Friday 28 October 2016

ಬೆಳಕಿನ ಹಬ್ಬ ಸಮಸ್ತರಿಗೆ ಮಂಗಳ ತರಲಿ

ಇದೊಂದು ಚಂದದ ಕಥೆ ಒಂದು ವಿಧದಲ್ಲಿ ದೃಷ್ಟಾಂತ ಕಥೆಯೂ ಹೌದು. ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಬೆಂಕಿಯ ಬೆಳಕಿನ ಉಪಯೋಗ ತಿಳಿದವರು ಕೆಲವೇ ಕೆಲವು ಮಂದಿ ಇದ್ದರು. ಆದರೆ ಅವರಿಗೂ ಬೆಂಕಿ ಲಭ್ಯವಿರಲಿಲ್ಲ. ಏಕೆಂದರೆ, ದೂರದ ಪರ್ವತದ ಮೇಲೆ, ಕೋಟೆಮನೆ ಕಟ್ಟಿಕೊಂಡಿದ್ದ ರಾಕ್ಷಸನೊಬ್ಬ ಜಗತ್ತಿನ ಎಲ್ಲಾ  ಬೆಂಕಿ, ಬೆಳಕನ್ನೂ ಅಂಕೆಯಲ್ಲಿಟ್ಟುಕೊಂಡಿದ್ದ. ಅಥವಾ ಹಾಗೆಂದು ಪ್ರತೀತಿ ಇತ್ತು. ಕಂಡವರಿರಲಿಲ್ಲ ಎನ್ನುವ  ಮಾತು ಬೇರೆ. ಹಾಗೆಂದು ಪ್ರಯತ್ನಿಸಿದವರಿದ್ದವರಂತೆ. ಅದೂ ದಂತಕಥೆಯಾಗಿತ್ತೇ ಹೊರತು ಈ ತಲೆಮಾರಿನಲ್ಲಿರಲಿಲ್ಲ.



ಹೀಗಿದ್ದರಿಂದ ಜನ ಕತ್ತಲಾಗುವ ಮೊದಲೇ ಗೂಡು ಸೇರಿಕೊಳ್ಳುತ್ತಿದ್ದರು. ಹಸಿ ಹಸಿ ತಿನ್ನುತ್ತಿದ್ದರು. ಚಳಿಯಲ್ಲಿ ನಡುಗುತ್ತಾ ನರಳುತ್ತಿದ್ದರು. ಹೀಗಿದ್ದೂ ಯಾರೂ ಬೆಂಕಿ ತರುವ ಮನಸ್ಸು ಮಾಡಿರಲಿಲ್ಲ ಎಂಬುದೇ ಆಶ್ಚರ್ಯದ ಮಾತಾಗಿತ್ತು. ಹೀಗೆ ಬಹಳ ಕಾಲದ ಅನಂತರ ತುಂಬು ಕುಟುಂಬದ ಹುಡುಗನೊಬ್ಬನಿಗೆ ರಾಕ್ಷಸನ ಕಥೆ ತಿಳಿಯಿತು. ಮನಸ್ಸಿನಲ್ಲೊಂದು ಸಣ್ಣ ಬೀಜ ಬಿತ್ತು, ಬೆಂಕಿ ಎಂದರೇನು? ಅದರ ಬೆಳಕೆಂದರೇನು? ಹೇಗಿರಬಹುದು ಬೆಳಕಿನೊಂದಿಗಿನ ಬದುಕು! ಎಂದೆಲ್ಲಾ ಯೋಚಿಸಿದ. ಕಡೆಗೊಂದು ದಿನ ಬೆಳಕನ್ನು ಕಾಣದಿದ್ದರೆ ಬದುಕು ವ್ಯರ್ಥ ಎನ್ನುವಲ್ಲಿಗೆ ಬೆಳಕಿನ ಗೀಳು ಬಲವಾಯಿತು. ಹೆತ್ತವರಲ್ಲಿ ಹೇಳಿಕೊಂಡ. ಅವರು ಕಾಣದ ರಕ್ಕಸನ ಬಗ್ಗೆ ಕಥೆಗಳನ್ನು ಹೇಳುತ್ತಾ " ಬೇಡಪ್ಪಾ, ಅವನು ನಿನ್ನನ್ನು ತಿಂದು ಹಾಕುತ್ತಾನೆ, ಬೇಡ." ಎಂದು ತಿಳಿ ಹೇಳಿದರು..


Happy dipavali
Image have all standard licence belongs to Concerned person. Copying is purely offensive.

ಹುಡುಗನ ಚಿಂತನೆ ನಿರ್ಧಾರವಾಯಿತು. ಈ ಸಾವು ಎಂದರೇನು? ಎಂಬ ಹೊಸ ಪ್ರಶ್ನೆ ಹುಟ್ಟಿತು. ಸರಿ, ಒಂದು ದಿನ ಯಾರಿಗೂ ಹೇಳದೇ ಕೇಳದೆ ರಾಕ್ಷಸನನ್ನು ಹುಡುಕಿಕೊಂಡು ಹೊರಟ. ಎಷ್ಟೋ  ದಿನದ ಪಯಣದ ಅನಂತರ ದೂರದಲ್ಲಿ ಕೋಟೆಮನೆ ಕಂಡಿತು. ಕತ್ತಲಲ್ಲಿ ಅದರ ಕಿಟಕಿ, ಬಾಗಿಲುಗಳಿಂದ ಬೆಳಕು ಹೊರಹೊಮ್ಮುತ್ತಿರುವುದು ಕಾಣುತಿತ್ತು.

ಹುಡುಗ ಮೆಲ್ಲಮೆಲ್ಲನೆ ನಡೆದು, ಪೌಳಿಗೋಡೆ ಏರಿ, ಮನೆಯ ಕಿಟಕಿಯಿಂದ ಒಳಗೆ ಹಣಕಿದ. ಒಳಗ್ಯಾವ ರಕ್ಕಸನೂ ಕಾಣಲಿಲ್ಲ. ಬದಲಿಗೆ ಸುಂದರಾಂಗ ಯುವಕನೊಬ್ಬ ಏನನ್ನೋ ಓದುತ್ತಿದ್ದ. ಹುಡುಗ ಕಿಟಕಿ ಹಾರಿ  ಒಳಗೆ ಬಂದು ಈ ಸುಂದರಾಗನ ಮುಂದೆ ನಿಂತ. "ಬೆಳಕು ಹುಡುಕಿ ಬಂದೆಯೇನು? ಬಲು ದೂರದಿಂದ, ಬಲು ಶ್ರಮವಹಿಸಿ ಬಂದಿರುವಂತಿದೆ. ಸರಿ, ಮೊದಲು ಬೆಳಕಿನ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ಅಧ್ಯಯನ, ಅಭ್ಯಾಸ ಬೇಕು. ಅನಂತರ ಅದನ್ನು ಸರಿಯಾದ ರೀತಿಯಲ್ಲಿ ಅಗತ್ಯಕ್ಕನುಗುಣವಾಗಿ ಉಪಯೋಗಿಸಬಹುದು. ಬೆಳಕಿನ ಮೂಲ ಬೆಂಕಿ. ಹೆಚ್ಚು ಕಡಿಮೆಯಾದರೆ ಜಗತ್ತನ್ನೇ ಸುಟ್ಟು ಹಾಕಬಲ್ಲದು. ಅಡುಗೆಗೂ ಉಪಯೋಗಿಸಬಹುದು, ಶವ ದಹನಕ್ಕೂ ಉಪಯೋಗಿಸಬಹುದು, ಅನಂತರ ನೀನು ಬೆಳಕನೊಯ್ಯಲು ಯೋಗ್ಯನೋ ಇಲ್ಲವೋ ಎಂದು ನಿರ್ಧರಿಸಬೇಕು" ಎಂದ ಸುಂದರಾಂಗ.


Happy DEEpavali
Image have all standard licence belongs to Concerned person. Copying is purely offensive.

ಹುಡುಗ ಒಪ್ಪಿದ. ಅವನು ಹುಟ್ಟಿದ್ದೇ ಬೆಳಕನ್ನು ಅರಿಯಲು. ಹಗಲೂ ರಾತ್ರಿ ತಪಿಸಿದ. ನಿದ್ದೆಯಲ್ಲೂ ಬೆಳಕನ್ನು ಜಪಿಸಿದ. ಬೆಳಕಿನ ಮೂಲ ಬೆಂಕಿ. ಅಂದರೆ ತಪಿಸುವುದು ಮಂಥನ. ನಿರಂತರ ಧ್ಯಾನದಿಂದ ಮಾತ್ರವೇ ಇದು ಸಾಕಾರವಾಗುತ್ತದೆ. ಹಾಗೆ ಆಯಿತು. ಹುಡುಗನಿಗೆ ಬೆಂಕಿಯನ್ನಿತ್ತ ಸುಂದರಾಂಗ. ಅದರ ಬೆಳಕಿನಲ್ಲೆ ಮನೆಗೆ ಮರಳಿದ. ಅವನು ತಂದ ಪುಟ್ಟ ಹಣತೆಯಿಂದ ಸಾವಿರಾರು ದೀಪಗಳನ್ನು ಹೊತ್ತಿಸಲಾಯಿತು.  ಜಗತ್ತೇ ಬೆಳಗಿತು ಎನ್ನುತ್ತದೆ ಕಥೆ.


"ಅದು, ಎಲ್ಲವನ್ನೂ ನಡೆಸುತ್ತದೆ, ಅದು ಸ್ವತಃ ಚಲಿಸದು. ಅದು ದೂರದಲ್ಲಿದೆ, ಅದೇ ಹತ್ತಿರದಲ್ಲೂ ಇದೆ. ಅದು ಎಲ್ಲದರ ಒಳಗಿದೆ, ಅದೇ ಎಲ್ಲದರ ಹೊರಗೆಯೂ ಇದೆ" ಬೆಳಕಿನ ಸ್ವರೂಪವನ್ನು ಯಜುರ್ವೇದ ವಿವರಿಸುವ ಪರಿ ಇದು. ಸರ್ವವ್ಯಾಪಿಯಾದ ಈ 'ಜೀವ', 'ಆತ್ಮ, 'ಚೈತನ್ಯ' ಎಂಬೆಲ್ಲ ಹೆಸರುಗಳಿಂದ ನಾವು ಕಾಣಲು ಕಾತರಿಸುವ ಬೆಳಕನ್ನು ಮೂರ್ತರೂಪದಲ್ಲಿ ಆರಾಧಿಸುವುದೇ 'ದೀಪಾರಾಧನೆ'


ಬೆಳಕು "ಅದಲ್ಲ, ಇದಲ್ಲ'' ಅವುಗಳೆಲ್ಲ ನಾವು ಮನುಷ್ಯರು, ನಮ್ಮ ಅನುಕೂಲಕ್ಕಾಗಿ, ಗುರುತಿಗಾಗಿ ಕಲ್ಪಿಸಿಕೊಂಡ ಶಬ್ದಗಳು ಮಾತ್ರ. ಶಬ್ಡಸ್ವರೂಪಿಗೆ ಯಾವುದೇ ಆಯಾಮಗಳಿಲ್ಲ ಎನ್ನುತ್ತದೆ ನಮ್ಮ ಪ್ರಾಚೀನರ ಜ್ಞಾನ. ಈ ಬೆಳಕು ಜಗತ್ತನ್ನೇ ಬೆಳಗಿಸಲಿ, ನಮ್ಮ ಓದುಗರ, ಓದುಗರಲ್ಲದವರ, ಇಂದು ಹಿಂದೆ ಮುಂದೆ ಬರಲಿರುವ ಸಮಸ್ತ ಜೀವಜಾಲಕ್ಕೆ ಮಂಗಳವನ್ನುಂಟು ಮಾಡಲಿ ಎಂದು ಹಾರೈಸೋಣ, ಒಂದಾಗಿ ಬೆಳೆಕಿನೆಡೆಗೆ ನಡೆಯೋಣ..

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಬೆಳಕಿನ ಹಬ್ಬ ಸಮಸ್ತರಿಗೆ ಮಂಗಳ ತರಲಿ.




No comments:

Post a Comment

CLICK HERE