Tuesday, 26 April 2016

ಪರಸ್ಪರ ನಂಬಿಕೆ ನಮ್ಮ ಬದುಕಿನ ಬುನಾದಿ

ಬಹಳ ಹಿಂದೆ ನಡೆದ ಕಥೆಯಂತೆ ಇದು. ಬಹಳ ಓದಿಕೊಂಡಿದ್ದ ಪಂಡಿತನಿಗೆ ಎಣ್ಣೆಯ ಅಗತ್ಯ ಬಿತ್ತು. ಆಗ ಎಣ್ಣೆ ಬೇಕಾದರೆ ಎಣ್ಣೆ ತೆಗೆಯುವ ಗಾಣಿಗರ ಮನೆಯಿಂದ ಪಡೆಯುತ್ತಿದ್ದರು. ಅದು ಶುದ್ಧವೂ, ಕಡಿಮೆ ಬೆಲೆಯದ್ದೂ ಆಗಿರುತಿತ್ತು. ಹೀಗೆ ಪಂಡಿತ ಗಾಣಿಗನ ಮನೆಗೆ ಹೋದ. ಮನೆಯಂಗಳದಲ್ಲಿ ಗಾಣಕ್ಕೆ ಎತ್ತು ಕಟ್ಟಿದ್ದರು. ಅದು ಗಾಣವನ್ನೆಳೆಯುತ್ತಾ ಸುತ್ತು ಸುತ್ತು ತಿರುಗುತಿತ್ತು. ಅದರ ಕತ್ತಿಗೆ ಕಟ್ಟಿದ ಘಂಟೆ ಘಣ ಘಣ ಶಬ್ದ ಮಾಡುತ್ತಿತ್ತು. ಆದರೆ, ಅದರ ಒಡೆಯ ಎಲ್ಲಿಯೂ ಕಾಣಲಿಲ್ಲ. ಪಂಡಿತನಿಗೆ ಆಶ್ಚರ್ಯವಾಯಿತು.



ಧ್ವನಿ ಎತ್ತಿ ಒಡೆಯನನ್ನು ಹೊರಗೆ ಕರೆದರು. ತಮಗೆ ಬೇಕಾಗಿರುವುದನ್ನು ತಿಳಿಸಿ, "ಅಯ್ಯಾ! ನೀನಿಲ್ಲದಿರುವಾಗ ಈ ಎತ್ತು ಸರಿಯಾಗಿ ಗಾಣ ತಿರಿಗಿಸುತ್ತದೆ ಎಂದು ನಿನಗೆ ಹೇಗೆ ತಿಳಿಯುತ್ತದೆ?" ಎಂದು ಪ್ರಶ್ನಿಸಿದರು. 


"ಸ್ವಾಮೀ, ಅದರ ಕತ್ತಿನಲ್ಲಿರುವ ಘಂಟೆ ಶಬ್ದ ಮಾಡುತ್ತಿದ್ದರೆ ಅದು ತಿರುಗುತ್ತಿದೆ ಎಂದು ಅರ್ಥ, ಶಬ್ದ ನಿಂತರೆ ಅದೂ ನಿಂತಿದೆ ಎಂದರ್ಥ. ನಾನು ಬೇರೆ ಕೆಲಸ ಮಾಡುತ್ತಿರುತ್ತೇನೆ. ಅದು ಅದರ ಪಾಡಿಗೆ ಕೆಲಸ ಮಾಡುತ್ತದೆ" ಎಂದುತ್ತರಿಸಿದ.



"ಸರಿಯೇ. ಆದರೆ ಅದು ನಿಂತ ಕಡೆಯೇ ತಲೆಯಲ್ಲಾಡಿಸುತ್ತಿದ್ದರೂ ಶಬ್ದವಾಗುತ್ತದಲ್ಲ!? ನಿನಗೆ ಮೋಸ ಮಾಡಲೆಂದಲ್ಲ, ಸುಸ್ತಾಗಿರಬಹುದು. ಆಗ ಅನಿವಾರ್ಯವಾಗಿ ಅದು ಕೆಲಸ ಮಾಡದು. ಏನೆನ್ನುತ್ತಿ?"



ಎತ್ತಿನೊಡೆಯ ಪ್ರೀತಿಯಿಂದ ಎತ್ತಿನ ಕತ್ತು ಸವರುತ್ತಾ, "ಸ್ವಾಮೀ, ನಾನಾಗಲೀ ನನ್ನ ಎತ್ತಾಗಲಿ ಓದಿ ಕೊಂಡವರಲ್ಲ! ಬುದ್ಧಿವಂತರಲ್ಲ! ಸರಳ ಬದುಕು ನಮ್ಮದು. ನಾನಿದನ್ನು ಪ್ರೀತಿ, ಗೌರವಗಳಿಂದ ಕಾಣುತ್ತೇನೆ. ಅದರ ಮನಸ್ಸಿನಲ್ಲೂ ಹಾಗೇ ಇದೆ ಎಂಬ ನಂಬಿಕೆ ನಮ್ಮದು. ಒಂದು ವೇಳೆ ಸುಸ್ತಾಗಿ ಅದು ವಿಶ್ರಾಂತಿ ಪಡೆಯಬಹುದು. ಆದರೆ, ಆಗ ಅದು ಘಂಟೆಯ ಶಬ್ದ ಮಾಡಿ, ನಾನು ಕೆಲಸ ಮಾಡುತ್ತಿದ್ದೇನೆ ಎಂಬ ತಪ್ಪು ಭಾವನೆ ತರಲು ಮಾತ್ರ ಪ್ರಯತ್ನಿಸದು. ಅದು ಅಗತ್ಯವೂ ಇಲ್ಲ. ಪರಸ್ಪರ ನಂಬಿಕೆ ನಮ್ಮ ಬದುಕಿನ ಬುನಾದಿ" ಎಂದ.




ಬದುಕೇ ನಂಬಿಕೆಯ ಸಂಕೀರ್ಣ ವರ್ತುಲದೊಳಗಿದೆ. ಕನಿಷ್ಠ ನಮ್ಮ ಜೀವಿತ ಕಾಲದಲ್ಲಿ ಸೂರ್ಯ ಉರಿದುರಿದು ಕಪ್ಪು ರಂಧ್ರವಾಗಲಾರ ಎಂದು ನಂಬಿ ಅವನನ್ನು ಪ್ರತ್ಯಕ್ಷ ಭಗವಂತ ಎಂದು ಆರಾಧಿಸುತ್ತೇವೆ. ಅವನಿಂದ ಹೊರಹೊಮ್ಮುವ ನೀಲಾತೀತ ಕಿರಣಗಳಿಂದ ನಾನಾ ರೋಗಗಳು ಬರುತ್ತವೆ ಎಂದು ತಿಳಿದಿದೆ ನಮಗೆ. ಆದರೆ ಅದರಿಂದ ರಕ್ಷಣಾ ಕವಚಾವಾಗಿ ಓಝೋನ್ ಆವರಣವನ್ನೂ ನೀಡಿದೆ ಪ್ರಕೃತಿ. ನಮ್ಮ ದುರಾಸೆ, ಅಜ್ಞಾನದಿಂದ ಅದನ್ನು ಹಂತ ಹಂತವಾಗಿ ನಾಶಪಡಿಸುವುದರಲ್ಲಿ ಸೂರ್ಯನ ಪಾತ್ರವೇನೂ ಇಲ್ಲವಲ್ಲ! ಅವನ ಸುತ್ತ ನಮ್ಮ ಪರಿಭ್ರಮಣದಿಂದ ಹಗಲು-ರಾತ್ರಿ, ಮಳೆ-ಬೆಳೆಗಳು ಕ್ರಾಮಭದ್ದವಾಗಿ ನಡೆಯುತ್ತಿವೆ. ಆದರೆ ಮುಂದಿನ ಕ್ಷಣ ನಮ್ಮ ಉಹೆಗೂ ನಿಲುಕದ ಯಾವುದೋ ಒಂದು ಆಕಾಶಕಾಯವೋ ಮತ್ತಿನ್ನೇನೋ ಭೂಮಿಗೆ ಬಡಿಯಲೂಬಹುದು. ಆದರೆ ಹಾಗಾಗಲಾರದು ಎಂಬ ನಂಬಿಕೆಯ ಸೂರಿನಡಿ, ಕೆಟ್ಟ ಕನಸುಗಳಿಲ್ಲದೇ ರಾತ್ರಿ ಕಳೆಯುತ್ತದೆ.



ಪ್ರಕೃತಿ ನಮಗೆ ಅಂದರೆ, ಮನುಷ್ಯ, ಪಕ್ಷಿ, ಪ್ರಾಣಿ, ಸಸ್ಯಸಂಕುಲಕ್ಕೆ ಅಗತ್ಯವಿರುವ ಎಲ್ಲಾ ಸರಕುಗಳನ್ನು ಯಥೇಚ್ಛವಾಗಿ ಸ್ರವಿಸುತ್ತದೆ. ಮನುಷ್ಯನ ಅತಿಯಾಸೆ, ಪ್ರಕೃತಿಯ ಮೇಲೆ ಅವನ ಅಪನಂಬಿಕೆಯಿಂದ ಅಸಮತೋಲನವಾಗುತ್ತದೆ. ನಿತ್ಯಹರಿದ್ವರ್ಣದ ಕಾಡು ನಾಶ, ಪಶು-ಪಕ್ಷಿ ತಳಿಗಳ ಅವನಾಶ, ಮನುಷ್ಯ ಮನುಷ್ಯರಲ್ಲೇ ಸಾಮಾಜಿಕ, ಆರ್ಥಿಕ ಬೇಧಗಳು. ಇವೆಲ್ಲ ನಮ್ಮಿಂದ. ಅಂದರೆ ಮನುಷ್ಯರಿಂದ  ಸೃಷ್ಟಿಸ್ಪಟ್ಟಿದ್ದು. 

ಋಷಿವಾಕ್ಯ ಹೇಳುತ್ತದೆ, "ಸಮಾನೀ ವ ಆಕೂತಿಃ | ಸಮಾನಾ ಹೃದಯಾನಿ ವಃ ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || ಉದ್ದೇಶಗಳು ಒಂದಾಗಿರಲಿ. ಹೃದಯಗಳು ಒಂದಾಗಿ ಮಿಡಿಯಲಿ. ಮನಸ್ಸು ಒಂದೇ ಆಗಿರಲಿ. ಈ ರೀತಿ ನಮ್ಮ ಒಳಿತು ಒಟ್ಟಿಗೆ ಸಿದ್ಧಿಸಲಿ."

CLICK HERE