Thursday 30 October 2014

ಬಿಡುಗಡೆಯ ಧನ್ಯ ಘಳಿಗೆ.











ಕಪಿಲವಸ್ತುವಿನ ರಾಜಕುಮಾರ ಸಿದ್ದಾರ್ಥ, ಯೌವನದ ಉತ್ತುಂಗದಲ್ಲಿರುವಾಗಲೇ

 ಭೌತಿಕ ಜಗತ್ತಿನ ನಶ್ವರತೆಯಿಂದ ಭ್ರಮನಿರಸಗೊಂಡ. ಅರಮನೆ, ಸುಂದರ ಪತ್ನಿ, 

ಮಗನನ್ನು ತೊರೆದು ಸತ್ಯವನ್ನರಸಿ ಹೊರಟ. ಒಂದು ದಿನ ಅವನು ಅರಸಿ ಹೊರಟ 

ಸತ್ಯದ ದರ್ಶನವಾಯಿತು. ಸಿದ್ದಾರ್ಥ ಗೌತಮ ಬುದ್ಧನಾದ. ಶಾಕ್ಯ ವಂಶದ 

ರಾಜಕುಮಾರ, ಸಿಂಹಾಸನವನ್ನೇರಿ ಚಕ್ರವರ್ತಿಯಾಗುವ ಬದಲು, ಲಕ್ಷಾಂತರ 

ಹ್ರದಯ ಪರಿವರ್ತನೆ ಮಾಡಿ , ಆಧ್ಯಾತ್ಮ ಜಗತ್ತಿನಲ್ಲಿ ಸಾಮ್ರಾಜ್ಯ ಸ್ಥಾಪಿಸಿದ. ಇವನ ಬದುಕಿನ ಒಂದು ಘಟನೆ ಇದು.



ಒಮ್ಮೆ ಇವನು ಮಗಧದ ರಾಜಧಾನಿಯಾದ ರಾಜಗ್ರಹದ ಹೊರಗಿರುವ ಚೈತ್ಯದಲ್ಲಿ 

ತಂಗಿದ್ದ. ಪ್ರತಿದಿನ ಸಂಜೆ ಶ್ರಾವಕರು ಇವನ ಮಾತು ಕೇಳಲು ನೆರೆಯುತ್ತಿದ್ದರು. 

ಅಂದು ಹೀಗೆಯೇ ಮಂದಿ ಸೇರಿದ್ದರು. ಬುದ್ಧ ತನ್ನ ಪರಿವಾರದ ಭಿಕ್ಷು ಕಶ್ಯಪನನ್ನೇ 

ದಿಟ್ಟಿಸಿ ನೋಡುತ್ತಾ ಪ್ರವಚನ ಪ್ರಾರಂಭಿಸಿದ. ಅದು ಹೀಗಿತ್ತು-



"ದುಖಃಕ್ಕೆ ಕಾರಣ ಆಸೆ. ಆದುದರಿಂದ ದುಖಃದಿಂದ ಬಿಡುಗಡೆ ಹೊಂದುವ ಮಾರ್ಗ 

ಒಂದೇ, ದುಖಃಕ್ಕೆ ಕಾರಣವುದುದನ್ನು ಮಾಡಬಾರದು. ದುಖಃಕ್ಕೆ ಕಾರಣವೂ 

ಸರಳವೇ. ಅಗತ್ಯವಿಲ್ಲದ ವಸ್ತುಗಳ ಬಗ್ಗೆ ಗಮನ, ಅನಂತರ ಆ ವಸ್ತುಗಳ ಬಗ್ಗೆ 

ಬೆಳೆಸಿಕೊಳ್ಳುವ ಮೋಹ, ಆ ವಸ್ತುಗಳನ್ನು ಗಳಿಸಿಕೊಳ್ಳಲು ಉಳಿಸಿಕೊಳ್ಳಲು ಕಡೆಯ

 ನಿರಂತರ ಪ್ರಯತ್ನ. ಇವೆ ದುಖಃದ ಕಾರಣಗಳು. ಸಾಧನೆಯ ಹಾದಿಯಲ್ಲಿ ನಡೆಯ 

ಬಯಸುವವರು, ಮುಖ್ಯವಾಗಿ ಭಿಕ್ಷುಗಳು. ಈ ದುಖಃ ಮೂಲದ ಕ್ರಿಯೆಗಳಿಂದ ದೂರವೇ ಇರಬೇಕು."



ಭಿಕ್ಷು ಕಶ್ಯಪನ ಮುಖ ಬಾಡಿಹೋಯಿತು. ಅಂದು ಬೆಳಿಗ್ಗೆ ಅವನು ರಾಜಗ್ರಹಕ್ಕೆ 

ಭಿಕ್ಷೆಗಾಗಿ ಹೋಗಿದ್ದ. ಅಲ್ಲಿ ಒಂದು ಜಾತ್ರೆ ನಡೆಯುತಿತ್ತು. ಅದರಲ್ಲಿ ಒಂದು 

ಸ್ಪರ್ಧೆಯಿತ್ತು. ಒಂದು ಚಿನ್ನದ ಭರಣಿಯಲ್ಲಿ ಮುತ್ತುರತ್ನಗಳನ್ನು ತುಂಬಿ ಎತ್ತರದಲ್ಲಿ 

ತೂಗು ಹಾಕಿದ್ದರು. ಯಾವುದೇ ರೀತಿಯಲ್ಲಿ ಮೇಲಕ್ಕೆ ಏರದೆ ಅದರ ಸರಪಳಿಯನ್ನು 

ಕತ್ತರಿಸದೇ ಭರಣಿಯನ್ನು ಕೆಡವದೆ ಕೆಳಗಿಳಿಸುವವ ಅದರ ಒಡೆಯನಾಗುತ್ತಿದ್ದ. 

ಕೆಲವರು ಸ್ಪರ್ಧೆಯ ನಿಯಮ ಕೇಳಿಯೇ ಹತ್ತಿರವೂ ಹೋಗದೆ ಮರಳಿದರು. 

ಕೆಲವರು ಇದು ಬರೀ ಸೋಗು, ಕಡೆಗೆ ಯಾರಿಗೂ ಸಿಗದೇ, ಅದರ ಯಜಮಾನನೇ 

ಅದನ್ನು ಪಡೆಯುವಂತೆ ಮಾಡುವ ಹುನ್ನಾರ ಎಂದು ಅವಹೇಳನ ಮಾಡಿದರು. 

ಮತ್ತೆ ಕೆಲವರು ಪ್ರಯತ್ನಿಸಿದರೂ ಸಫಲರಾಗದೇ ನಿರಾಶರಾದರು. ವೈವಿಧ್ಯಕ್ಕೆ 

ಇನ್ನೊಂದು ಹೆಸರು ಈ ಜಗತ್ತು!



ಇದನ್ನೆಲ್ಲ ಗಮನಿಸುತ್ತಿದ್ದ ಕಶ್ಯಪ ಭಿಕ್ಷು. ಅವನಿಗೆ ಅಪೂರ್ವವಾದ ಯಕ್ಷಿಣಿ ವಿದ್ಯೆ 

ತಿಳಿದಿತ್ತು. ಸರಿ, ಮುಂದೆ ಬಂದು ತನ್ನ ವಿದ್ಯೆಯಿಂದ ಭರಣಿ ತನ್ನಿಂದ ತಾನೇ 

ಕೆಳಗಿಳಿಯುವಂತೆ ಮಾಡಿದ. ಸ್ಪರ್ಧೆಯಲ್ಲಿ ಗೆದ್ದು ಭರಣಿಯನ್ನು ಬುದ್ಧನಿಗೆ ಅರ್ಪಿಸಲು

ತಂದಿದ್ದ. ಬಹುಶಃ ಇದು ಬುದ್ಧನಿಗೆ ತಿಳಿದು, ತನಗಾಗಿಯೇ ಈ ಮಾತು 

ಹೇಳಿರಬೇಕು ಎಂದು ಅವನ ಮನಸ್ಸು ಖಿನ್ನವಾಯಿತು.



ಪ್ರವಚನ ಮುಗಿದು ನೆರೆದವರೆಲ್ಲಾ ಹೊರಟುಹೋದ ಅನಂತರ, ತಾನು ಗೆದ್ದು ತಂದ

 ಭರಣಿಯನ್ನು ಗುರುವಿನ ಮುಂದಿಟ್ಟು ನಟಮಸ್ತಕನಾಗಿ ನಿಂತುಕೊಂಡ. ಬುದ್ಧದೇವ 

ನಸುನಗುತ್ತಾ, "ಕಶ್ಯಪ, ನಿನಗೆ ಈ ಭರಣಿ ಹಾಗೂ ಅದರಲ್ಲಿರುವ ಸಂಪತ್ತಿನ 

ಅಗತ್ಯವಿತ್ತೇ?" ಕಶ್ಯಪ ತಲೆಯಲ್ಲಾಡಿಸಿ. "ಇಲ್ಲ ಗುರುವೇ"ಎಂದುತ್ತರಿಸಿದ. 

ಎರಡನೆಯ ಪ್ರಶ್ನೆ ಬಂತು. "ಭಿಕ್ಷುಗಳು, ಸಾಧಕರು ವೈಭವೋಪೇತವಾದ 

ವಸ್ತುಗಳನ್ನು ಇಟ್ಟುಕೊಳ್ಳಬಹುದೇ?" ಕಶ್ಯಪ ಸಣ್ಣ ಸ್ವರದಲ್ಲಿ ಉತ್ತರಿಸಿದ,"ಇಲ್ಲ 

ಗುರುವೆ". ಬುದ್ಧ ಮತ್ತೆ ಕೇಳಿದ, "ಯಾಕೆ?" "ಇವೆರಡೂ ದುಖಃಕ್ಕೆ ಕಾರಣ"."ಈ 

ದುಖಃ ಕಾರಣಗಳನ್ನು ಪಡೆಯಲು, ನೀನು ಕಷ್ಟದಿಂದ ಕರಗತವಾದ ಸಿದ್ಧಿಯನ್ನು 

ಉಪಯೋಗಿಸಿದೆ. ಇದರಿಂದ ಭರಣಿ ನಿನ್ನದಾಯಿತು. ನೆರೆದ ಮಂದಿ ನಿನ್ನ ಈ 

ವಿದ್ಯೆಯಿಂದ ಬೆರಗಾದರೂ ನೀನು ಅವರ ದ್ರಷ್ಟಿಯಲ್ಲಿ ಪವಾದಪುರುಷನಾದೆ. 

ಅಮಾನುಷನಾದೆ. ನಿನಗಾರಿವಾಗದಂತೆ ನಿನ್ನ ಅಹಂಕಾರ ಉಬ್ಬಿತು. ಇಷ್ಟು 

ಸಾಕಾಗಲಿಲ್ಲನಿನಗೆ. ಇದನ್ನು ನನಗರ್ಪಿಸಿ ನನ್ನನ್ನೂ ಮೆಚ್ಚಿಸಲು ಪ್ರಯತ್ನಿಸಿದೆ. 

ಭಿಕ್ಷು ಧರ್ಮದಿಂದ ವಿಚಲಿತನಾದೆ. ಏನು ಹೇಳುವಿ?" ಎಂದ ಗೌತಮ ಬುದ್ಧ.





"ತಮ" ಎಂದರೆ ಅಜ್ಞಾನದ ಗಾಢ ಕತ್ತಲು. "ಗೌ" ಎಂದರೆ ಬೆಳಕಿನ ಕಿರಣ. ಬುದ್ಧ 

ಎಂದರೆ ಬಹುಶಃ ತಾನು ಕಂಡ ಜ್ಞಾನದ ಹಾದಿಯನ್ನು ಜಿಜ್ಞಾಸುಗಳಿಗೆ ಮುಟ್ಟಿಸಲು 

ಬದ್ಧನಾದವ ಎಂದಿರಬಹುದು ಕೂಡ. ಕಶ್ಯಪನ ಮಟ್ಟಿಗಂತಲೂ ಹಾಗೆ ಆಯಿತು. 

ಅವನ ಕಣ್ಣುಗಳು ತೆರೆದುಕೊಂಡವು. ಮರು ಮಾತನಾಡದೆ ತನ್ನ ಭೌತಿಕತೆಯನ್ನು 

ಭರಣಿಯೊಳಗೆ ತುಂಬಿಸಿ, ಆಧ್ಯಾತ್ಮ ಸಾಗರದಲ್ಲಿ ಎಸೆದು ತ್ರಪ್ತನಾದ.

ಇಂಥ ಘಳಿಗೆಗಳೇ ಪರಿಪಕ್ವತೆಯ ಸಂಕೇತ. ಬಿಡುಗಡೆಯ ಪ್ರಥಮ ಹೆಜ್ಜೆ.

ನಮ್ಮ ಚಿಂತನೆಗಳು ಪರಮಾರ್ಥಾದೆಡೆಗೆ ಹರಿಯದಂತೆ ತಡೆಯುತ್ತವೆ. ನಮ್ಮ 

ಭೌತಿಕ ಮೋಹಗಳು ಎಲ್ಲಿಯವರೆಗೆಂದರೆ, 'ಸಾವೆಂಬ' ಶಬ್ದವೇ ಭಯ ಹುಟ್ಟಿಸುತ್ತದೆ.

 ಈ ಭಾವಪಾಶ ಹರಿಯದೆ ಭಯದಿಂದ ಬಿಡುಗಡೆಯಾಗದು. ಇದು ಮತ್ತೆ 

ಭೌತಿಕವಲ್ಲ. ಕೇವಲ ಮಾನಸಿಕ. ಆಮೆ ಕಷ್ಟಕಾಲದಲ್ಲಿ ತನ್ನ ತಲೆ, ಕಾಲುಗಳನ್ನು 

ಚಿಪ್ಪಿನೊಳಗೆ ಎಳೆದುಕೊಳ್ಳುವಂತೆ, ಪ್ರಾಪಂಚಿಕ ಆಮಿಷಗಳಿಂದ ಮನಸ್ಸನ್ನು 

ಒಳಗೆಳೆದುಕೊಳ್ಳುವುದೇ ಬಿಡುಗಡೆಯ ಮೊದಲ ಹೆಜ್ಜೆ. ಈ ಬಿಡುಗಡೆಯ ಕ್ಷಣವೇ 

ಧನ್ಯ ಘಳಿಗೆ, ಪುಣ್ಯಗಳು ಪರಿಪಕ್ವವಾದ ಕ್ಷಣ. ಇದಕ್ಕೆ ಮನುಷ್ಯ ಪ್ರಯತ್ನವೇ 

ಮೊದಲು. ಈ ಪ್ರಯತ್ನಕ್ಕೆ ಮನಸ್ಸು ಹದವಾದಂದು, ದೇವತೆಗಳೂ ಸಹಾಯ 

ಮಾಡುತ್ತಾರೆ ಎನ್ನುತ್ತದೆ ನಮ್ಮ ಪ್ರಾಚೀನ ಜ್ಞಾನ.




No comments:

Post a Comment

CLICK HERE