Sunday, 17 September 2017

ಮೂಲ ಮರೆತ ಸಾಂಪ್ರದಾಯಿಕ ಆಚರಣೆಗಳು

.
ಅನೇಕ ವರ್ಷಗಳಷ್ಟು ಕಾಲ ಶ್ರಮಿಸಿ, ತಪಿಸಿ ಒಬ್ಬ ಬೆಂಕಿಯನ್ನು 
ಉತ್ಪಾದಿಸುವ ವಿದ್ಯೆ ಕಂಡುಹಿಡಿದ.

ತಾನು ಕಂಡುಕೊಂಡ ಈ ವಿದ್ಯೆಯಿಂದ 
ಮನುಕುಲಕ್ಕೆ ಉಪಯೋಗವಾಗ ಬೇಕೆಂದು ಬಯಸಿದ.

ಯಾರಿಗೆ ಇದರಿಂದ ತುಂಬಾ 
ಉಪಯೋಗವಾಗಬಹುದು ಎಂದು ಚಿಂತಿಸಿದ.

"ಹಿಮಾಚ್ಛಾದಿತ ಪರ್ವತಾವಳಿಗಳಲ್ಲಿ ವಾಸಿಸುವವರಿಗೆ" ಎನಿಸಿತವನಿಗೆ.

ಅಗತ್ಯವಿರುವ ಸಕಲ ಸಾಮಗ್ರಿಗಳನ್ನು 
ಕಟ್ಟಿಕೊಂಡು ಅಂಥದೊಂದ್ದು ಪ್ರದೇಶಕ್ಕೆ ಹೋದ. 

ಅಲ್ಲಿಯ ಮಂದಿ ಬೆಂಕಿ ಹೊತ್ತಿ ಉರಿಯುವ, 
ಅದರಿಂದ ಉಂಟಾಗುವ ಶಾಖದ ಪರಿಣಾಮ 
ಕಂಡು ಆಶ್ಚರ್ಯಪಟ್ಟರು,ಸಂತೋಷಿಸಿದರು.


www.kartavyaa.blogspot.in
Image may be subject to copyrights
ಅವನಿತ್ತ ಉಪಕರಣಗಳನ್ನು ಪರೀಕ್ಷಿಸಿ ನೋಡುವ 
ಗಲಾಟೆಯಲ್ಲಿ ಇವನ ಉಪಕಾರ ಸ್ಮರಣೆ ಮಾಡುವುದನ್ನು 
ಮರೆತು ಬಿಟ್ಟರು. 
ಇವರ ಸಂತಸ ಕಂಡು ಆನಂದಿಸುತ್ತಾ 
ಇವ ಮೆಲ್ಲನೆ ಅಲ್ಲಿಂದ ಹೊರಟು ಬಂದ. 

ಅವನಿಗೆ ಕೀರ್ತಿ ಕಾಮನೆ ಇರಲಿಲ್ಲ,
ಪ್ರತಿಫಲ ಬೇಕಿರಲಿಲ್ಲ. 
ನಾಲ್ಕು ಮಂದಿಗೆ ಸುಖವಾದರೆ ಸಾಕಿತ್ತು.


ಸರಿ, ಅಲ್ಲಿಂದ ಮತ್ತೊಂದು ಊರಿಗೆ ಬಂದ. 

ಅಲ್ಲಿಯ ಮಂದಿ ತೆರೆದ ಬಾಹುಗಳಿಂದ 
ಅವನನ್ನು ಸ್ವಾಗತಿಸಿದರು. 

ಅವನು ಮಾಡಿದ ಚಮತ್ಕಾರ ಕಂಡು ಪರವಶರಾದರು. 

ಆದರೆ ಆ ಊರಿನ ಮುಖಿಯನಾದ, ದೇವಸ್ಥಾನದ ಅರ್ಚಕನಿಗೆ 

ಇವನ ಜನಪ್ರಿಯತೆಯಿಂದ ಅಸೂಯೆ ಎನಿಸಿತು. 

ಸದ್ದಿಲ್ಲದೆ ವಿಷ ಪ್ರಾಶನ ಮಾಡಿಸಿ ಇವನನ್ನು ಕೊಂದು ಹಾಕಿದ.! 

ಅಪರಾಧದ ಅಪವಾದ ತನ್ನ ಮೇಲೆ ಬರುವುದನ್ನು ತಪ್ಪಿಸಲು, 

ಇವನ ಚಿನ್ನದ ಪುತ್ಥಳಿ ಮಾಡಿಸಿದ. ಚಂದದ ಗುಡಿ ಕಟ್ಟಿಸಿ ಪುತ್ಥಳಿ 

ಅದರಲ್ಲಿಡಿಸಿದ. ಅವನು ತಂದ ಬೆಂಕಿ ಉತ್ಪಾದಿಸುವ ಉಪಕರಣಗಳನ್ನು 

ಒಂದು ಸಂದೂಕದಲ್ಲಿಟ್ಟು ಸಂದೂಕದ ಸುತ್ತ ಬೃಂದಾವನ ಕಟ್ಟಿಸಿದ.

ಇದು ಇಷ್ಟಕ್ಕೆ ನಿಲ್ಲಲಿಲ್ಲ.ಅರ್ಚಕ 
ಇವನ ಬಗ್ಗೆ ಒಂದು ಬೃಹತ್ ಗ್ರಂಥವನ್ನೇ ಬರೆದ. 

ಅವನ ಹುಟ್ಟು ಹೇಗೆ ದೈವಿಕ ರೀತಿಯಲ್ಲಾಯಿತು. 

ಅಯೋನಿಜನಾಗಿ ಬಂದ ಇವನು ಬೆಳೆದ ರೀತಿ, 
ಮಾಡಿದ ಅಸಂಖ್ಯ ಪವಾಡಗಳನ್ನು ಈ ಪುಸ್ತಕದಲ್ಲಿ ದಾಖಲಾಯಿಸಲಾಯಿತು. 

ಗ್ರಂಥವನ್ನು ರೇಶಿಮೆಯಲ್ಲಿ ಸುತ್ತಿ ಗುಡಿಯ ಪ್ರಮುಖ ಸ್ಥಾನದಲ್ಲಿಡಲಾಯಿತು. 
ಪ್ರತಿ ದಿನ ವಿಗ್ರಹಕ್ಕೆ ಪೂಜೆಯಾಗುವಾಗ ಆರತಿ ಎತ್ತುವ ವ್ಯವಸ್ಥೆಯಾಯಿತು.


ಈ ಗ್ರಂಥ ಅತ್ಯಂತ ಪವಿತ್ರವಾದುದು. 
ಆದುದರಿಂದ ಇದರ ಪ್ರತಿಗಳು ಎಲ್ಲೆಲ್ಲಿರುವುವೋ ಅಲ್ಲಲ್ಲಿ 
ನಿತ್ಯ ಪೂಜೆಯಾಗಬೇಕು ಎಂದು ಕಟ್ಟಳೆಯಾಯಿತು. 

ಅಗ್ನಿ ಜನಕನಿಗೆ ಸಂತ ಸ್ಥಾನ ನೀಡಲಾಯಿತು. 

ಜತನದಿಂದ ಇವನ ಚರಿತ್ರೆ ಪೂಜಾ ವಿಧಾನಗಳು, 
ಇವನ ಕುರಿತ ಗ್ರಂಥಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲಾಯಿತು. 

ಈ ಬಗ್ಗೆ ಅಧಿಕಾರಯುತವಾಗಿ ಪ್ರವಚನಗಳು ನಡೆದವು. 
ಪುಸ್ತಕದಲ್ಲಿರುವ ವಿಷಯ ಯಾ ಸಂತ ಯಾ ಪ್ರವಚನಕಾರರನ್ನು 
ಪ್ರಶ್ನಿಸಿದವರನ್ನು ದಮನಿಸಲಾಯಿತು. 

ಒಟ್ಟಿನಲ್ಲಿ ಕಾಲಕ್ರಮೇಣ ಇದೊಂದು ಬರೀ 
'ಸಾಂಪ್ರದಾಯಿಕ' ಆಚರಣೆಯಾಗಿಯೇ ಉಳಿದು ಹೋಯಿತು.


ಮೊದಮೊದಲು ಬೆಂಕಿ ಮಾಡುವುದನ್ನು ಕಲಿತ 
ಕೆಲವೇ ಕೆಲವರು ಸತ್ತು ಹೋದರು. ಹೊಸಬರ್ಯಾರೂ ಕಲಿಯಲಿಲ್ಲ. 

ಅದಕ್ಕೆ ಅವಕಾಶವೂ ಇರಲಿಲ್ಲವೆನ್ನಿ.
 ಕ್ರಮೇಣ ಈ ಮಂದಿ ಆಚರಣೆಗಳಲ್ಲಿ, 
ಎಷ್ಟು ಮಗ್ನರಾಗಿ ಹೋದರೆಂದರೆ ಬೆಂಕಿ ಮಾಡುವುದನ್ನೇ ಮರೆತು ಬಿಟ್ಟರಂತೆ.


ಇದು ಮನು ಕುಲದ ಪರಂಪರೆಯ ಕಥೆಯೂ ಹೌದು. 

ಯಾರೋ ಪ್ರಾಚೀನದಲ್ಲಿ ಬದುಕಿನ ಮೂಲ, 

ಬದುಕಿನ ಪರಿ, ತನ್ಮೂಲಕ ಪರಿಪೂರ್ಣತೆಯತ್ತ 

ನಡೆವ ಹಾದಿಯನ್ನು ಕಂಡರು. ಕಂಡದ್ದು ಹಿತವೆನಿಸಿತು. 

ಮುಂದಿನವರಿಗೂ ಉಪಯೋಗಕ್ಕೆ ಬರಲಿ ಎಂದು ನಾನಾ ರೂಪದಲ್ಲಿ ಉಳಿಸಿಯೂ ಹೋದರು.


www.kartavyaa.blogspot.in
Image may be subject to copyrights
ಈ ಮುಂದಿನವರಲ್ಲಿ ಕೆಲವು ಮಂದಿ ಸ್ವಾರ್ಥ ಸಾಧಕರಿದ್ದರು. 

ವಿಷಯ ಇಷ್ಟು ಸುಲಭ ಎಂದು ಮಿಕ್ಕವರು ತಿಳಿದುಕೊಂಡರೆ 
ನಮ್ಮ ಸುಖಕ್ಕೆ ಕೊಡಲಿ ಏಟಾಗಬಹುದೆಂದು ಹುನ್ನಾರ ನಡೆಸಿದರು. 

"ಭಗವಂತನಿಗೆ ಕೋಪ ಬರುತ್ತದೆ" ಎನ್ನುತ್ತಾ ಮಡಿ,ಮೈಲಿಗೆ, 
ಸಂಪ್ರದಾಯಗಳ ಬೇಲಿ ಇಟ್ಟರು. ಒಳಗಿನವರು, 
ಹೊರಗಿನವರನ್ನು ಕತ್ತಲಲ್ಲಿಟ್ಟರು. 

ಕ್ರಮೇಣ ಇವರಿಗೂ ತಿರುಳು ಮರೆಯಿತು. 
ಆಚರಣೆಗಳು ಮಾತ್ರ ಉಳಿದವು. 

ಮುಂದೆ ಇದೇ ಬದುಕಾಗಿ ಹೋಯಿತು..

CLICK HERE