯನ್ನಿತ್ತ ಸುಂದರಾಂಗ. ಅದರ ಬೆಳಕಿನಲ್ಲೆ ಮನೆಗೆ ಮರಳಿದ. ಅವನು ತಂದ ಪುಟ್ಟ ಹಣತೆಯಿಂದ ಸಾವಿರಾರು ದೀಪಗಳನ್ನು ಹೊತ್ತಿಸಲಾಯಿತು.  ಜಗತ್ತೇ ಬೆಳಗಿತು ಎನ್ನುತ್ತದೆ ಕಥೆ.


"ಅದು, ಎಲ್ಲವನ್ನೂ ನಡೆಸುತ್ತದೆ, ಅದು ಸ್ವತಃ ಚಲಿಸದು. ಅದು ದೂರದಲ್ಲಿದೆ, ಅದೇ ಹತ್ತಿರದಲ್ಲೂ ಇದೆ. ಅದು ಎಲ್ಲದರ ಒಳಗಿದೆ, ಅದೇ ಎಲ್ಲದರ ಹೊರಗೆಯೂ ಇದೆ" ಬೆಳಕಿನ ಸ್ವರೂಪವನ್ನು ಯಜುರ್ವೇದ ವಿವರಿಸುವ ಪರಿ ಇದು. ಸರ್ವವ್ಯಾಪಿಯಾದ ಈ 'ಜೀವ', 'ಆತ್ಮ, 'ಚೈತನ್ಯ' ಎಂಬೆಲ್ಲ ಹೆಸರುಗಳಿಂದ ನಾವು ಕಾಣಲು ಕಾತರಿಸುವ ಬೆಳಕನ್ನು ಮೂರ್ತರೂಪದಲ್ಲಿ ಆರಾಧಿಸುವುದೇ 'ದೀಪಾರಾಧನೆ'


ಬೆಳಕು "ಅದಲ್ಲ, ಇದಲ್ಲ'' ಅವುಗಳೆಲ್ಲ ನಾವು ಮನುಷ್ಯರು, ನಮ್ಮ ಅನುಕೂಲಕ್ಕಾಗಿ, ಗುರುತಿಗಾಗಿ ಕಲ್ಪಿಸಿಕೊಂಡ ಶಬ್ದಗಳು ಮಾತ್ರ. ಶಬ್ಡಸ್ವರೂಪಿಗೆ ಯಾವುದೇ ಆಯಾಮಗಳಿಲ್ಲ ಎನ್ನುತ್ತದೆ ನಮ್ಮ ಪ್ರಾಚೀನರ ಜ್ಞಾನ. ಈ ಬೆಳಕು ಜಗತ್ತನ್ನೇ ಬೆಳಗಿಸಲಿ, ನಮ್ಮ ಓದುಗರ, ಓದುಗರಲ್ಲದವರ, ಇಂದು ಹಿಂದೆ ಮುಂದೆ ಬರಲಿರುವ ಸಮಸ್ತ ಜೀವಜಾಲಕ್ಕೆ ಮಂಗಳವನ್ನುಂಟು ಮಾಡಲಿ ಎಂದು ಹಾರೈಸೋಣ, ಒಂದಾಗಿ ಬೆಳೆಕಿನೆಡೆಗೆ ನಡೆಯೋಣ..

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಬೆಳಕಿನ ಹಬ್ಬ ಸಮಸ್ತರಿಗೆ ಮಂಗಳ ತರಲಿ.




Tuesday, 25 October 2016

ಸತ್ಯ ದರ್ಶನ



ಬಿಂಬಸಾರ ರಾಜ ಮಗಧ ರಾಜ್ಯವನ್ನು ಆಳುತ್ತಿದ್ದ ಕಾಲವದು. ಆಗೊಮ್ಮೆ ಮಹಾವೀರ ಜೈನಮತ ಪ್ರತಿಪಾದಕ, ಆ ದಾರಿಯಾಗಿ ಪಯಣಿಸುತ್ತಿದ್ದ. ವಿಶ್ರಾಂತಿಗೆಂದು ಊರ ಹೊರಗಿನ ಮರಗಳ ತೋಪಿನಲ್ಲಿ ಬಿಡು ಬಿಟ್ಟಿದ್ದ. ಪ್ರತಿದಿನ ಬೆಳಿಗ್ಗೆ ಸಂಜೆ ಜನಸಾಗರ ಆ ತೋಪಿನೆಡೆಗೆ ಹೋಗುವುದನ್ನು ರಾಜ ಬಿಂಬಸಾರ ಗಮನಿಸಿದ. ಪ್ರತಿ ದಿನ ಹೀಗೆ ಮಂದಿ ಹೋಗುವುದೆಲ್ಲಿಗೆ ಎಂದು ವಿಚಾರಿಸಲಾಗಿ ಅವರು ಮಹಾಮುನಿಯ ದರ್ಶನಕ್ಕಾಗಿ ಹೋಗುತ್ತಾರೆ ಎಂದು ತಿಳಿದು ಬಂತು.




Image have all standard licence belongs to Concerned person. Copying is purely offensive.


ಬಿಂಬಸಾರನಿಗೆ ಆಶ್ಚರ್ಯವಾಯಿತು. ತಾನು ಈ ದೇಶದ ರಾಜ. ತಾನು ಹೇಳಿಕಳಿಸಿದರೆ, ಕೆಲವೊಮ್ಮೆ ಒತ್ತಾಯದಿಂದ ಈ ಅರಮನೆಯ ಆವರಣಕ್ಕೆ ಬರುತ್ತಾರೆ. ಇಲ್ಲದಿದ್ದರೆ ಯಾರೂ ಈ ಅಂಗಳದಲ್ಲಿ ಕಾಲಿಡುವುದಿಲ್ಲ. ಅಂಗಳ ಹೋಗಲಿ, ಅರಮನೆಯ ಮುಂದಿರುವ ರಸ್ತೆಯಲ್ಲಿ ನಡೆಯುವುದೂ ಇಲ್ಲ. ಅಂಥವರು ಈಗ ಹೀಗೆ ದಂಡು ಕಟ್ಟಿಕೊಂಡು ಯಾರನ್ನೋ ಕಾಣಲು ಹೋಗುವುದೆಂದರೇನು? ಏನಿದೆ ಅವನಲ್ಲಿ ಅಂಥ ವಿಶೇಷ? ಎಂದುಕೊಂಡು ಮಹಾವೀರ ಮುನಿಗಳ ಬಗ್ಗೆ ವಿಚಾರಿಸಲು ಶುರು ಮಾಡಿದ.ಕಡೆಗೆ ತಿಳಿದು ಬಂದದ್ದೇನೆಂದರೆ, ಮುನಿಗಳಿಗೆ ಸತ್ಯದರ್ಶನವಾಗಿದೆಯಂತೆ. ಆದುದರಿಂದ ಅವರು ಮಹ್ಹಾತ್ಮಾರಂತೆ. ಅವರ ದರುಶನದಿಂದ ಮಂಗಳವಾಗುವುದಂತೆ. ಆದುದರಿಂದ ಮಂದಿ ಹೀಗೆಲ್ಲ ಮುಗಿಬೀಳುತ್ತಾರಂತೆ. ಹೇಗಾದರೂ ಮಾಡಿ ಈ ಸತ್ಯವನ್ನು ತನ್ನದಗಿರಿಸಿಕೊಳ್ಳಬೇಕೆಂಬ ಯೋಚನೆ ಬಿಂಬಸಾರನ ತಲೆಗೆ ಹೊಕ್ಕಿತು. ಸುಲಭವಾದ ಉಪಾಯವೆಂದರೆ, ಇದ್ದವರಿಂದ ಅದನ್ನು ಕೊಂಡುಕೊಳ್ಳುವುದು.ಸರಿ, ತಟ್ಟೆ ತುಂಬಾ ಹೊನ್ನು ತುಂಬಿ ಮಂತ್ರಿಗಳಿಗೆ ಸತ್ಯ ತರುವಂತೆ ಹೇಳಿದ. ಹೋದ ಮಂತ್ರಿಗಳು ಬರಿಗೈಲಿ ಮರಳಿ ಬಂದರು. ಮುನಿಗಳು ಇವರತ್ತ ನೋಡಿ ನಸುನಕ್ಕರು ಮಾತ್ರವಂತೆ. ಸರಿ, ಸ್ವತಃ ಚಕ್ರವರ್ತಿಯೇ ಹೊರಟ ಸತ್ಯ ತರಲು. ಹಿಂದಿನಿಂದ ಗಡಿ ತುಂಬಿದ ಧನವೂ ಹೊರಟಿತು. ಎಲ್ಲವನ್ನೂ ಮುನಿಯ ಪದತಲದಲ್ಲಿಟ್ಟು ಬಿಂಬಸಾರ ತನ್ನ ಬೇಡಿಕೆ ಮುಂದಿಟ್ಟ. ಮುನಿಗಳು ಇವನನ್ನು ದಿಟ್ಟಿಸಿ ನೋಡಿ ನಸುನಕ್ಕರು ಅಷ್ಟೇ. ಸರಿ, ಬಿಂಬಸಾರನಿಗೆ ತನ್ನ ಉಡುಗೊರೆ ಕಡಿಮೆಯಾಗಿರಬೇಕು, ಆದಕ್ಕೆ ಇವರು ಒಪ್ಪುತ್ತಿಲ್ಲ ಎಂದುಕೊಂಡ. ಬಂದಿದ್ದ ಗಾಡಿ ಎರಡಾಯಿತು, ನಾಲ್ಕಾಯಿತು, ಹತ್ತಾಯಿತು.ಕಿಂಚಿತ್ ಬದಲಾವಣೆಯೂ ಮಹಾವೀರರ ಕಡೆಯಿಂದ ಬರಲಿಲ್ಲ. ಕಡೆಗೆ ಬಿಂಬಸಾರ ತಲೆಯ ಮೇಲಿನ ಕಿರೀಟ, ಪಟ್ಟದ ಕತ್ತಿ, ಮುದ್ರೆಯುಂಗುರಗಳನ್ನು ಅವರ ಮುಂದಿಟ್ಟು ಈಗಲಾದರೂ ಸತ್ಯ ದಯಪಾಲಿಸಿ ಎಂದ.
ಆಗ ಮುನಿಗಳು ಬಾಯಿಬಿಟ್ಟರು, "ರಾಜನ್, ಈ ಸತ್ಯವನ್ನು ಹುಡುಕುತ್ತಾ ನಾನು ಬದುಕಿನ ನಲವತ್ತು ವರ್ಷಗಳನ್ನು ಕಳೆದಿದ್ದೇನೆ. ನಾನೊಬ್ಬ ರಾಜಕುಮಾರನಾಗಿದ್ದೆ ಎಂಬುದು ನಿನಗೆ ತಿಳಿದಿರಬೇಕು. ಈ ಸತ್ಯಕ್ಕಾಗಿ ನಾನು ರಾಜ್ಯವನ್ನೂ ತ್ಯಜಿಸಿದೆದುದರಿಂದ ಆದುದರಿಂದ ಅದನ್ನು ಮಾರಲಾರೆ. ಮತ್ತೆ ದಾನ ಮಾಡಲಾರೆ. ಒಂದು ವಿಚಾರವಿದೆ. ನಿನ್ನ ರಾಜ್ಯದಲ್ಲಿ ಇಂಥ ಒಬ್ಬ ಮನುಷ್ಯನಿದ್ದಾನೆ. ಆವನಿಗೂ ಸತ್ಯದರ್ಶನವಾಗಿದೆ. ಬಹುಶಃ ನಿನಗೆ ಅವನಿಂದ ಉಪಯೋಗವಾಗಬಹುದು, ಹೋಗಿ ನೋಡು" ಎಂದರು.




Image have all standard licence belongs to Concerned person. Copying is purely offensive.



ಬಿಂಬಸಾರ 'ಆ' ಮನುಷ್ಯನನ್ನರಸಿ ಹೋದ. ಅವನೊಬ್ಬ ಹಾದಿ, ಬೀದಿಗಳ ಕಸ ಗುಡಿಸುವ ಬಡಮಾಲಿ. ಅರಮನೆಯ ಶುಭ್ರಮನೆಯಲ್ಲಿದ್ದ ಹೊನ್ನ ರಥ ಕೊಳಗೇರಿಯ ಮನೆಯ ಮುಂದೆ ನಿಂತೊಡನೆ ಗಡಬಡಿಸಿ 'ಆ' ಮನುಷ್ಯ ಎದ್ದು ಹೊರಗೆ ಬಂದ. ಮಹಾರಾಜರ ಮುಂದಿಟ್ಟ ಬೇಡಿಕೆ ಕೇಳಿದ, ಮತ್ತೆ ಹೇಳಿದ : "ಮಹಾಪ್ರಭೋ, ನಾನೋರ್ವ ಬಡ ಕೂಲಿ. ಸತ್ಯವಿದೆ ನನ್ನಲ್ಲಿಯವುದೇ ಪ್ರತಿಫಲ ಬೇಡ ನನಗೆ. ನಾನು ನನ್ನ ಸತ್ಯವನ್ನು ನಿಮಗೆ ನೀಡಬಲ್ಲೆ. ಆದರೆ, ನೀವದನ್ನು ತೆಗೆದುಕೊಳ್ಳಬಲ್ಲಿರಾ?. ಸ್ವೀಕರಿಸಲು ಪಕ್ವವಾಗಿದೆಯೇ ನಿಮ್ಮ ಬುದ್ಧಿ, ಮನಸ್ಸು, ದೇಹ? ನಾನು ಅದರ ಬಗ್ಗೆ ಮಾತನಾಡಿದರೆ, ನಿಮಗೆ ಕೇಳಿಸುವುದು ಕೇವಲ ಭಾಷೆಯ, ಪದಗಳ ಚಮತ್ಕಾರ ಮಾತ್ರ. ಸತ್ಯಗಳನ್ನು ಪದಗಳೊಳಗೆ ಸೇರಿಸಲಾಗದು. ಮತ್ತು ನಾನು ಕಂಡ, ಕಾಣುವ ಸತ್ಯ ನಿಮ್ಮ ಸತ್ಯವಾಗದು. ಸತ್ಯದರ್ಶನ ಒಂದು ವೈಯಕ್ತಿಕ ಆತ್ಮಾನುಭವ. ಪದಗಳೊಳಗೆ ಹೆಣೆಯುವ ಕಸರತ್ತಲ್ಲ" ಎಂದ ನಮ್ರತೆಯಿಂದ.ಇಂದು ಪದಗಳ ಕಸರತ್ತು ನಡೆಯುತ್ತಿದೆ. ಸಾಹಿತ್ಯಾತ್ಮಕ ಅಲಂಕಾರದೊಂದಿಗೆ ಮಠಾಧಿಪತಗಳ, ಆಧ್ಯಾತ್ಮಿಕ ನೇತಾರರೆಂದು ಬೀಗುವವರ, ಅದಕ್ಕೆಂದೇ ಅಸಂಖ್ಯ ಪುಸ್ತಕ, ಪತ್ರಿಕೆಗಳಿಂದ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಜನರು ಇದೇ "ಸತ್ಯ" ಎಂದು ನಂಬುತ್ತಾರೆ. ಕೆಲವರು ನಂಬುವ ನಟನೆ ಮಾಡುತ್ತಾರೆ. ಏಕೆಂದರೆ, ಯಾವುದಾದರೂ ಒಂದು ಮತ, ಜಾತಿ, ಪಂಥ ಯಾ ಗುರುವಿನೊಂದಿಗೆ ತಮ್ಮನು ಬಹಿರಂಗವಾಗಿ ಗುರುತಿಸಿಕೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿ ಅದಕ್ಕೆ ಅಲ್ಲವೇ??

Monday, 24 October 2016

ನಾವ್ಯಾರು? ಭಾಗ-೨

ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕಾದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಈ ಬಗ್ಗೆ ತಿಳಿವಳಿಕೆ ಮುರುಟಿ ಹೋಗುತ್ತದೆ. ಹೇಗಿದೆ ಈ 'ನಾನೆಂಬ' ಅಹಂಕಾರ !!?

ಒಂದು ದೃಷ್ಟಾಂತ ಕಥೆ ಹೀಗಿದೆ :
aham brahasmi
Image have all standard licence belongs to Concerned person. Copying is purely offensive.
ಮರಕುಟಿಗ ಒಂದು ಮರದ ಕೊಂಬೆಯ ಮೇಲೆ ಕುಳಿತು ತನ್ನ ಕೊಕ್ಕಿನಿಂದ ಮರ ಕೊರೆಯುತ್ತಿತ್ತು. ಆ ಕ್ಷಣಕ್ಕೆ ಸಿಡಿಲು ಬಡಿದು ಕೊಂಬೆ ತುಂಡಾಗಿ ನೆಲಕ್ಕೆ ಬಿತ್ತು. ಮರಕುಟಿಗನ ಅಹಂಕಾರ ಪುಟಿದೆದ್ದಿತು. "ನಾನೆಂಥ ಬಲಶಾಲಿ ಎಂದು ಜಗತ್ತಿಗೇ ಗೊತ್ತಾಯಿತು. ಒಂದು ಕೊಕ್ಕಿನ ಹೊಡೆತಕ್ಕೆ ಕೊಂಬೆಯೇ ಮುರಿದು ಬಿತ್ತು ನೋಡು" ಎಂದು ಹಾಡಿಕೊಂಡು ಕಾಡು ತಿರುಗಿತು.

ಈ ಅಹಂಕಾರವೇ ಆಂತರ್ಯದ ಒಳಗಿಳಿಯುವಲ್ಲಿನ ಅಡ್ಡಿ. 

ಬದುಕಿನಲ್ಲಿ ಬರುವ ಸುಖ-ದುಃಖ, ಸ್ಥಾನಮಾನ, ಸಿರಿತನ, ಬಡತನ ಎಲ್ಲವೂ ಕಳೆದ ಜನುಮಗಳ ಕರ್ಮಶೇಷದಿಂದ ಪ್ರಾಪ್ತವಾಗುವಂತವು. ಅದನ್ನು ನಮ್ಮದೇ ಸಾಧನೆ ಎಂದುಕೊಳ್ಳುವುದು ಮಾಯೆ. ಈ ಮಾಯೆಯನ್ನು ಗುರುತಿಸಿ, ಅದರ ಆವರಣದಿಂದ ಹೊರಬರುವುದೇ ಬದುಕಿನ ಗುರಿ. ನಾವು ನಾವಲ್ಲ.
Image have all standard licence belongs to Concerned person. Copying is purely offensive.


ಹೀಗೆ ಬಳುವಳಿಯಾಗಿ ಬಂದ ವಂಶಾನುಗತ  ಸ್ವಭಾವಗಳು, ದೇಹಪ್ರಕೃತಿ, ಪರಿಸರ ಇದೆಲ್ಲದರೊಂದಿಗೆ ನಾವೇ ರೂಪಿಸಿ ಜೊತೆಗೆ ತಂದ 'ವಿಧಿ' ಎಂಬ ಜನುಮಾಂತರದ ಕರ್ಮಗಳು.

ಸಂತ ಮೊದಲು ಶ್ರೀಗಂಧ, ಬೆಳ್ಳಿ, ಚಿನ್ನ, ವಜ್ರ ವೈಢೂರ್ಯಗಳ ನಿಧಿ ತೋರಿಸುತ್ತಾನೆ. ಎಲ್ಲಿ ಮನಸ್ಸು ಚಿಂತನೆಗೆ ಹತ್ತಿತೋ ಕರ್ಮಪಾಕದ ಬಾವಿಯೊಳಗಿಳಿದು, ಜಯಿಸಿ ಹೊರಬರುವ ಹಾದಿ ತೋರಿಸುವ ಆಶ್ವಾಸನೆ ನೀಡುತ್ತಾನೆ.
ಮರಕುಟಿಗ ನವಿಲಾಗುತ್ತದೆ. ಬದುಕು ಭವಮುಕ್ತವಾಗುತ್ತದೆ.

Wednesday, 19 October 2016

ನಾವ್ಯಾರು? ಭಾಗ-೧

ಒಬ್ಬ ಕಾಡಿನಲ್ಲಿದ್ದ ಒಣಗಿದ ಮರ ಕಡಿದು, ಸಿಗಿದು ಹೊರೆ ಕಟ್ಟಿ ಪೇಟೆಗೆ ಹೊತ್ತಿಕೊಂಡು ಹೋಗಿ ಮಾರಿ, ಬಂದ ಒಂದಿಷ್ಟು ಕಾಸುಗಳಿಂದ ಕುಟುಂಬದ ಹೊಟ್ಟೆ ಹೊರೆಯುವವನಿದ್ದ.

ಒಂದು ದಿನ ಸರ್ವಸಂಗ ಪರಿತ್ಯಾಗಿಯೊಬ್ಬ ಎದುರಾದ ಇವನಿಗೆ. ತನ್ನ ಕಷ್ಟಗಳನ್ನು ಅವನೊಂದಿಗೆ ಹೇಳಿಕೊಂಡು ಪರಿಹಾರ ಬೇಡಿದ.
ಸಂತನೆಂದ, "ಪರಿಹಾರ ಇದೆ. ಆದರೆ, ನೀನು ತೊಂದರೆಗಳನ್ನು ಎದುರಿಸಲು ತಯಾರಿರಬೇಕು. ನೀನೀಗ ಕಾಡಿನ ಅಂಚಿನಿಂದ ಕಟ್ಟಿಗೆ ಸಂಗ್ರಹಿಸುತ್ತಿರುವೆ. ಒಂದಿಷ್ಟು ಸ್ವಲ್ಪ ಕಾಡಿನ ಒಳಗಡೆ ಹೋಗಿ ನೋಡು. ಉಪಾಯೋಗವಾಗಬಹುದು". ಸರಿ ಎಂದು ಇವನು ಕಾಡಿನ ಒಳಹೊಕ್ಕ.


Who are we?
Image Source : Google Images


ಹೆದರಿಕೆ ಹಿಂದೆಳೆಯುತ್ತಿದ್ದರೂ ಒಂದಿಷ್ಟು ಧೈರ್ಯದಿಂದ ಕಾಡಿನ ಒಳಗಡೆ ನಡೆದ. ಕಾಡಿನ ಒಳಗಡೆ ಥಂಡಿಯಾಗಿ ಶ್ರೀಗಂಧದ ಮರಗಳು.!! ಒಂದು ವರ್ಷ ಕೂತು ತಿನ್ನುವಷ್ಟು ಕಾಸು ಸಿಕ್ಕಿತು...

ಮಾರನೆಯ ದಿನ ಸಂತನನ್ನು ಕಂಡು ಕೃತಜ್ಞತೆ ತಿಳಿಸಿದ.  ಸಂತ ನಸುನಗುತ್ತಾ ಹೇಳಿದ "ಇದು ಒಂದು ಹೆಜ್ಜೆಯಾಯಿತು. ಇನ್ನೆರಡು ಹೆಜ್ಜೆ ಮುಂದಿಡು. ಏನಾಗುವುದೋ ನೋಡೋಣ" ಎಂದ.

ಕೆಲವು ದಿನಗಳ ಅನಂತರ ಇವ ಇನ್ನೂ ಮುಂದೆ ಹೋದ. ಅಲ್ಲಿ ಭರ್ಜರಿ ಬೆಳ್ಳಿಯ ನಿಕ್ಷೇಪವಿತ್ತು. ಸಂತ ಮತ್ತೂ ಮುಂದೆ ಹೋಗುವಂತೆ ಆಗ್ರಹಿಸಿದ. ಅಲ್ಲಿ ಚಿನ್ನ, ವಜ್ರದ ಅಪಾರ ನಿಧಿ ಸಿಕ್ಕಿತು. ಕಟ್ಟಿಗೆ ಮಾರುವ ಬಡವ ಸಿರಿವಂತನಾದ. ತಾನೊಂದು ಕಾಲದಲ್ಲಿ ಪಡುತ್ತಿದ್ದ ಕಷ್ಟಗಳನ್ನು ಮರೆತುಬಿಟ್ಟ. ಆದರೂ ನನ್ನನ್ನು ಈ ಸ್ಥಿತಿಗೆ ತಂದ ಸಂತ ಅವನ ನೆನಪಿನಲ್ಲಿ ಸ್ಥಿರವಾಗಿದ್ದ.

ಒಮ್ಮೆ ಅವನನ್ನು ಕಂಡು ತನ್ನೊಂದು ಸಂದೇಹ ಪರಿಹರಿಸಿಕೊಳ್ಳಬೇಕೆನಿಸಿತು. ಹೋಗಿ, ಅವನ ಮುಂದೆ ಕುಳಿತು ತನ್ನ ಅನುಮಾನ ಮುಂದಿಟ್ಟ. ಅದು ಹೀಗಿತ್ತು : "ನಿಮಗೆ ಕಾಡಿನ ಮಧ್ಯದಲ್ಲಿದ್ದ ಅಪಾರ ನಿಧಿಯ ಅರಿವಿತ್ತು. ಅದನ್ನು ನೀವೇ ಉಪಯೋಗಿಸಿಕೊಂಡು, ಸಿರಿವಂತರಾಗಿ . ಸುಖವಾಗಿರದೇ, ಈ ಕಾಡಂಚಿನಲ್ಲಿ ಮುರುಕು ಗುಡಿಸಲಿನಲ್ಲಿ, ಕಾಲಕಾಲಕ್ಕೆ ಅನ್ನಾಹಾರಗಳಿಲ್ಲದೆ ಬಳಲುವುದೇಕೆ?"


Who are we?
Image Source : Google Images
ಸಂತ ಉತ್ತರಿಸಿದ " ಇವೆಲ್ಲಕ್ಕೂ ಮಿಗಿಲಾದ ಸಂಪತ್ತೊಂದು ನನ್ನೊಳಗೆ ವ್ಯಾಪಕವಾಗಿದೆ. ಅದರ ಮುಂದೆ ಈ ಸಂಪತ್ತು ತೀರಾ ನಗಣ್ಯ. ಮತ್ತೆ ಇದರ ಅಗತ್ಯವೂ ನನಗಿಲ್ಲ. ನಿಜವಾದ ಸಂಪತ್ತನ್ನು ಹೊಂದುವಾಸೆ ಇದ್ದರೆ, ಎಲ್ಲವನ್ನೂ ಬಿಟ್ಟು ಬಾ. ಈ ಮರದ ಕೆಳಗೆ ನನ್ನೊಂದಿಗಿರು. ಅದನ್ನು ಹೊಂದುವ ಬಗ್ಗೆ ಕಲಿಸುತ್ತೇನೆ." ಎಂದ.



ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಇದೆ 'ನಾನೆಂಬ' ಅಹಂಕಾರ!!?



ಭೌತಿಕ ವಿಷಯಸುಖವೇ ಸುಖವೆಂಬ ಚಿಂತನೆಗೆ ನಾವು ಹೊಂದುಕೊಂಡಿದ್ದೇವೆ. ಅದೇ ಬದುಕಾಗಿ ಹೋಗಿದೆ. ಒಂದು ಸಣ್ಣ ಕಿಡಿಯಿಂದ ಮೊದಲಾಗುವ ಈ ಭಾವ,ಒಂದರಿಂದ ಎರಡಾಗಿ, ನಾಲ್ಕಾಗಿ ಮತ್ತೆ ಸಹಸ್ರ ಬಹುವಾಗಿ ನಮ್ಮನ್ನು ತನ್ನಲ್ಲಿ ಸೆಳೆದು ಜೀರ್ಣಿಸಿಕೊಳ್ಳುತ್ತದೆ. ನಮ್ಮ ಅಹಂಕಾರಕ್ಕೆ ಈ ಭೌತಿಕ ವಿಜಯ ನೀರೆರೆದು ಬೃಹತೃಕ್ಷವಾಗಿ  ಬೆಳೆಸುತ್ತದೆ. 




                                                                                                                           --ಮುಂದುವರೆಯುವುದು......

CLICK HERE