ಒಬ್ಬನ ಆಯಸ್ಸು ತೀರಿತು.. ಬದುಕಿದ್ದಾಗ ಬಹಳಷ್ಟು ಒಳ್ಳೆಯದನ್ನೇ ಮಾಡಿದ್ದ.
ನಮ್ಮಗಳ ಭಾಷೆಯಲ್ಲಿ ಹೇಳುವುದಾದರೆ ಬಹಳ ಪುಣ್ಯ ಮಾಡಿದ್ದ. ಯಮದೂತರು
ಇವನ 'ಆತ್ಮ'ವನ್ನು ತೆಗೆದುಕೊಂಡು ಸ್ವರ್ಗಕ್ಕೆ ಹೋದರು. ಪ್ರಮಾದವಶಾತ್ ಅವನ
ಹೆಸರು ಸ್ವರ್ಗದ ಕಡತದಲ್ಲಿರಲಿಲ್ಲ.!
ಸ್ವರ್ಗಪಾಲಕರು ಹೆಸರಿಲ್ಲದಿದ್ದರಿಂದ ಇವನ ಆತ್ಮವನ್ನು ಬಾಗಿಲಲ್ಲಿಯೇ ತಡೆದು
ನಿಲ್ಲಿಸಿದರು. ಸ್ವರ್ಗಕ್ಕೆ ಪ್ರವೇಶ ನಿರಾಕರಿಸಲಾಯಿತು! ಈಗ ಯಮದೂತರಿಗೆ
ಸಮಸ್ಯೆ ಉಂಟಾಯಿತು. ಇವನನ್ನು ಏನು ಮಾಡುವುದು? ಮರಳಿ
ಧರೆಗೆ ಕೊಂಡೊಯ್ಯಲಾಗದು.! ಅವನಿಷ್ಟು ದಿನವೂ
ಉಪಯೋಗಿಸುತ್ತಿದ್ದ ' ದೇಹ', ಅವನದನ್ನು ತೊರೆದ ತಕ್ಷಣ 'ಶವ'ವಾಗಿ ಮಂದಿ
ಅದನ್ನು ಕಂಡರೆ ಹೆದರಲು ಶುರು ಮಾಡಿದ್ದರು. ಬಿಟ್ಟರೆ ಕೊಳೆತು ಹುಳು ಬೀಳುತ್ತದೆ.
ಅದರ ವಿಲೇವಾರಿಯಾಗದೆ ಮಂದಿ ಊಟ ಮಾಡಲಾಗದು.! ಮನೆಯಲ್ಲಿ ಒಲೆ
ಹೊತ್ತಿಸಲಾಗದು! ಒಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಬಿಡುಗಡೆಯಾಗಬೇಕು.
ಹೀಗೆ ತರಾತುರಿಯಲ್ಲಿ ಅದನ್ನು ಸುಟ್ಟು ಹಾಕಲಾಯಿತು.
ಸರಿ, ಸ್ವಲ್ಪ ಕಾಲ ಕಳೆಯಲಿ. ಆಮೇಲೆ ನೋಡೋಣ ಎಂದುಕೊಂಡು ಅದನ್ನು ನರಕಕ್ಕೆ ಕರೆತಂದರು. ಎಲ್ಲಿ ನೋಡಿದರಲ್ಲಿ
ಕೆಸರು, ಹೊಲಸು ತುಂಬಿದ ಹೊಂಡಗಳು, ಒಣಗಿ ಕರಟಿ ಹೋದ ಮರ-
ಗಿಡಗಳು,ವಾಸನೆ, ಕೊಳಕು,ವರ್ಷಗಟ್ಟಲೆ ಸ್ನಾನ ಮಾಡದ,ಕ್ಷೌರ
ಮಾಡದ,ಜಡೆಗಟ್ಟಿದ ತಲೆಗಳು. ಒಂದೇ ಎರಡೇ!?ಎಲ್ಲದಕ್ಕೂ ಪುಟ್ಟವಿಟ್ಟಂತೆ
ಜಗಳ,ಕೆಟ್ಟ ಬೈಯ್ಗುಳಗಳು,ಹೊಡೆದಾಟಗಳು. ಯಮದೂತರು ಹೀಗಿರುವ ನರಕಕ್ಕೆ
ಇವನನ್ನು ಕರೆತಂದರು. ಇವನೋ ತೀರಾ ನಿಸ್ಪ್ರಹ, ಅಲಕ್ ನಿರಂಜನ್!
ಯಮದೂತರೇ ಮುಜುಗರ ಪಟ್ಟುಕೊಂಡರು ಇವನು 'ಕಂ ಕಿಂ'
ಎನ್ನದೆ ನರಕದತ್ತ ನಡೆದ. ಸರಿ,ಯಮದೂತರು ತಮ್ಮ ಮುಂದಿನ ಕೆಲಸಕ್ಕೆ ಹೊರಟು ಹೋದರು.
ಕೆಲವು ಕಾಲ ಕಳೆಯಿತು. ಯಮದೂತರಿಗೆ ಇವನ ಬಗ್ಗೆ ವಿಚಾರಿಸಬೇಕು
ಎಂದುಕೊಂಡದ್ದು ಮರೆತೇ ಹೋಯಿತು. ಒಂದು ದಿನಯಾವುದೋ ಕೆಲಸಕ್ಕೆಂದು
ಅತ್ತ ಬಂದವರಿಗೆ ಫಕ್ಕನೆ ಇವನ ನೆನಪಾಯಿತು. ಓಡುತ್ತಾ ಯಮಧರ್ಮನಲ್ಲಿಗೆ
ಹೋಗಿ ನಡೆದುದ್ಡನ್ನೆಲ್ಲ ನಿವೇದಿಸಿದರು. ಯಮಧರ್ಮ ಹೆದರಿದ. ಹಿಂದೊಮ್ಮೆ
ನಚಿಕೇತನೆಂಬ ಪುಟ್ಟ ಹುಡುಗ ಕೇವಲ ಮೂರು ದಿನ ಯಮಲೋಕದ ಬಾಗಿಲಲ್ಲಿ
ಕಾದಿರಬೇಕಾದ ಬಂದ ಪ್ರಸಂಗ ನೆನಪಾಯಿತು. ಜೀವನ್ಮರಣಗಳ ರಹಸ್ಯವನ್ನು
ವಿವರಿಸಿ ಬ್ರಹ್ಮಶಾಪದಿಂದ ಪಾರಾಗಬೇಕಾಯಿತು ಆವಾಗ! ಈಗ ಯಾವ ಬೆಲೆ
ತೆರಬೇಕಾಗಿ ಬರುತ್ತದೋ ಎಂದು ಹೆದರಿ, ತಾನೇ ಕ್ಷಮೆಕೇಳಿ ತನ್ನ ಕೋಣದ
ಮೇಲೆಯೇ ಏರಿಕೊಂಡು ಸ್ವರ್ಗಕ್ಕೆ ಕರೆದುಕೊಂಡು ಬರುವುದೇ ಸೈ ಎಂದುಕೊಂಡು ನರಕ ದ್ವಾರಕ್ಕೆ ಬಂದ.
ಈಗ ಯಮದೂತರು ಗೊಂದಲಕ್ಕೆ ಬಿದ್ದರು.! ಏಕೆ ಗೊತ್ತೇ? ಹಿಂದೆ ಅವರು ಕಂಡ
ನರಕಕ್ಕೂ ಇಂದು ಅವರ ಮುಂದಿರುವ ನರಕಕ್ಕೂ ಯಾವುದೇ ಹೋಲಿಕೆ ಇರಲಿಲ್ಲ.
ಇಂದು ಇಲ್ಲಿ ಎಲ್ಲವೂ ಸ್ವಚ್ಛ,ಸುಂದರ! ಹೊಲಸು ಹೊಂಡಗಳಿಲ್ಲ. ಬದಲಿಗೆ ಸ್ವಚ್ಛ
ನೀರು ತುಂಬಿದ ಕೊಳಗಳಲ್ಲಿ ಚೆಂದದ ಬಾತುಕೋಳಿಗಳು ಈಜುತ್ತಿವೆ. ಎತ್ತ
ನೋಡಿದರತ್ತ ಹಸಿರು ರಾಜಿ! ಹೂ-ಹಣ್ಣುಗಳಿಂದ ತೋಟದಲ್ಲಿ ಹಕ್ಕಿಗಳು
ಮಧುರವಾಗಿ ಹಾಡುತ್ತಿವೆ. ಮಂದಿ ಅಲ್ಲಲ್ಲಿ ಗುಂಪುಗಟ್ಟಿ ಹಾಡಿ ಕುಣಿಯುತ್ತಿದ್ದಾರೆ.
ಭಗವಂತನ ನಾಮ ಸ್ಮರಣೆಯಾಗುತ್ತಿದೆ. ಎಲ್ಲೆಲ್ಲಿಯೂ ಸ್ವಚ್ಛ, ಸುಂದರ,
ಸುಗಂಧಮಯ ವಾತಾವರಣ! ಯಮರಾಜ ಹೂಂಕರಿಸಿ ಕೆಂಗಣ್ಣು
ಮಾಡಿದ. "ಇದೆಲ್ಲಿಯೋ ಬಂದಿದ್ದೇವೆ. ತಪ್ಪಿ ಈ ಸ್ವರ್ಗವನ್ನು
ನರಕವೆಂದುಕೊಂಡಿರೋ ಹೇಗೆ? ಇದು ನಮ್ಮ ಸ್ವರ್ಗಕ್ಕಿಂತಲೂ
ಚೆನ್ನಾಗಿದೆ. ಯಾವ ಜಾಗವೋ, ಲೋಕವೋ ವಿಚಾರಿಸಿ ಬನ್ನಿ" ಎಂದು ಅಪ್ಪಣೆ ಮಾಡಿದ.
ಹಾಗೆ ವಿಚಾರಿಸಲಾಗಿ ವಿಷಯ ತಿಳಿಯಿತು. ಕೆಲವು ಕಾಲದ ಹಿಂದೆ, ಒಂದು
ಜೀವವನ್ನು ತಾತ್ಕಾಲಿಕವಾಗಿ ಇಲ್ಲಿ ಬಿಟ್ಟು ಹೋಗಲಾಗಿತ್ತೆಂದು, ಈ ಬದಲಾವಣೆಗೆ
ಕಾರಣವೇ ಆ ಜೀವ ಎಂದು ತಿಳಿಯಿತು. ತನ್ನಲ್ಲಿ ಪರರ ಕಾಣುವವ ಎಲ್ಲಿದ್ದರೂ ಅದು ಸ್ವರ್ಗವೇ!
ಬದುಕಿನ ಉತ್ಕಟ ಕ್ಷಣದಲ್ಲಿ 'ನಾನು'ಮಾತ್ರ ಇರುತ್ತೇನೆ. ಅದು
ಧರ್ಮಸಂಕಟವಿರಲಿ, ಜೀವನದ ಯಾವುದೇ ಹೋರಾಟವಿರಲಿ,ಕಡೆಗೆ ಪರಮರ್ಥ
ಸಾಧನೆ ಅಥವಾ ದೇಹತ್ಯಾಗದ ಸಮಯದಲ್ಲಿಯೇ ಇರಲಿ, ಒಳಗಿನಿಂದ ಕೇವಲ
'ಅದು' ಮಾತ್ರ ಏಕಾಂಗಿ. ಹುಟ್ಟುವಾಗಲು ಏಕಾಂಗಿಯೇ, ಸಾಯುವಾಗಲೂ
ಏಕಾಂಗಿಯೇ. ಮಧ್ಯೆ ಹೊಂದಿಕೊಂಡು ಬರುವ ಸಂಭಂಧಗಳೇಲ್ಲ ಭೌತಿಕವಾಗಿ ಈ
ದೇಹದೊಂದಿಗೆ ಮಾತ್ರ. ಸಂಭಂಧಗಳ ಭಾವಗಳು ಚೈತನ್ಯದಿಂದ ಹೊರಗೆ
ನಿಂತಾಗ ಮತ್ತೆ ಮತ್ತೆ ಹುಟ್ಟುವ, ಸಾಯುವ ಪರಿಬ್ರಮಣ ಇರದು. ಇಂಥ 'ಮುಕ್ತ'
ಎಲ್ಲಿದ್ದರೂ ಅವನಿಗೆ ಅದು ಸ್ವರ್ಗವೇ! ಮಾತ್ರವಲ್ಲ,
ಅವನಿರುವ ಪರಿಸರವು ನರಕವೇ ಆಗಿದರು ಅದು ಸ್ವರ್ಗವಾಗಿ ಬದಲಾಗುತ್ತದೆ.
ಈ ಜಗತ್ತು ದ್ವಂದ್ವಗಳಿಂದ ಕೂಡಿದೆ. ಸುಖ-ದುಃಖ,ಕತ್ತಲು-ಬೆಳಕು. ಹೀಗೆ
ಮಾಯೆಯ ಆಟ. ಇದನ್ನು ನೋಡುತ್ತಾ ಅನುಭವಿಸುತ್ತಾ ಅದರಲ್ಲಿಯೇ ನಾವು
ಕಳೆದು ಹೋಗುತ್ತೇವೆ. ಆದರೆ ನಾವು ತ್ರಿನೇತ್ರರೂ ಹೌದು. ನಮ್ಮ ಮೂರನೆಯ
ಕಣ್ಣನ್ನು ತೆರೆಯುವುದನ್ನು ಸಾಧಿಸಬೇಕು. ನಿಜವಾದ ಅರ್ಥದಲ್ಲಿ ತೆರೆದುಕೊಂಡಾಗ '
ಭೌತಿಕ' ಸುಖ ಸುಟ್ಟು ಬೂದಿಯಗುತ್ತದೆ. ನಮ್ಮ
ಶುದ್ಧ ಸ್ವರೂಪದ ದರ್ಶನವಾಗುತ್ತದೆ. 'ಶಿವ'ನಾಗುತ್ತೇವೆ. 'ಶಿವ' ಎಂದರೆ
ಮಂಗಲಕಾರಕ. ನರಕವನ್ನೂ ಸ್ವರ್ಗವಾಗಿ ಪರಿವರ್ತಿಸುವವನು!
ದೀಪ ಎಂದರೆ ಬೆಳಕು. ಬೆಳಕಿನ ಅನುಪಸ್ಥಿತಿಯೇ ಕತ್ತಲು. ಕತ್ತಲಿಗೆ ತನ್ನದೇ ಆದ ಅಸ್ತಿತ್ವವಿಲ್ಲ. ಆದುದರಿಂದ ಬಿಡುಗಡೆ ಸುಲಭ.
ಒಂದೇ ಒಂದು ಪುಟ್ಟ ಹಣತೆಯ ಬೆಳಕಿನಿಂದ ಕತ್ತಲು 'ಇಲ್ಲ'ವಾಗುತ್ತದೆ. ಒಂದೇ
ಒಂದು ಸದ್ವಿಚಾರದ ಚಿಂತನೆಯಿಂದಲೂ ಅಜ್ಞಾನ ಕಳೆಯುತ್ತದೆ. 'ನರಕ'ವನ್ನೂ
'ಸ್ವರ್ಗ'ವಾಗಿ ಪರಿವರ್ತಿಸುವ ಶಕ್ತಿ ಇದೆ ಬೆಳಕು ಕಂಡವನಿಗೆ,
ನಮ್ಮೊಳಗೆ ಅಂತರ್ಗತವಾಗಿರುವ, "ನಾನೇ ಬ್ರಹ್ಮ" ಎಂಬ ಸತ್ಯವನ್ನು ಅರ್ಥ
ಮಾಡಿಕೊಳ್ಳುತ್ತಾ, ಕತ್ತಲನ್ನು ಒಪ್ಪಿಕೊಂಡು, ಅದರಿಂದ ಮುಕ್ತಿ ಹೊಂದುವ ಸಂದೇಶ ಪಡೆಯೋಣ.
ಕತ್ತಲಿನಿಂದ ಬೆಳಕಿನೆಡೆಗೆ, ಒಂದಾಗಿ ಕೈ ಕೈ ಹಿಡಿದು ಮುನ್ನಡೇಯೋಣ.
No comments:
Post a Comment