Friday, 6 November 2015

ದುಃಖವೇ ಸುಖದ ಮೊದಲ ಸೋಪಾನ

ವೈರಾಗ್ಯ ಶತಕ, ನೀತಿಶತಕ, ಶೃಂಗಾರ ಶತಕಗಳೆಂಬ ಕೃತಿಗಳ ಕರ್ತೃ ರಾಜಾ ಭರ್ತೃಹರಿ. . ಇವನು ಮಾಳವ ದೇಶದ ರಾಜನಾಗಿದ್ದ. ಫಲವತ್ತಾಗಿದ್ದ ವಿಸ್ತಾರ ಭೂಪ್ರದೇಶ, ಅವನನ್ನು ಗೌರವಿಸುವ ಪ್ರಜೆಗಳು,ಬುದ್ಧಿವಂತ ಮಂತ್ರಿವರ್ಗ, ಶೂರ ಸೇನೆ....ಹೀಗೆ ಸರ್ವ ರೀತಿಯಲ್ಲೂ  ಸಮೃದ್ಧ ದೇಶದ ಅಧಿಪತಿಯಾಗಿದ್ದ. ಇವನ ಪತ್ನಿ ಲೋಕೋತ್ತರ ಸುಂದರಿ ಪಿಂಗಳಾ. ಸ್ವರ್ಗಲೋಕದಿಂದ ಧರೆಗಿಳಿದು ಬಂದಿರುವಳೋ ಎಂಬಂಥ ಅದ್ಭುತ ಸೌಂದರ್ಯ ಇವಳದು. ರಾಜಾ ಭತೃಹರಿಗೆ ಇವಳಲ್ಲಿ ಹುಚ್ಚು ಎನ್ನಬಹುದಾದಷ್ಟು ಮೋಹ. ಇವಳು ಅವನ ಬದುಕಿನ ಕೇಂದ್ರವಾಗಿದ್ದಳು ಎಂದರೆ ಸರಿಯಾದೀತು. ಸದಾ ಅಂತಃಪುರದಲ್ಲಿ ಇವಳೊಂದಿಗೆ ಸಂಗೀತ,ನೃತ್ಯ,ಮಧುಪಾನಗಳೊಂದಿಗೆ ನಿರತನಾಗಿರುತ್ತಿದ್ದ. ಪಿಂಗಳೆಯ ಮಾತೇ ಅವನಿಗೆ ವೇದವಾಕ್ಯವಾಗಿತ್ತು. ತತ್ತ್ವಶಃ ಪಿಂಗಳೆಯೇ ರಾಜ್ಯದ ಆಡಳಿತ ನಡೆಸುತ್ತಿದ್ದಳು ಎಂದರೆ ಸರಿಯಾದೀತು!


ಹೀಗೆ ಭೋಗಮಾಯಾವಶನಾಗಿದ್ದ ರಾಜನಿಗೆ ಒಂದು ಅಪರೂಪದ ಹಣ್ಣು ಉಡುಗರೆಯಾಗಿ ಬಂತು. ಅದೊಂದು ಅಪರೂಪದ,ವಿಶಿಷ್ಟ ಶಕ್ತಿಗಳಿಂದ ಕೂಡಿದ ಹಣ್ಣಾಗಿತ್ತು. ಅದನ್ನು ತಿಂದವರು ನಿರೋಗಿಗಳು,ಪೂರ್ಣಾಯುಷಿಗಳು ಆಗುತ್ತಿದ್ದರು. ಹಿಮಾಲಯದ ತಪ್ಪಲಲ್ಲಿ ಬೆಳೆವ ಈ ಹಣ್ಣನ್ನು ಅಲ್ಲಿಂದ ಬಂದ ಸಂನ್ಯಾಸಿಗಳು ರಾಜನಿಗೆಂದೇ ತಂದಿದ್ದರು. ಸ್ವೀಕರಿಸಿದ ರಾಜನಿಗೆ ಒಂದು ಯೋಚನೆ ಬಂತು. ತಾನು ನೀರೋಗಿಯೂ ಪೂರ್ಣಾಯುಷಿಯೂ ಆಗುತ್ತೇನೆ ಸರಿ. ಆದರೆ, ತನ್ನ ಮನದನ್ನೆ ಪಿಂಗಳೆ,ವೃದ್ಧೆ, ರೋಗಿಯಾಗಿ ಸಾಯುತ್ತಾಳೆ. ಅನಂತರ ತಾನು ಬದುಕಿರುವುದೆಂತು? ಆದುದರಿಂದ ಈ ಹಣ್ಣನ್ನು ಅವಳು ತಿನ್ನುವುದೇ ಸರಿ ಎಂದುಕೊಂಡು ಮತ್ತು ಅವಳಿಗೆ ಹಣ್ಣನ್ನು ಉಡುಗೊರೆಯಾಗಿ ನೀಡಿದ.

ಪಿಂಗಳೆಗೆ ರಾಜನ ಮೇಲೆ ಗೌರವವೇನೋ ಇತ್ತು, ಆದರೆ ಪ್ರೇಮವಿರಲಿಲ್ಲ. ಮಹಾರಾಣಿಯ ಪದವಿ ತರುವ ಅಧಿಕಾರ,ಸುಖಭೋಗಗಳಿಗಾಗಿ ಅವಳು ಭತೃಹರಿಯೊಂದಿಗೆ ಇದ್ದಳು. ಅಷ್ಟೇ. ಅವಳ ಪ್ರೇಮಿ ಅಶ್ವ ಶಾಲೆಯ ಅಶ್ವಪಾಲಕನಾಗಿದ್ದ!. ಪಿಂಗಳೆ ತನ್ನ ಪತಿ ಮಧುಪಾನದಿಂದ ಮತ್ತನಾಗಿ ಬೋಧ ಕಳೆದುಕೊಂಡಾಗ,ಗುಟ್ಟಿನಲ್ಲಿ ತನ್ನ ಪ್ರಿಯಕರನನ್ನು ಸೇರುತ್ತಿದ್ದಳು.  ತನಗೆ ಪ್ರಾಣಕ್ಕಿಂತ ಪ್ರಿಯನಾಗಿದ್ದ ಅವನಿಗೆ ಈ ಹಣ್ನನ್ನವಳು ನೀಡಿದಳು.

ಈ ಅಶ್ವಪಾಲಕನಿಗೆ ಆ ಊರಿನ ವೇಶ್ಯೆಯ ಮೇಲೆ ಮೋಹ! ಪಿಂಗಳೆಯಿಂದ ಸಿಗುವ ದುಡ್ಡು ಕಾಸಿಗಾಗಿ ಅವಳನ್ನು ಒಲೈಸುತ್ತಿದ್ದರೂ, ಅವನ ಪ್ರೇಮ ವೈಶ್ಯೆಯ ಮೇಲಿತ್ತು. ಅವನು ಅವಳಿಗೆ ಪಿಂಗಳೆಯಿಂದ ಪಡೆದ ಹಣ್ಣನ್ನು ನೀಡಿದ. ವೇಶ್ಯೆ ಪರಮ ಸಾಧ್ವಿ. ಕುಲದಿಂದ ವೇಶ್ಯಾವೃತ್ತಿಯಲ್ಲಿದ್ದರೂ, ಅದನ್ನು ಧರ್ಮದಿಂದ ಪಾಲಿಸುತ್ತಿದ್ದಳು. "ಭಗವಂತಾ, ಮುಂದಿನ ಜನ್ಮದಲ್ಲಾದರೂ ನಿನ್ನ ಪಾದದ ಧೂಳಾಗಿ ಜನ್ಮ ನೀಡು. ಇಂಥ ಹೀನ ವೃತ್ತಿಯಿಂದ ಪಾಪಲೇಪವಾಗದಂತೆ ನನ್ನನ್ನು ನಡೆಸು" ಎಂದು ಬೇಡುತ್ತಿದ್ದಳು. ಅವಳ ಈ ಮನೋಭಾವನೆಯಿಂದಲೇ ಅಶ್ವಪಾಲಕ ಅವಳಿಗೆ ಮರುಳಾಗಿದ್ದ.

ಹಣ್ಣಿನ ವಿಶೇಷ ಗುಣಗಳ ಬಗ್ಗೆ ತಿಳಿಯುತ್ತಲೇ ಅವಳಿಗೆ ಈ ಹಣ್ಣು ಈ ದೇಶದ ರಾಜನಿಗೆ ಸಲ್ಲಬೇಕು ಎನಿಸಿತು. ಪ್ರಜಾವತ್ಸಲನಾದ ಅವನಿಗೆ ಪೂರ್ಣಾಯುಸ್ಸಿನ ಹಕ್ಕು ಎಂದುಕೊಂಡು ಸೀದಾ ಅರಮನೆಗೆ ಬಂದು ಮಹಾರಾಜ ಭತೃಹರಿಯ ಮುಂದೆ ಹಣ್ಣನ್ನಿಟ್ಟಳು. ಹಣ್ಣನ್ನು ನೋಡುತ್ತಲೇ ರಾಜನಿಗೆ ಅದರ ಗುರುತು ಸಿಕ್ಕಿತು. ತನಗೆ ಸಾಧುಗಳು ನೀಡಿದ ಹಣ್ಣಿದು. ರಾಣಿ ಪಿಂಗಳೆಗೆ ನೀಡಿದ್ದು, ಈ ವೈಶ್ಯೆಯ ಕೈಗೆ ಬಂದದ್ದೆಂತು?ಎಂದು ಆಶ್ಚರ್ಯಗೊಂಡ.

ವಿಚಾರಿಸಲಾಗಿ ಅಶ್ವಪಾಲಕನಿಂದ ಸಿಕ್ಕಿತು ಎಂದು ತಿಳಿಯಿತು. ಅವನನ್ನು ಕರೆಸಿ ಪ್ರಶ್ನಿಸಿದರೆ, ಪಿಂಗಳೆಯಿಂದ ಎಂದು ತಿಳಿಯಿತು. ರಾಜನಿಗೆ ಆಘಾತವಾಯಿತು. ಪ್ರಾಣಕ್ಕಿಂತ ಪ್ರಿಯಳೆಂದು ಭಾವಿಸಿದ ಹೆಣ್ಣು ತನ್ನವಳಲ್ಲ! ಹಾಗಾದರೆ ತನ್ನದೆಂಬುದು ಯಾವುದು?ಎಂಬ ಪ್ರಶ್ನೆ ಉದಯಿಸಿತು. ಅನ್ನಾಹಾರಾಗಳನ್ನು ದೂರ ಮಾಡಿದ. ಏಕಾಂತದಲ್ಲಿ ಧ್ಯಾನಮಗ್ನನಾದ. ಜನ್ಮಾಂತರಗಳ ನೆನಪು ಮರುಕಳಿಸಿತು. ಸತ್ಯದರ್ಶನವಾಯಿತು. ಯಾವುದು ತಾನಲ್ಲ,ತನ್ನದಲ್ಲ. ಒಂದು ಜನ್ಮದ ಸಂಭಂಧಗಳನ್ನೇ ಶಾಶ್ವತ ಎಂದು ಭ್ರಮಿಸಿ,ಜೀವಿ,ನಾನಾ ರೀತಿಯ ಬಂಧನಗಳನ್ನು ಸೃಷ್ಟಿಸುತ್ತಾನೆ. ಜೇಡ ತಾನೇ ಹೆಣೆದ ಬಲೆಯಲ್ಲಿ ಬಂಧಿಯಾಗುವಂತೆ,ತಾನೇ ತನ್ನ ಕರ್ಮಬಂಧನಗಳಲ್ಲಿ ಸೆರೆಯಾಗುತ್ತಾನೆ. ಕನಿಷ್ಠ ತನ್ನ ಕಣ್ಣು ತೆರೆಯಿತು. ವಾಸ್ತವದ ದರ್ಶನವಾಯಿತು. ಪಿಂಗಳೆ ಗುರುವಾಗಿ ಬಂದಳು,ಎಂದುಕೊಂಡು,ದೇಶ-ಕೋಶ ತ್ಯಜಿಸಿದ.

ಪರಮ ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ. ಅಪೂರ್ವ ಗ್ರಂಥಗಳನ್ನು ರಚಿಸಿದ! ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ ವಿಧಿಯನ್ನು ಹಳಿಯುತ್ತೇವೆ. ಇಂಥ ಸ್ಥಿತಿಯನ್ನು "ತಂದಿಟ್ಟ" ಭಗವಂತನನ್ನು ದೂರುತ್ತೇವೆ. ಇದು ತಮಗೆ ಸರಿಯಾದುದಲ್ಲ ಎನ್ನುತ್ತಾ ಮತ್ತಷ್ಟು ಗೊಂದಲಿಸುತ್ತೇವೆ. ಸಂಕಷ್ಟಗಳು ಮಾಯೆಯ ಪರದೆ ಸರಿಸುವ "ಹೇತು"ಮಾತ್ರ ಎನ್ನುವುದು ಮರೆಯುತ್ತೇವೆ. ಇವು ನಿಜವಾದ ಅರ್ಥದಲ್ಲಿ "ಭಗವಂತ"ನ "ವರ","ಆಶೀರ್ವಾದ".



ಮಹಾಭಾರತದ ಯುದ್ಧ ಮುಗಿದು ಕೌರವ ಸಂಹಾರವಾಗಿ ಧರ್ಮರಾಯನಿಗೆ ಸಿಂಹಾಸನ ಲಭಿಸಿ ಪಟ್ಟಾಭಿಷೇಕವಾಯಿತು. ಕರ್ತವ್ಯ ಮುಗಿಸಿದ ಶ್ರೀ ಕೃಷ್ಣ ಪರಮಾತ್ಮ ದ್ವಾರಕೆಗೆ ಹೊರಟ. ರಾಜಮಾತೆ ಕುಂತಿ ಕಣ್ಣೀರು ಹರಿಸುತ್ತಾ ಒಂದು ಕಡೆ ನಿಂತಿದ್ದಳು. ಕೃಷ್ಣ, "ತಾಯೇ, ನೀನೀಗ ರಾಜಮಾತೆ! ನಿನ್ನ ಕಷ್ಟಗಳೆಲ್ಲಾ ಕೊನೆಯಾದವು. ಇನ್ನೂ ಏಕೆ ದುಃಖಿಸುತ್ತಿ?" ಎಂದು ಕೇಳಿದ. ಕುಂತಿಯ ಉತ್ತರ ಇಂತಿತ್ತು, "ಕೃಷ್ಣಾ,ಕಷ್ಟಗಳು ಸಾಲುಗಟ್ಟಿ ಬರುತ್ತಿರುವಾಗ, 'ಕೃಷ್ಣಾ' 'ಕೃಷ್ಣಾ' ಎಂದು ಮೊರೆ ಇಡುತ್ತಿದ್ದೆ. ಕಾಮ್ಯ ಭಕ್ತಿಯಿಂದಲೇ ಇರಲಿ, ದಿನದಲ್ಲಿ ನೂರು ಬಾರಿ ನಿನ್ನ ನೆನಪಾಗುತ್ತಿತ್ತು. ಇನ್ನೂ ರಾಜಮಾತೆಯ ಸ್ಥಾನದಲ್ಲಿ ಕಷ್ಟವೆಂಬುದೇ ಇಲ್ಲವೆಂದಾದಾಗ ನಿನ್ನ ನೆನಪಾಗುವುದೇ? ನಿನ್ನ ನಾಮಸ್ಮರಣೆ ಬರುವುದೇ? ಕೃಷ್ಣಾ, ನಿನ್ನ ಭವಹರಿಯುವುದೇ?" ಎಂದು ಪ್ರಶ್ನಿಸಿದಳು.

ಭವದುಃಖವನ್ನು ಧನಾತ್ಮಕವಾಗಿ ಪರಿಶೀಲಿಸಿದಾಗ ದುಃಖ ದುಃಖವೇ ಅಲ್ಲ. ಸುಖದ ಮೊದಲ ಸೋಪಾನ ಎಂಬುದು ಅರಿವಾಗುತ್ತದೆ.








Tuesday, 3 November 2015

ಅಜ್ಞಾನದ ಪರದೆಯ ಹಿಂದಿನ ಗೊಂದಲಗಳು

ಬಹಳಷ್ಟು ಸಲ ಸಮಾಜದ ರೀತಿ-ನೀತಿಗಳಿಂದ ನಾವು ಗೊಂದಲಕ್ಕೆ ಒಳಗಾಗುತ್ತೇವೆ. ದುಷ್ಟರು,ಬ್ರಷ್ಟರು ಐಶಾರಾಮಿ ಸುಖೀ ಜೀವನ ನಡೆಸುತ್ತಿದ್ದರೆ,ಯಾವುದೇ ಆಪತ್ತು ಎದುರಾದರೂ ಲೀಲಾಜಾಲವಾಗಿ ಅದರಿಂದ ಪಾರಾಗುತ್ತಿದ್ದರೆ, ಸಂತರು,ಸಾತ್ವಿಕರು ಜಗತ್ತಿನ ಎಲ್ಲಾ ದುಃಖ,ಕಷ್ಟಕೋಟಲೆಗಳಿಂದ ಬಳಲುತ್ತಿರುತ್ತಾರೆ. ಏಕೆ ಈ ಪರಿ? ಹಾಗಾದರೆ ಸತ್ಯ,ಧರ್ಮಗಳಿಗೆ ಪ್ರತಿಫಲ ಎನ್ನುವುದು ಇಲ್ಲವೇ ? ಎಂಬ ಪ್ರಶ್ನೆ ಕಾಡುತ್ತದೆ. ಹೆಚ್ಚಿನವರು, "ಇದೆಲ್ಲಾ ಪೂರ್ವಾರ್ಜಿತ, ಕರ್ಮಫಲಗಳ ಪ್ರಾಪ್ತಿ" ಎಂದು ಅಗೊಚರಕ್ಕೆ ದಾಟಿಸುತ್ತೇವೆ.   



ಒಮ್ಮೆ ಅರ್ಜುನನಿಗೂ ಈ ಸಂದೇಹ ಉಂಟಾಯಿತು. (ಈ ಕಥೆ ಮಹಾಭಾರತದಲ್ಲಿ ಬರುತ್ತದೆ). ಇದೇ ಪ್ರಶ್ನೆಯನ್ನವನು ಶ್ರೀಕೃಷ್ಣ ಪರಮಾತ್ಮನ ಮುಂದಿಟ್ಟ. ಕೃಷ್ಣ ಎಂದಿನಂತೆ, "ನೀನೇ ಸ್ವತಃ ಕಂಡರೆ ಸರಿಯಾದೀತು. ನಾವೊಮ್ಮೆ ಪ್ರಪಂಚ ಪರ್ಯಟನೆ ಮಾಡಿ ಬರುವ. ಸಂದೇಹಕ್ಕೆ ಸಮಾಧಾನ ಸಿಗಬಹುದು"ಎಂದು ಹೇಳಿ ಅರ್ಜುನನನ್ನು ಕರೆದುಕೊಂಡು ಹೊರಟ. ಸಾಮಾನ್ಯರಂತೆ ವೇಷ ಧರಿಸಿ ಇಬ್ಬರು ಹೊರಟರು. ತಿರುಗುತ್ತಾ ತಿರುಗುತ್ತಾ ಸಾಯಂಕಾಲವಾಗುತ್ತಿರುವಂತೆಯೇ ಒಂದು ಹಳ್ಳಿಗೆ ಬಂದರು. ಕಡುಬಡವನ ಮನೆಯಾಗಿತ್ತದು. ಅಂದು ಬೆಳಿಗ್ಗೆಯಿಂದ ಎಷ್ಟು ಪ್ರಯತ್ನಿಸಿದರೂ ಈ ಮನೆಯೊಡೆಯನಿಗೂ ಏನು ಕೆಲಸ ಸಿಕ್ಕಿರಲಿಲ್ಲ. ಒಂದೇ ಒಂದು ಕಾಸು ದುಡಿಮೆಯಿರಲಿಲ್ಲ. ಇನ್ನು ನಿತ್ಯ ಏಕಾದಶಿ ಇರುವ ಮನೆಯಲ್ಲಿ ಒಂದು ಕಾಳು ಅಕ್ಕಿಯೂ ಇರಲಿಲ್ಲ. ಇವನ ಸೋತ ಮುಖ ಕಂಡ ಮನೆಯೊಡತಿ, ಸಾಂತ್ವನದ ಮಾತುಗಳನ್ನಾಡುತ್ತ ಇದ್ದ ಒಂದು ಲೋಟ ಹಾಲನ್ನು ಅವನ ಮುಂದೆ ಇಟ್ಟಿದ್ದಳು. ಇನ್ನೇನು ಮನೆಯೊಡೆಯ ಹಾಲು ಕುಡಿಯಬೇಕು,ಅಷ್ಟರಲ್ಲಿ ಕೃಷ್ಣಾರ್ಜುನರು  ಹೊಸ್ತಿಲಲ್ಲಿ ನಿಂತರು. "ಅಯ್ಯಾ! ಹಸಿವಾಗುತ್ತಿದೆ. ತಿನ್ನಲು ಏನಾದರೂ ಸಿಗಬಹುದೇ? ಈ ಒಂದು ರಾತ್ರಿ ಉಳಿಯಲು ವ್ಯವಸ್ಥೆ ಮಾಡಬಹುದೇ?" ಎಂದರು.

ಮನೆಯೊಡೆಯನ ಕಣ್ಣಲ್ಲಿ ನೀರಿಳಿಯಿತು." ಸ್ವಾಮಿ, ಈ ಒಂದು ಲೋಟ ಹಾಲು ಬಿಟ್ಟರೆ ಮನೆಯಲ್ಲಿ ಏನೂ ಇಲ್ಲ. ದಯವಿಟ್ಟು ಸ್ವೀಕರಿಸಿ" ಎನ್ನುತ್ತಾ ಹಾಲಿನ ಲೋಟ ಅವರ ಮುಂದೆ ಇಟ್ಟ. ತಾವು ಉಪಯೋಗಿಸುತ್ತಿದ್ದ ಹರುಕು ಕಂಬಳಿ, ಮುರುಕು ಚಾಪೆಗಳನ್ನ ಹಾಸಿ ಹಾಸಿಗೆ ತಯಾರಿಸಿದ. ಇಬ್ಬರ ಕಾಲು ತೊಳೆದು ಪಾದೋದಕ ಪ್ರೋಕ್ಷಿಸಿಕೊಂಡ. ಕೃಷ್ಣಾರ್ಜುನರು ಸಂತೋಷದಿಂದ ಮಲಗಿ ನಿದ್ರೆ ಮಾಡಿದರು. ಬೆಳಿಗ್ಗೆ ಎದ್ದು ಹೋಗುತ್ತಿರುವಾಗ ಕೃಷ್ಣ ಒಮ್ಮೆ ಬಡವನ ಮನೆಯತ್ತ ತಿರುಗಿ ನೋಡಿ, "ಈ ಹಸು ಸತ್ತುಹೋಗಲಿ"ಎಂದ.


ಅರ್ಜುನನಿಗೆ ಸಿಟ್ಟು ಬಂತು. ತಮ್ಮ ಬಡತನದಲ್ಲಿಯೇ ಅತಿಥಿ ಸತ್ಕಾರ ಮಾಡಿದ ಈ ಸಾತ್ವಿಕನನ್ನು ಹೀಗೆ ಶಪಿಸುವುದೇ? ಇವನೊಂದಿಗೆ ಬಂದಿದ್ದೆ ತಪ್ಪಾಯಿತು ಎಂದು ಸಿಡಿಮಿಡಿಗೊಂಡ. ಮಾತಾಡಲಿಲ್ಲ. ಮುಂದೆ ಹೋಗುತ್ತಾ ಭಾರಿ ಸಿರಿವಂತನ ಮನೆಯೊಂದು ಎದುರಾಯಿತು. ಯಾವುದೊ ಮಹೋತ್ಸವ ನಡೆಯುತ್ತಿತ್ತು. ಸಂಗೀತ ಕೇಳುತ್ತಿತ್ತು. ಅಡುಗೆಯ ಘಮಘಮದಿಂದ ಬಾಯಲ್ಲಿ ನೀರು ಒಸರುತ್ತಿತ್ತು. ಕೃಷ್ಣಾರ್ಜುನರು ದಿಡ್ಡಿ ಬಾಗಿಲಲ್ಲಿ ನಿಂತು, "ಅಯ್ಯಾ! ಹಸಿವು,ತಿನ್ನಲು ಏನಾದರೂ ಸಿಗಬಹುದೇ?" ಎಂದರು. "ಛೀ! ಭಿಕ್ಷುಕರಿಗೆ ಇಲ್ಲಿ ಏನು ಸಿಗದು ತೊಲಗಿ" ಎಂದರು ದ್ವಾರಪಾಲಕರು. ಇವರು ಕದಲದೇ, "ನಾವು ಯಾತ್ರಿಕರು,ಆಹಾರ ನೀಡದೆ ಹೋಗಲಾರೆವು"ಎಂದರು. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ಗಲಾಟೆ ಕೇಳಿ ಮನೆಯೊಡೆಯ ಹೊರಗೆ ಬಂದ. ನಡೆದುದ್ದನ್ನು ಕೇಳಿ, "ನಿಮಗೆ ಯೋಗ್ಯವಾದುದ್ದನ್ನು ಕೊಡೋಣ, ಚಿಂತಿಸದಿರಿ. ಯಾರಲ್ಲಿ! ಇಬ್ಬರಿಗೂ ತಲಾ ಹತ್ತು ಹತ್ತು ಚಾವಟಿ ಏಟು ಕೊಟ್ಟು ಕಳುಹಿಸಿ" ಎಂದು ಒಳಗೆ ಹೋದ.


ಏಟು ತಿಂದು, ಮೈ-ಕೈಗಳ ಚರ್ಮ ಸುಲಿದು ಹೋಯಿತು. ಕೃಷ್ಣ ಧೂಳಿನಲ್ಲಿ ಬಿದ್ದವ ಎದ್ದು ನಿಂತು, "ಈ ಸಿರಿವಂತನ ಸಂಪತ್ತು ಇಪ್ಪತ್ತು ಪಟ್ಟಾಗಲಿ, ಇವನ ಸುಖ ಜಗತ್ತನ್ನೇ ಮರೆಸಲಿ" ಎಂದು ಹೇಳಿ ಹೊರಟ. ಈಗ ಅರ್ಜುನನ ಸಿಟ್ಟಿಗೆ ಮೇರೆ ಇಲ್ಲವಾಯಿತು. "ಛೇ! ಎಂಥ ಕೃತಘ್ನ ನೀನು. ಹಾಲು ಕುಡಿಸಿದವನ ಹಸು ಸಾಯಲಿ ಎಂದು ಶಪಿಸಿದೆ. ಛಡಿ ಏಟು ಹಾಕಿಸಿದವನ ಸಂಪತ್ತು ನೂರಾಗಲಿ ಎನ್ನುತ್ತಿರುವೆ" ಎಂದ. 


ಆಗ ಕೃಷ್ಣ "ಅರ್ಜುನಾ,ಈ ಜಗತ್ತೊಂದು ಮಾಯೆ. ಯಾವುದು ಹೇಗಿರುತ್ತದೋ ತಿಳಿಯಲಾಗದು. ಬಡವ ಕುಕರ್ಮ ಫಲದಿಂದ ಬಡವನಾದ. ಆದರೆ ಸಂಸ್ಕಾರಬಲದಿಂದ ಸಾತ್ವಿಕನಾದ. ಕರ್ಮಫಲ ಭೌತಿಕಕ್ಕೆ ಮಾತ್ರ ಸೀಮಿತವಾಯಿತು. ಈ ಕರ್ಮಫಲ ಇನ್ನೊಂದು ಜನ್ಮದಲ್ಲೂ ಮುಂದುವರಿಯುವಷ್ಟಿತ್ತು. ಹಸುವಿನ ನಷ್ಟದಿಂದ ಅವನು ಇನ್ನೂ ಹೆಚ್ಚು ಪರಮಾರ್ಥದೆಡೆಗೆ ಒಲಿದು ಕರ್ಮಬಂಧನದ ಬಿಡುಗಡೆಗೆ ಇನ್ನಷ್ಟು ಸತ್ಕರ್ಮ ಮಾಡುತ್ತಾನೆ. ಈ ಜನುಮಕ್ಕೆ ಅವನಿಗೆ ಈ ಭವದಿಂದ ಬಿಡುಗಡೆಯಾಗುತ್ತದೆ. ಇನ್ನು ಸಿರಿವಂತನನ್ನು ನೋಡು. ಭೌತಿಕ ಸತ್ಕರ್ಮ ಫಲ ಈ ಶ್ರೀಮಂತಿಕೆ. ಇಲ್ಲಿ ಸಂಸ್ಕಾರವಿಲ್ಲ. ಆದುದರಿಂದ ಅಹಂಕಾರ,ಲೋಲುಪತೆ. ಈ ಅಹಂಕಾರವೇ ಸಾವಾಗಬಹುದು.ಕಾರಣವಿಲ್ಲದೆ ಆಹಾರ ಬೇಡಿದವರಿಗೆ ಛಡಿ ಏಟು ನೀಡಿದ. ಮತ್ತಷ್ಟು ಕುಕರ್ಮ ಸೇರಿಕೊಂಡಿತು. ಸಿರಿ ನೂರು ಪಟ್ಟಾಗಲಿ  ಎಂದೆ. ಅಂದರೆ ಕುಕರ್ಮಗಳು ಬೆಳೆಯುತ್ತವೆ ಎಂದಾಯಿತು. ಈ ಸಿರಿಯ ಮದದಿಂದ ನೂರು ಜನ್ಮಗಳಲ್ಲಿ ಕುಫಲ ಸಂಚಯಿಸುತ್ತಾರೆ. ಈಗ ಬಡವ ಪಡುವ ಬವಣೆಯ ನೂರು ಪಾಲು,ನೂರು ಜನ್ಮಗಳಲ್ಲಿ ಅವನದಾಗುತ್ತದೆ. ಈಗ ಹೇಳು, ಯಾವುದು ಶಾಪ? ಯಾವುದು ವರ? ಮತ್ತೆ ಎಷ್ಟೇ ಪ್ರಯತ್ನ ಪಟ್ಟರೂ ಕೆಲವರು ನಾನಾ ರೀತಿಯ ತೊಂದರೆಗಳಿಂದ ನರಳುವುದೇಕೆ? ಕೆಲವರ ಅಪ್ರಯತ್ನದಿಂದ  ಸಿರಿವಂತರೂ ಸುಖಿಗಳೂ ಆಗಿರುವುದೇಕೆ ಎಂಬ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೇನು"? 


ನಿನ್ನೆಗಳು, ನಾಳೆಗಳು ಅಜ್ಞಾನದ ಪರದೆಯ ಹಿಂದೆ ಮರೆಯಾಗಿರುವುದೇ ನಮ್ಮ ಗೊಂದಲಕ್ಕೆ ಕಾರಣ. ಇನ್ನು ಸುಖವೆಂದರೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಒಬ್ಬನ ಸುಖ ಮತ್ತೊಬ್ಬನ ದುಃಖವಾಗಬಹುದು. ಸುಖದ ಹುಡುಕಾಟವು ಮನುಷ್ಯನಲ್ಲಿ ಅಂತರ್ಗತವಾಗಿರುವ ಆನಂದದ ಹುಡುಕಾಟವೇ ಎನ್ನುತ್ತದೆ ನಮ್ಮ ಪ್ರಾಚಿನ ಜ್ಞಾನ.



CLICK HERE