ತಲೆಮಾರುಗಳಿಂದ ಸಾಮರಸ್ಯದಿಂದ ಬಾಳುತಿದ್ದ ಎರಡು ಕುಟುಂಬಗಳ ನಡುವೆ ಮನಸ್ತಾಪ ಬಂತು. ಸಣ್ಣದೊಂದು ವಿಷಯಕ್ಕೆ ಶುರುವಾಗಿ ವಿಪರೀತಕ್ಕೆ ಹೋಯಿತು. ಒಂದೇ ಮನೆಯವರಂತೆ ಒಂದೇ ಸೂರಿನಡಿ ಬಾಳುತ್ತಿದ್ದವರ ಮಧ್ಯೆ ಗೋಡೆಗಳೆದ್ದವು. ಮಾತುಕತೆ ನಿಂತಿತು. ಹೊರಗೆ ಮನೆಯ ಹಿತ್ತಲಲ್ಲೂ ಬೇಲಿ ಹಾಕಲಾಯಿತು. ರಾಮ-ಲಕ್ಷ್ಮಣರಂತಿದ್ದವರು ಬದ್ಧ ವೈರಿಗಳಾದರು. ನಮ್ಮ ಅನುಕೂಲಕ್ಕೆ ಇವರನ್ನು ರಾಮ- ಲಕ್ಷ್ಮಣನರೆಂದೇ ಗುರುತಿಸೋಣ. ಏಕೆಂದರೆ, ಇದು ಸಾಮಾನ್ಯವಾಗಿ ಮನೆಮನೆಯಲ್ಲೂ ನಡೆಯುವಂಥದ್ದೆ, ವಿಶೇಷವೇನಿಲ್ಲ, ಎನಿಸುತ್ತದೆ. ಅಲ್ಲವೇ? ಹೀಗೆ ಒಂದಾಗಿದ್ದ ಮನ-ಮನೆಗಳು ಒಡೆದುಹೋದವು.
ರಾಮ ಹಿರಿಯ. ಅವನ ಪಾಲಿಗೆ ಬಂದಿದ್ದ ಹಿತ್ತಲಲ್ಲಿ ವಿಶಾಲವಾಗಿ ಬೆಳೆದು ನಿಂತ ಮಾವಿನ ಮರ ಒಂದಿತ್ತು. ರುಚಿಕರವಾದ ಮಿಡಿಗಳು ಮರದ ತುಂಬಾ ತೊನೆಯುತ್ತಿದ್ದವು. ಒಂದು ದಿನ ಬೆಳೆಗ್ಗೆದ್ದು ನೋಡಿದರೆ ಕೆಲವು ಮಿಡಿಗಳು ಮಾಯವಾಗಿದ್ದು ರಾಮನ ಗಮನಕ್ಕೆ ಬಂತು. ಇದು ಲಕ್ಷ್ಮಣನ ಕಡೆಯವರದ್ದೇ ಕೆಲಸ ಎಂದು ಹಲ್ಲು ಕಡಿದ. ಆದರೆ ಯಾವುದೇ ಆಧಾರವಿಲ್ಲದೆ ಅವರನ್ನು ದೋಷಿಗಳು ಎನ್ನಲಾಗದಲ್ಲ! ಹೇಗಾದರೂ ಮಾಡಿ ಕಳ್ಳತನ ನಡೆಯುವಾಗಲೇ ಕಳ್ಳನನ್ನು ಹಿಡಿದು ಹಾಕಬೇಕು ಎಂದು ನಿರ್ಧರಿಸಿದ.
ಕೆಲವು ದಿನಗಳು ಕಳೆದವು. ಲಕ್ಷ್ಮಣನ ಮೊಮ್ಮಕ್ಕಳಿಗೆ ರಾಮನ ಪತ್ನಿ ಸಂಜೆ ಸ್ತ್ರೋತ್ರಗಳನ್ನು ಕಲಿಸುವುದಿತ್ತು. ಬೆಳದಿಂಗಳ ರಾತ್ರಿ ಕಥೆ ಹೇಳುತ್ತಾ ಕೈತುತ್ತು ಹಾಕುವುದಿತ್ತು. ರಾಮನ ಪತ್ನಿಗೆ ಕಾಲು ಉಳುಕಿದಾಗ ಲಕ್ಷ್ಮಣನ ಸೊಸೆ ಎಣ್ಣೆ ನೀವಿ , ಬಿಸಿ ತೌಡಿನ ಶಾಖ ಕೊಡುತ್ತಿದ್ದಳು. ಇವೆಲ್ಲದರ ನೆನಪಾಗುತಿತ್ತು ಎರಡೂ ಕುಟುಂಬದವರಿಗೆ. ಮಕ್ಕಳಂತೂ ಅತ್ತು, ಗೋಳಾಡಿ ಇವರ ಮನೆಗೆ ಓಡಿಬರುತ್ತಿದ್ದವು. ರಾಮನನ್ನು ಕಂಡ ಕೂಡಲೇ, "ಅಜ್ಜಾ, ನಮ್ಮನ್ನು ಕರೆದುಕೋ" ಎಂದು ಹಟ ಹಿಡಿಯುತ್ತಿದ್ದವು. ಇವನ ಕಣ್ಣು ಹನಿಯುತ್ತಿತ್ತು. ಲಕ್ಷ್ಮಣನ ಸೊಸೆ, ಪರಮೋಶಿಯಲ್ಲಿ ಎಂಬಂತೆ ಮಕ್ಕಳನ್ನು ಇವರ ಮನೆಗೆ ಕಳಿಸುತ್ತಿದ್ದಳು.
ಇಷ್ಟಾದರೂ 'ಅಹಂಕಾರ' ಇವರನ್ನು ಒಂದಾಗಲು ಬಿಡುತ್ತಿರಲಿಲ್ಲ. ಒಂದು ಮಧ್ಯಾಹ್ನ ಸುಡುಬಿಸಿಲಿನಲ್ಲಿ ರಾಮ ಹೊಲದಿಂದ ಮನೆಗೆ ಮರಳುತಿದ್ದ. ಬೇಲಿಯ ಪಕ್ಕದಲ್ಲಿ ಪುಟ್ಟ ಬುಟ್ಟಿಯಲ್ಲಿ ಆಗ ತಾನೇ ಕೊಯ್ದ ಮಾವಿನ ಮಿಡಿಗಳಿರುವುದು ರಾಮನ ಕಣ್ಣಿಗೆ ಬಿಟ್ಟು. "ಹೋ, ಈಗ ಕಳ್ಳನನ್ನು ಹಿಡಿಯಬಹುದು, ಸೀದಾ ಪೊಲಿಸಿಸರನ್ನು ಕರೆಸುತ್ತೇನೆ. ಅದಕ್ಕೂ ಮೊದಲು ಕಳ್ಳನಿಗೆ ಹುಣಸೆ ಬರಲಿನಿಂದ ನಾಲ್ಕು ಹೊಡೆಯುತ್ತೇನೆ. ಜೀವಮಾನ ಪೂರ್ತಿ ಪಾಠ ಕಳಿಸುತ್ತೇನೆ" ಎಂದುಕೊಂಡು ರಾಮ ಮರದ ಮರೆಯಲ್ಲಿ ಅಡಗಿದ.
ಐದು ನಿಮಿಷದಲ್ಲಿ ಲಕ್ಷ್ಮಣನ ತುಂಬು ಗರ್ಬಿಣಿ ಸೊಸೆ ಕಾಗದ ತುಂಡಿನಲ್ಲಿ ಉಪ್ಪು. ಖಾರ ಹಿಡಿದುಕೊಂಡು ಬಂದಳು. ಮಾವಿನಕಾಯಿಗಳಿದ್ದ ಬುಟ್ಟಿಯತ್ತ ಬರುತ್ತಿರುವಂತೆ ರಾಮ ಅಡಗಿದ ಕಡೆಯಿಂದ ಹೊರಗೆ ಬಂದ. ಸೊಸೆಯ ಮುಖದ ಬಣ್ಣ ಬದಲಾಯಿತು. ಹೆದರಿಕೆಯಿಂದ ಸಣ್ಣಗೆ ನಡುಗತೊಡಗಿದಳು. ಕೈಯಲ್ಲಿದ್ದ ಖಾರದ ಕಾಗದ ನೆಲಕ್ಕೆ ಬಿತ್ತು. "ಹುಳಿಮಾವು ತಿನ್ನುವ ಆಸೆ ತಡೆಯಲಾಗಲಿಲ್ಲ" ಎಂದಳು ಸಣ್ಣ ಧ್ವನಿಯಲ್ಲಿ, ರಾಮ ಒಂದು ನಿಮಿಷ ಅವಳನ್ನೇ ದಿಟ್ಟಿಸಿ ನೋಡಿದ. "ಏನು ಸಾಧಿಸಿದೆವು ಈ ದ್ವೇಷದಿಂದ? ಈ ಹುಡುಗಿ ಈ ಹಿಂದೆ ನಿರಾಳವಾಗಿ ಯಾವುದೇ ಹೆದರಿಕೆ ಇಲ್ಲದೆ, ಕಾಯಿ ಕಿತ್ತು ಉಪ್ಪು, ಖಾರ ಸವರಿ, ನಮಗೂ ತಿನ್ನಿಸಿ, ತಾನೂ ಸಂತೋಷಪಡುತ್ತಿದ್ದವಳು. ಈ ಸುಡುಬಿಸಿಲಿನಲ್ಲಿ ಕಳ್ಳತನದಿಂದ ಕಾಯಿ ತಿನ್ನಲು ಬಂದಿದ್ದಾಳೆ. ಛೇ! ಎಂತ ಮೂರ್ಖತನ ಮಾಡಿದೆ. ಅವನೇನೋ ಕಿರಿಯ, ಹಿರಿಯನಾಗಿ ನಾನು ಹೀಗೆ ಮಾಡಿದೆನಲ್ಲಾ?" ಎಂದು ಯೋಚಿಸಿದ ನೋವಿನಿಂದ.
ಬಗ್ಗಿ ಬುಟ್ಟಿಯನ್ನೆತ್ತಿ ಅವಳ ಕೈಯಲ್ಲಿರಿಸಿದ. "ನಾಳೆಯೂ ಬಾ ತಾಯೀ, ಈ ಮರ, ತೋಟ ನಿನ್ನದೇ. ಬೇಕುಬೇಕಾದಷ್ಟು ಕಾಯಿ, ಹಣ್ಣು ತೆಗೆದುಕೋ. ಮತ್ತೆ ನನ್ನ ಮೊಮ್ಮಗ ಜೊಲ್ಲು ಸುರಿಸಬಾರದಲ್ಲ?" ಎಂದ ನಗುತ್ತಾ
ಮಾರನೆಯ ದಿನ ಬೆಳಿಗ್ಗೆ ತೋಟದ ಮಧ್ಯದ ಬೇಲಿ ಮಾಯವಾಗಿತ್ತು. ಲಕ್ಷ್ಮಣ ಮೊಮ್ಮಕ್ಕಳ ಕೈಹಿಡಿದುಕೊಂಡು ಇವರ ಹೊಸ್ತಿಲಲ್ಲಿ ನಿಂತಿದ್ದ.
ದ್ವೇಷಕ್ಕೆ ಯಾವುದೇ ಸೂಕ್ತ ಕಾರಣ ಬೇಕಿಲ್ಲ. ಯಃಕಶ್ಚಿತ್ ಅಸೂಯೆಯೇ ಸಾಕು, ಅಹಂಕಾರವೇ ಸಾಕು. ನಾವು ನೆನೆಸಿದಂತೆ/ ಬಯಸಿದಂತೆ ನಡೆಯದಿದ್ದರೂ ಸಾಕು. ದ್ವೇಷದ ಬೀಜ ಬಿದ್ದು, ಅದು ಪ್ರಜ್ವಲಿಸುತ್ತಾ ದ್ವೇಷಿಸುವವನನ್ನು ಮೊದಲು ಸುಟ್ಟು ಅನಂತರ ಹೊರಗೆ ಹರಡುತ್ತದೆ. ಮತ್ತಿದಕ್ಕೆ ಆಜ್ಯ ಬೀಳುತ್ತಲೇ ಹೋಗುತ್ತದೆ. ಏಕೆಂದರೆ, ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ, "ಕ್ರೋಧಾಧ್ಬವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ"