ಆಮೆ ಮತ್ತು ಮೊಲದ ಓಟದ ಸ್ಪರ್ದೆಯ ಕಥೆ ಎಲ್ಲರೂ ಕೇಳಿರುತ್ತಾರೆ. ಆದರೆ ಇದನ್ನು ಇಂದಿನ
ಮ್ಯಾನೇಜ್ಮೆಂಟ್ ದ್ರಷ್ಟಿಯಲ್ಲಿ ಕಂಡವರು ಬಹುಶಃ ಕೆಲವೇ ಕೆಲವು ಮಂದಿ ಎನಬಹುದು. ಹಾಗೆಂದರೇನು? ಮತ್ತೊಮ್ಮೆ ಕಥೆ ಓದೋಣ...
ಒಂದಾನೊಂದು ಸಲ ಆಮೆ ಮತ್ತು ಮೊಲದ ಮಧ್ಯೆ ಓಟದ ಸ್ಪರ್ಧೆ ನಡೆಯಿತು. ಸಮಾನರಲ್ಲಿ ಸ್ಪರ್ಧೆ
ನಡೆದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ ಅಸಮಾನರ ಮಧ್ಯೆ ನಡೆವ ಸ್ಪರ್ಧೆ ಅರ್ಥಹೀನ. ಇಲ್ಲಿಯೂ
ಹಾಗೆ, ಮೊಲ ವೇಗದ ಓಟಕ್ಕೆ ಹೆಸರಾದದ್ದು, ಆಮೆ ನಿಧಾನ ನಡಿಗೆಯ ಸಂಕೇತ. ಯಾವುದೇ ಕೆಲಸ
ನಿಧಾನವಾಗಿ ನಡಿಯುತ್ತಿದೆ ಎಂದಾದರೆ "ಆಮೆಯ ನಡಿಗೆಯಲ್ಲಿ" ಎಂಬ ಮಾತಿನಲ್ಲಿ ಅದರ ಗತಿಯನ್ನು ಸಾಂಕೇತಿಕವಾಗಿ ಸೂಚಿಸುತ್ತಾರೆ.
ಇಲ್ಲಿ ನಿಗದಿತ ದಿನ, ಕಾಡಿನ ರಾಜ ಸಿಂಹದ ಉಪಸ್ಥಿಯಲ್ಲಿ ಹಾಗೂ ಉಸ್ತುವಾರಿಯಲ್ಲಿ ಸ್ಪರ್ಧೆ ಶುರುವಾಯಿತು.
ಶುರುವಾದ ಸಂಕೇತ ಬರುತ್ತಲೇ ಮೊಲ ಬಿಟ್ಟ ಬಾಣದಂತೆ ಓಡಿತು. ಸುಮಾರು ಹೊತ್ತಿನ ಅನಂತರ, ತನ್ನ
ಪ್ರತಿಸ್ಪರ್ಧಿ ಎಲ್ಲಿದೆಯೋ ನೋಡೋಣ ಎಂದು ಒಂದು ಕ್ಷಣ ನಿಂತು ತಿರುಗಿ ನೋಡಿದರೆ ಆಮೆಯ ಸುಳಿವೇ
ಇಲ್ಲ! ಸರಿ,ಸ್ವಲ್ಪ ಹೊತ್ತು ವಿಶ್ರಮಿಸಿ ಓಟ ಮುಂದುವರಿಸಿದರಾಯಿತು. ಏನಾದರೂ ವಿಜಯ ತನ್ನದೇ ಎಂಬ
ಅತಿ ಆತ್ಮವಿಶ್ವಾಸದಿಂದ ಮೊಲ ಮರವೊಂದರ ನೆರಳಲ್ಲಿ ಅಡ್ಡಾಯಿತು. ಅಲ್ಲಿ ಅದಕ್ಕೆ ಗಾಢ ನಿದ್ದೆ ಬಂತು.
ಇತ್ತ ಆಮೆ ಒಂದು ಕ್ಷಣವೂ ವ್ಯರ್ಥ ಮಾಡದೆ, ತನ್ನಿಂದಾದಷ್ಟು ವೇಗವಾಗಿ ನಡೆದು ಗುರಿ ಮುಟ್ಟಿತು. ಅದನ್ನು
ವಿಜಯಿ ಎಂದು ಘೋಷಿಸಿದರು. ಇಲ್ಲಿಗೆ ಈಸೋಪನ ದ್ರಷ್ಟಾಂತ ಕಥೆ ಮುಗಿಯುತ್ತದೆ.
ನಮ್ಮ ಕಥೆ ಇಲ್ಲಿಂದ ಶುರುವಾಗುತ್ತದೆ. ಮೊಲಕ್ಕೆ ಭಾರೀ ಅವಮಾನವಾಯಿತು. ಮುಂಬರುವ ಜನಾಂಗ
ತನ್ನನ್ನು ಕೀಳಾಗಿ ಕಾಣುತ್ತದೆ. ಆಮೆಯಂತ ನಿಧಾನಗತಿಯ ಪ್ರಾಣಿಯಿಂದ ಸೋಲು ಕಂಡ ವೇಗದ ಓಟಗಾರ
ಎಂದು ತನ್ನ ಹೆಸರು ಪಠ್ಯಪುಸ್ತಕಗಳಲ್ಲಿ ದಾಖಲಾಗುತ್ತದೆ ಎಂದೆಲ್ಲ ಚಿಂತಿಸಿ ಹಣ್ಣಾಯಿತು. ಕಡೆಗೊಂದು ದಿನ
ಸಿಂಹರಾಜನ ಮುಂದೆ ನಿಂತು ತನ್ನ ದುಖಃ ಹೇಳಿಕೊಂಡಿತು. ಹೇಗಾದರೂ ಮಾಡಿ ಈ ಕೆಟ್ಟ ಹೆಸರು
ಅಳಿಸಿಹಾಕಬೇಕು. ಅದಕ್ಕೆಂದು ಮತ್ತೊಮ್ಮೆ ಸ್ಪರ್ಧೆ ಏರ್ಪಡಿಸಬೇಕು ಎಂದೆಲ್ಲ ಬೇಡಿಕೊಂಡಿತು.
ಮೊಲದ ಅಹಂಕಾರಕ್ಕೆ ಧಕ್ಕೆ ತಗುಲಿದ್ದಕ್ಕೆ ಕಾಡಿನ ಪ್ರಾಣಿಗಳೆಲ್ಲ ಒಳಗೊಳಗೇ ಸಂತೋಷವೇ ಆಗಿದ್ದರೂ,
ಸಿಂಹಕ್ಕೆ ಇದರ ದುಖಃ ಕಂಡು ಮನಸ್ಸು ಕರಗಿತು. ಸರಿ, ಮತ್ತೊಮ್ಮೆ ಸ್ಪರ್ಧೆ ನಡೆಸುವ
ತಯಾರಿಯಾಯಿತು. ಈ ಸಲ ಮೊಲ ನಿದ್ದೆ ಮಾಡಲಿಲ್ಲ. ಒಂದೇ ಉಸುರಿನಲ್ಲಿ ಓಡುತ್ತಾ ಗುರಿ ಮುಟ್ಟಿ ವಿಜಯಿ ಎಂದು ಘೋಷಿಸಲ್ಪಟ್ಟಿತು.
- ಇಲ್ಲಿ ಒಂದು ನೀತಿ ಇದೆ. ಒಮ್ಮೆ ಒಂದು ಕೆಲಸದಲ್ಲಿ ಸೋಲು ಕಂಡರೆ, ಹಿಡಿದ ಕೆಲಸವನ್ನು ಬಿಡಬಾರದು.
ಮತ್ತೆ ಪ್ರಯತ್ನಿಸಬೇಕು. ಪೂರ್ತಿಯಾಗಿ ಆ ಕೆಲಸದಲ್ಲಿ ತೊಡಗಿಸಿಕೊಂಡಾಗ ಜಯ ಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ನಿರಂತರ ಪ್ರಯತ್ನ ಯಶಸ್ಸಿನ ಗುಟ್ಟು.
ಇಲ್ಲಿಗೂ ಕಥೆ ಮುಗಿಯಲಿಲ್ಲ. ಈಗ ಚಿಂತೆ ಮಾಡುವ ಸರದಿ ಆಮೆಯದಾಯಿತು. ಈ ಸಲ ಸ್ಪರ್ಧೆ ನಡೆಯುವ
ಹಾದಿಯನ್ನು ಸಿಂಹವೇ ನಿರ್ಧರಿಸಿ,ಕೊನೆಯ ಕ್ಷಣದಲ್ಲಿ ಸ್ಪರ್ಧಿಗಳಿಗೆ ತಿಳಿಸಿತು. ಸರಿ, ಮೊಲ ಹಿಂದಿನ
ತಪ್ಪಿನಿಂದ ಪಾಠ ಕಲಿತಿದ್ದರಿಂದ ಒಂದೇ ಸಮನೆ ಗುರಿಯತ್ತ ಓಡಿತು. ಮುಕ್ಕಾಲು ಹಾದಿ ಕ್ರಮಿಸಿ ಥಟ್ಟನೆ
ನಿಂತಿತು. ಏಕೆ ಗೊತ್ತೇನು? ದಾರಿಯಲ್ಲಿ ಹರಿವ ತೊರೆ ಇತ್ತು. ಮೊಲಕ್ಕೆ ಈಜು ತಿಳಿಯದಲ್ಲ! ಆಮೆ
ಹಿಂದಿನಿಂದ ಬಂದು ನೀರಿಗಿಳಿದು ಈಜಿ ಗುರಿಮುಟ್ಟಿ, ವಿಜಯಿ ಎಂದು ಘೋಷಿಸಲ್ಪಟ್ಟಿತು.ಮೊಲ ಪ್ರತಿಕೂಲ ಪರಿಸ್ಥಿತಿಯಿಂದ ಸೋತು ಹೋಗಿತ್ತು.
- ಇಲ್ಲಿಯೂ ನೀತಿ ಇದೆ. ಸೋಲೊಪ್ಪದೆ ಮುನ್ನಡೆಯಬೇಕು. ಆದರೆ ಶಕ್ತಿಯಿಂದ ಸಾಧಿಸಲಾಗದ್ದನ್ನು ಯುಕ್ತಿಯಿಂದ ಸಾಧಿಸಬೇಕು.
ಈಗ ಮೊಲ ಮತ್ತೆ ಸಿಂಹರಾಜನಲ್ಲಿ, ಮತ್ತೊಮ್ಮೆ ಸ್ಪರ್ಧೆಯಾಗಲೇ ಬೇಕೆಂದು, ಈ ಸಲ ಗೆಲ್ಲದಿದ್ದರೆ ತಾನು
ಬದುಕಿದ್ದು ಸತ್ತಂತೆ ಎಂದು ಗೋಳಾಡಿ ಮತ್ತೊಮ್ಮೆ ಅದನ್ನು ಒಪ್ಪಿಸಿತು. " ಈ ಸ್ಪರ್ಧೆಯಲ್ಲಿ ಗೆದ್ದವನೇ
ಅಂತಿಮವಾಗಿ ವಿಜಯಿ ಎಂದು ನಿರ್ಧರಿಸಲಾಗುವುದು. ಮತ್ತೊಮ್ಮೆ ಯಾವ ಕಾರಣಕ್ಕೂ ಸ್ಪರ್ಧೆ
ನಡೆಸುವಂತೆ ಕೇಳಬಾರದು" ಎಂಬ ನಿಯಮದಂತೆ ಒಪ್ಪಿದ ಕಾಡಿನ ರಾಜ. ಈ ಬಾರಿಯ ನಿಯಮದಂತೆ
ಹತ್ತು ನಿಮಿಷದಲ್ಲಿ ಗುರಿ ಮುಟ್ಟುವವ ಗೆದ್ದವ ಮತ್ತು ಹಾದಿ ಹಿಂದಿನ ಬಾರಿಯದ್ದೆ ಎನ್ನಲಾಗಿತ್ತು. ಏಕೆಂದರೆ, ಈ ಹತ್ತು ನಿಮಿಷದ ಮಿತಿಯಲ್ಲಿ ಇಬ್ಬರೂ ಸೋಲುತ್ತಿದ್ದರು ನೋಡಿ.
ಸ್ಪರ್ಧೆಯ ದಿನ ಮೊಲ ಆಮೆಯ ಕಿವಿಯಲ್ಲಿ ಏನನ್ನೋ ಹೇಳಿತು. ಆಮೆ ಒಪ್ಪಿದಂತೆ ತಲೆಯಾಡಿಸಿತು. ಒಡಲು
ಶುರುಮಾಡುವ ಸಂಕೇತ ಬರುತ್ತಿರುವಂತೆ ಆಮೆ ಮೊಲದ ಬೆನ್ನೇರಿತು. ಮೊಲ ಓಡುತ್ತಾ ತೊರೆಯ ತೀರ
ಮುಟ್ಟಿತು. ಮುಟ್ಟುತ್ತಿರುವಂತೆ ಆಮೆ ನೀರಿಗೆ ಇಳಿಯಿತು. ಮೊಲ ಅದರ ಬೆನ್ನೇರಿತು. ಆಮೆ ಈಜಿ ತೊರೆಯ
ಆ ದಡ ಸೇರುತ್ತಿರುವಂತೆ ಆಮೆ ಮತ್ತೆ ಮೊಲದ ಬೆನ್ನೇರಿತು. ಮೊಲ ನಿಗದಿತ ಸಮಯಕ್ಕಿಂತ ಅರ್ಧ ಸಮಯದಲ್ಲಿ ಗುರಿ ಸೇರಿತು.
- ಇಲ್ಲಿಯ ನೀತಿ ಬದುಕಿನ ಯಶಸ್ಸಿನ ಸೂತ್ರಗಳಲ್ಲಿ ಮುಖ್ಯವಾದದ್ದು."ಕೂಡಿ ಬಾಳಿದರೆ ಸ್ವರ್ಗ, ಒಡೆದು ನಡೆದರೆ ಅದೇ ನರಕ". ಆದುದರಿಂದ ಕೂಡಿ ಬಾಳುವುದನ್ನೇ ರೂಢಿಸಿಕೊಳ್ಳೋಣ.
[ ಕಥೆ ಹೇಳಿದವರು : ಡಾ. ಜಿ. ಕೆ. ಪ್ರಭು.]
No comments:
Post a Comment